ಬೆಂಗಳೂರು, ಆ.3 www.bengaluruwire.com : ಸಾರಿಗೆ ನೌಕರರಿಗೆ ಪೂರ್ಣ ವೇತನವನ್ನು ಆ.1ಕ್ಕೆ ಪಾವತಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಶಕ್ತಿ ಯೋಜನೆಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸಾರಿಗೆ ನಿಗಮಗಳು ತಮ್ಮ ನೌಕರರಿಗೆ ಪೂರ್ಣ ವೇತನ ನೀಡುವ ಬದಲು ಅರ್ಧ ವೇತನ ನೀಡಿವೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದ್ದರು. ಇದಕ್ಕೆ ಸ್ಪಷ್ಟನೆ ನೀಡಿರುವ ರಾಮಲಿಂಗಾರೆಡ್ಡಿ, ನಿಗಮದ ಸಮಸ್ತ ಸಿಬ್ಬಂದಿಗಳಿಗೆ ಎಂದಿನಂತೆ ಪೂರ್ಣ ಪ್ರಮಾಣದಲ್ಲಿ ವೇತನ ಪಾವತಿಯಾಗಿರುತ್ತದೆ. ಮೇಲಿನ ಮಾಹಿತಿಯು ಕೆಎಸ್‌ಆರ್‌ಟಿಸಿಗೆ ಮಾತ್ರ ಸಂಬಂಧಿಸಿದ್ದು, ಉಳಿದ ಮೂರು ಸಾರಿಗೆ ಸಂಸ್ಥೆಗಳ ವೇತನ ಪಾವತಿ ದಿನಾಂಕ ಪ್ರತಿ ತಿಂಗಳು 7ನೇ ತಾರೀಖು ಸಂಬಳ ಜಮೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ಟ್ವಿಟ್ ಮಾಡಿರುವ ಬೊಮ್ಮಾಯಿ, ಶಕ್ತಿ ಯೋಜನೆ ಫಲಶೃತಿ ಸಾರಿಗೆ ನೌಕರರಿಗೆ ಅರ್ಧ ಸಂಬಳ ಮಾತ್ರ ಗ್ಯಾರಂಟಿ ಎಂದು ಟೀಕಿಸಿದ್ದಾರೆ. ಶಕ್ತಿ ಯೋಜನೆ ಜಾರಿಯಾದ ಮೊದಲ ತಿಂಗಳಿನಿಂದಲೇ ಸಾರಿಗೆ ನಿಗಮಗಳಿಗೆ ಆರ್ಥಿಕ ಬರೆ ಎಳೆದಿದೆ. ಗ್ಯಾರಂಟಿ ಯೋಜನೆಗಳಿಗೆ ಪೂರ್ಣ ಪ್ರಮಾಣದಲ್ಲಿ ಹಣ ಒದಗಿಸಿದ್ದೇವೆ ಎಂಬ ಹೇಳಿಕೆ ಹುಸಿಯಾಗಿದೆ ಎಂದು ತಿಳಿಸಿದ್ದರು.
ಈ ಕುರಿತು ಟ್ವಿಟರ್ ನಲ್ಲೇ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, “ತಾವು ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದಾಗ ಈ ಮಾಹಿತಿ ತಮಗೆ ತಿಳಿದಿಲ್ಲವೆಂದೇನಲ್ಲ. ಸದ್ಯಕ್ಕೆ ವಿರೋಧಪಕ್ಷದಲ್ಲಿರುವ ತಾವು, ಹೀಗೆ ಜನತೆಗೆ ತಪ್ಪು ಮಾಹಿತಿಗಳನ್ನು ನೀಡುವುದನ್ನು ಬಿಟ್ಟು ಕ್ರಿಯಾತ್ಮಕ ಟೀಕೆ ಟಿಪ್ಪಣಿಗಳನ್ನು ಮಾಡಿದರೆ ನಾಡಿನ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ.” ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.