ಬೆಂಗಳೂರು, ಆ.1 www.bengaluruwire.com :
ಗೃಹಜ್ಯೋತಿ ಯೋಜನೆಯಡಿ ಅರ್ಹ ಗ್ರಾಹಕರಿಗೆ ಆಗಸ್ಟ್ ನಿಂದ ಶೂನ್ಯ ಬಿಲ್ ನೀಡುವ ಕೆಲಸ ಇಂದಿನಿಂದ ಆರಂಭವಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಗೃಹಜ್ಯೋತಿ ಯೋಜನೆ ಆ.5ರಂದು ಗುಲ್ಬರ್ಗದಲ್ಲಿ ಉದ್ಘಾಟನೆಯಾಗಲಿದೆ. ಈ ಕುರಿತಂತೆ ನಗರದಲ್ಲಿ ಮಂಗಳವಾರ ಖಾಸಗಿ ಹೋಟೆಲ್ ನಲ್ಲಿ ಗೃಹಜ್ಯೋತಿ ಯೋಜಮೆ ಉದ್ಘಾಟನೆಯ ಪೂರ್ವಸಿದ್ಧತಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕಳೆದ ವರ್ಷದ ಸರಾಸರಿಗಿಂತ 200 ಗಿಂತ ಜಾಸ್ತಿ ಯೂನಿಟ್ ಬಳಸಿದರೆ ಯೋಜನೆಗೆ ಅರ್ಹರಾಗಿರುವುದಿಲ್ಲ. ಈ ತನಕ 1.42 ಕೋಟಿ ಗ್ರಾಹಕರು ಗೃಹಜ್ಯೋತಿ ಯೋಜನೆ ನೋಂದಣಿ
ಮಾಡಿದ್ದಾರೆ. ಕೆಲವು ಡಿಡೂಪ್ಲಿಕೇಶನ್ ಎಲ್ಲವನ್ನು ಪರಿಶೀಲಿಸಿದ ಮೇಲೆ ಇಷ್ಟು ಜನರು ಅರ್ಹತೆ ಪಡೆದಿದ್ದಾರೆ.
ಆಗಸ್ಟ್ 22 ರ ಒಳಗೆ ನೋಂದಣಿ ಮಾಡಿದರೆ ಆಗಸ್ಟ್ ತಿಂಗಳ ಬಳಕೆಯ ಬಿಲ್ ನಂತರದ ತಿಂಗಳಲ್ಲಿ ಬರುತ್ತದೆ.
ಈ ಯೋಜನೆಯ ಫಲನುಭವಿಗಳಿಗೆ ಉಚಿತ ವಿದ್ಯುತ್ ಯೋಜನೆಯ ಲಾಭ ಆಗಸ್ಟ್ ಬಿಲ್‌ನಲ್ಲಿ ಲಭಿಸಲಿದೆ. ಇಂದಿನಿಂದಲೇ ಶೂನ್ಯ ಬಿಲ್ ನೀಡುವ ಪ್ರಕ್ರಿಯೆ ಆರಂಭವಾಗಿದೆ ಎಂದರು.
ಈಗಾಗಲೇ ಜಾರಿಯಲ್ಲಿದ್ದ ಭಾಗ ಜೋತಿ, ಕುಟೀರ ಜ್ಯೋತಿ ಮತ್ತು ಅಮೃತ ಜ್ಯೋತಿ ಯೋಜನೆಯನ್ನು ಗೃಹ ಜ್ಯೋತಿ ಯೋಜನೆಯಲ್ಲಿ ವಿಲೀನ ಮಾಡಲಾಗಿದೆ. ಭಾಗ್ಯ ಜ್ಯೋತಿ ಮತ್ತು ಕುಟೀರ ಜೋತಿ ಕುಟುಂಬದವರಿಗೆ 40 ಯೂನಿಟ್ ಯಿಂದ 53 ಯೂನಿಟ್ ಹಾಗೂ ಶೇ.10 ರಷ್ಟು ಹೆಚ್ಚುವರಿ ಉಚಿತ ವಿದ್ಯುತ್, ಅಮೃತ ಜೋತಿಗೆ 75 ಯೂನಿಟ್ ಜತೆಗೆ ಶೇ.10 ರಷ್ಟು ಹೆಚ್ಚಿಸುವುದರ ಮೂಲಕ ಎಲ್ಲರನ್ನು ಗೃಹ ಜ್ಯೋತಿ ವ್ಯಾಪ್ತಿಗೆ ತರಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 2.16 ಕೋಟಿ ಆರ್.ಆರ್. ನಂಬರ್ ಸಂಪರ್ಕ :
ರಾಜ್ಯದಲ್ಲಿ 2.16 ಕೋಟಿ ಆರ್.ಆರ್. ನಂಬರ್ ಗಳಿದೆ. ಅದರಲ್ಲಿ 2.14 ಕೋಟಿ 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಕೆದಾರರಿದ್ದಾರೆ. ಒಂದು ಮನೆಗೆ ಒಂದು ಸಂಪರ್ಕ ಮಾತ್ರ ನೀಡುತ್ತೇವೆ. ಗೃಹಜ್ಯೋತಿ ಫಲಾನುಭವಿಗಳು ಉಚಿತ 200 ಯೂನಿಟ್ ವಿದ್ಯುತ್ ಗಿಂತ ಹೆಚ್ಚು ಬಳಸಿದರೆ ಈ ಹಿಂದಿನಂತೆ ನಿಗದಿತ ಫಿಕ್ಸೆಡ್ ದರ, ತೆರಿಗೆ ಸೇರಿದಂತೆ ಸಾಮಾನ್ಯ ಬಿಲ್ ಅನ್ನು ಪಾವತಿಸಬೇಕು. ಈ ಯೋಜನೆ ನೋಂದಣಿಗೆ ಯಾವ ಕಾಲಮಿತಿಯನ್ನು ನಿಗದಿ ಮಾಡಿಲ್ಲ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.
ರೈತರ ಪಂಪ್ ಸೆಟ್, ಬೃಹತ್ ಕೈಗಾರಿಕೆಗೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ವಿದ್ಯುತ್ ಬಿಲ್ ಕಡಿಮೆ ಮಾಡಲು ಆಯಾ ಏರಿಯಾದ ಸಬ್ ಸ್ಟೇಷನ್ ಸುತ್ತಲೇ ಸೌರ ವಿದ್ಯುತ್, ಪವನ ವಿದ್ಯುತ್ ಮತ್ತಿತರ ಮೂಲಗಳಿಂದ ಅಲ್ಲೇ ವಿದ್ಯುತ್ತನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ವಿದ್ಯುತ್ ಉತ್ಪಾದಿಸಿದರೆ ವಿದ್ಯುತ್ ಸರಬರಾಜಿನಲ್ಲಿನ ಸೋರಿಕೆ ತಪ್ಪಿಸಬಹುದು. ಹೀಗಾಗಿ ಸಬ್ ಸ್ಟೇಷನ್ ಸುತ್ತ ವಿದ್ಯುತ್ ಉತ್ಪಾದನೆಗೆ ರೈತರು ಲೀಸ್ ನಲ್ಲಿ ಭೂಮಿ ನೀಡಿದರೆ ಪಾವಗಡ ರೀತಿಯಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡಬಹುದು. ಹೀಗಾದರೆ ಮುಂದಿನ ದಿನದಲ್ಲಿ ಗ್ರಾಹಕರಿಗೆ ವಿದ್ಯುತ್ ಹೊರೆ ಹಂತ ಹಂತವಾಗಿ ಕಡಿಮೆಯಾಗುತ್ತದೆ. ಈ ಅಸಂಪ್ರದಾಯಿಕ ಇಂಧನ ಮೂಲಗಳನ್ನು ಸಮರ್ಥವಾಗಿ ಬಳಸಿಕೊಂಡು ವಿದ್ಯುತ್ ಉತ್ಪಾದಿಸಲು ಪ್ರತ್ಯೇಕ ನೀತಿ ರೂಪಿಸಿ, ಸಚಿವ ಸಂಪುಟದಲ್ಲಿ ತೀರ್ಮಾನಿಸಿ ಜಾರಿಗೆ ತರಲಾಗುತ್ತದೆ.
11 ಮೆ.ವ್ಯಾ ಸಾಮರ್ಥ್ಯದ ಕಸದಿಂದ ವಿದ್ಯುತ್ ಉತ್ಪಾದನಾ ಸ್ಥಾವರ ಸದ್ಯದಲ್ಲೇ ಉದ್ಘಾಟನೆ :
ಬಿಡದಿಯಲ್ಲಿ ಇಂಧನ ಹಾಗೂ ಬಿಬಿಎಂಪಿಯಿಂದ ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ 11 ಮೆಗಾವ್ಯಾಟ್ ಸಾಮರ್ಥ್ಯದ ಸ್ಥಾವರ ಆಗಸ್ಟ್ ಅಂತ್ಯ ಹಾಗೂ ಸೆಪ್ಟೆಂಬರ್ ನಲ್ಲಿ ಉದ್ಘಾಟನೆಯಾಗಲಿದೆ. ಈ ಪ್ರಕ್ರಿಯೆಯಲ್ಲಿ ಪ್ರತಿ ಯೂನಿಟ್ ವಿದ್ಯುತ್ ಉತ್ಪಾದನೆಗೆ 8 ರೂ. ವೆಚ್ಚವಾಗಲಿದೆ. ಈ ಘಟಕದಿಂದ ವಿದ್ಯುತ್ ಉತ್ಪಾದಿಸುವ ಯೋಜನೆ ಯಶಸ್ವಿಯಾದರೆ ರಾಜ್ಯದ ಉಳಿದ ಸ್ಥಳೀಯ ಸಂಸ್ಥೆಗಳಲ್ಲೂ ಕಸದಿಂದ ವಿದ್ಯುತ್ ಉತ್ಪಾದಿಸುವ ಯೋಜನೆ ರೂಪಿಸಲಾಗುತ್ತದೆ. ಇದರಿಂದ ಸ್ಥಳೀಯ ಮಟ್ಟದಲ್ಲಿ ತ್ಯಾಜ್ಯ ಸಮಸ್ಯೆಗೆ ಅನುಕೂಲವಾಗಲಿದೆ ಎಂದು ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಆಗಸ್ಟ್ 5ರಂದು ಗುಲ್ಬರ್ಗದಲ್ಲಿ ನಡೆಯುವ ಗೃಹಜ್ಯೋತಿ ಉದ್ಘಾಟನಾ ಸಮಾರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತಿತರರು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರುಗಳು ಆಯಾ ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಉದ್ಘಾಟಿಸಲಿದ್ದಾರೆ ಎಂದು ಸಚಿವ ಜಾರ್ಜ್ ವಿವರಿಸಿದರು.
ಕಾಂಗ್ರೆಸ್ ಪಕ್ಷದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಗೃಹಜ್ಯೋತಿ ಗ್ಯಾರಂಟಿ ಕೂಡ ಒಂದು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಪಾದಯಾತ್ರೆ ಮಾಡಿ ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ ಜನರೊಂದಿಗೆ ಮಾತನಾಡುತ್ತಾ ಸಾಗಿದರು. ಆಗ ಜನರು ಹಲವು ಕಾರಣಗಳಿಂದ ಅಪನಗದೀಗರಣ, ಜಿಎಸ್ ಟಿ, ಬೆಲೆ ಏರಿಕೆ, ಅವಶ್ಯಕ ವಸ್ತು ಸಂಕಷ್ಟಗೊಳಗಾಗಿ ಜನ ತೊಂದರೆ ಒಳಗಾಗಿದ್ದರು. ಜನರ ಕೈ ಬಲಪಡಿಸುವ ಉದ್ದೇಶದಿಂದ ಐದು ಗ್ಯಾರಂಟಿ ಕೊಡಲಾಗಿದೆ ಎಂದು ಹೇಳಿದರು.
ಬೆಸ್ಕಾಂ ಗೃಹಜ್ಯೋತಿ ಯೋಜನೆಯಡಿ ಶೂನ್ಯ ಬಿಲ್ ಬಗ್ಗೆ ಮಾಹಿತಿ 25 ರೀತಿಯ ಅಂಶಗಳು ಇರಲಿವೆ. ಕಳೆದ ವರ್ಷದ 12 ತಿಂಗಳು ಸರಾಸರಿ ಬಿಲ್ ಹಾಗೂ ಶೇ.10ರಷ್ಟು ಹೆಚ್ಚುವರಿ ಸೇರಿ 200 ಯೂನಿಟ್ ಗಳವರೆಗೆ ವಿದ್ಯುತ್ ಬಳಸಿದರೆ ಶೂನ್ಯ ಬಿಲ್ ವಿತರಿಸುತ್ತೇವೆ. ರಾಜ್ಯದ ಸರಾಸರಿ ತಲಾ ವಿದ್ಯುತ್ ಬಳಕೆ 53 ಯೂನಿಟ್ ಗಳಾಗಿದೆ ಎಂದು ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಹೇಳಿದರು.
ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಮಹಂತೇಶ್ ಬೀಳಗಿ ಬೆಸ್ಕಾಂ ಶೂನ್ಯ ಬಿಲ್ ಕುರಿತಂತೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕೆಪಿಟಿಸಿಎಲ್ ವ್ಯವಸ್ಥಾಪಕ ಪಂಕಜ್ ಕುಮಾರ್ ಪಾಂಡೆ, ಬೆಸ್ಕಾಂ ಹಣಕಾಸು ನಿರ್ದೇಶಕ ದರ್ಶನ್.ಜೆ ಹಾಗೂ ತಾಂತ್ರಿಕ ನಿರ್ದೇಶಕ ರಮೇಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.