ಬೆಂಗಳೂರು, ಜು.17 www.bengaluruwire.com : ಹೊಯ್ಕ್ ಬರ್ಕ್ ಎನ್ನುವ ಸುಂದರ ಪ್ರಾದೇಶಿಕ ಕುಂದಾಗನ್ನಡ ಭಾಷೆಗೆ ಸೂಕ್ತ ಅಸ್ತಿತ್ವ ಕೊಡಬೇಕು ಹಾಗೂ ಈ ಭಾಷೆ ಕುಂದಾಪುರ ಜನರ ಬದುಕಿನ ಭಾಷೆಯಾಗಿದೆ ಎಂಬುದನ್ನು ತಿಳಿಸಲು ಇದೇ ಜು. 23ರಂದು ಬೆಂಗಳೂರಿನ ಅತ್ತಿಗುಪ್ಪೆ ಬಂಟರ ಭವನದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಕುಂದಾಪುರ ಭಾಷೆ ಮಾತನಾಡುವ ಜನತೆ ಕೇವಲ ನಮ್ಮ ರಾಜ್ಯಕ್ಕೆ ಸೀಮಿತವಾಗಿರದೆ ವಿಶ್ವದ ಮೂಲೆ ಮೂಲೆಯಲ್ಲೂ ಹರಿದು ಹಂಚಿ ಹೋಗಿದ್ದಾರೆ. ಕುಂದಾಪ್ರ ಭಾಷೆಯಲ್ಲಿ ಮಾತನಾಡುವುದು ತಮ್ಮ ಮನದ ಜೊತೆ ಸಂಭಾಷಿಸುವಂತೆ ಎಂದು ಆ ಭಾಷೆಯನ್ನು ಇನ್ನಿಲ್ಲದಂತೆ ಪ್ರೀತಿಸುವ ಹೃದಯಗಳು ಇದೀಗ ಬೆಂಗಳೂರಿನಲ್ಲಿ ವಿಶ್ವ ಕುಂದಾಪ್ರ ಕನ್ನಡ ಹಬ್ಬ ನಡೆಸಲು ಮುಂದಾಗಿವೆ.
ಕಳೆದ 5 ವರ್ಷಗಳಿಂದ ಆಸಾಡಿ ಅಮಾವಾಸ್ಯೆ ದಿನವನ್ನು ವಿಶ್ವ ಕುಂದಾಪ್ರ ಕನ್ನಡ ದಿನ ಎಂದು ಆಚರಣೆ ಮಾಡಲಾಗುತ್ತಿದೆ. ಕುಂದಾಪ್ರ ಕನ್ನಡ ಪ್ರತಿಷ್ಠಾನ ಹಮ್ಮಿಕೊಂಡಿರುವ ವಿಶ್ವ ಕುಂದಾಪ್ರ ಕನ್ನಡ ದಿನದ ಅಂಗವಾಗಿ ಗ್ರಾಮೀಣ ಸೊಗಡು, ಸಂಸ್ಕೃತಿಯನ್ನು ಬಿಂಬಿಸುವ ವಿಶಿಷ್ಟವಾದ ಕಾರ್ಯಕ್ರಮ ಆಯೋಜಿಸಿದೆ.
ಬೆಂಗಳೂರು ನಗರದಲ್ಲಿ ನೆಲೆಸಿರುವ ಕುಂದ ಕನ್ನಡಿಗರು ಜು. 23ರಂದು ಬೆಂಗಳೂರಿನ ಅತ್ತಿಗುಪ್ಪೆ ಬಂಟರ ಭವನದಲ್ಲಿ ಅದ್ದೂರಿಯಾಗಿ ವಿಶ್ವ ಕುಂದಾಪುರ ಕನ್ನಡ ದಿನ ಆಚರಿಸಲಿದ್ದಾರೆ. ಇದೇ ಪ್ರಥಮ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕನ್ನಡ ಚಿತ್ರರಂಗದ ಕುಂದಾಪುರ ಮೂಲದ ಸ್ಟಾರ್ ನಟ ಮತ್ತು ನಿರ್ದೇಶಕರಾದ ರುಷಬ್ ಶೆಟ್ಟಿ ಸೇರಿದಂತೆ ಮತ್ತಿತರ ಗಣ್ಯರು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಬೆಳಗ್ಗೆ 9 ರಿಂದ ರಾತ್ರಿ 9ರ ವರೆಗೆ ವಿವಿಧ ಕಾರ್ಯಕ್ರಮಗಳ ಹೂರಣ :
ಜು.23ರಂದು ವಿಶ್ವಕುಂದಾಪ್ರ ಕನ್ನಡ ಪ್ರತಿಷ್ಠಾನ ಬೆಂಗಳೂರು ಅತ್ತಿಗುಪ್ಪೆ ಬಂಟರ ಭವನದಲ್ಲಿ ನಿರಂತರವಾಗಿ 12 ಗಂಟೆಗಳ ಕಾಲ ಕಾರ್ಯಕ್ರಮ ಆಯೋಜಿಸಿದೆ. ಕುಂದಗನ್ನಡದ ಕಲರವ, ಬದುಕಿನ ಸೊಗಡು ಅನಾವರಣವಾಗಲಿದೆ. ಊರಗೌರವ, ಹಾಡು ಹಾಸ್ಯ, ನಗು-ನೃತ್ಯ, ಯಕ್ಷಗಾನ, ನುಡಿ ಚಾವುಡಿ, ಖಾದ್ಯ ವೈವಿಧ್ಯ, ಮರೆತು ಹೋದ ಕುಂದಾಪುರದ ಗ್ರಾಮೀಣ ಆಟೋಟಗಳು ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಕುಂದಾಪ್ರ ಕನ್ನಡ ಪ್ರತಿಷ್ಠಾನದ ಅಜಿತ್ ಶೆಟ್ಟಿ ಉಳ್ತೂರು ತಿಳಿಸಿದ್ದಾರೆ.