ಬೆಂಗಳೂರು, ಜು.16 www.bengaluruwire.com : ಪಬ್ಲಿಕ್ ರಿಲೇಷನ್ಸ್ ಕೌನ್ಸಿಲ್ ಆಫ್ ಇಂಡಿಯಾ (PRCI) ಹಾಗೂ ಡಿವೈ ಪಾಟೀಲ್ ಇಂಟರ್ ನ್ಯಾಷನಲ್ ಯೂನಿವರ್ಸಿಟಿ ಜಂಟಿಯಾಗಿ ವಿಶ್ವ ಸಾರ್ವಜನಿಕ ಸಂಪರ್ಕ ದಿನಾಚರಣೆಯನ್ನು ಭಾನುವಾರ ಸಂಭ್ರಮದಿಂದ ಆಚರಿಸಿತು.
ಇದೇ ಸಂದರ್ಭದಲ್ಲಿ ನವೋದ್ಯಮದಲ್ಲಿ ಗಮನಾರ್ಹ ಸಾಧನೆ ತೋರಿದ ಸಂಸ್ಥೆಗಳಿಗೆ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ.ಎಸ್.ದೀಕ್ಷಿತ್, ಪಿಆರ್ ಸಿಐ ಸಂಸ್ಥಾಪಕ ಹಾಗೂ ಗೌರವಾನ್ವಿತ ಅಧ್ಯಕ್ಷರಾದ ಎಂ.ಬಿ.ಜಯರಾಮ್, ಡಿವೈ ಪಾಟೀಲ್ ಇಂಟರ್ ನ್ಯಾಷನಲ್ ಯೂನಿವರ್ಸಿಟಿ ಉಪಕುಲಪತಿ ಪ್ರೊ.ಪ್ರಭಾತ್ ರಂಜನ್ ಅವರುಗಳು ಇಂಪ್ಯಾಕ್ಟ್ ಅವಾರ್ಡ್ -2023 ಪ್ರಶಸ್ತಿ ವಿತರಣೆ ಮಾಡಿದರು. ಇದೇ ವೇಳೆ ಪಿಆರ್ ಸಿಐ ನ “ಚಾಣಕ್ಯ ಮ್ಯಾಗಜೀನ್” ಬಿಡುಗಡೆಗೊಳಿಸಲಾಯಿತು.

ಇಂಪ್ಯಾಕ್ಟ್ ಅವಾರ್ಡ್ -2023 ಪ್ರಶಸ್ತಿಗಾಗಿ 120 ನಾಮಿನೇಷನ್ ಬಂದಿದ್ದವು. ಆರೋಗ್ಯ, ಕಟ್ಟಡ ನಿರ್ಮಾಣ, ಪಶು ಆಹಾರ, ಸಾರ್ವಜನಿಕ ಸಂಪರ್ಕ, ಶಿಕ್ಷಣ ಸೇರಿದಂತೆ ವಿವಿಧ ವರ್ಗಗಳಡಿ ಪ್ರಶಸ್ತಿಗಾಗಿ ಅರ್ಜಿ ಬಂದಿದ್ದವು. ಅವುಗಳನ್ನೆಲ್ಲ ಪರಿಶೀಲಿಸಿ ಆಯ್ಕೆ ಸಮಿತಿಯು ಅಂತಿಮವಾಗಿ ಅತ್ಯುತ್ತಮ ನವೋದ್ಯಮಿಗಳಿಗೆ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಅತಿಥಿಗಳ ಮೂಲಕ ಪ್ರಶಸ್ತಿ ವಿತರಣೆ ಮಾಡಲಾಯಿತು. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಪೊರೇಟ್ ಸಂವಹನ ವಿಭಾಗದ ಪ್ರಧಾನ ವ್ಯವಸ್ಥಾಪಕಿ ಗಾಯತ್ರಿ ಪ್ರದೀಪ್ ಅವರಿಗೂ ಇಂಪ್ಯಾಕ್ಟ್ ಅವಾರ್ಡ್ -2023 ಪ್ರಶಸ್ತಿ ಪ್ರಧಾನಮಾಡಲಾಯಿತು.
ಪ್ರಶಸ್ತಿ ವಿತರಣೆ ಬಳಿಕ ಬಳಿಕ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ.ಎಸ್.ದೀಕ್ಷಿತ್, ಸಾರ್ವಜನಿಕ ಸಂಪರ್ಕದ ಮಹತ್ವದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

ರಾಜ್ಯದ ಪಂಚ ಗ್ಯಾರಂಟಿ ಅನುಷ್ಠಾನಕ್ಕೆ ಪಿಆರ್ ಸಲಹೆ ಅಗತ್ಯವಿದೆ:
ನಂತರ ಪಿಆರ್ ಸಿಐ ಸಂಸ್ಥಾಪಕ ಹಾಗೂ ಎಮಿರೆಟೆಸ್ ಅಧ್ಯಕ್ಷರಾದ ಎಂ.ಬಿ.ಜಯರಾಮ್ ಅಧ್ಯಕ್ಷೀಯ ಭಾಷಣ ಮಾಡುತ್ತಾ, ಇಂದು ವಿಶ್ವ ಸಾರ್ವಜನಿಕ ಸಂಪರ್ಕ ದಿನ. ನವೋದ್ಯಮ ಸಂಸ್ಥೆಗಳ ಅಭಿವೃದ್ಧಿಗೆ ಸಾರ್ವಜನಿಕ ಸಂಪರ್ಕ ವಿಭಾಗ ಬಹಳ ಮುಖ್ಯ. ನಮ್ಮನ್ನಾಳುವ ಆಡಳಿತಗಾರರಿಗೆ ಪಿಆರ್ ನವರ ಪ್ರಾಮುಖ್ಯತೆ ಇನ್ನು ಗೊತ್ತಾಗಿಲ್ಲ. ಪಿಆರ್ ತನ್ನ ಯಶಸ್ವಿ ಸಂವಹನದಿಂದ ಉತ್ತಮ ಬೆಳವಣಿಗೆಗಳ ಕಾರಣವಾಗಬಹುದು.

ಸಾರ್ವಜನಿಕ ಸಂಪರ್ಕಾಧಿಕಾರಿಗಳ ಸಲಹೆಯಿಂದ ಹಲವು ಸಮಸ್ಯೆಗಳನ್ನು ಬಗೆಹರಿಸಬಹುದು. ನಮ್ಮ ರಾಜ್ಯದಲ್ಲಿ ಪಂಚ ಗ್ಯಾರಂಟಿಗಳ ಅನುಷ್ಠಾನದಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ. ಇದಕ್ಕೆ ಅನುಭವಿ ಸಾರ್ವಜನಿಕ ಸಂಪರ್ಕ ಸಂಪನ್ಮೂಲ ವ್ಯಕ್ತಿಗಳಿಂದ ಪರಿಹಾರ ಪಡೆದುಕೊಳ್ಳಬಹುದು. ಅಮೆರಿಕದಲ್ಲಿ ಆಡಳಿತದಲ್ಲಿ ಪಿಆರ್ ಸಲಹೆ ಪಡೆದುಕೊಳ್ಳುತ್ತಾರೆ. ಪಿಆರ್ ಸಿಐ ಸಂಸ್ಥೆಯು ದೇಶಾದ್ಯಂತ 58 ಚಾಪ್ಟರ್ ಹೊಂದಿದೆ. ದೇಶ ವಿದೇಶಗಳಲ್ಲೂ ಪಿಆರ್ ಸಿಐ ಪ್ರತಿನಿಧಿಗಳಿದ್ದಾರೆ ಎಂದರು.