ಬೆಂಗಳೂರು, ಜು.6 www.bengaluruwire.com : “ನಾನು ಯಾವುದಾದರೂ ವರ್ಗಾವಣೆ ವಿಷಯದಲ್ಲಿ ಭಾಗಿಯಾದ ದಾಖಲಾತಿ ನೀಡಿದರೆ ರಾಜಕೀಯ ನಿವೃತ್ತಿ ಆಗುವೆ” ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸವಾಲು ಹಾಕಿದರು.
ಇಂದು ಬೆಳಗ್ಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; “ಈ ಸರಕಾರ ದಿನದ 24 ಗಂಟೆಯೂ ವರ್ಗಾವಣೆ ದಂಧೆಯನ್ನೇ ನಡೆಸುತ್ತಿದೆ. ಅಭಿವೃದ್ಧಿ ಬದಲು ನಗದು ಅಭಿವೃದ್ಧಿಯಲ್ಲಿ ತೊಡಗಿದೆ. ಇದನ್ನು ಹೇಳಿದರೆ ನಮ್ಮ ಮೇಲೆಯೇ ಕೆಸರು ಎರಚುವ ಕೆಲಸ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.
“ನನ್ನಲ್ಲಿ ಈ ಸರಕಾರ ನಡೆಸುತ್ತಿರುವ ವರ್ಗಾವಣೆ ದಂಧೆಗಳಿಗೆ ಸಂಬಂಧಿಸಿ ನನ್ನಲ್ಲಿ ದಾಖಲೆಗಳಿವೆ. ಅದರಲ್ಲಿ ಯಾರಿಗೂ ಅನುಮಾನ ಬೇಡ. ಅದನ್ನು ಬಿಡುಗಡೆ ಮಾಡಬೇಕಾದ ಸಂದರ್ಭದಲ್ಲಿ ಮಾಡುತ್ತೇನೆ. ಯಾವಾಗ, ಎಲ್ಲಿ ಬಿಡುಗಡೆ ಮಾಡುತ್ತೇನೆ ಎಂಬುದು ನನಗೆ ಗೊತ್ತಿದೆ. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿ ಹಲವಾರು ವರ್ಷಗಳು ಕೆಲಸ ಮಾಡಿದ್ದಾರೆ, ಅವರು ಎಂದಾದರೂ ದಾಖಲೆ ಬಿಡುಗಡೆ ಮಾಡಿದ್ದರಾ?” ಎಂದು ಕುಮಾರಸ್ವಾಮಿ ಅವರು ಖಾರವಾಗಿ ಪ್ರಶ್ನೆ ಮಾಡಿದರು.
“ಅವರು ಎಂದೂ ದಾಖಲೆ ಇಟ್ಟು ಮಾತನಾಡಿದನ್ನು ನಾನು ನೋಡಲೇ ಇಲ್ಲ. ಇದ್ದರೆ ತೋರಿಸಲಿ. ಬಹುಮತದ ಸರಕಾರ ತಂದುಕೊಂಡು ಈ ದಂಧೆಯಲ್ಲಿ ತೊಡಗಿದ್ದಾರೆ” ಎಂದು ಅವರು ಟೀಕಾಪ್ರಹಾರ ನಡೆಸಿದರು.
“ಮೈಸೂರಿನಲ್ಲಿ ವರ್ಗಾವಣೆ ಬಗ್ಗೆ ಚರ್ಚೆ ಆಗುತ್ತಿದೆ. ಮನೆಯಲ್ಲಿ ಸಿಎಂ ಪುತ್ರ ಮಲಗಿರುವ ಸಂದರ್ಭದಲ್ಲಿ ಇಷ್ಟಾಗಿದೆ. ಇನ್ನೂ ಹೊರಗೆ ಬಂದರೆ ಏನಾಗಬಹುದು ಎಂದು ಜನ ಕೇಳುತ್ತಿದ್ದಾರೆ. ನಾನು ದ್ವೇಷದ ರಾಜಕೀಯ ಮಾಡ್ತಿಲ್ಲ, ವಿರೋಧ ಪಕ್ಷದ ಸದಸ್ಯನಾಗಿ ನನ್ನ ಕೆಲಸ ಮಾಡ್ತಿದ್ದೇನೆ. ಸತ್ಯ ಹೇಳುವುದೇ ತಪ್ಪಾ?” ಎಂದು ಮಾಜಿ ಮುಖ್ಯಮಂತ್ರಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.
ನಾನು ಓಡಿ ಹೋಗಲ್ಲ, ದಾಖಲೆ ಬಿಟ್ಟೇ ಬಿಡುತ್ತೇನೆ :
“ಪೈನ್ ಡ್ರೈವ್ ಬಿಡುಗಡೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿಗಳು; ನಾನು ಹೆದರಿ ಓಡಿ ಹೋಗುವ ವ್ಯಕ್ತಿ ಅಲ್ಲ. ಹಿಟ್ ಅಂಡ್ ರನ್ ಮಾಡಲ್ಲ. ಕಾಂಗ್ರೆಸ್ ನಾಯಕರು ಏನು ಮಾತಾಡ್ತಾರೆಂದು ನೋಡೋಣ. ನನ್ನ ಬಳಿ ಇರುವ ಪೆನ್ ಡ್ರೈವ್ ಅಸಲಿ, ಹೈದ್ರಾಬಾದ್ ನಲ್ಲಿ ಮಾಡಿಸಿದ್ದಲ್ಲ. ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಕ್ರಮ ಏನು ಅಂತ ಅವರು ಹೇಳಲಿ. ಆಮೇಲೆ ದಾಖಲೆ ಹೊರ ಬಿಡುತ್ತೇನೆ” ಎಂದರು.