ಬೆಂಗಳೂರು, ಆ.4 www.bengaluruwire.com : ರಾಜ್ಯ ಸರ್ಕಾರವು ಬಿಜೆಪಿ ಸರ್ಕಾರದ ಅವಧಿಯಲ್ಲಿ 29 ಜನವರಿ 2021ರ ಮೂಲಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯ ಕೌನ್ಸಿಲರ್(Councillers)ಗಳ ಸಂಖ್ಯೆಯನ್ನು 243 ಎಂದು ಈ ಹಿಂದೆ ನಿಗದಿಪಡಿಸಿ ಹೊರಡಿಸಲಾಗಿದ್ದ ಅಧಿಸೂಚನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆದಿದೆ.
ಈ ಕುರಿತಂತೆ ಆ.4ರಂದು ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, ಬಿಬಿಎಂಪಿಯ ಅಧಿನಿಯಮ, 2020ರ 7ನೇ ಪ್ರಕರಣದ (3)ನೇ ಉಪಪ್ರಕರಣದ ಖಂಡ (ಎ)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ತಕ್ಷಣದಿಂದ ಜಾರಿಗೆ ಬರುವಂತೆ, ಪಾಲಿಕೆಯ ಕೌನ್ಸಿಲರ್ ಗಳ ಸಂಖ್ಯೆಯನ್ನು 225 (ಎರಡು ನೂರ ಇಪ್ಪತ್ತೈದು) ಎಂದು ನಿಗದಿಪಡಿಸಲಾಗಿದೆ.
ಸರ್ಕಾರವು ಒಂದೊಮ್ಮೆ ಬಿಬಿಎಂಪಿ ಚುನಾವಣೆ ನಡೆಸಿದಲ್ಲಿ ನಗರಕ್ಕೆ 225 ಪಾಲಿಕೆ ಸದಸ್ಯರು ಆಯ್ಕೆಯಾಗಲಿರುವರು. ಈ ಸಂಖ್ಯೆ ಕಡಿತದ ಹಿಂದೆ ಸಾಕಷ್ಟು ರಾಜಕೀಯ ಲೆಕ್ಕಾಚಾರಗಳು ಅಡಗಿವೆ ಹಾಗೂ ಪಾಲಿಕೆ ಚುಕ್ಕಾಣಿಯನ್ನು ಶತಾಯಗತಾಯ ಹಿಡಿಯುವ ಭಾಗದಲ್ಲಿ ಇದೊಂದು ಪ್ರಮುಖ ಹೆಜ್ಜೆ ಎಂದು ಅಂದು ಮೂಲಗಳು ತಿಳಿಸಿವೆ.