ಬೆಂಗಳೂರು, ಜು.23 www.bengaluruwire.com : ರಾಜ್ಯದಲ್ಲಿ ಆರೋಗ್ಯ ಕವಚ 108 ಹಾಗೂ 104 ಆರೋಗ್ಯ ಸಹಾಯವಾಣಿ ಯೋಜನೆಗಳ ಉನ್ನತೀಕರಣ ಹಾಗೂ ಮಾರ್ಗದರ್ಶನಕ್ಕಾಗಿ ಆರೋಗ್ಯ ಇಲಾಖೆ ತಾಂತ್ರಿಕ ಸಮಿತಿಯನ್ನು ರಚನೆ ಮಾಡಿದೆ.
ಹಲವು ವರ್ಷಗಳಿಂದ ಸದಾ ಒಂದಿಲ್ಲೊಂದು ಸಮಸ್ಯೆ ಕಾರಣದಿಂದ ಸುದ್ದಿಯಲ್ಲಿದ್ದ 108 ಅಂಬುಲೆನ್ಸ್ ಸೇವೆಯ ಕಿರಿಕಿರಿಯನ್ನು ವೈಜ್ಞಾನಿಕವಾಗಿ, ವ್ಯವಸ್ಥಿತವಾಗಿ ಮತ್ತು ಜವಾಬ್ದಾರಿಯುತವಾಗಿ ನಿವಾರಿಸಲು ಸರ್ಕಾರ ಮಹತ್ವದ ಕ್ರಮ ತೆಗೆದುಕೊಂಡಿದೆ.
ಈ ಹಿಂದೆ ಸಮಿತಿಯ ಅಧ್ಯಕ್ಷರಾಗಿದ್ದ ಬೆಂಗಳೂರು ಐಐಐಟಿ ನಿರ್ದೇಶಕ ಫ್ರೊ.ಎಸ್.ಸದಗೋಪನ್ ಅವರ ಬದಲಿಗೆ ಬೆಂಗಳೂರಿನ ನಿಮ್ಹಾನ್ಸ್‌ನ ಪ್ರಭಾರ ನಿರ್ದೇಶಕ ಡಾ.ಜಿ.ಗುರುರಾಜ್ ಅಧ್ಯಕ್ಷತೆಯಲ್ಲಿ ಈ ತಾಂತ್ರಿಕ ಸಮಿತಿ ರಚನೆ ಮಾಡಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಆರೋಗ್ಯ ಸೇವೆಗಳ ಟೆಂಡರ್‌ನಲ್ಲಿ ನ್ಯೂನತೆ, ಲೋಪದೋಷಗಳು ಇರುವ ಕಾರಣ ಅವುಗಳ ಅಧ್ಯಯನ ನಡೆಸಿ, ಪರಿಹಾರ ಕಂಡುಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಟೆಂಡರ್ ನ್ಯೂನತೆ, ಲೋಪದೋಷ ಅಧ್ಯಯನ ಹಾಗೂ ಸಲಹೆ ನೀಡಲು ತಜ್ಞರ ಸಲಹಾ ಸಮಿತಿ ರಚನೆ ಮಾಡಲಾಗಿದೆ.
ಮೂರು ತಿಂಗಳ ಹಿಂದೆ ಆರೋಗ್ಯ ಕವಚ ಅಡಿಯಲ್ಲಿನ 108 ಆಂಬ್ಯೂಲೆನ್ಸ್ ಸೇವೆಗೆ ಟೆಂಡರ್ ಕರೆಯಲಾಗಿತ್ತು. ಈ ಟೆಂಡರ್ ನಲ್ಲಿಯೂ ಜಿವಿಕೆ ಭಾಗವಹಿಸಿತ್ತು. ಆದರೆ ಜಿವಿಕೆ ಸೇವೆಯ ಬಗ್ಗೆ ಸಾಲು ಸಾಲು ಆರೋಪ ಹಾಗೂ ಸಾಕಷ್ಟು ದೂರುಗಳು ಕೇಳಿ ಬಂದಿತ್ತು. ಹಾಗಾಗಿ ಈಗ ಹಳೆಯ ಟೆಂಡರ್ ಪ್ರಕ್ರಿಯೆಯನ್ನೆ ಸರ್ಕಾರ ಕೈಬಿಟ್ಟಿದೆ.
ಟೆಂಡರ್ ಪ್ರಕ್ರಿಯೆ ಖರೀದಿಯಲ್ಲಿನ ವಿಧಾನ, ಟೆಂಡರ್ ಕರೆದಿರುವುದರಲ್ಲಿನ ನ್ಯೂನತೆ ಇದಕ್ಕೆ ಕಾರಣ. ಆಕ್ಷೇಪಣೆ, ತಾಂತ್ರಿಕ ದೋಷವನ್ನು ಪರಿಶೀಲಿಸಿ ಉತ್ತಮ ಸೇವೆ ನೀಡಲು ಆರೋಗ್ಯ ಇಲಾಖೆಯು ಈ ಸಮಿತಿ ರಚನೆ ಮಾಡಿದೆ.
ತಜ್ಞರ ಸಲಹಾ ಸಮಿತಿ ರಚನೆ ಕಾರ್ಯಗಳೇನು?
ಉತ್ತಮ ಆರೋಗ್ಯ ಸೇವೆಗೆ ಯಾವ ರೀತಿಯ ಸೌಲಭ್ಯ ? ಏನೆಲ್ಲ ತಂತ್ರಜ್ಞಾನ ಇರಬೇಕು? ಯಾವೆಲ್ಲ ಮಾರ್ಗಸೂಚಿ ಸೌಲಭ್ಯ ಅಳವಡಿಸಿಕೊಂಡಿರಬೇಕು ಎಂಬೆಲ್ಲಾ ವಿವರಗಳನ್ನು ಅರಿತು, ಅದಕ್ಕೆ ತಕ್ಕ ಮಾನದಂಡಗಳನ್ನು ರೂಪಿಸಲು ತಜ್ಞರ ಸಲಹಾ ಸಮಿತಿ ಕೆಲಸ ಮಾಡಲಿದೆ. ಅಗತ್ಯ ಎಲ್ಲ ಮಾನದಂಡಗಳ ಆಧಾರದ ಮೇಲೆ ಸಲಹೆ ಹಾಗೂ ವರದಿ ನೀಡಲು ತಜ್ಞರ ಸಲಹಾ ಸಮಿತಿಗೆ ಸೂಚನೆ ನೀಡಲಾಗಿದೆ.
ತಾಂತ್ರಿಕ ಸಮಿತಿಯಲ್ಲಿ ಯಾರೆಲ್ಲ ಇರಲಿದ್ದಾರೆ?:
ಐಐಐಟಿ ನಿರ್ದೇಶಕರು (IIIT Director), ನಿಮ್ಹಾನ್ಸ್ ನಿರ್ದೇಶಕರು (Nimhans Director), ವಿಟಿಯು (VTU) ಮಾಜಿ ಕುಲಪತಿ ಪ್ರೊ.ಎಚ್.ಪಿ.ಕಿಂಚ, ಕಾರ್ಮಿಕ ಇಲಾಖೆಯ ಆಯುಕ್ತರು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ( IISC ) ತಜ್ಞರನ್ನು ಒಳಗೊಂಡ ಸಮಿತಿಯನ್ನು ನೇಮಿಸಲಾಗಿದೆ.
ಟೆಂಡರ್ ಹಾಗೂ ಸೇವಾದರ ಆಯ್ಕೆ ಸಂಬಂಧ ಸಲಹೆ ಮಾರ್ಗದರ್ಶನವನ್ನು ನೀಡುವುದಕ್ಕಾಗಿ ಈ ಸಮಿತಿ ರಚನೆಯಾಗಿದೆ. ಈ ಸಮಿತಿ ಟೆಂಡರ್ ಪ್ರಕ್ರಿಯೇ ಖರೀದಿಯಲ್ಲಿನ ವಿಧಾನ, ಟೆಂಡರ್ ಪ್ಲೋಟಿಂಗ್‌ನಲ್ಲಿನ ನ್ಯೂನತೆ, ಆಕ್ಷಪಣೆಗಳು, ತಾಂತ್ರಿಕ ದೋಷ, ಪರಿಶೀಲಿಸಿ ಸೇವೆ ನೀಡಲು ಮುಂದಿನ ಒಂದು ತಿಂಗಳೊಳಗೆ ವರದಿ ನೀಡಲಿದೆ ಎಂದು ಮೂಲಗಳು ತಿಳಿಸಿವೆ.