ಬೆಂಗಳೂರು, ಜು.31 www.bengaluruwire.com : “ಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪೆರಿಫೆರಲ್ ರಿಂಗ್ ರಸ್ತೆ ಅಗತ್ಯ. ಅದನ್ನು ಕೈಬಿಡುವ ಮಾತಿಲ್ಲ. ಆದರೆ ಭೂಮಿ ಕಳೆದುಕೊಳ್ಳುವ ರೈತರಿಗೆ ನ್ಯಾಯ ಒದಗಿಸಲು ಸರ್ಕಾರ ಬದ್ಧವಾಗಿದೆ” ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್ ತಿಳಿಸಿದರು.
ಅರಮನೆ ರಸ್ತೆಯ ಜ್ಞಾನಭಾರತಿ ಸಭಾಂಗಣದಲ್ಲಿ ಪೆರಿಫೆರಲ್ ರಿಂಗ್ ರಸ್ತೆ ಯೋಜನೆ ಬಗ್ಗೆ ರೈತರು ಹಾಗೂ ಭೂ ಮಾಲೀಕರ ಜತೆ ಸಂವಾದ ಕಾರ್ಯಕ್ರಮ ನಡೆಸಿದ ಶಿವಕುಮಾರ್ ಅವರು ಯೋಜನೆಯಲ್ಲಿ ಭೂಮಿ ಕಳೆದುಕೊಂಡಿರುವವರ ಸಮಸ್ಯೆ ಆಲಿಸಿ, ಅವರ ಸಲಹೆ ಮತ್ತು ಅಭಿಪ್ರಾಯ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಮೀನು ಉಳಿಸಿಕೊಳ್ಳಬೇಕು, ಮನೆ ಕಟ್ಟಬೇಕು ಎಂಬುದು ಪ್ರತಿಯೊಬ್ಬರ ಕನಸು. ಇಂದಿನ ಸಭೆಯಲ್ಲಿ ನೀವು ಅನೇಕ ಉತ್ತಮ ಸಲಹೆಗಳನ್ನು ನೀಡಿದ್ದೀರಿ. ಕಾಲಮಿತಿಯಲ್ಲಿ ಯೋಜನೆ ಜಾರಿ, ಪರ್ಯಾಯ ಭೂಮಿ ಹಂಚಿಕೆ, ಸ್ವಾಧೀನ ಪಡಿಸಿಕೊಂಡಿರುವ ಭೂಮಿಗೆ ನಿರಪೇಕ್ಷಣಾ ಪ್ರಮಾಣಪತ್ರ (NOC- ಎನ್ ಓ ಸಿ) ನೀಡಬೇಕು, ಬದಲಿ ನಿವೇಶನ ನೀಡುವ ಬಗ್ಗೆ ಸಲಹೆ ನೀಡಿದ್ದೀರಿ.
ನಾನು ಸ್ವಾಧೀನ ಆಗಿರುವ ಭೂಮಿಗೆ ಎನ್ ಓ ಸಿ ನೀಡಲು ಸಾಧ್ಯವಿಲ್ಲ. ಅದನ್ನು ನೇರವಾಗಿ ನಿಮಗೆ ಸ್ಪಷ್ಟಪಡಿಸುತ್ತೇನೆ.
ಈ ಯೋಜನೆ ನಿಲ್ಲಿಸಲು ಆಗುವುದಿಲ್ಲ. ಆದರೆ ಯಾವ ರೀತಿ ನಿಮ್ಮ ಹಿತ ಕಾಯಬೇಕು, ಯಾವ ರೀತಿ ನಿಮಗೆ ಹೆಚ್ಚಿನ ಅನುಕೂಲ ಆಗುವಂತೆ ಅಗತ್ಯ ಕ್ರಮ ಕೈಗೊಳ್ಳುತ್ತೇನೆ.
ರಸ್ತೆಯೂ ಆಗಬೇಕು, ನಿಮಗೂ ನ್ಯಾಯ ಒದಗಿಸಬೇಕು ಎಂಬುದು ತಮ್ಮ ಉದ್ದೇಶ. ನೀವು ಕೊಟ್ಟಿರುವ ಅಮೂಲ್ಯ ಸಲಹೆಗಳನ್ನು ನಾನು ಕಾನೂನು ತಜ್ಞರ ಜೊತೆ ಚರ್ಚೆ ಮಾಡುತ್ತೇನೆ. ನಂತರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ಆದಷ್ಟು ಬೇಗ ಈ ವಿಚಾರವಾಗಿ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.
ಪೆರಿಫೆರಲ್ ರಿಂಗ್ ರಸ್ತೆ ಯೋಜನೆಗೆ 2007ರಲ್ಲಿ ಅಧಿಸೂಚನೆ ಹೊರಡಿಸಿದೆ. ಆಗಲೇ ಈ ರಸ್ತೆ ನಿರ್ಮಾಣ ಆಗಿದ್ದಾರೆ ನಮಗೆ ಇಷ್ಟು ಹೊರೆ ಆಗುತ್ತಿರಲಿಲ್ಲ. ನ್ಯಾಯಾಲಯದಲ್ಲಿ ಈ ಯೋಜನೆ ವಿಚಾರಣೆ ಆಗಿ ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸಲು ಆದೇಶ ಬಂದಿದೆ.
ಬಿಡಿಎಗೆ ಹೊಸ ಭೂಸ್ವಾಧೀನ ಕಾನೂನು ಅನ್ವಯ ಆಗುವುದಿಲ್ಲ. ಬಿಡಿಎ ಹಳೆ ಕಾನೂನಿನ ಪ್ರಕಾರ ಭೂಸ್ವಾಧೀನ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ನಲ್ಲಿ ಹೇಳಿದೆ.
ನಮ್ಮ ಸರ್ಕಾರ ಹೊಸ ಭೂಮಿಗೆ ಅಧಿಸೂಚನೆ ಹೊರಡಿಸುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ಬೆಂಗಳೂರು ನಗರ ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ವಾಸ್ತವ ಪರಿಸ್ಥಿತಿಯನ್ನು ಬಿಚ್ಚಿಟ್ಟರು.
ಈ ಯೋಜನೆಗೆ 25,000 ಕೋಟಿ ರೂ. ಅಗತ್ಯವಿದೆ. ಇದು ಕಾರ್ಯಗತವಾದರೆ ಸುತ್ತಮುತ್ತಲ ಜಮೀನು ಬೆಲೆ 5 ಪಟ್ಟು ಹೆಚ್ಚಾಗಲಿದೆ. ಇನ್ನು ನಾವು ಈ ಯೋಜನೆ ತಳ್ಳಿಕೊಂಡು ಹೋಗಲು ಆಗುವುದಿಲ್ಲ. ನಿಮ್ಮ ಪರಿಸ್ಥಿತಿ ನಾನು ಅರಿತಿದ್ದೇನೆ. ನೀವು ನನ್ನ ಸ್ಥಾನದಲ್ಲಿ ನಿಂತು ಈ ವಿಚಾರದಲ್ಲಿ ಯಾವ ರೀತಿ ಮುಂದುವರಿಯಬೇಕು ಎಂದು ಸಲಹೆ ನೀಡಿ” ಎಂದರು.
ರೈತರು ಮತ್ತು ಭೂಮಾಲೀಕರ ಕಡೆಯಿಂದ ಬಂದ ಸಲಹೆಗಳು:
‘ಸುಪ್ರೀಂ ಕೋರ್ಟ್ ತೀರ್ಪು ಪ್ರಶ್ನಿಸಿ ಉನ್ನತ ಪೀಠಕ್ಕೆ ಮೇಲ್ಮನವಿ ಸಲ್ಲಿಸಲು ನಮ್ಮ ಬಳಿ ಹಣವಿಲ್ಲ. ನಮ್ಮ ಪರವಾಗಿ ಸರ್ಕಾರವೇ ನ್ಯಾಯಾಲಯದಲ್ಲಿ ಅರ್ಜಿ ಹಾಕಬೇಕು. ಇಲ್ಲದಿದ್ದರೆ 2013ರಲ್ಲಿ ಜಾರಿಗೆ ತಂದ ಕಾಯ್ದೆಯಂತೆ ಪರಿಹಾರ ನೀಡಿ. ಕಾನೂನು ಹೋರಾಟಕ್ಕೆ ಹೋದರೆ ಮತ್ತೆ ಕಾಲಹರಣ ಆಗುತ್ತದೆ. ಸರ್ಕಾರವೇ ಇನ್ನು ಐದು ಸಾವಿರ ಕೋಟಿ ರೂ. ಹೆಚ್ಚು ಹಣ ಹಾಕಿ ಭೂಮಿ ಕಳೆದುಕೊಳ್ಳುವವರಿಗೆ ಹೆಚ್ಚಿನ ಪರಿಹಾರ ನೀಡಬೇಕು’ ಎಂಬ ಸಲಹೆ ಸಭೆಯಲ್ಲಿ ವ್ಯಕ್ತವಾಯಿತು.
ಸುಪ್ರೀಂ ಕೋರ್ಟ್ ತೀರ್ಪು ರೈತರ ಹಿತಕ್ಕೆ ವಿರುದ್ಧವಾಗಿದ್ದು, ಸರ್ಕಾರ ಸುಗ್ರೀವಾಜ್ಞೆ ಮೂಲಕ ಇದನ್ನು ಪಕ್ಕಕ್ಕಿಟ್ಟು ರೈತರಿಗೆ 2013ರ ಕಾಯ್ದೆ ಅನ್ವಯ ಪರಿಹಾರ ಹಣ ನೀಡಬೇಕು.
ಬಿಡಿಎ ಪರವಾಗಿ ಬಂದಿರುವ ತೀರ್ಪು ಬಿಡಿಎ ಮತ್ತು ಸರ್ಕಾರದ ವಿರುದ್ಧದ ಪ್ರಕರಣವಾಗಿದ್ದು, ಯಾವುದೇ ರೈತರು ಈ ವಿಚಾರಣೆಯಲ್ಲಿ ಅರ್ಜಿದಾರರಾಗಿಲ್ಲ. ಹೀಗಾಗಿ ಈ ತೀರ್ಪು ಪಕ್ಕಕ್ಕೆ ಇಟ್ಟು ರೈತರಿಗೆ ನೆರವಾಗಬೇಕು.
ಈ ಯೋಜನೆಯಲ್ಲಿ ಜಮೀನು ಕಳೆದುಕೊಳ್ಳುವ ನಮಗೆ ಸುತ್ತಮುತ್ತಲ ಹಳ್ಳಿಗಳಲ್ಲಿರುವ ಸರ್ಕಾರಿ ಜಮೀನನ್ನು ಬದಲಿಯಾಗಿ ನೀಡಿ. ಆಗ ನಾವು ಅಲ್ಲೇ ವ್ಯವಸಾಯ ಮಾಡಿಕೊಂಡು ಹೋಗುತ್ತೇವೆ. ಕಳೆದ 15 ವರ್ಷಗಳಿಂದ ಮನೆ ಕಟ್ಟಬೇಕಾ ಬೇಡವೇ ಎಂಬ ಗೊಂದಲದಲ್ಲಿ ಇದ್ದೇವೆ? ನಮಗೆ ಬೇರೆ ಬದಲಿ ನಿವೇಶನ ನೀಡಬೇಕು. ಯಾವುದೇ ಯೋಜನೆ ನೋಟಿಫಿಕೇಶನ್ ಆದ ನಂತರ 5 ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಆಗದಿದ್ದರೆ ಆ ನೋಟಿಫಿಕೇಶನ್ ಕೈಬಿಡಬೇಕು ಎಂಬ ಕಾನೂನು ಇದೆ. ಹೀಗಾಗಿ ನಮಗೆ ಎನ್ ಓ ಸಿ ನೀಡಬೇಕು ಎಂದು ರೈತರು ಒತ್ತಾಯಿಸಿದರು.
2013ರ ಕಾಯ್ದೆ ಅನ್ವಯ ಪರಿಹಾರ ನೀಡಲು ರೈತರ ಆಗ್ರಹ : ಈ ಯೋಜನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ನಮಗೆ ಈ ತ್ರಿಶಂಕು ಸ್ಥಿತಿಯಿಂದ ಹೊರಗೆ ತಂದು ನಿರಾಳತೆ ನೀಡಬೇಕು. ಸರ್ಕಾರ ನೀಡುವ ಪುಡಿಗಾಸು ಪರಿಹಾರದಲ್ಲಿ ನಾವು ಬೇರೆ ಕಡೆ ಜಮೀನು ಖರೀದಿಸಲು ಆಗುವುದಿಲ್ಲ. ಹೀಗಾಗಿ ನಮ್ಮ ಗ್ರಾಮದಲ್ಲಿ ಇರುವ ಗೋಮಾಳ ಜಮೀನನ್ನು ನಮಗೆ ನೀಡಬೇಕು.
ಈ ಯೋಜನೆಯಲ್ಲಿ ಭೂಮಿ ಕಳೆದುಕೊಳ್ಳುವ ರೈತರಿಗೆ ನ್ಯಾಯ ಸಿಗಬೇಕಾದರೆ 2013ರ ಕಾಯ್ದೆ ಅನ್ವಯ ಪರಿಹಾರ ನೀಡಬೇಕು. ಅದಕ್ಕೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಭಾಗವಹಿಸಿದ ರೈತರು ಮತ್ತು ಭೂಮಾಲೀಕರು ಆಗ್ರಹಿಸಿದ್ದಾರೆ.
ಪೆರಿಫೆರಲ್ ರಿಂಗ್ ರಸ್ತೆ ಯೋಜನೆ ಬಗ್ಗೆ ರೈತರು ಹಾಗೂ ಭೂ ಮಾಲೀಕರ ಜತೆ ಸಂವಾದ ಕಾರ್ಯಕ್ರಮದಲ್ಲಿ ಬಿಡಿಎ ಆಯುಕ್ತ ಕುಮಾರ್ ನಾಯಕ್, ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ್, ಪ್ರಾಧಿಕಾರದ ಕಾರ್ಯದರ್ಶಿ ಶಾಂತರಾಜು, ಭೂಸ್ವಾಧೀನ ವಿಭಾಗದ ಮುಖ್ಯಸ್ಥರಾದ ಸೌಜನ್ಯ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.