ಬೆಂಗಳೂರು, ಜು.15 www.bengaluruwire.com : ನಗರದ ಆಸ್ತಿ ಮಾಲೀಕರ ಅಧಿಕೃತ ದಾಖಲೆ ತಲುಪಿಸುವ ನಿರ್ಧಾರ ಮಾಡಿದ್ದೇವೆ. ಇದನ್ನು ನಿಗದಿತ ಸಮಯದಲ್ಲಿ ಅನುಷ್ಠಾನ ಮಾಡುತ್ತೇವೆ. ಹಿಂದೆ ‘ಭೂಮಿ’ ಕಾರ್ಯಕ್ರಮದಲ್ಲಿ ಕೃಷಿ ಭೂಮಿ ಮನೆಗೆ ಪಹಣಿ ದಾಖಲೆ ತಲುಪಿಸಿದಂತೆ ಬೆಂಗಳೂರಿನ ಆಸ್ತಿ ಮಾಲೀಕರಿಗೆ ನೀಡುವ ಚಿಂತನೆಯಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ನಾಗರೀಕರ ಸಂಘ ಸಂಸ್ಥೆಗಳೊಂದಿಗೆ ಶನಿವಾರ ವಿಧಾನಸೌಧದಲ್ಲಿ ಬ್ರಾಂಡ್ ಬೆಂಗಳೂರು ಕುರಿತು ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಬೆಂಗಳೂರಿನ ಎಲ್ಲಾ ಆಸ್ತಿ ಮಾಲೀಕರ ಮನೆಗೆ ಸರ್ಕಾರವೇ ಹೋಗಿ ಖಾತಾ ಪ್ರಮಾಣಪತ್ರ ರೀತಿ ದಾಖಲೆ ನೀಡುವ ಚಿಂತನೆಯಿದೆ.
ಇದಕ್ಕಾಗಿ ಇಲ್ಲಿನ ಆಸ್ತಿಗಳ ಡಿಜಿಟಲೀಕರಣ ಮಾಡುತ್ತೇವೆ. ಬಿಡಿಎ, ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿಗಳ ಡಿಜಲೀಕರಣ ಮಾಡಲು ಸ್ವಲ್ಪ ಸಮಯ ಹಿಡಿಯಲಿದೆ. ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ ತಪ್ಪು ಆಸ್ತಿ ತೆರಿಗೆ ಕಟ್ಟುವುದನ್ನು ತಪ್ಪಿಸಲು ಪ್ರಾಥಮಿಕ ಕಾರ್ಯತಂತ್ರ ರೂಪಿಸಲಾಗುತ್ತಿದೆ. ನಗರದ ನಾಗರೀಕರ ಧ್ವನಿ ನಮ್ಮ ಧ್ವನಿಯಾಗಬೇಕೆಂಬ ಉದ್ದೇಶವಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಬ್ರಾಂಡ್ ಬೆಂಗಳೂರು ನಿರ್ಮಾಣದ ದಿಶೆಯಲ್ಲಿ ಜನಪ್ರತಿನಿಧಿಗಳು, ತಂತ್ರಜ್ಞರ ಬಳಿಯಿಂದ ಸಲಹೆ, ಅಭಿಪ್ರಾಯ ನೀಡಿದ್ದಾರೆ. ನಾಗರೀಕರಿಂದ ಬ್ರಾಂಡ್ ಬೆಂಗಳೂರು ಕುರಿತು 30,000 ಸಲಹೆಗಳು ಬಂದಿವೆ. ಸರ್ಕಾರಿ, ಖಾಸಗಿ ಸಂಘ ಸಂಸ್ಥೆಗಳಿಂದಲೂ ಆರೇಳು ವಿಷಯಕ್ಕೆ ಸಂಬಂಧಿಸಿದಂತೆ ಸಲಹೆ, ಅಭಿಪ್ರಾಯ ವ್ಯಕ್ತವಾಗಿದೆ.

ಘನತಾಜ್ಯ, ಸಾರಿಗೆ, ಆಪ್ಟಿಕಲ್ ಫೈಬರ್, ರಾಜಕಾಲುವೆ, ವಾರ್ಡ್ ಕಮಿಟಿ ಸಭೆ ಉತ್ತರದಾಯಿ ಇರಬೇಕು, ನಾಗರೀಕರು ಹಳ್ಳಿಗಳಲ್ಲಿ ಗ್ರಾಮ ಸಭೆ ನಡೆಸಿದಂತೆ ವಾರ್ಡ್ ಸಭೆ ನಡೆಸಿ ಸಲಹೆ ಪಡೆಯಬೇಕು. ಫುಟ್ ಪಾತ್ ಒತ್ತುವರಿ, ಹೋಟೆಲ್ ಪಾರ್ಸಲ್ ಕಸ ಸಮಸ್ಯೆ, ಹವಾಮಾನ ಬದಲಾವಣೆ, ಮಕ್ಕಳ ಅಭಿಪ್ರಾಯವನ್ನು ಪಡೆಯಬೇಕು. ಇದಕ್ಕಾಗಿ ವರ್ಬಾಟೆಲ್ ಹೈಸ್ಕೂಲ್, ಕಾಲೇಜು ಮಕ್ಕಳಿಂದ ಡಿಬೇಟ್ ನಡೆಸಿ ಅವರಿಂದಲೂ ಸಲಹೆ ಪಡೆಯಲು ನಿರ್ಧಾರ. ಕಂದಾಯ ಕಟ್ಟುವ ಕಾನೂನಿನ ಭದ್ರತೆ, ಉಲ್ಲಂಘನೆಗೆ ಶಿಕ್ಷೆಯಾಗಬೇಕು ಎಂದು ನಾಗರೀಕ ಕ್ಷೇಮಾಭಿವೃದ್ಧಿ ಸಂಘದವರು ಸಭೆಯಲ್ಲಿ ಸಲಹೆ ನೀಡಿದ್ದಾರೆ ಎಂದು ಅವರು ಹೇಳಿದರು.

ಆನ್ ಲೈನ್ ನಲ್ಲಿ ಅಪಾರ್ಟ್ ಮೆಂಟ್ ಅಸೋಸಿಯೇಷನ್, ಕ್ಷೇಮಾಭಿವೃದ್ಧಿ ಸಂಘದವರು ಸಭೆಯಲ್ಲಿ ಅನೇಕ ಸಲಹೆ ನೀಡಿದ್ದಾರೆ. ಆಡಳಿತದಲ್ಲಿ ಪಾರದರ್ಶಕತೆ, ನೀರು, ವಿದ್ಯುತ್, ಅಂತರ್ಜಲ, ಕರೆ ಒತ್ತುವರಿ ಹಾಗೂ ಬಹಳ ಅನೇಕ ಸಂಸ್ಥೆಗಳು ಸರ್ಕಾರದ ಆಸ್ತಿ ಸಂರಕ್ಷಣೆಗೆ ಮುಂದಾಗಿದ್ದಾರೆ. ನಮ್ಮಲ್ಲಿರುವ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ನಾಗರೀಕರಿಗೆ ಅನುಕೂಲ ಕಲ್ಪಿಸುತ್ತೇವೆ. ಅದನ್ನು ಕಾನೂನು ಚೌಕಟ್ಟಿನಲ್ಲಿ, ಆಸ್ತಿ ತೆರಿಗೆ ಕಟ್ಟದವರನ್ನು ಕಂಡುಹಿಡಿಯಲು ಮ್ಯಾಪಿಂಗ್ ಅನ್ನು ತಂತ್ರಜ್ಞಾನ ಮೂಲಕ ದಂಡ ಹಾಕಿ ಹೆಚ್ಚಿನ ತೆರಿಗೆ ಸಂಗ್ರಹಿಸಲು ತೀರ್ಮಾನಿದ್ದೇವೆ.
ಬ್ರಾಂಡ್ ಬೆಂಗಳೂರಿನ ನಿರ್ಮಾಣಕ್ಕೆ ಜನದ ದನಿಯನ್ನು ಜನರಿಗಾಗಿ ಕಾರ್ಯಕ್ರಮ ರೂಪಿಸುತ್ತೇವೆ. ನಾವು ಅಧಿಕಾರಕ್ಕೆ ಬಂದ 100 ದಿನಗಳ ಒಳಗಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರಲಿದ್ದೇವೆ ಎಂದರು.
ಫುಟ್ ಪಾತ್ ನಲ್ಲಿ ನಾಗರೀಕರು ಸುಗಮವಾಗಿ ಓಡಾಡಲು, ಬೀದಿ ವ್ಯಾಪಾರಿಗಳಿಗೆ ತೊಂದರೆಯಾಗದಂತೆ ಅನುಕೂಲ ಕಲ್ಪಿಸಲು ಫುಟ್ ಪಾತ್ ಡ್ರೈವ್ ಪ್ರಾರಂಭಿಸಲು ಸೂಚಿಸಿದ್ದೇನೆ. ಘನತ್ಯಾಜ್ಯ ಬ್ಲಾಕ್ ಸ್ಪಾಟ್ಸ್ ನಿಯಂತ್ರಣಕ್ಕೆ ಕ್ರಮ, ಈ ತಿಂಗಳ ಕೊನೆಯಲ್ಲಿನಗರದ ಸ್ವಚ್ಛತೆಗೆ ಪ್ರಮುಖ ಕ್ರಮ ಕೈಗೊಳ್ಳುತ್ತೇವೆ.
ನಗರದ ಮಾಲ್, ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಆಸ್ತಿ ತೆರಿಗೆ ತಪ್ಪಿಸುವುದನ್ನು ಪತ್ತೆ ಹಚ್ಚಲು ಟೋಟಲ್ ಸ್ಟೇಷನ್ ಸರ್ವೆ ಏನಾಗಿದೆ ಎಂದು ಪರಿಶೀಲಿಸುತ್ತೇವೆ. ನಗರದಲ್ಲಿ ಜಾಹೀರಾತು ನೀತಿ ಬಗ್ಗೆ ಅಧ್ಯಯನ ನಡೆಸಿ ಈ ತಿಂಗಳಾಂತ್ಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

15-20 ವಿದ್ಯಾರ್ಥಿಗಳ ಜೊತೆ ಬೆಂಗಳೂರಿಗೆ ಏನು ಬೇಕು ಎಂಬ ಬಗ್ಗೆ ಸಭೆ ನಡೆಸುತ್ತೇವೆ. ಮಕ್ಕಳೇ ನಮ್ಮ ಭವಿಷ್ಯ. ಅವರಿಗಾಗಿ ಭವಿಷ್ಯ ಬೆಂಗಳೂರು ನಿರ್ಮಾಣ ಮಾಡುತ್ತಿರೋದರಿಂದ ಅವರೊಂದಿಗೂ ಸಭೆ ನಡೆಸಿ ಸಲಹೆ ಪಡೆಯುತ್ತೇವೆ ಎಂದು ಬೆಂಗಳೂರು ಆಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಸಭೆಯಲ್ಲಿ ನಾಗರೀಕ ಸಂಘ ಸಂಸ್ಥೆಗಳು ನೀಡಿದ ಸಲಹೆ, ಆದ ಚರ್ಚೆಗಳೇನು? :
ಬಿಬಿಎಂಪಿ ವ್ಯಾಪ್ತಿಯಲ್ಲಿ 5,671 ವಾರ್ಡ್ ಸಮಿತಿ ಸಭೆ ಆಗಿದೆ. ಬಿಬಿಎಂಪಿ ಪುನರ್ ರಚನೆ ಕುರಿತಂತೆ ಬಿ.ಎಸ್.ಪಾಟೀಲ್ ಸಮಿತಿ ಜೊತೆ ಮತ್ತೊಂದು ಸಾರ್ವಜನಿಕರ ಜೊತೆ ಮತ್ತೊಮ್ಮೆ ಸಭೆ ನಡೆಸಿ. ಎಲ್ಲಾ ಏಜನ್ಸಿಗಳು ಒಂದೆ ವೇದಿಕೆ ಅಡಿ ಬಂದರೆ ಒಳ್ಳೆಯದು ಎಂಬ ಸಲಹೆ ಸಭೆಯಲ್ಲಿ ಕೇಳಿಬಂತು.
20*30 ಅಳತೆಯ ಒಳಗಿನ ನಿವೇಶನದಲ್ಲಿ ಮನೆ ಕಟ್ಟುವರಿಗೆ ಸ್ವಾಧೀನ ಪ್ರಮಾಣಪತ್ರ (OC) ಖಡ್ಡಾಯ ಮಾಡುವುದನ್ನು ಬೆಂಗಳೂರು ಜಲಮಂಡಳಿ ನಿಲ್ಲಿಸಬೇಕು. ಜಿ+2 ತನಕ ಕಟ್ಟಡ ಕಟ್ಟುವವರಿಗೆ ಪ್ರತಿ ತಿಂಗಳು ನೀರಿನ ಬಿಲ್ ರೀತಿ ಶುಲ್ಕ ವಿಧಿಸಲಾಗುತ್ತಿದೆ ಎಂದು ನಾಗರೀಕರೊಬ್ಬರು ಅಳಲು ತೋಡಿಕೊಂಡರು.
ಬೆಂಗಳೂರು ಈಗ ಹಾರಿಬಲ್ ಸಿಟಿಯಾಗಿದ್ದು ಈಗ ಬ್ರಾಂಡ್ ಬೆಂಗಳೂರು ಮಾಡಲು ಹೊರಡಿದ್ದೀರ. ಬ್ರಾಂಡ್ ಬೆಂಗಳೂರು ಪೋರ್ಟಲ್ ಸರಿಯಿಲ್ಲ. ಅಲ್ಲಿ ಚೀಫ್ ಬೆಂಗಳೂರಿನ ಇ-ಮೇಲ್ ಒಬ್ಬರಿಗೇ ಎಷ್ಟು ಜನ ಇಮೇಲ್ ಮಾಡಬಹುದು. ನಗರದಲ್ಲಿ ಯೋಜನೆ ಅನುಷ್ಠಾನಕ್ಕೆ ಒತ್ತು ಕೊಡಬೇಕು ಎಂದು ನಾಗರೀಕ ಕ್ಷೇಮಾಭಿವೃದ್ಧಿ ಸಂಘದ ಪ್ರಕಾಶ್.ಡಿ.ಆರ್ ಹೇಳಿದರು.
ಬಿಎಸ್ ಕೆ 6ನೇ ಹಂತದಲ್ಲಿ ಕಸದ ಸಮಸ್ಯೆ ನಿವಾರಿಸಿ :
ಬಿಡಿಎ 21,000 ನಿವೇಶನ ಇರುವ ಬಿಎಸ್ ಕೆ 6ನೇ ಹಂತದಲ್ಲಿ ಬಿಬಿಎಂಪಿ ಕಸ ಸಂಸ್ಕರಣಾ ಘಟಕದಿಂದ ಸಾಕಷ್ಟು ತೊಂದರೆಯಾಗಿದೆ. ಇದನ್ನು ಮುಚ್ಚಲು ಕ್ರಮ ಕೈಗೊಳ್ಳಿ. ಈ ಬಗ್ಗೆ ಪಾಲಿಕೆ ಆಡಳಿತಗಾರರು ಹಾಗೂ ಮುಖ್ಯ ಆಯುಕ್ತರಿಗೆ ದೂರು ನೀಡಿದರೂ ಸಮಸ್ಯೆ ಪರಿಹಾರ ಆಗಿಲ್ಲ ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಎಸ್ ಕೆ 6ನೇ ಹಂತದ ಕ್ಷೇಮಾಭಿವೃದ್ಧಿ ಸಂಘದ ಮಹೇಶ್ ದೂರಿದರು.
ಜಾಲಹಳ್ಳಿ, ಪೀಣ್ಯ ಹಾಗೂ ದಾಸರಹಳ್ಳಿಯಲ್ಲಿ ಗೇಲ್ ಗ್ಯಾಸ್ ಪೈಪ್ ಹಾಕುವ ಕಾರ್ಯ ನಿಂತಿದೆ. ಬಿಬಿಎಂಪಿಯು ರಸ್ತೆಯಲ್ಲಿ ಕಾಮಗಾರಿ ನಡೆಸಲು ಅವಕಾಶ ನೀಡಿಲ್ಲ. ಹೀಗಾಗಿ 6-7 ವರ್ಷ ಕಾಮಗಾರಿ ನಡೆದಿಲ್ಲ ಎಂದು ನಾಗರೀಕರೊಬ್ಬರು ದೂರಿದ್ದಾರೆ.
ಕೋರಮಂಗಲದ ನಾಲ್ಕನೇ ಬ್ಲಾಕ್ ನಲ್ಲಿ ಬಿಬಿಎಂಪಿ, ಪೊಲೀಸ್ ಇಲಾಖೆ ನಿರ್ಭಯ ಯೋಜನೆಯಡಿ ಸಿಸಿ ಕ್ಯಾಮರಾ ಸರಿಯಾಗಿ ಕೆಲಸ ಮಾಡುತ್ತಿಲ್ಲ. ವಸತಿ ಪ್ರದೇಶದಲ್ಲಿ ಮದ್ಯದಂಗಡಿಗಳಿಂದ ಸಾಕಷ್ಟು ಶಬ್ದ ಮಾಲಿನ್ಯವಾಗುತ್ತಿದೆ. ಬಿದ್ದು ಹೋಗುವ ಮರ, ಟೊಂಗೆಗಳನ್ನು ಕಡಿಯಲು ಬಿಬಿಎಂಪಿ ಅರಣ್ಯ ಗುತ್ತಿಗೆದಾರರಿಗೆ ಹಣ ಕೊಡದಿದ್ದರೆ ಕಡಿಯುವುದಿಲ್ಲ ಎಂದು ಕೋರಮಂಗಲದ ನಾಗರೀಕರಾದ ಪಾರ್ವತಿ ಗಮನಕ್ಕೆ ತಂದರು.
ವಾಹನ ದಟ್ಟಣೆ ಶುಲ್ಕ (ಕಂಜೆಷನ್ ಫೀ)ನಗರದಲ್ಲಿ ಹಾಕಿದರೆ ಖಾಸಗಿ ವಾಹನ ದಟ್ಟಣೆ ನಿಯಂತ್ರಿಸಬಹುದು ಎಂಬ ಸಲಹೆಯೂ ಸಭೆಯಲ್ಲಿ ಕೇಳಿಬಂತು.
ಕಳೆದ ಒಂದು ತಿಂಗಳಲ್ಲಿ ಶಕ್ತಿ ಯೋಜನೆಯಿಂದ ಪ್ರತಿದಿನ ಬಿಎಂಟಿಸಿ ಬಸ್ ನಲ್ಲಿ ಓಡಾಡುವ ಜನಸಂಖ್ಯೆ 30 ರಿಂದ 40 ಲಕ್ಷಕ್ಕೆ ಏರಿಕೆಯಾಗಿದೆ. ಹೀಗೆ ಮೆಟ್ರೋ ರೈಲು, ಬಸ್ ನಂತಹ ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಾದರೆ ನಗರದಲ್ಲಿ ನಗರದ ಮಾಲಿನ್ಯ ಕಡಿಮೆಯಾಗದಲಿದೆ. ವಾಣಿಜ್ಯ ಸಂಕೀರ್ಣದ ಬೇಸ್ ಮೆಂಟ್ ನಲ್ಲಿ ಅನಧಿಕೃತವಾಗಿ ವಾಣಿಜ್ಯ ಚಟುವಟಿಕೆಗಳನ್ನು ನಿಲ್ಲಿಸಿದರೆ ಉತ್ತಮ ಎಂದು ನಾಗರೀಕ ಸಂಸ್ಥೆಯೊಂದರ ಶ್ರೀನಿವಾಸ ಅಲವಿಲ್ಲಿ ಸಲಹೆ ನೀಡಿದರು.
ನಾಗರೀಕರ ಕ್ಷೇಮಾಭಿವೃದ್ಧಿ ಸಂಘ (RWA) ಗಳನ್ನು ಸರ್ಕಾರ ಜೊತೆ ಸೇರಿಕೊಂಡು ನಗರದ ಅಭಿವೃದ್ಧಿಗೆ ಶ್ರಮಿಸಬಹುದು. ಕರೋನಾ ಸಂದರ್ಭದಲ್ಲಿ ಆರೋಗ್ಯ ವಿಚಾರದಲ್ಲಿ ಸರ್ಕಾದೊಂದಿಗೆ ಕ್ಷೇಮಾಭಿವೃದ್ಧಿ ಸಂಘವೂ ಸೇರಿಕೊಂಡು ಜನರ ಆರೋಗ್ಯ ರಕ್ಷಣೆಯಲ್ಲಿ ಕೈಜೋಡಿಸಿತ್ತು. ಇದೇ ವಿಷಯವನ್ನು ನಗರದ ಸಂಸ್ಕೃತಿ ಮತ್ತಿತರ ವಿಚಾರಗಳಿಗೂ ವಿಸ್ತರಿಸಬಹುದು ಎಂದು ಬೆಂಗಳೂರು ಅಪಾರ್ಟ್ ಮೆಂಟ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರೈ ಹೇಳಿದರು.