ಬೆಂಗಳೂರು, ಜು.29 www.bengaluruwire.com : ರಾಜ್ಯ ಸರ್ಕಾರದಿಂದ ರಿಯಾಯಿತಿ ದರದ “ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ” ಯೋಜನೆಯಡಿ ಬೆಂಗಳೂರಿನಿಂದ 450 ಪ್ರಯಾಣಿಕರನ್ನು ಹೊತ್ತ ವಿಶೇಷ ರೈಲು ನಗರದ ಯಶವಂತಪುರ ರೈಲ್ವೇ ನಿಲ್ದಾಣದಿಂದ ಶನಿವಾರ ತೆರಳಿತು.
ಒಟ್ಟು ಎಂಟು ದಿನಗಳ ಯಾತ್ರೆಯಲ್ಲಿ ಪುಣ್ಯ ಕ್ಷೇತ್ರಗಳಾದ ವಾರಣಾಸಿ, ಅಯೋಧ್ಯೆ ಮತ್ತು ಪ್ರಯಾಗ್ ರಾಜ್ ಕ್ಷೇತ್ರಗಳಿಗೆ ತೆರಳಲು ರಾಜ್ಯ ಸರ್ಕಾರವು ಐಆರ್ ಸಿಟಿಸಿ (IRCTC) ಮತ್ತು ಭಾರತೀಯ ರೈಲ್ವೇ (Indian Railway) ಇಲಾಖೆಯ ಸಹಯೋಗದೊಂದಿಗೆ ವಿಶೇಷ ರೈಲಿನ ಮೂಲಕ 2022-23ನೇ ಸಾಲಿನಿಂದ ಈ ಯೋಜನೆ ಕೈಗೊಂಡಿದೆ. ಇದು ನಾಲ್ಕನೇ ಟ್ರಿಪ್ ನ ಯಾತ್ರೆಯಾಗಿದೆ.
ಮುಜರಾಯಿ ಮತ್ತು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ನಾಲ್ಕನೇ ಟ್ರಿಪ್ ನ “ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ” ಯಾತ್ರೆಗೆ ಹಸಿರು ನಿಶಾನೆ ನೀಡಿದರು. ಮತರ ಮಾತನಾಡಿದ ಅವರು, “ಒಟ್ಟು 8 ದಿನ ಕಾಶಿ ಪ್ರವಾಸ, ಒಬ್ಬರಿಗೆ 20 ಸಾವಿರ ರೂಪಾಯಿ ದರವಿದೆ.ಇದರಲ್ಲಿ 5 ಸಾವಿರ ರೂ. ರಾಜ್ಯ ಸರ್ಕಾರದಿಂದ ಸಬ್ಸಿಡಿ ಸಿಗಲಿದೆ. ಇದರಲ್ಲಿ ಪ್ರಯಾಣ, ಊಟ, ವಸತಿ ವ್ಯವಸ್ಥೆ, ಧಾರ್ಮಿಕ ಕ್ಷೇತ್ರಗಳ ದರ್ಶನವು ಪ್ಯಾಕೇಜ್ ನಲ್ಲಿ ಒಳಗೊಂಡಿರಲಿದೆ. ರಾಜ್ಯ ಸರ್ಕಾರವೇ ತೀರ್ಥ ಕ್ಷೇತ್ರ ಯಾತ್ರೆಗೆಂದು ನೂತನ ಬೋಗಿಗಳನ್ನು ಖರೀದಿಸಿದ್ದು, ಪ್ರಯಾಣಿಕರಿಗೆ ಎಲ್ಲಾ ರೀತಿ ಅನುಕೂಲ ಒದಗಿಸಿದೆ. ಈ ಬೋಗಿಗಳಲ್ಲಿ 660 ಆಸನಗಳಿದೆ. ಈ ಪೈಕಿ ಮಳೆಗಾಲವಾದ ಕಾರಣ 450 ಸೀಟುಗಳು ಬುಕ್ ಆಗಿವೆ.”
“ಮುಂದಿನ ದಿನಗಳಲ್ಲಿ ರಾಜ್ಯದ ಸಾಮಾನ್ಯ ಭಕ್ತಾದಿಗಳಿಗೂ ಅನುಕೂಲವಾಗುವಂತೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಇನ್ನಷ್ಟು ಸಬ್ಸೀಡಿ ಹೆಚ್ಚಿಸುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ. ಮುಂದಿನ ಟ್ರಿಪ್ ಆಗಸ್ಟ್ 12ಕ್ಕೆ ಆರಂಭವಾಗಲಿದ್ದು ರಾಮೇಶ್ವರಂ ಸೇರಿದಂತೆ ಹಲವು ಪ್ರವಾಸಿ ತಾಣಗಳ ಭೇಟಿ ವ್ಯವಸ್ಥೆ ಮಾಡಲಾಗುತ್ತದೆ” ಎಂದು ಹೇಳಿದರು.
ಯಾತ್ರೆಗೆ ತೆರಳುತ್ತಿರುವ ಪ್ರಯಾಣಿಕರಿದ್ದ ಬೋಗಿಗಳ ಒಳಗೆ ತೆರಳಿ, ಸಚಿವರು ಪ್ರಯಾಣಿಕರಿಗೆ ಶುಭ ಕೋರಿದರು.
“ಈ ಹಿಂದೆ 45 ವರ್ಷಗಳ ಹಿಂದೆ ಕೆಲಸದ ಮೇಲೆ ಹೋಗಿದ್ದಾಗ ಕಾಶಿ ಕ್ಷೇತ್ರಕ್ಕೆ ಹೋಗಿದ್ದೆ. ಆದರೆ ಈಗ ವಾರಣಾಸಿ ಕ್ಷೇತ್ರವನ್ನು ಪ್ರಧಾನಿ ನರೇಂದ್ರ ಮೋದಿಯವರು ಸಾಕಷ್ಟು ಅಭಿವೃದ್ಧಿಪಡಿಸಿರುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಇನ್ನೊಂದೆಡೆ ಆಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಈ ಸಂದರ್ಭದಲ್ಲಿ ಅಲ್ಲಿಗೆ ವಿಶೇಷ ರೈಲಿನಲ್ಲಿ ಯಾತ್ರೆಗೆ ತೆರಳುತ್ತಿರುವುದಕ್ಕೆ ನಿಜಕ್ಕೂ ಸಂತೋಷವಾಗಿದೆ” ಎನ್ನುತ್ತಾರೆ ಹಿರಿಯ ನಾಗರೀಕರಾದ ಎ.ವಿ.ಸದಾನಂದ ಹೆಬ್ಬಾರ್.
ರಾಜ್ಯ ಸರ್ಕಾರದ “ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ” ಯಾತ್ರೆಯ ಯೋಜನೆ ಬಗ್ಗೆ ಪ್ರಯಾಣಿಕರಾದ ಬಿ.ಕೆ.ಸುಮಿತ್ರ ಅವರು ಮಾತನಾಡಿ, ಸರ್ಕಾರ ಮಧ್ಯಮ ವರ್ಗದವರಲ್ಲದೆ, ಕೆಳ ಮಧ್ಯಮ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಇನ್ನೂ ಸ್ವಲ್ಪ ಹೆಚ್ಚಿನ ಸಬ್ಸೀಡಿ ನೀಡಿದರೆ, ಕಡಿಮೆ ಕರ್ಚಿನಲ್ಲಿ ಬಡವರು ತೀರ್ಥಯಾತ್ರೆ ಕೈಗೊಳ್ಳಬಹುದು. ಸರ್ಕಾರ ಸದ್ಯ ಕಲ್ಪಿಸಿರುವ ವ್ಯವಸ್ಥೆ ಚೆನ್ನಾಗಿದೆ’ ಎಂದು ಪ್ರತಿಕ್ರಿಯಿಸಿದರು.
ಈ ವಿಶೇಷ ರೈಲಿನಲ್ಲಿ ಅಡುಗೆ ಮನೆ, ವೈದ್ಯರ ತಂಡ ಇರಲಿದ್ದು ಪ್ರತಿ ಬೋಗಿಯಲ್ಲಿ ಸಿಸಿ ಕ್ಯಾಮರಾಗಳ ವ್ಯವಸ್ಥೆ ಇದೆ. 100 ಜನ ರೈಲ್ವೇ ಸಿಬ್ಬಂದಿಗಳು ಜೊತೆಗೆ ಇರಲಿದ್ದಾರೆ. ಅದಕ್ಕಾಗಿ ಅವರಿಗೇ ಪ್ರತ್ಯೇಕ ಬೋಗಿ ವ್ಯವಸ್ಥೆಯಿರಲಿದೆ.
ಈ ಯೋಜನೆಯಡಿ ಈವರೆಗೆ ಒಟ್ಟು 3 ಟ್ರಿಪ್‌ಗಳನ್ನು ಪೂರೈಸಿದ್ದು, ವಿಶೇಷ ರೈಲಿನಲ್ಲಿ ಒಟ್ಟು 1,644 ಯಾತ್ರಾರ್ಥಿಗಳು ಯಾತ್ರೆ ಪೂರೈಸಿದ್ದು, ಈ ಯಾತ್ರಾರ್ಥಿಗಳಿಗೆ ಪ್ರಯಾಣದ ಒಟ್ಟು ಪ್ಯಾಕೇಜ್‌ದರ 20,000 ರೂ.ಗಳ ಪೈಕಿ ಸರ್ಕಾರದಿಂದ ತಲಾ 5,000 ರೂ.ಗಳಂತೆ 82.20 ಲಕ್ಷ ರೂ.ಗಳ ಸಹಾಯಧನವನ್ನು ಈವರೆಗೆ ವಿತರಿಸಲಾಗಿರುತ್ತದೆ.