ಬೆಂಗಳೂರು, ಜು.15 www.bengaluruwire.com : ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಕೇಂದ್ರ ಕಛೇರಿಯಲ್ಲಿ ನಿಗಮವು ತನ್ನ ಸಿಬ್ಬಂದಿ ಹಾಗೂ ಅವರ ಅವಲಂಬಿತರ ಕಲ್ಯಾಣಕ್ಕಾಗಿ ಜಾರಿಗೊಳಿಸಿರುವ ಯೋಜನೆಯಡಿ ಎರಡು ಕುಟುಂಬಗಳಿಗೆ ತಲಾ 1 ಕೋಟಿ ರೂ. ಅಪಘಾತ ಪರಿಹಾರ ವಿಮೆಯ ಚೆಕ್ ವಿತರಿಸಿದರು.
ಕೆ.ಎಸ್.ಆರ್.ಟಿ.ಸಿ (KSRTC) ಯು ದೇಶದಲ್ಲಿಯೇ ಪ್ರಪ್ರಥಮವಾಗಿ ಕಾರ್ಮಿಕ ಕಲ್ಯಾಣದ ವಿನೂತನ ಯೋಜನೆ ಅಡಿಯಲ್ಲಿ ತನ್ನ ಸಿಬ್ಬಂದಿಗೆ 1 ಕೋಟಿ ರೂ. ಮೊತ್ತದ ಅಪಘಾತ ವಿಮೆಯನ್ನು ( On duty & Off Duty ಅಪಘಾತ) ಜಾರಿಗೊಳಿಸಿದೆ. ಈ ಯೋಜನೆಯಲ್ಲಿ, ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ವತಿಯಿಂದ ಪ್ರೀಮಿಯಂ ರಹಿತ 50 ಲಕ್ಷ ರೂ.ಗಳ ವಿಮೆ ಹಾಗೂ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ರವರಿಂದ ನೌಕರರಿಂದ ವಾರ್ಷಿಕ 885 ರೂ. ಪ್ರೀಮಿಯಂ ಪಾವತಿಯ ಮೇರೆಗೆ 50 ಲಕ್ಷ ರೂ.ಗಳ ವಿಮೆಯು ಒಳಗೊಂಡಿರುತ್ತದೆ.
ಈ ಯೋಜನೆಯಡಿಯಲ್ಲಿ ಸಿಬ್ಬಂದಿಗಳು ಕರ್ತವ್ಯದ ಮೇಲಿದ್ದಾಗ ಹಾಗೂ ಕರ್ತವ್ಯದಲ್ಲಿ ಇಲ್ಲದ ಸಂದರ್ಭಗಳಲ್ಲಿಯೂ ಉಂಟಾಗುವ ಅಪಘಾತಗಳಿಗೂ ಸಹ ಈ ವಿಮಾ ಸೌಲಭ್ಯ ಅನ್ವಯಿಸುತ್ತದೆ.
1. ಈ ಯೋಜನೆಯ ಜಾರಿಯ ನಂತರದಲ್ಲಿ ಕೆ.ಎಸ್.ಆರ್.ಟಿ.ಸಿ. ಘಟಕ-6ರ 41 ವರ್ಷದ ಚಾಲಕ-ಕಂ-ನಿರ್ವಾಹಕರಾದ ಸಿಬ್ಬಂದಿ ಜಿ.ವಿ.ಚಲಪತಿ, ಬೆಂಗಳೂರು ಕೇಂದ್ರೀಯ ವಿಭಾಗದವರು ನಿಗಮದಲ್ಲಿ 11 ವರ್ಷಗಳ ಸೇವೆ ಸಲ್ಲಿಸಿದವರು ಅಪಘಾತದಲ್ಲಿ ಮೃತಪಟ್ಟಿದ್ದರು. ವಿಮಾ ಪರಿಹಾರ 1 ಕೋಟಿ ರೂ. ನೀಡಲಾಗಿದೆ. ನಿಗಮದ ವತಿಯಿಂದ ರೂ.17.21 ಲಕ್ಷ ಪರಿಹಾರಕ್ಕೆ ಅರ್ಹರಿದ್ದು, ಈ ಪೈಕಿ ರೂ.12.71 ಲಕ್ಷ ಪರಿಹಾರ ಈಗಾಗಲೇ ಅವರ ಪತ್ನಿಗೆ ವಿತರಿಸಲಾಗಿದೆ.
2. ಹಾಸನ ವಿಭಾಗದ ಘಟಕ-2ರ ಚಾಲಕ-ಕಂ-ನಿರ್ವಾಹಕರಾಗಿದ್ದ 52 ವರ್ಷದ ಪಿ.ಎನ್. ನಾಗರಾಜು, 17 ವರ್ಷಗಳ ಸೇವೆ ಸಲ್ಲಿಸಿದ್ದರು. ಅವರು ಈ ವರ್ಷದ ಫೆಬ್ರವರಿ ತಿಂಗಳಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದರು. ವಿಮಾ ಪರಿಹಾರ 1 ಕೋಟಿ ರೂ. ಹೊರತುಪಡಿಸಿ, ನಿಗಮದ ವತಿಯಿಂದ 21.94 ಲಕ್ಷ ರೂ. ಪರಿಹಾರಕ್ಕೆ ಅರ್ಹರಿದ್ದು, ಈ ಪೈಕಿ 16.19 ಲಕ್ಷ ರೂ. ಪರಿಹಾರ ಈಗಾಗಲೇ ವಿತರಿಸಲಾಗಿದೆ. ಬಾಕಿ ಮೊತ್ತ 5.75 ಲಕ್ಷ ರೂ. ಮೃತರ ಅವಲಂಬಿತರು ಸೂಕ್ತ ದಾಖಲಾತಿ ಸಲ್ಲಿಸಿದೊಡನೆ ಭವಿಷ್ಯ ನಿಧಿ ಇಲಾಖೆಯಿಂದ ಶೀಘ್ರದಲ್ಲಿಯೇ ಪಾವತಿಯಾಗಲಿದೆ ಎಂದು ಕೆಎಸ್ ಆರ್ ಟಿಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದೇ ಸಂದರ್ಭದಲ್ಲಿ ಸಚಿವರು ಮಾತನಾಡಿ, ಮೃತಪಟ್ಟ ಚಾಲನಾ ಸಿಬ್ಬಂದಿಯನ್ನು ಮರಳಿ ತರಲು ಸಾಧ್ಯವಿಲ್ಲ. ಆದರೆ, ಅವರ ಕುಟುಂಬಗಳ ಸುಭದ್ರತೆಗಾಗಿ ನಿಗಮವು ಜಾರಿಗೊಳಿಸಿರುವ ಈ ಅಪಘಾತ ಪರಿಹಾರ ವಿಮಾ ಯೋಜನೆಯು ಬಹಳ ಉತ್ತಮವಾಗಿದ್ದು, ಈ ಯೋಜನೆಯನ್ನು ಸದ್ಯದಲ್ಲಿಯೇ ಇತರೆ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಜಾರಿಗೊಳಿಸಲು ಕೂಡಲೇ ಕ್ರಮ ಜರುಗಿಸಲು ಸೂಚಿಸುವುದಾಗಿ ತಿಳಿಸಿದರು.
ಕುಟುಂಬದವರು ಹಣವನ್ನು ಬ್ಯಾಂಕಿನಲ್ಲಿ ಸ್ಥಿರ ಠೇವಣಿಯನ್ನು ಇಟ್ಟು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಾಗೂ ತಮ್ಮ ಮುಂದಿನ ಜೀವನಕ್ಕಾಗಿ ಕಾಪಾಡಿಕೊಳ್ಳಬೇಕು. ಅನುಕಂಪ ಆಧಾರದ ಮೇಲಿನ ಕೆಲಸಕ್ಕೆ ಅರ್ಜಿ ಸಲ್ಲಿಸಲು ತಿಳಿಸಿದರು. ನಿಗಮದ ಸಿಬ್ಬಂದಿಗಳ ಹಾಗೂ ಕುಟುಂಬದವರ ಹಿತಾಸಕ್ತಿ ಕಾಪಾಡಲು ನಾವು ನಿಮ್ಮೊಡನೆ ಸದಾ ಇರುವುದಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಮಾತನಾಡಿ, ಸಾರಿಗೆ ಸಚಿವರು ಆದೇಶಿಸಿರುವಂತೆ ಕೂಡಲೇ ಅನುಕಂಪ ಆಧಾರದ ಮೇಲೆ ಕೆಲಸಕ್ಕೆ ನೀಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.