ಬೆಂಗಳೂರು, ಜು.21 www.bengaluruwire.com : ನಿರೀಕ್ಷೆಯಂತೆಯೇ ಕೆಎಂಎಫ್ ನಂದಿನ ಹಾಲಿನ ದರ ಪ್ರತಿ ಲೀಟರ್ ಗೆ 3 ರೂಪಾಯಿ ಹೆಚ್ಚಾಗಿದ್ದು, ಆಗಸ್ಟ್ 1 ರಿಂದಲೇ ನೂತನ ದರ ಜಾರಿಗೆ ಬರಲಿದೆ.
ನಗರದ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ರಾತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಾಲಿನ ದರವನ್ನು ಮೂರು ರೂಪಾಯಿಗೆ ಏರಿಕೆ ಮಾಡಲು ನಿರ್ಧಾರ ಕೈಗೊಳ್ಳಲಾಯಿತು. ಪರಿಷ್ಕೃತ ದರ ಏರಿಕೆಯ ಹಣ ರೈತರಿಗೆ ತಲುಪಿಸುವ ವ್ಯವಸ್ಥೆ ಆಗಲಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಳೆದ ಜೂನ್ 21ರಂದು ಕೆಎಂಎಫ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ ಭೀಮಾನಾಯ್ಕ ಕೆಎಂಎಫ್ ಹಾಲಿನ ದರವನ್ನು ಕನಿಷ್ಠ 5 ರೂ. ಏರಿಕೆ ಮಾಡುವುದಾಗಿ ಸುಳಿವು ನೀಡಿದ್ದರು. ಆದರೆ ಗ್ರಾಹಕರು, ರೈತರನ್ನು ದೃಷ್ಟಿಯಲ್ಲಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ 3 ರೂ. ಹೆಚ್ಚಳ ಮಾಡುವ ನಿರ್ಧಾರವನ್ನು ಕೈಗೊಂಡಿದ್ದಾರೆ. ಪ್ರಸ್ತುತ ಅಧಿವೇಶನ ಬಳಿಕವಷ್ಟೇ ಹಾಲಿನ ದರ ಏರಿಕೆ ಸಂಬಂಧ ತೀರ್ಮಾನ ಕೈಗೊಳ್ಳುವುದಾಗಿ ಕೆಎಂಎಫ್ ಅಧಿಕಾರಿಗಳ ಜೊತೆ ಈ ಹಿಂದೆ ಮುಖ್ಯಮಂತ್ರಿಗಳು ತಿಳಿಸಿದ್ದರು. ಇದು ಹಾಗೆ ಭೀಮಾನಾಯ್ಕ ಕೆಎಂಎಫ್ ದರವನ್ನು ಕನಿಷ್ಠ 3 ರೂ. ಏರಿಕೆ ಮಾಡುವ ನಿರ್ಧಾರವಾಗಿ ಸುಳಿವು ನೀಡಿದ್ದರು.
ಮಾರುಕಟ್ಟೆಯಲ್ಲಿ ದನದ ಮೇವಿನ ದರ ಸೇರಿದಂತೆ ಮತ್ತಿತರ ವಸ್ತುಗಳ ಬೆಲೆ ಏರಿಕೆಯಾಗಿದ್ದು, ರೈತರು ಮತ್ತು ಹಾಲು ಒಕ್ಕೂಟದ ಹಿತದೃಷ್ಟಿಯಿಂದ ಬೆಲೆ ಏರಿಕೆ ಮಾಡುವಂತೆ ಕೆಎಂಎಫ್ ನ 16 ಒಕ್ಕೂಟಗಳು ಹಾಲು ಮಹಾಮಂಡಲದ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಿದ್ದವು. ಕಳೆದ ವರ್ಷ ನವೆಂಬರ್ ನಲ್ಲಷ್ಟೇ ಹಾಲು ಮತ್ತು ಮೊಸರಿನ ದರವನ್ನು ಪ್ರತಿ ಲೀಟರ್ ಗೆ 2 ರೂಪಾಯಿನಷ್ಟು ಏರಿಕೆ ಮಾಡಲಾಗಿತ್ತು. ಕೆಎಂಎಫ್ ನಲ್ಲಿ ಪ್ರತಿನಿತ್ಯ 85 ಲಕ್ಷ ಲೀಟರ್ ಗೂ ಅಧಿಕ ಹಾಲು ಸಂಗ್ರಹಿಸಲಾಗುತ್ತಿದೆ. ಸದ್ಯ ಕೆಎಂಎಫ್ ಹೈನುಗಾರಿಕೆ ನಡೆಸುತ್ತಿರುವ ರೈತರಿಂದ 31.14 ರೂ. ಜತೆಗೆ ಸರ್ಕಾರದಿಂದ ಐದು ರೂ. ಪ್ರೋತ್ಸಾಹ ಧನ ಸೇರಿ 36 ರೂಪಾಯಿಗೆ ಖರೀದಿ ಮಾಡುತ್ತಿದೆ. ಇನ್ನು ಆಗಸ್ಟ್ 1ರಿಂದ ಪ್ರತಿ ಲೀಟರ್‌ಗೆ ಗ್ರಾಹಕರಿಗೆ 39 ರೂಪಾಯಿಗೆ ಮಾರಾಟ ಮಾಡುತ್ತಾರೆ. ಸದ್ಯ ಗ್ರಾಹಕರಿಗೆ ದರ ಹೆಚ್ಚಳ ಮಾಡಿದ್ದರಿಂದ ರೈತರಿಂದ ಖರೀದಿ ಮಾಡುವ ದರವೂ ಹೆಚ್ಚಳವಾಗಲಿದೆ. ಇದು ರೈತರಿಗೆ ಖುಷಿಯ ವಿಷಯವಾಗಿದೆ.
ಇಂದಿನ ಸಭೆಯಲ್ಲಿ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಕೆಎಂಎಫ್ ನಿರ್ದೇಶಕ ಎಚ್.ಡಿ.ರೇವಣ್ಣ ಹಾಗೂ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.