ಬೆಂಗಳೂರು, ಜು.27 www.bengaluruwire.com : ಕೆ.ಆರ್.ಪುರ (KR Puram) ಮತ್ತು ಬೈಯಪ್ಪನಹಳ್ಳಿ (Baiyappanahalli) ನಡುವಿನ ಕಾಮಗಾರಿಗಳನ್ನು ಪೂರ್ಣಗೊಳಿಸಿರುವ ಬಿಎಂಆರ್‌ಸಿಎಲ್ (BMRCL) ಬುಧವಾರ ಪ್ರಾಯೋಗಿಕವಾಗಿ ಮೆಟ್ರೊ ರೈಲು ಸಂಚಾರ ಆರಂಭಿಸಿದೆ.
ಕೆ.ಆರ್.ಪುರ ಮೆಟ್ರೊ ನಿಲ್ದಾಣದಿಂದ ಬುಧವಾರ ಸಂಜೆ 6 ಗಂಟೆ 4 ನಿಮಿಷಕ್ಕೆ ಪ್ರಾಯೋಗಿಕ ಸಂಚಾರ ಪ್ರಾರಂಭವಾಯಿತು. ಮೆಟ್ರೊ ರೈಲಿನಲ್ಲಿ ಬಿಎಂಆರ್‌ಸಿಎಲ್ ತಾಂತ್ರಿಕ ತಂಡವು ರೈಲಿನಲ್ಲಿ ಸಂಚರಿಸಿ ಪರಿಶೀಲನೆ ನಡೆಸಿತು. ಬೈಯಪ್ಪನಹಳ್ಳಿವರೆಗೆ ತೆರಳಿ ಕೆ.ಆರ್. ಪುರ ಮೆಟ್ರೊ ನಿಲ್ದಾಣಕ್ಕೆ ವಾಪಸ್ಸಾಯಿತು. ಮುಕ್ಕಾಲು ಗಂಟೆ ಪರಿಶೀಲನೆ ನಡೆಸಿತು.
ನೇರಳೆ ಮಾರ್ಗದಲ್ಲಿನ ವಿಸ್ತರಿತ ಕಾಮಗಾರಿ ಇದಾಗಿದ್ದು, ಬೈಯಪ್ಪನಹಳ್ಳಿ ಹಾಗೂ ಕೆ.ಆರ್. ಪುರ ನಡುವೆ 2.5 ಕಿಲೋಮೀಟರ್ ಹಾಗೂ ಕೆಂಗೇರಿ (Kengeri) ಮತ್ತು ಚಲ್ಲಘಟ್ಟದ (Chellagatta) ನಡುವೆ 1.9 ಕಿ.ಮೀ ಕಾಮಗಾರಿ ಬಾಕಿ ಉಳಿದಿತ್ತು. ಎರಡೂ ಕಡೆಗಳಲ್ಲಿ ಕಾಮಗಾರಿ ಮುಗಿದಿದೆ. ಬೈಯಪ್ಪನಹಳ್ಳಿ ಮತ್ತು ಕೆ.ಆರ್. ಪುರ ನಡುವೆ ಪ್ರಾಯೋಗಿಕ ಸಂಚಾರ ಆರಂಭವಾಗಿದೆ. ಎಲ್ಲ ತಾಂತ್ರಿಕ ತೊಂದರೆಗಳು ಬಗೆಹರಿದ ಬಳಿಕ ವಾಣಿಜ್ಯ ಸಂಚಾರ ಆರಂಭಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ.
ಕೆ.ಆರ್.ಪುರ ಹಾಗೂ ವೈಟ್‌ಫೀಲ್ಡ್ (13.71 ಕಿ.ಮೀ) ನಡುವೆ ಮೆಟ್ರೊ ವಾಣಿಜ್ಯ ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ ತಿಂಗಳಲ್ಲೇ ಹಸಿರು ನಿಶಾನೆ ತೋರಿದ್ದರು. ಬೈಯಪ್ಪನಹಳ್ಳಿ, ಕೆ.ಆರ್.ಪುರದ ನಡುವೆ ಮೆಟ್ರೊ ಸಂಚರಿಸದ ಕಾರಣದಿಂದ ಪ್ರಯಾಣಿಕರು ತೊಂದರೆಗೆ ಸಿಲುಕಿದ್ದರು. ಇದೀಗ ಪ್ರಾಯೋಗಿಕ ಸಂಚಾರ ಆರಂಭದಿಂದ ಪ್ರಯಟಣಿಕರು ಆದಷ್ಟು ಶೀಘ್ರದಲ್ಲಿ ಈ ಸ್ಟೇಷನ್ ಗಳ ನಡುವೆ ಮೆಟ್ರೋ ಪ್ರಯಾಣಕ್ಕೆ ಲಭ್ಯವಾಗುವ ನಿರೀಕ್ಷೆಯಲ್ಲಿದ್ದಾರೆ.