ಬೆಂಗಳೂರು, ಆ.2 www.bengaluruwire.com : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನದ ತಲೆಬಿಸಿ ಮಧ್ಯೆಯೇ ನಗರದಲ್ಲಿರುವ ಇನ್ ಫೆಂಟ್ರಿ ರಸ್ತೆಯಲ್ಲಿರುವ ಕೆಎಎಸ್ ಅಧಿಕಾರಿಗಳ ಸಂಘ (Karnataka Administrative Service Officers Association – KASOA)ದ ಪದಾಧಿಕಾರಿಗಳು ತಮ್ಮ ಅಧಿಕೃತ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರಿಗೆ ದೂರು ಸಲ್ಲಿಕೆಯಾಗಿದೆ.
ನಿವೃತ್ತ ಕೆಎಎಸ್ ಅಧಿಕಾರಿ ಹಾಗೂ ಕೆಎಎಸ್ ಅಧಿಕಾರಿಗಳ ಸಂಘದ ಅಜೀವ ಸದಸ್ಯರಾದ ಕೆ.ಮಥಾಯ್ ಕೆಎಎಸ್ ಅಧಿಕಾರಿಗಳ ಸಂಘದೊಳಗಿನ ಅವ್ಯವಸ್ಥೆಗಳನ್ನು ಸಂಘದ ಅಧ್ಯಕ್ಷರು, ಮುಖ್ಯ ಕಾರ್ಯದರ್ಶಿ ಮತ್ತು ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಜುಲೈ 31ರಂದು ಬರೆದ ಪತ್ರದಲ್ಲಿ ಸುಧೀರ್ಘವಾಗಿ ಬಿಡಿಸಿಟ್ಟಿದ್ದಾರೆ.
ಅವರ ಪತ್ರದಲ್ಲಿ ಈ ಮುಂದಿನಂತೆ ತಿಳಿಸಿದ್ದಾರೆ, “ನಾನು ಕಳೆದ ಸುಮಾರು 17 ವರ್ಷಗಳಿಂದ ಬೆಂಗಳೂರಿನ ಕೆಎಎಸ್ ಅಧಿಕಾರಿಗಳ ಸಂಘದ ಅಜೀವ ಸದಸ್ಯನಾಗಿದ್ದೇನೆ, ಕೆಎಎಸ್ ಅಧಿಕಾರಿಗಳ ಸಂಘದ ಸೌಲಭ್ಯಗಳು ಕೆಎಎಸ್ಒಎ ಅಜೀವ ಸದಸ್ಯರಿಗೆ ಮಾತ್ರ ಲಭ್ಯವಿತ್ತು. ಆದರೆ ಈ ದಿನಗಳಲ್ಲಿ, ಕೆಲವು ಅಧಿಕಾರಿಗಳು ಬೆಂಗಳೂರಿನಿಂದ ಹೊರಬರಲು ಹಿಂಜರಿಯುತ್ತಾರೆ ಮತ್ತು ಬಿಡಿಎ, ಬಿಬಿಎಂಪಿ ಮತ್ತು ವಿಧಾನಸೌಧದಲ್ಲಿ ಮಾತ್ರ ಪೋಸ್ಟಿಂಗ್ ಬಯಸುವ ಕಾರಣ ಐಎಎಸ್ ಅಧಿಕಾರಿಗಳ ಒಲಸಿಕೊಳ್ಳಲು, ಆಜೀವ ಸದಸ್ಯರ ವೆಚ್ಚದಲ್ಲಿ ನಮ್ಮ ಕೆಎಎಸ್ ಅಸೋಸಿಯೇಷನ್ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ” ಎಂದು ದೂರಿದ್ದಾರೆ.
ಐಎಎಸ್ ಅಧಿಕಾರಿ ಜಾವೇದ್ ಅಖ್ತರ್ ಗೆ 7 ಕೊಠಡಿ ನೀಡಲಾಗಿತ್ತು :
“27.07.2023 ರಂದು, ನನ್ನ ಬಳಕೆಗಾಗಿ ಒಂದು ಕೊಠಡಿಯನ್ನು ಮಂಜೂರು ಮಾಡಲು ನಾನು ವಿನಂತಿಸಿದ್ದೆ. ಆದರೆ, ಒಟ್ಟು 8 ಕೊಠಡಿಗಳಲ್ಲಿ 7 ಕೊಠಡಿಗಳನ್ನು ಈಗಾಗಲೇ ಐಎಎಸ್ ಅಧಿಕಾರಿ ಜಾವೇದ್ ಅಖ್ತರ್ ಅವರಿಗಾಗಿ ಕಾಯ್ದಿರಿಸಲಾಗಿದೆ ಎಂಬ ಕಾರಣಕ್ಕೆ ನನಗೆ ಕೊಠಡಿ ನಿರಾಕರಿಸಲಾಗಿದೆ. ಜಾವೇದ್ ಅಖ್ತರ್, ಅವರು 7 ಕೊಠಡಿಗಳ ಹಂಚಿಕೆಗೆ ಪದಾಧಿಕಾರಿಗಳ ಮೇಲೆ ಒತ್ತಡ ಹೇರಿದ್ದರು, ಇದು ಕಾನೂನುಬಾಹಿರವಾಗಿದೆ. ಐಎಎಸ್ ಅಧಿಕಾರಿಗಳಿಗೆ ಅನುಕೂಲ ಮಾಡಿಕೊಡಲು ಕೆಎಎಸ್ಒಎಯ ಅಜೀವ ಸದಸ್ಯರಿಗೆ ಕೊಠಡಿಗಳನ್ನು ನಿರಾಕರಿಸಿದ ಇಂತಹ ಹಲವಾರು ನಿದರ್ಶನಗಳು ಹಿಂದೆ ನಡೆದಿವೆ.”
“ವರದಿಗಳ ಪ್ರಕಾರ ಐಎಎಸ್ ಅಧಿಕಾರಿಗಳ ಸಂಘವು ಇತ್ತೀಚೆಗೆ 40 ಕೋಟಿ ರೂ. ಸರ್ಕಾರಿ ನಿಧಿಯಲ್ಲಿ ತನ್ನ ಕಟ್ಟಡಗಳನ್ನು ನವೀಕರಣ ಮಾಡಿಕೊಂಡ ಬಗ್ಗೆ ತಿಳಿಸುತ್ತವೆ. ಹೀಗಿದ್ದರೂ ಕೆಎಎಸ್ಒಎ ಆಜೀವ ಸದಸ್ಯರ ವೆಚ್ಚದಲ್ಲಿ ಐಎಎಸ್ ಅಧಿಕಾರಿಗಳು, ಕೆಎಎಸ್ ಅಧಿಕಾರಿಗಳ ಸಂಘದ ಮೇಲೆ ಅವಲಂಬಿತರಾಗಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಇದಲ್ಲದೇ ಕೆಎಎಸ್‌ಒಎಯ ಎಲ್ಲಾ ಸೌಲಭ್ಯಗಳನ್ನು ಕೆಎಎಸ್ ಅಧಿಕಾರಿಗಳನ್ನು ಹೊರತುಪಡಿಸಿ ಹೊರಗಿನವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಐಎಎಸ್ ಅಧಿಕಾರಿಗಳಿಂದ ವಿವಿಧ ಅನುಕೂಲಗಳ ಅಗತ್ಯವಿರುವ ಕಾರಣಗಳಿಂದಾಗಿ ಸೌಲಭ್ಯಗಳ ದುರ್ಬಳಕೆಯನ್ನು ನಿಯಂತ್ರಿಸಲು ಕೆಎಎಸ್ಒಎ ಪದಾಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ.” ಎಂದು ಮಥಾಯ್, ಸಂಘದ ಪದಾಧಿಕಾರಿಗಳ ಕಾರ್ಯಕ್ಷಮತೆಯ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.
ಸಂಘದ ಸಮರ್ಥ ಕಾರ್ಯನಿರ್ವಹಣೆಗೆ ನಿವೃತ್ತ ಅಧಿಕಾರಿಗೆ ನೀಡಿ :
“ಐಎಎಸ್ ಅಧಿಕಾರಿಗಳಿಗೆ ವಸತಿಗಾಗಿ ಐಎಎಸ್ ಅಧಿಕಾರಿಗಳ ಸಂಘ (IASOA), ಕುಮಾರ ಕೃಪಾ ಅತಿಥಿ ಗೃಹ (Kumara krupa Athithi Gruha) ಮುಂತಾದ ಹಲವಾರು ಆಯ್ಕೆಗಳಿರುವುದರಿಂದ ಐಎಎಸ್ ಅಧಿಕಾರಿ ಜಾವೇದ್ ಅಖ್ತರ್, ಅವರಿಗೆ 7 ಕೊಠಡಿಗಳ ಹಂಚಿಕೆಯನ್ನು ರದ್ದುಗೊಳಿಸಬೇಕು ಮತ್ತು ಜು.31 31.7.2023 ರಂದು ಆಜೀವ ಸದಸ್ಯನಾದ ನನಗೆ ಒಂದು ಕೋಣೆಯನ್ನು ಮಂಜೂರು ಮಾಡಬೇಕೆಂದು ವಿನಂತಿಸಲಾಗಿದೆ. ಇದಲ್ಲದೆ, ಅರ್ಹ ವಿಜೇತರಿಗೆ ಕ್ರೀಡಾ ಬಹುಮಾನಗಳನ್ನು ಶೀಘ್ರವಾಗಿ ವಿತರಿಸಲು ವಿನಂತಿಸಲಾಗಿದೆ.” ಎಂದು ತಮ್ಮ ದೂರಿನ ಪತ್ರದಲ್ಲಿ ಮಥಾಯ್ ತಿಳಿಸಿದ್ದಾರೆ.
“ಮಾಹಿತಿಯ ಪ್ರಕಾರ, ಐಎಎಸ್ ಅಧಿಕಾರಿಗಳ ಸಂಘವು ಉತ್ತಮ ಆಡಳಿತಕ್ಕಾಗಿ ನಿವೃತ್ತ ಐಎಎಸ್ ಅಧಿಕಾರಿಯ ನೇತೃತ್ವದಲ್ಲಿದೆ. ಏಕೆಂದರೆ ಸೇವೆಯಲ್ಲಿರುವ ಅಧಿಕಾರಿಗಳು ಅಧಿಕೃತ ಬದ್ಧತೆಗಳಿಂದ ಸಂಘದ ಚಟುವಟಿಕೆಗಳ ಮೇಲೆ ಕೇಂದ್ರೀಕರಿಸಲು ಸಾಧ್ಯವಿಲ್ಲ. ಅದೇ ಮಾದರಿಯಲ್ಲಿ ಕೆಎಎಸ್ಒಎ ಸಂಘವು, ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ತಮ್ಮ ಅಧಿಕೃತ ಕೆಲಸಗಳಲ್ಲಿ ನಿರತರಾಗಿರುವುದರಿಂದ ಉತ್ತಮ ಆಡಳಿತಕ್ಕಾಗಿ ಸಮರ್ಥ ನಿವೃತ್ತ ಕೆಎಎಸ್ ಅಧಿಕಾರಿಗಳಿಂದ ಆಡಳಿತ ನಡೆಸಲು ಸಹ ಅನುಮತಿಸಬೇಕು.” ಎಂಬ ಕೋರಿಕೆಯನ್ನು ಪತ್ರದಲ್ಲಿ ತಿಳಿಸಿದ್ದಾರೆ.
3 ವರ್ಷವಾದರೂ ಕ್ರೀಡಾ ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಿಲ್ಲ :
ಕಳೆದ 100 ವರ್ಷಗಳ ಇತಿಹಾಸದಲ್ಲಿ 2020ರಲ್ಲಿ ಮೊದಲ ಬಾರಿಗೆ ಕೆಎಎಸ್ ಅಧಿಕಾರಿಗಳಿಗೆ ಕ್ರೀಡಾ ಸ್ಪರ್ಧೆ ನಡೆಸಿದರೂ ಈ ತನಕ ಕಳೆದ 3 ವರ್ಷಗಳಲ್ಲಿ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಿಲ್ಲ. ಸಂಘ ವ್ಯವಹಾರಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಸಮರ್ಥ ನಿವೃತ್ತ ಅಧಿಕಾರಿಗಳ ಅಗತ್ಯವಿದೆ ಎಂಬುದನ್ನು ತಮ್ಮ ದೂರಿನಲ್ಲಿ ಹೇಳಿದ್ದಾರೆ.
ಕೆಎಎಸ್ ಅಸೋಸಿಯೇಷನ್ ಕಟ್ಟಡದಲ್ಲಿ ಕರ್ನಾಟಕ ರಾಜ್ಯ ನಿವೃತ್ತ ಅಧಿಕಾರಿಗಳ ಪ್ರತಿಷ್ಠಾನಕ್ಕೆ ತನ್ನ ಚಟುವಟಿಕೆಗಳಿಗಾಗಿ ಒಂದು ಕೊಠಡಿಯನ್ನು ಶಾಶ್ವತವಾಗಿ ಮಂಜೂರು ಮಾಡಬೇಕು ಮತ್ತು ಅಲ್ಲಿನ ಕೊಠಡಿಗಳು, ಜಿಮ್, ಬ್ಯಾಡ್ಮಿಂಟನ್ ಕೋರ್ಟ್ ಇತ್ಯಾದಿಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವ ಮೂಲಕ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಬೇಕು ಎಂದು ಕೋರಿದ್ದಾರೆ.
ಸದ್ಯದಲ್ಲೇ ಸಂಘದ ಅವ್ಯವಸ್ಥೆ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವರಿಕೆ :
ಈ ಪತ್ರದ ಬಗ್ಗೆ ಬೆಂಗಳೂರು ವೈರ್ ನಿವೃತ್ತ ಕೆಎಎಸ್ ಅಧಿಕಾರಿ ಹಾಗೂ ಕರ್ನಾಟಕ ರಾಜ್ಯ ನಿವೃತ್ತ ಅಧಿಕಾರಿಗಳ ಪ್ರತಿಷ್ಠಾನದ ಅಧ್ಯಕ್ಷ ಕೆ.ಮಥಾಯ್ ಅವರನ್ನು ಕೇಳಿದಾಗ, “ಹೌದು ಈ ಪತ್ರ ತಾವು ಬರೆದದ್ದು ನಿಜ. ಕೆಎಎಸ್ ಅಸೋಸಿಯೇಶನ್‌ನ ಅಜೀವ ಸದಸ್ಯರಿಗೆ ಕೊಠಡಿಗಳನ್ನು ನಿರಾಕರಿಸುತ್ತಿದ್ದಾರೆ ಆದರೆ ಕೆಎಎಸ್ ಅಸೋಸಿಯೇಷನ್‌ನಲ್ಲಿ ಕೊಠಡಿಗಳನ್ನು ಪಡೆದುಕೊಳ್ಳಲು ಅರ್ಹರಲ್ಲದ ಐಎಎಸ್ ಅಧಿಕಾರಿಗಳಿಗೆ ಕೊಠಡಿಗಳನ್ನು ಮಂಜೂರು ಮಾಡುತ್ತಿದ್ದಾರೆ. ನಾನು ಮುಖ್ಯ ಕಾರ್ಯದರ್ಶಿ ಅವರಿಗೆ ದೂರು ನೀಡಿದ್ದೇನೆ. ಈ ಬಗ್ಗೆ ಸದ್ಯದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ವಾಸ್ತವ ಪರಿಸ್ಥಿತಿ ತಿಳಿಸುತ್ತೇನೆ. ಐಎಎಸ್ ಅಧಿಕಾರಿ ಜಾವೇದ್ ಅಖ್ತರ್ ಕೆಎಎಸ್ ಅಧಿಕಾರಿಗಳ ಸಂಘದಲ್ಲಿ 7 ಕೊಠಡಿಗಳನ್ನು ಬೇಡಿಕೆಯಿಡುವುದು ನಿಜವಾಗಿಯೂ ಅನುಚಿತವಾಗಿದೆ. ಕೆಎಎಸ್ ಅಧಿಕಾರಿಗಳ ಸಂಘ ಇರುವುದು ಸಂಘದ ಅಜೀವ ಸದಸ್ಯರಿಗೆ ಮಾತ್ರ.”
ಸಂಘದ ಅಜೀವ ಸದಸ್ಯರಲ್ಲದವರಿಗೂ ಆಟಕ್ಕೆ ಅವಕಾಶದ ಬಗ್ಗೆ ಟೀಕೆ :
“ಐಎಎಸ್ ಅಧಿಕಾರಿಗಳು ಇದರ ಸದಸ್ಯರಲ್ಲ ಮತ್ತು ಇಲ್ಲಿನ ಸೌಲಭ್ಯಗಳನ್ನು ಪಡೆಯಲು ಅರ್ಹರಲ್ಲ. ಕೆಎಎಸ್ ಅಧಿಕಾರಿಗಳ ಸಂಘದ ಪ್ರಸ್ತುತ ಪದಾಧಿಕಾರಿಗಳು ಅಧಿಕಾರ ದುರುಪಯೋಗದಲ್ಲಿ ತೊಡಗಿದ್ದಾರೆ ಮತ್ತು ಐಎಎಸ್ ಅಧಿಕಾರಿಗಳು ತಮ್ಮ ಸಂಘವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಸಾಕಷ್ಟು ಪ್ರಶ್ನೆ, ಒತ್ತಡ ಹಾಕಿದ ಬಳಿಕ ತಮಗೆ ಒಂದು ಕೊಠಡಿಯನ್ನು ನೀಡಿದರು. ದೂರದ ಜಿಲ್ಲೆಗಳಿಂದ ಬರುವ ಹಲವು ಕೆಎಎಸ್ ಅಧಿಕಾರಿಗಳಿಗೆ ಕೊಠಡಿ ನಿರಾಕರಿಸಲಾಗಿದೆ. ಹೊರಗಿನವರಿಗೆ ಅವಕಾಶ ನೀಡುವುದಿಲ್ಲ ಎಂದು ಹೋರಾಟ ನಡೆಸಿದ್ದೆ. ಮೊದಲು ಆಟೋ ಚಾಲಕ ಹಾಗೂ ಬ್ಯಾಟರಿ ರಿಪೇರಿ ಮಾಡುವವರಿಗೆ ಬ್ಯಾಡ್ಮಿಂಟನ್ ಆಡಲು ಅವಕಾಶ ನೀಡಲಾಗಿತ್ತು. ನನ್ನ ತೀವ್ರ ಆಕ್ಷೇಪದ ನಂತರ, ಅವರು ಅನುಮತಿ ನಿರಾಕರಿಸಿದರು. ಈಗ ಕೆಎಎಸ್ ಅಸೋಸಿಯೇಷನ್ ಬ್ಯಾಡ್ಮಿಂಟನ್ ಕೋರ್ಟ್‌ನಲ್ಲಿ ಸದಸ್ಯರಲ್ಲದ ಹೊರಗಿನವರೂ ಆಡುತ್ತಿದ್ದಾರೆ.” ಇದಕ್ಕೆ ತಮ್ಮ ತೀವ್ರ ವಿರೋಧವಿದೆ ಎಂದು ಮಥಾಯ್ ತಿಳಿಸಿದ್ದಾರೆ.
ಆಪ್ ಪಕ್ಷದ ಸಭೆಯನ್ನು ಮಥಾಯ್ ಈ ಸಂಘದಲ್ಲಿ ನಡೆಸಿದ್ದರು?? :
ಕೆ.ಮಥಾಯ್ ಇತ್ತೀಚೆಗೆ ನಡೆದ ಕರ್ನಾಟಕ ಸಾರ್ವತ್ರಿಕ ಚುನಾವಣೆಯಲ್ಲಿ ಶಾಂತಿನಗರ ವಿಧಾನಸಭಾ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಚುನಾವಣೆಗೆ ಮುಂಚೆ ಆಪ್ ಪಕ್ಷದ ಚುನಾವಣೆಗೆ ಸಂಬಂಧಿಸಿದ ಹಲವು ಸಭೆಗಳನ್ನು ಕೆಎಎಸ್ ಅಧಿಕಾರಿಗಳ ಸಂಘದಲ್ಲಿ ಕಾರ್ಯಕರ್ತರೊಂದಿಗೆ ನಡೆಸಿದ್ದರು. ಆದರೆ ಈಗ ಮಾತ್ರ ಐಎಎಸ್ ಅಧಿಕಾರಿಗಳಿಗೆ ಕೊಠಡಿ ನೀಡುತ್ತಿದ್ದಾರೆ. ಸಂಘದ ಸದಸ್ಯರಲ್ಲದವರಿಗೂ ಸಂಘದ ಸೌಲಭ್ಯಗಳನ್ನು ಬಳಸಲು ಅವಕಾಶ ನೀಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಸಂಘದ ಸ್ಥಳವನ್ನು ರಾಜಕೀಯ ಸಭೆಗಳಿಗೆ ಬಳಸಿದ್ದರ ಬಗ್ಗೆ ಮಥಾಯ್ ಈಗ ಚಕಾರ ಎತ್ತುತ್ತಿಲ್ಲ ಎಂದು ಅಧಿಕಾರಿಯೊಬ್ಬರು ಟೀಕೆ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಸರ್ಕಾರದ ಭಾಗವಾಗಿರುವ ಹಾಗೂ ಕಾನೂನುಗಳನ್ನು ಪಾಲನೆ ಮಾಡುವ ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಗಳು ಪ್ರತಿನಿಧಿಸುವ ಸಂಘದಲ್ಲಿ ಈ ರೀತಿಯ ಅವ್ಯವಸ್ಥೆಗಳನ್ನು ಕೂಡಲೇ ಸರಿಪಡಿಸಿಕೊಂಡು ಮುಂದೆ ಇಂತಹ ತಪ್ಪಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸಂಘದ ಮೇಲಿದೆ. ಇಲ್ಲವಾದಲ್ಲಿ ಸಾರ್ವಜನಿಕ ಆಡಳಿತವನ್ನು ನಡೆಸುವವರು ತಮ್ಮ ಸಂಘವನ್ನು ಎಷ್ಟರ ಮಟ್ಟಿಗೆ ಸಮರ್ಥವಾಗಿ ನಿಭಾಯಿಸಬಲ್ಲರು ಎಂಬುದಕ್ಕೆ ಇದೊಂದು ಕೆಟ್ಟ ಉದಾಹರಣೆಯಾಗಿ ಉಳಿದುಬಿಡುವ ಸಾಧ್ಯತೆಯಿರುತ್ತದೆ.
ಮಥಾಯ್ ಆರೋಪದಲ್ಲಿ ಹುರುಳಿಲ್ಲ :
“ಐಎಎಸ್ ಅಧಿಕಾರಿ ಜಾವೇದ್ ಅಖ್ತರ್ ಅವರು ತಮ್ಮ ಮನೆಯ ವಿವಾಹ ಕಾರ್ಯಕ್ರಮಕ್ಕೆ ಐಎಎಸ್ ಅಧಿಕಾರಿಗಳ ಸಂಘದಲ್ಲಿ ಕೊಠಡಿ ಸಾಲದ್ದಕ್ಕೆ ಕೆಎಎಸ್ ಅಧಿಕಾರಿಗಳ ಸಂಘದಲ್ಲಿ 8 ಕೊಠಡಿಗಳನ್ನು ಕೇಳಿದ್ದರು. ಆದರೆ 6 ಕೊಠಡಿಗಳನ್ನಷ್ಟೇ ನೀಡಿದ್ದೇವೆ. ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದಲ್ಲಿ ಕೇವಲ 8 ಕೊಠಡಿಗಳಷ್ಟೇ ಇದ್ದು, ಕೆಲವೊಮ್ಮೆ ಇಲ್ಲಿನ ಕೊಠಡಿಗಳು ಪೂರ್ತಿ ಬುಕ್ ಆದಾಗ ಐಎಎಸ್ ಅಧಿಕಾರಿಗಳ ಸಂಘದ ಕೊಠಡಿ ಹಾಗೂ ಹಾಲ್ ಗಳನ್ನು ನಮ್ಮ ಸಂಘದ ಸದಸ್ಯರು ಬಳಸಿಕೊಳ್ಳುತ್ತೇವೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ನಿವೃತ್ತ ಕೆಎಎಸ್ ಅಧಿಕಾರಿ ಮಥಾಯ್ ಅವರು ಆರೋಪಿಸಿದಂತೆ ಆಟೋ ಚಾಲಕ, ಬ್ಯಾಟರಿ ರಿಪೇರಿ ಮಾಡುವವರಿಗೆ ಸಂಘದಲ್ಲಿನ ಸೌಲಭ್ಯ ಬಳಸಲು ಅವಕಾಶ ಮಾಡಿಕೊಟ್ಟಿಲ್ಲ. ಅವರ ಆರೋಪದಲ್ಲಿ ಹುರುಳಿಲ್ಲ.”
ಹರೀಶ್ ನಾಯಕ್, ಕಾರ್ಯದರ್ಶಿ, ಕೆಎಎಸ್ ಅಧಿಕಾರಿಗಳ ಸಂಘ
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.