ಬೆಂಗಳೂರು, ಆ.4 www.bengaluruwire.com : ನಗರದಲ್ಲಿ ಶುಕ್ರವಾರ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ವತಿಯಿಂದ ರಾಷ್ಟ್ರೀಯ ಮೂಳೆ ಮತ್ತು ಕೀಲು ಪಾಕ್ಷಿಕ ದಿನಾಚರಣೆಯನ್ನು ಆಚರಿಸಲಾಯಿತು.
ಇದರ ಅಂಗವಾಗಿ ಪ್ರತಿಯೊಬ್ಬರು ತರಬೇತಿಗೊಂಡು ಮತ್ತೊಬ್ಬರನ್ನು ರಕ್ಷಿಸಿ ಎಂಬ ವಿಷಯದಡಿ ಕಾರ್ಯಕ್ರಮ ನಡೆಸಿ, ಸಾರ್ವಜನಿಕರಲ್ಲಿ ಮೂಳೆ ಮತ್ತು ಕೀಲುಗಳಿಗೆ ಸಂಬಂಧಿಸಿದ ವ್ಯಾಧಿಯನ್ನು ತಡೆಗಟ್ಟುವ ಬಗ್ಗೆ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿಮಾತನಾಡಿದ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯದ ಮತ್ತು ಸಂಶೋಧನಾ ಸಂಸ್ಥೆ (BMCRI) ನಿರ್ದೇಶಕರಾದ ಡಾ.ಕೆ.ರಮೇಶ್ ಕೃಷ್ಣ, ಮೂಳೆ ಮತ್ತು ಕೀಲುಗಳಿಗೆ ಸಂಬಂಧಿಸಿದ ವ್ಯಾಧಿಯು ಪ್ರಮುಖವಾಗಿ ಭಾರತದಲ್ಲಿ ಪ್ರತಿ ಐದರಲ್ಲಿ ಒಬ್ಬರಿಗೆ ಕಾಡುತ್ತಿದೆ ಹಾಗೂ ಪ್ರಮುಖವಾಗಿ ಋತುಚಕ್ರ ನಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಾಡುತ್ತಿದೆ. ವಿಶ್ವಾದಾದ್ಯಂತ ಸೊಂಟ, ಕೀಲು ಹಾಗೂ ಇತರೇ ಸಂಧಿವಾತಗಳು 11ನೇ ಸ್ಥಾನದಲ್ಲಿ ಅಂಗವೈಕಲ್ಯಕ್ಕೆ ಕಾರಣವಾಗುತ್ತಿದೆ. ವೃದ್ಧಾಪ್ಯದಲ್ಲಿ ಮಾಂಸಖಂಡದ ಶಕ್ತಿ ಕುಂದುತ್ತಿದ್ದು, ಅವರ ದೈನಂದಿನ ಚಟುವಟಿಕೆಯು ಕುಂದುತ್ತಿದೆ ಎಂದರು.
ಬಿಎಂಸಿಆರ್ ಐ ಸಂಸ್ಥೆಯ ವಿಕ್ಟೋರಿಯಾ ಆಸ್ಪತ್ರೆಯ ಅಸ್ಥಿಚಿಕಿತ್ಸಾ ಶಾಸ್ತ್ರ ವಿಭಾಗದಲ್ಲಿ ಸುಸಜ್ಜಿತವಾದ ಸಲಕರಣೆ ಹಾಗೂ ಸೌಲಭ್ಯವಿದ್ದು, ನುರಿತ ತಜ್ಞರುಗಳಿಂದ ಕೀಲು ಮತ್ತು ಮೂಳೆಗೆ ಸಂಬಂಧಿಸಿದಂತೆ ಮಕ್ಕಳಿಂದ ವೃದ್ಧರವರೆವಿಗೂ ಚಿಕಿತ್ಸೆ ದೊರೆಯುತ್ತದೆ. ಅಸ್ಥಿಚಿಕಿತ್ಸಾ ಶಾಸ್ತ್ರ ವಿಭಾಗವು ಎಂಬಿಬಿಎಸ್ ಪದವಿ, ಸ್ನಾತಕೋತ್ತರ ಹಾಗೂ ಫೆಲೋಶಿಪ್ ಶೈಕ್ಷಣಿಕ ಕಾರ್ಯಕ್ರಮಗಳನ್ನು ಕೀಲು ಮೂಳೆ ತಜ್ಞರಿಗೆ ಒದಗಿಸಲಾಗುತ್ತಿದೆ. ಈ ಅಸ್ಥಿಚಿಕಿತ್ಸಾ ಶಾಸ್ತ್ರ ವಿಭಾಗದ ಸಂಯೋಜನೆಯಲ್ಲಿ ಕೃತಕ ಅಂಗ ಜೋಡನೆ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದ್ದು, ಇದು ಕೈ ಮತ್ತು ಕಾಲುಗಳನ್ನು ಕಳೆದುಕೊಂಡ ರೋಗಿಗಳಿಗೆ ಆಶಾ ಕಿರಣವಾಗಿದ್ದು, ಅವರ ದೈನಂದಿನ ಚಟುವಟಿಕೆಗಳಿಗೆ ಮರಳಲು ಸಹಾಯವಾಗುತ್ತಿದೆ ಎಂದು ಹೇಳಿದರು.
2022-23ನೇ ಇಸವಿಯಲ್ಲಿ ಈ ವಿಭಾಗದಿಂದ 250 ಕೀಲುಗಳ ಮರು ಜೋಡಣೆ, 200 ದೂರದರ್ಶಕ (ಆರ್ಥೋಸ್ಕೋಪಿ) ಶಸ್ತ್ರ ಚಿಕಿತ್ಸೆಯನ್ನು ಆರ್ಥೋಸ್ಕೋಪಿಕ್ ಮುಖಾಂತರ ಭುಜ ಮತ್ತು ಮಂಡಿಗೆ ಆಪರೇಷನ್ ನಡೆಸಲಾಗಿರುತ್ತದೆ. 100 ಅಂಗಗಳ ಪುನರ್ ರಚನೆ ಹಾಗೂ ಅಂಗವೈಕಲ್ಯ ತಡೆಗಟ್ಟುವಿಕೆ ಶಸ್ತ್ರಚಿಕಿತ್ಸೆ, 30 ಬೆನ್ನುಹುರಿ ಶಸ್ತ್ರ ಚಿಕಿತ್ಸೆ ಹಾಗೂ 150 ಪಾದಗಳ ಅಂಗವೈಕಲ್ಯ (CTEV) ಗಳ ಶಸ್ತ್ರ ಚಿಕಿತ್ಸೆಯನ್ನು ನಡೆಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಜಾಗತಿಕ ಕೋವಿಡ್ 19 ರ ಸಾಂಕ್ರಮಿಕ ರೋಗದಿಂದ ಬಳಲುತ್ತಿದ್ದ ಸುಮಾರು ಸುಮಾರು 60 ಸಾವಿತ ರೋಗಿಗಳಿಗೆ ಅಸ್ಥಿಚಿಕಿತ್ಸಾ ಶಾಸ್ತ್ರ ವಿಭಾಗದಿಂದ ಚಿಕಿತ್ಸೆಯನ್ನು ನೀಡಲಾಗಿದ್ದು, ಸುಮಾರು 2,500 ತುರ್ತು ಚಿಕಿತ್ಸೆ ಹಾಗೂ ಶಸ್ತ್ರ ಚಿಕಿತ್ಸೆಯನ್ನು ನಡೆಸಲಾಗಿರುತ್ತದೆ.
ವಿಕ್ಟೋರಿಯಾ ಆಸ್ಪತ್ರೆಯ ಅಸ್ಥಿಚಿಕಿತ್ಸಾ ಶಾಸ್ತ್ರ ವಿಭಾಗದಲ್ಲಿ ಒಟ್ಟು 150 ಹಾಸಿಗೆಗಳ ಸೌಕರ್ಯವಿದೆ. ತುರ್ತು ವಿಭಾಗದಲ್ಲಿ ನ ಚಿಕಿತ್ಸೆಗಾಗಿ 20 ಹಾಸಿಗೆಗಳನ್ನು ಹೊಂದಿದೆ. ಪ್ರತಿದಿನ ಮೂಳೆ ಹಾಗೂ ಕೀಲು ಸಂಬಂಧಿತ ಚಿಕಿತ್ಸೆಗಾಗಿ ಸರಾಸರಿ 200 ಹೊರರೋಗಿಗಳು, 10 ರಿಂದ 15 ಒಳರೋಗಿಗಳಾಗಿ ದಾಖಲಾಗುತ್ತಿದ್ದಾರೆ. ಒಟ್ಟು ಐದು ವಿಭಾಗಗಳಲ್ಲಿ 30 ಮಂದಿ ಮೂಳೆ ತಜ್ಞ ವೈದ್ಯರಿದ್ದಾರೆ. ಪ್ರತಿದಿನ 15 ರಿಂದ 20 ಶಸ್ತ್ರಚಿಕಿತ್ಸೆಗಳು ನಡೆಯುತ್ತವೆ.
ರಾಷ್ಟ್ರೀಯ ಮೂಳೆ ಮತ್ತು ಕೀಲು ಪಾಕ್ಷಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಬಿಎಂಸಿಆರ್ ಐ ಸಿಬ್ಬಂದಿ, ವಿಕ್ಟೋರಿಯಾ ಆಸ್ಪತ್ರೆ ಅಸ್ಥಿಚಿಕಿತ್ಸಾ ಶಾಸ್ತ್ರ ವಿಭಾಗದ ತಜ್ಞ ವೈದ್ಯರು, ವೈದ್ಯ ವಿದ್ಯಾರ್ಥಿಗಳು ಮತ್ತಿತರರು ಪಾಲ್ಗೊಂಡಿದ್ದರು.
ಮೂಳೆ ಮತ್ತು ಕೀಲು ರೋಗಕ್ಕೆ ವೈದ್ಯಕೀಯ ಸಹಾಯವನ್ನು ಯಾವಾಗ ಪಡೆಯಬೇಕು? :
- ದುರ್ಬಲಗೊಳಿಸುವ ಮೊಣಕಾಲು ಮತ್ತು ಸೊಂಟ ನೋವು
- ನಿರಂತರ ಸೊಂಟ ನೋವು
- ದೂರದವರೆಗೆ ನಡೆಯಲು ಸಾಧ್ಯವಾಗದಿದ್ದಾಗ.
- ಕೆಲಸ, ಜೀವನ ಅಥವಾ ಮನರಂಜನೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಅಸ್ಪಷ್ಟ ಮೂಳೆ ನೋವುಗಳು.
- ವಿರೂಪಗಳು.