ಬೆಂಗಳೂರು, ಆ.2 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ದಕ್ಷಿಣ ವಲಯ ವ್ಯಾಪ್ತಿಯ ವಿವಿಪುರಂ ವಾರ್ಡ್ ನಲ್ಲಿ ಬರುವ ಫುಡ್ ಸ್ಟ್ರೀಟ್(ತಿಂಡಿ ಬೀದಿ) ಹಾಗೂ ಧರ್ಮರಾಯ ಸ್ವಾಮಿ ದೇವಸ್ಥಾನ ರಸ್ತೆಯಲ್ಲಿರುವ ಗಂಗಾಧರೇಶ್ವರ ದೇವಸ್ಥಾನ ಗೋಡೆ ಕುಸಿದಿರುವ ಸ್ಥಳಕ್ಕೆ ಹಣಕಾಸು ವಿಭಾಗದ ವಿಶೇಷ ಆಯುಕ್ತರು ಹಾಗೂ ದಕ್ಷಿಣ ವಲಯ ಆಯುಕ್ತರಾದ ಜಯರಾಮ್ ರಾಯಪುರ ರವರು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲಿಸಿದರು.
ವಿವಿಪುರ ನ ಫುಡ್ ಸ್ಟ್ರೀಟ್(ತಿಂಡಿ ಬೀದಿ) ಕಾಮಗಾರಿ ಪರಿಶೀಲನೆ:
ನಗರದ ವಿವಿ ಪುರಂನಲ್ಲಿರುವ ತಿಂಡಿ ಬೀದಿಯ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲಿಸಿ ತ್ವರಿತಗತಿಯಲ್ಲಿ ಬಾಕಿ ಕೆಲಸವನ್ನು ಪೂರ್ಣಗೊಳಿಸಲು ದಕ್ಷಿಣ ವಲಯ ಆಯುಕ್ತರಾದ ಜಯರಾಮ್ ರಾಯಪುರ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿವಿ ಪುರಂನ ತಿಂಡಿ ಬೀದಿಯಲ್ಲಿ ಸಮರ್ಪಕ ಮೂಲಭೂತ ಸೌಕರ್ಯಗಳನ್ನು ಒಗದಿಸುವ ನಿಟ್ಟಿನಲ್ಲಿ ಹಾಗೂ ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ ಸಜ್ಜನ್ ರಾವ್ ವೃತ್ತ ಮತ್ತು ಮಿನರ್ವ ವೃತ್ತದ ನಡುವೆ ಇರುವ ಸುಮಾರು 200 ಮೀಟರ್ ಉದ್ದದ ರಸ್ತೆಯ ಅಭಿವೃದ್ಧಿಯ ಕಾರ್ಯ ನಡೆಯುತ್ತಿದ್ದು, ಈಗಾಗಲೇ ಒಳಚರಂಡಿ ಸಂಪರ್ಕ, ನೀರು ಸರಬರಾಜು ಸಂಪರ್ಕ, ಮಳೆನೀರುಗಾಲುವೆ ಸಂಪರ್ಕ, ಕೇಬಲ್‌ಗಳ ಲೈನ್ ಡಕ್ಟ್ ಹಾಗೂ ಕೇಬಲ್ ಚೇಂಬರ್‌ಗೆ ಸಂಬಂಧಿಸಿದ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ರಸ್ತೆಗೆ ಅನುಗುಣವಾಗಿ ಬೆಡ್ ಕಾಂಕ್ರಿಟ್ ಹಾಕಿ 5 ಮೀಟರ್ ಕಾಂಕ್ರೀಟ್ ರಸ್ತೆಯ ಕೆಲಸ ಪ್ರಗತಿಯಲ್ಲಿದ್ದು, ಎರಡೂ ಬದಿ 3 ಮೀಟರ್ ಪಾದಚಾರಿ ಮಾರ್ಗ, 25 ವಿದ್ಯುತ್ ದೀಪಗಳ ಅಳವಡಿಕೆ ಕೆಲಸ ಸೇರಿದಂತೆ ಬೇರೆ ಬೇರೆ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕಿದೆ. ಬಾಕಿ ಇರುವ ಕೆಲಸಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾಂಕ್ರೀಟ್ ರಸ್ತೆಗೆ ಕೆಂಗಂದು ಬಣ್ಣ ಅಳವಡಿಕೆ:
ಫುಡ್ ಸ್ಟ್ರೀಟ್ ನ 200 ಮೀಟರ್ ಉದ್ದದ ರಸ್ತೆಯಲ್ಲಿ ನಿರ್ಮಿಸುತ್ತಿರುವ 5 ಮೀಟರ್ ಅಗಲದ ಕಾಂಕ್ರೀಟ್ ರಸ್ತೆಯ ಮೆಲ್ಭಾಗಕ್ಕೆ 3 ಎಂ.ಎಂನ ಕೆಂಗಂದು ಬಣ್ಣ (Iron Oxide Pigment Color) ಹಾಕಲಾಗುತ್ತಿದೆ. ಶೇ. 70 ರಷ್ಟು ಕಾಂಕ್ರೀಟ್ ರಸ್ತೆಯ ಕಾಮಗಾರಿ ಪೂರ್ಣಗೊಂಡಿದ್ದು, ಸಂಪೂರ್ಣ ಕಾಂಕ್ರೀಟ್ ರಸ್ತೆ ಪೂರ್ಣಗೊಂಡ ಬಳಿಕ ರಸ್ತೆಗೆ ಕೆಂಗಂದು ಬಣ್ಣದ ಪಾಲೀಶ್ ಮಾಡಲಾಗುತ್ತದೆ. ಇದರಿಂದ ರಸ್ತೆ ಆಕರ್ಷಕವಾಗಿ ಕಾಣಲಿದೆ.
ಗಂಗಾಧರೇಶ್ವರ ದೇವಸ್ಥಾನದ ಗೋಡೆ ದುರಸ್ತಿ ಕಾರ್ಯ ಚುರುಕು :
ಧರ್ಮರಾಯ ಸ್ವಾಮಿ ದೇವಸ್ಥಾನ ರಸ್ತೆಯ ಬಳಿ ಗಂಗಾಧರೇಶ್ವರ ದೇವಸ್ಥಾನ ಬಳಿ 1 ಆಗಸ್ಟ್ 2023 ರಂದು ಪಾದಚಾರಿ ಮಾರ್ಗದ ಒತ್ತುವರಿ ತೆರವು ಕಾರ್ಯಚರಣೆಯ ವೇಳೆ ದೇವಾವಲಯದ ಮೇಲ್ಭಾಗದ ಗೋಡೆ ಕುಸಿದು ಬಿದ್ದಿದ್ದು, ಪಾಲಿಕೆ ವತಿಯಿಂದ ಗೋಡೆಯ ದುರಸ್ಥಿ ಕಾರ್ಯವನ್ನು ನಡೆಸಲಾಗುತ್ತಿದೆ. ಗೋಡೆ ಕುಸಿದಿರುವ ಸ್ಥಳಕ್ಕೆ ದಕ್ಷಿಣ ವಲಯ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಗಂಗಾಧರೇಶ್ವರ ದೇವಸ್ಥಾನವು ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರಲಿದ್ದು, ದೇವಾಲಯಕ್ಕೆ ಹೊಂದಿಕೊಂಡಂತಿರುವ ಅಂಗಡಿಯ ಮೇಲ್ಭಾಗದ ಗೋಡೆಗೆ ಅಂಗಡಿಯ ನಾಮಫಲಕ ಹಾಗೂ ಶೀಟ್ ಅನ್ನು ಅಳವಡಿಸಲಾಗಿತ್ತು. ಪಾದಚಾರಿ ಮಾರ್ಗದ ಒತ್ತುವರಿ ತೆರವು ಕಾರ್ಯಾಚರಣೆಯ ವೇಳೆ ಜೆಸಿಬಿಯ ಮೂಲಕ ನಾಮಫಲಕ ಹಾಗೂ ಶೀಟ್ ಅನ್ನು ತೆರವುಗೊಳಿಸುವ ಸಮಯದಲ್ಲಿ ದೇವಾಲದ ಮೇಲ್ಭಾಗದ ಗೋಡೆ ತುಂಬಾ ಹಳೆಯದಾಗಿದ್ದ ಪರಿಣಾಮ ಗೋಡೆ ಕುಸಿದು ಬಿದ್ದಿದೆ. ಈ ಸಂಬಂಧ ಈಗಾಗಲೇ ಪಾಲಿಕೆ ವತಿಯಿಂದ ಗೋಡೆಯ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಈ ವೇಳೆ ದಕ್ಷಿಣ ವಲಯ ಆಯುಕ್ತರು ಪ್ರತಿಕ್ರಿಯಿಸಿ, ಪಾದಚಾರಿ ತೆರವು ಕಾರ್ಯಾಚರಣೆಯ ವೇಳೆ ಆಗಿರುವ ದುರಸ್ತಿ ಕಾರ್ಯವನ್ನು ಈ ವಾರಾಂತ್ಯದೊಳಗಾಗಿ ಪೂರ್ಣಗೊಳಿಸಬೇಕು. ಜೊತಗೆ ಪಾದಚಾರಿ ಮಾರ್ಗದ ತೆರವು ಕಾರ್ಯಾಚರಣೆ ಮಾಡುವ ವೇಳೆ ಮುಜರಾಯಿ ಇಲಾಖೆಯ ಸಹಯೋಗದೊಂದಿಗೆ ಒತ್ತುವರಿ ಮಾಡಿಕೊಂಡಿರುವುದನ್ನು ಗುರುತಿಸಿ ತೆರವುಗೊಳಿಸಲು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ವಲಯ ಮುಖ್ಯ ಅಭಿಯಂತರರಾದ ರಾಜೇಶ್, ಕಾರ್ಯಪಾಲಕ ಅಭಿಯಂತರರಾದ ಮಹಂತೇಶ್, ಯರಪ್ಪ ರೆಡ್ಡಿ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.