ತಿರುಪತಿ , ಜೂ.29 www.bengalruwire.com : ತಿರುಮಲ ತಿರುಪತಿಯಲ್ಲಿ ರಾಜ್ಯದ ಯಾತ್ರಾರ್ತಿಗಳಿಗೆ ಎರಡು ಬ್ಲಾಕ್ ನಲ್ಲಿ ನಿರ್ಮಾಣಗೊಳ್ಳುತ್ತಿರುವ ಸುಸಜ್ಜಿತ ವಸತಿ ಕೊಠಡಿಗಳ ನಿರ್ಮಾಣ ಕಾರ್ಯ, ಕಲ್ಯಾಣ ಮಂಟಪ, ಊಟದ ಮನೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಾಮಗಾರಿಗಳು 2024ರ ಏಪ್ರಿಲ್- ಮೇ ತಿಂಗಳಿಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಧಾರ್ಮಿಕ ದತ್ತಿ ಇಲಾಖೆಯ ಮೂಲಗಳು ಬೆಂಗಳೂರು ವೈರ್ ಗೆ ಖಚಿತಪಡಿಸಿದೆ.
ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯು ಕರ್ನಾಟಕದ ಯಾತ್ರಾರ್ಥಿಗಳ ಅನುಕೂಲಕ್ಕೆಂದು 132 ಕೊಠಡಿಗಳ ಮೊದಲ ಬ್ಲಾಕ್ ಹಾಗೂ 110 ಕೊಠಡಿಗಳ ಎರಡನೇ ಬ್ಲಾಕ್, 36 ವಿವಿಐಪಿ ರೂಮ್ ಗಳಿರುವ ಸೂಟ್ ಬ್ಲಾಕ್, 500 ಜನರು ಕೂರಬಹುದಾದ ಕಲ್ಯಾಣ ಮಂಟಪ ಹಾಗೂ 250 ಮಂದಿ ಸಾಮರ್ಥ್ಯದ ಊಟದ ಹಾಲ್, 13 ಕೊಠಡಿಗಳನ್ನು, 12 ವಸತಿ ನಿಲಯಗಳನ್ನು (Dormitories) ನಿರ್ಮಿಸುತ್ತಿದೆ. ಅಲ್ಲದೆ ಕರ್ನಾಟಕ ಭವನದ 84 ಕೊಠಡಿಗಳ ನವೀಕರಣ ಕಾರ್ಯ ನಡೆಯುತ್ತಿದೆ. ಒಟ್ಟಾರೆ 220 ಕೋಟಿ ರೂ. ವೆಚ್ಚದ ಯೋಜನೆಗೆ ರಾಜ್ಯ ಮುಜರಾಯಿ ಇಲಾಖೆಯು ಅನುದಾನ ನೀಡುತ್ತಿದ್ದು, ಈ ಕಾಮಗಾರಿಯನ್ನು ಟಿಟಿಡಿ ದೇವಸ್ಥಾನ ಟ್ರಸ್ಟ್ ನಡೆಸುತ್ತಿದೆ. ಸದ್ಯ ಕರ್ನಾಟಕದ ಯಾತ್ರಾರ್ಥಿಗಳಿಗೆ ಕರ್ನಾಟಕ ಭವನದಲ್ಲಿ ಕೇವಲ 24 ಕೊಠಡಿಗಳಷ್ಟೇ ಲಭ್ಯವಿದೆ.
ಹೊಸ ಮತ್ತು ಹಳೆಯ ಕೊಠಡಿ ಅಭಿವೃದ್ಧಿ ಕಾರ್ಯಗಳ ಸ್ಥಿತಿಗತಿ :
ಈಗಾಗಲೇ ಕರ್ನಾಟಕ ಭವನದ ಹಳೆಯ 84 ಕೊಠಡಿಗಳ ನವೀಕರಣ ಕಾಮಗಾರಿ ಪೈಕಿ 24 ಕೊಠಡಿಗಳು ಪೂರ್ಣವಾಗಿದ್ದು, 29 ರೂಮುಗಳ ನವೀಕರಣ ಕಾರ್ಯ ಪ್ರಗತಿಯಲ್ಲಿದ್ದು, ಆಗಸ್ಟ್- ಸೆಪ್ಟೆಂಬರ್ ವೇಳೆಗೆ ಉಳಿದ 29 ಕೊಠಡಿಗಳು ಸೇರಿದಂತೆ 84 ರೂಮ್ ಗಳ ರಿನೋವೇಶನ್ ಪೂರ್ಣಗೊಳ್ಳಲಿದೆ. ಅದೇ ರೀತಿ ಎರಡನೇ ಬ್ಲಾಕ್ ನಲ್ಲಿನ 110 ಕೊಠಡಿಗಳ ನಿರ್ಮಾಣ ಕಾರ್ಯ ಅಂತಿಮ ಘಟ್ಟದಲ್ಲಿದೆ. ಪ್ರಸ್ತುತ ಈ ಬ್ಲಾಕ್ ನಲ್ಲಿ ಪ್ಲಂಬಿಂಗ್ ಕಾರ್ಯ, ಪೈಂಟಿಂಗ್ ಹಾಗೂ ಪೀಠೋಪಕರಣಗಳ ಜೋಡಣಾ ಕಾರ್ಯಗಳು ನಡೆಯುತ್ತಿವೆ. ಆಗಸ್ಟ್ 15ರ ವೇಳೆಗೆ ಈ ಬ್ಲಾಕ್ ಉದ್ಘಾಟನೆಗೊಳ್ಳಲಿದ್ದು, ಬಳಿಕ ರಾಜ್ಯದ ಯಾತ್ರಾರ್ಥಿಗಳ ಬಳಕೆಗೆ ಲಭ್ಯವಾಗಲಿದೆ. ಒಟ್ಟಾರೆ ಆಗಸ್ಟ್ ವೇಳೆಗೆ ರಾಜ್ಯದ ಭಕ್ತರಿಗೆ 194 ಸುಸಜ್ಜಿತ ಕೊಠಡಿಗಳು ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಕಾಮಗಾರಿ ನಡೆಯುತ್ತಿರುವ ಹಾಗೂ ಪೂರ್ಣಗೊಂಡ ಕಟ್ಟಡದ ಚಿತ್ರಗಳು ಈ ಕೆಳಗಿನ ಫೊಟೋ ಸ್ಲೈಡಿಂಗ್ ನಲ್ಲಿದೆ :
ಒಂದನೇ ಬ್ಲಾಕ್ ನಲ್ಲಿ ಸದ್ಯ ಪ್ರೀಕ್ಯಾಸ್ಟ್ ಗೋಡೆಗಳನ್ನು ನಿರ್ಮಿಸುವ ಕಾರ್ಯ ಪೂರ್ಣಗೊಂಡಿದ್ದು, ನೆಲಹಾಸು ಹಾಕುವ, ಗೋಡೆಗಳಿಗೆ ಬಣ್ಣ ಬಳೆಯುವ, ನೀರು ಪೂರೈಕೆಯ ಪೈಪ್ ಹಾಗೂ ಒಳಚರಂಡಿ ಪೈಪ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಮುಂದಿನ ವರ್ಷದ ಏಪ್ರಿಲ್- ಮೇ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಕಳೆದ ವರ್ಷದ ಪ್ರವಾಹ ಪರಿಸ್ಥಿತಿ- ಎತ್ತರದ ಪ್ರದೇಶದಲ್ಲಿ ಸಾಗಣೆ ಸವಾಲು :
ಈ ಮೂಲಭೂತ ಸೌಕರ್ಯವನ್ನು ಕಲ್ಪಿಸುವ ಹೊಣೆಯನ್ನು ತಿರುಪತಿ ತಿರುಮಲದ ಟಿಟಿಡಿ ಸಂಸ್ಥೆಯು ವಹಿಸಿಕೊಂಡಿದ್ದು, ಮುಜರಾಯಿ ಇಲಾಖೆಯು 2021ರ ಡಿಸೆಂಬರ್ 27ರಂದು ಈ ಯೋಜನೆ ಅನುಷ್ಠಾನವನ್ನು ಎರಡು ವರ್ಷದ ಒಳಗಾಗಿ ಅಂದರೆ ಡಿಸೆಂಬರ್ 2023ರ ಒಳಗೆ ಪೂರ್ಣಗೊಳಿಸಲು ಒಪ್ಪಂದ ಮಾಡಿಕೊಂಡಿತ್ತು. ಆದರೆ 2022ರಲ್ಲಿ ಸತತ ಮೂರು ತಿಂಗಳು ಕಾಲ ತಿರುಮಲದಲ್ಲಿ ಭಾರೀ ಮಳೆಯಿಂದ ಉಂಟಾದ ಪ್ರವಾಹ ಪರಿಸ್ಥಿತಿ, ಬೆಟ್ಟ ಪ್ರದೇಶವಾಗಿರುವ ಕಾರಣ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯ ಸಾಮಗ್ರಿಗಳನ್ನು ಟ್ರಕ್ ಗಳಲ್ಲಿ ತಿರುಮಲಕ್ಕೆ ಸಾಗಿಸುವುದು ಒಂದು ಸವಾಲಾಗಿದೆ. ಹೀಗಾಗಿ ಕಾಮಗಾರಿಯಲ್ಲಿ ಕೊಂಚ ವಿಳಂಬವಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
50 ಕೊಠಡಿಗಳಿಗೆ ಕಡಿಮೆ ದರ ವಿಧಿಸುವ ಸಾಧ್ಯತೆ? :
ತಿರುಪತಿಯ ಜಗದ್ವಿಖ್ಯಾತ ಶ್ರೀ ವೆಂಕಟೇಶ್ವರನ ದರ್ಶನಕ್ಕೆಂದು ದೇಶ, ವಿದೇಶಗಳಿಂದ ಪ್ರತಿನಿತ್ಯ ಸಾವಿರಾರು ಭಕ್ತರು ತಿರುಮಲಕ್ಕೆ ಭೇಟಿ ಕೊಡುತ್ತಾರೆ. ಅದರಲ್ಲೂ ರಾಜ್ಯದ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಅದರಲ್ಲೂ ಸಾವಿರಾರು ಬಡವರು ಮತ್ತು ಮಧ್ಯಮ ವರ್ಗದವರು ವೆಂಕಟೇಶ್ವರ ದರ್ಶನಕ್ಕೆ ರಾಜ್ಯದಿಂದ ಆಗಮಿಸುತ್ತಾರೆ. ಈ ವರ್ಗದವರ ದೃಷ್ಟಿಯಿಂದ ನವೀಕರಣಗೊಂಡ 50 ರೂಮುಗಳಿಗೆ ಕಡಿಮೆ ದರ ವಿಧಿಸುವ ಚಿಂತನೆಯಿದೆ. ಅಲ್ಲದೆ ಹೊಸದಾಗಿ ನಿರ್ಮಿಸುವ ವಿವಿಧ ಸೌಲಭ್ಯಗಳ ಕೊಠಡಿಗಳಿಗೆ ಪ್ರತಿದಿನಕ್ಕೆ 1,100 ರೂ.ನಿಂದ 6,000 ರೂ. ತನಕ ಬಾಡಿಗೆ ದರ ವಿಧಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ : Chandrayan-3 Moon Mission | ಚಂದ್ರಯಾನ-3ಕ್ಕೆ ಮುಹೂರ್ತ ಫಿಕ್ಸ್ : ಜು.13ಕ್ಕೆ ನಭಕ್ಕೆ ಚಿಮ್ಮಲಿದೆ GSLV MK-3
ತಿರುಮಲ ಬೆಟ್ಟದ ಕೆಳಗೂ ರಾಜ್ಯದ ಆಸ್ತಿ ಅಭಿವೃದ್ಧಿ :
ತಿರುಪತಿ ಬೆಟ್ಟದ ಕೆಳಗೆ ರಾಜ್ಯ ಸರ್ಕಾರದ ಆಸ್ತಿ ಇದೆ. ಅದನ್ನು ಕೂಡ ಅಭಿವೃದ್ಧಿಪಡಿಸಿ ಅದರಿಂದ ಬರುವ ಆದಾಯವನ್ನು ತಿರುಮಲದಲ್ಲಿರುವ ಕರ್ನಾಟಕ ಭವನ ನಿರ್ವಹಣೆಗೆ ಬಳಸುವ ಬಗ್ಗೆ ಚಿಂತಿಸಲಾಗುತ್ತಿದೆ. ತಿರುಮಲದಲ್ಲಿ ಬೇರೆ ರಾಜ್ಯಗಳು ಹೊಂದಿರುವ ಆಸ್ತಿಗಳಿಗೆ ಹೋಲಿಸಿದರೆ ಕರ್ನಾಟಕ ಅತಿ ಹೆಚ್ಚಿನ ಆಸ್ತಿ ಅಂದರೆ ಸುಮಾರು ಏಳು ಎಕರೆ ಜಾಗ ಹೊಂದಿದೆ ಇದನ್ನು ಯಾತ್ರಾರ್ಥಿಗಳ ಸೌಲಭ್ಯ ಹಾಗೂ ಅನುಕೂಲಕ್ಕೆ ಬಳಸಿಕೊಳ್ಳ ಬೇಕು ಎನ್ನುವ ನಿಟ್ಟಿನಲ್ಲಿ ಇನ್ನೂ ಅನೇಕ ಕ್ರಮ ಕೈಗೊಳ್ಳುವ ಆಲೋಚನೆ ಇದೆಎಂದು ಯಲಹಂಕ ಶಾಸಕರೂ ಆಗಿರುವ ಟಿಟಿಡಿ ಸದಸ್ಯ ವಿಶ್ವನಾಥ್ ಈ ಹಿಂದೆ ತಿರುಪತಿ ತಿರುಮಲದಲ್ಲಿ ಮುಜರಾಯಿ ಇಲಾಖೆಯಿಂದ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದಾಗ ತಿಳಿಸಿದ್ದರು.
ಮುಜರಾಯಿ ಆಯುಕ್ತರು ಏನಂತಾರೆ?:
“ರಾಜ್ಯದ ಭಕ್ತರಿಗಾಗಿ ತಿರುಪತಿ ತಿರುಮಲದಲ್ಲಿ ನಮ್ಮ ಇಲಾಖೆಯ ಅನುದಾನದಲ್ಲಿ 362 ಕೊಠಡಿಗಳು ಲಭ್ಯವಾಗುವ ಕಾಮಗಾರಿ ಪ್ರಸ್ತುತ ಚಾಲ್ತಿಯಲ್ಲಿದೆ. ಈ ಎಲ್ಲಾ ಕಾಮಗಾರಿಗಳು ಮುಂದಿನ ವರ್ಷದ ಜನವರಿ- ಫೆಬ್ರವರಿ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಕಾಮಗಾರಿಗಳನ್ನು ಟಿಟಿಡಿ ವತಿಯಿಂದ ಕೈಗೊಳ್ಳಲಾಗುತ್ತಿದೆ. ನೈಸರ್ಗಿಕ ಕಾರಣಗಳಿಂದಾಗಿ ಕಾಮಗಾರಿಯಲ್ಲಿ ಸ್ವಲ್ಪ ವಿಳಂಬವಾಗಿದೆ. ಆದರೂ ದೊಡ್ಡ ಯೋಜನೆಯಾದ ಕಾರಣ ಸ್ವಲ್ಪ ಮಟ್ಟಿಗಿನ ವಿಳಂಬ ಸರ್ವೇ ಸಾಮಾನ್ಯ. ಯೋಜನೆ ಸಂಪೂರ್ಣವಾದರೆ ರಾಜ್ಯದ ಯಾತ್ರಾರ್ಥಿಗಳಿಗೆ ಬಹಳ ಪ್ರಯೋಜಕಾರಿಯಾಗಲಿದೆ. ಮೊದಲ ಹಂತದಲ್ಲಿ 110 ಕೊಠಡಿಗಳ ಬ್ಲಾಕ್ ಆಗಸ್ಟ್ ವೇಳೆಗೆ ಉದ್ಘಾಟನೆಯಾಗುವುದು. 84 ಕೊಠಡಿಗಳ ನವೀಕರಣ ಕಾರ್ಯವೂ ಪೂರ್ಣಗೊಳ್ಳುತ್ತದೆ.”
- ಬಸವರಾಜೇಂದ್ರ.ಎಚ್, ಆಯುಕ್ತರು, ಮುಜರಾಯಿ ಇಲಾಖೆ
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.