ವೈಜ್ಞಾನಿಕ ಫಿಲ್ಮ್‌ಗಳಿಂದ ಹಾರುವ ಕಾರುಗಳು ನಿಮ್ಮ ಕಲ್ಪನೆಯಿಂದ ವಾಸ್ತವಕ್ಕೆ ರಸ್ತೆಗಿಳಿಯಲು ಸಜ್ಜಾಗಿದೆ. ಹೌದು, ನೀವು ಸರಿಯಾಗಿ ಓದಿದ್ದೀರಿ! ನೀವು ರಸ್ತೆಗಳಲ್ಲಿ ಓಡಿಸಬಹುದಾದ ಮತ್ತು ಆಕಾಶದಲ್ಲಿ ಹಾರಬಲ್ಲ ಸಂಪೂರ್ಣ ಕ್ರಿಯಾತ್ಮಕ ಎಲೆಕ್ಟ್ರಿಕ್ ಕಾರಿಗೆ ಯುಎಸ್ ಸರ್ಕಾರದ ಕಾನೂನು ಅನುಮೋದನೆ ಪಡೆದ ಮೊದಲ ಹಾರುವ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅಮೆರಿಕ ಮೂಲದ ಅಲೆಫ್ ಏರೋನಾಟಿಕ್ಸ್ (Alef Auronautics) ಅಭಿವೃದ್ಧಿಪಡಿಸಿರುವ ಈ ಹಾರುವ ಕಾರಿಗೆ ಅಮೆರಿಕ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಮಾಡೆಲ್- ಎ (Model A) ಎಂದು ಕರೆಯಲ್ಪಡುವ ಈ ಕಾರಿಗೆ ಯುಎಸ್ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ FAA) ಯಿಂದ ವಿಶೇಷ ಏರ್‌ವರ್ತಿನೆಸ್ (Airworthiness) ಪ್ರಮಾಣೀಕರಣವನ್ನು ಪಡೆದಿದೆ ಎಂದು ಕಂಪನಿಯು ಘೋಷಿಸಿಕೊಂಡಿದೆ. ಈ ಬೆಳವಣಿಗೆಯು ಐತಿಹಾಸಿಕವಾಗಿದೆ. ಏಕೆಂದರೆ ಮೊದಲ ಬಾರಿಗೆ ಅಮೆರಿಕ ಸರ್ಕಾರವು ಈ ರೀತಿಯ ವಾಹನವನ್ನು ಪ್ರಮಾಣೀಕರಿಸಿದೆ.
“ಎಫ್‌ಎಎ ಎಲೆಕ್ಟ್ರಿಕಲ್ ವರ್ಟಿಕಲ್ ಟೇಕ್ ಆಫ್ ಮತ್ತು ಲ್ಯಾಂಡಿಂಗ್ (ಇವಿಟಿಒಎಲ್) ವಾಹನಗಳಿಗೆ ತನ್ನ ನೀತಿಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ಇವಿಟಿಒಎಲ್‌ಎಸ್ ಮತ್ತು ನೆಲದ ಮೂಲಸೌಕರ್ಯಗಳ ನಡುವಿನ ಸಂವಹನಗಳನ್ನು ನಿಯಂತ್ರಿಸುತ್ತದೆ” ಎಂದು ಕಂಪನಿಯು ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಮೊಟ್ಟಮೊದಲ ಹಾರುವ ಕಾರು ಆಗಮಿಸುತ್ತಿದೆ :
ಕಾರಿನಂತೆ ಚಾಲನೆ ಮಾಡುವ ಸಾಮರ್ಥ್ಯ, ಲಂಬವಾದ ಟೇಕ್‌ಆಫ್ ಸಾಮರ್ಥ್ಯಗಳು ಮತ್ತು ಕೈಗೆಟುಕುವ ಸಾಮರ್ಥ್ಯದಂತಹ ನಿರ್ದಿಷ್ಟ ಅವಶ್ಯಕತೆಗಳನ್ನು ಪೂರೈಸಲು ಅಲೆಫ್ ಏರೋನಾಟಿಕ್ಸ್ ತನ್ನ ಮೊದಲ ಮಾದರಿಯನ್ನು 2016 ರಲ್ಲಿ ನಿರ್ಮಿಸಿತು. ಮಾಡೆಲ್ ಎ 200 ಮೈಲುಗಳ ಚಾಲನಾ ವ್ಯಾಪ್ತಿಯನ್ನು ಹೊಂದಿದೆ ಮತ್ತು 110 ಮೈಲುಗಳವರೆಗೆ ಹಾರಾಟದ ಶ್ರೇಣಿಯನ್ನು ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಮಾದರಿಯ ಒಂದು ಕಾರಿನ ರೇಟ್ 300,000 $ ಡಾಲರ್ (24.57 ಕೋಟಿ ರೂ.) ಬೆಲೆಯ ಮಾದರಿ ಕಾರಿನ ಪೂರ್ವ ಮಾರಾಟವನ್ನು ಅಕ್ಟೋಬರ್ 2022 ರಲ್ಲಿ ಪ್ರಾರಂಭಿಸಿತು. ಆ ವರ್ಷದ ಅಂತ್ಯದ ವೇಳೆಗಾಗಲೇ 440 ಕ್ಕೂ ಹೆಚ್ಚು ಕಾರು ಬುಕ್ ಆಗಿತ್ತು ಎಂದು ಕಂಪನಿ ವರದಿ ಮಾಡಿದೆ.
ಅಲೆಫ್ ಏರೋನಾಟಿಕ್ಸ್ 2019 ರಿಂದ ತಮ್ಮ ಮೂಲ ಮಾದರಿಗಳನ್ನು ಟೆಸ್ಟ್-ಡ್ರೈವಿಂಗ್ (TestDriving) ಮತ್ತು ಟೆಸ್ಟ್-ಫ್ಲೈ (Test Fly) ಮಾಡುತ್ತಿದೆ. ಮಾಡೆಲ್ ಎ ಉತ್ಪಾದನೆಯು 2025 ರ ನಾಲ್ಕನೇ ತ್ರೈಮಾಸಿಕ (Q4) ನಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಕಂಪನಿಯು ನಾಲ್ಕು ವ್ಯಕ್ತಿಗಳು ಕೂರುವಂತಹ ಹೆಚ್ಚುವರಿ ಮಾದರಿಗಳನ್ನು ಅಭಿವೃದ್ಧಿಪಡಿಸಲು ಯೋಜಿಸುತ್ತಿದೆ. ಮಾಡೆಲ್ Z ಎಂದು ಹೆಸರಿಸಲಾದ ಸೆಡಾನ್, ಇದು 2035 ಇಸವಿಯಲ್ಲಿ ಮಾರುಕಟ್ಟೆಗೆ ಬರಲಿದ್ದು, ಆಗ ಅದರ ಪ್ರಾರಂಭಿಕ ಬೆಲೆ 5,000 $ ಇರಲಿದೆ. ಮಾಡೆಲ್- Z 300 ಮೈಲುಗಳಿಗಿಂತ ಹೆಚ್ಚು ಹಾರುವ ವ್ಯಾಪ್ತಿಯನ್ನು ಮತ್ತು 200 ಮೈಲುಗಳಿಗಿಂತ ಹೆಚ್ಚಿನ ಚಾಲನಾ ವ್ಯಾಪ್ತಿಯನ್ನು ಹೊಂದಲಿದೆ ಎಂದು ನಿರೀಕ್ಷಿಸಲಾಗಿದೆ.
ಈ ವರ್ಷದ ಆರಂಭದಲ್ಲಿ, ಕಂಪನಿಯ ಸಿಇಒ, ಜಿಮ್ ಡುಖೋವ್ನಿ, ಅಲೆಫ್ ಇತಿಹಾಸದಲ್ಲಿ ಮೊದಲ ನಿಜವಾದ ಹಾರುವ ಕಾರನ್ನು ತಲುಪಿಸುವ ಗುರಿಯನ್ನು ಹೊಂದಿದೆ. ಈಗಾಗಲೇ ಹಲವಾರು ಮುಂಗಡ-ಆರ್ಡರ್‌ಗಳನ್ನು ಸ್ವೀಕರಿಸುವುದು ಕಂಪನಿಯು ಮಾರುಕಟ್ಟೆ ಸಾಮರ್ಥ್ಯ ಹಾಗೂ ಅವಕಾಶಗಳಿಗೆ ಇದು ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ಅಲೆಫ್ ಏರೋನಾಟಿಕ್ಸ್ ಕಂಪನಿಯ ಹಿನ್ನಲೆ :
ಕಂಪನಿಯು 2015 ರಲ್ಲಿ ನಾಲ್ಕು ತಾಂತ್ರಿಕ ಪ್ರತಿಭೆಗಳಾದ ಡಾ. ಕಾನ್ಸ್ಟಂಟೈನ್ ಕಿಸ್ಲಿ, ಪಾವೆಲ್ ಮಾರ್ಕಿನ್, ಒಲೆಗ್ ಪೆಟ್ರೋವ್ ಮತ್ತು ಜಿಮ್ ಡುಖೋವ್ನಿ ಅವರಿಂದ ಸ್ಥಾಪಿಸಲ್ಪಟ್ಟಿತು. ನಿಜವಾದ ಹಾರುವ ಕಾರಿನ ಮೊದಲ ರೇಖಾಚಿತ್ರವನ್ನು ಕೆಫೆಯಲ್ಲಿ ಕರವಸ್ತ್ರದ ಮೇಲೆ ಚಿತ್ರಿಸಲಾಗಿದೆ ಎಂದು ಕಂಪನಿಯ ಅಧಿಕೃತ ವೆಬ್‌ಸೈಟ್ ಹೇಳುತ್ತದೆ. ಸಂಸ್ಥಾಪಕರು ಆರಂಭದಲ್ಲಿ ಕಾರನ್ನು ನಿರ್ಮಿಸಲು ಸುಮಾರು ಆರು ತಿಂಗಳು ತೆಗೆದುಕೊಳ್ಳುತ್ತದೆ ಎಂದು ಅಂದಾಜಿಸಿದ್ದರು.