ನವದೆಹಲಿ, ಜೂ.29 www.bengaluruwire.com : ದೇಶದ ನಾಗರೀಕರು ಬಹಳ ನಿರೀಕ್ಷೆ ಹೊಂದಿದ್ದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯ ಮಹತ್ವಾಕಾಂಕ್ಷೆ ಯೋಜನೆ ಚಂದ್ರಯಾನ-3 ಗಗನನೌಕೆ ಉಡಾವಣೆಗೆ ಸಮಯ ನಿಗದಿಪಡಿಸಲಾಗಿದೆ. ಭಾರತೀಯ ಕಾಲಮಾನ ಜುಲೈ 13ರ ಮಧ್ಯಾಹ್ನ 2.30ಕ್ಕೆ ಸರಿಯಾಗಿ ಗಗನನೌಕೆ ನಭಕ್ಕೆ ಚಿಮ್ಮಲಿದೆ ಎಂದು ಇಸ್ರೊ ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜಿಎಸ್ಎಲ್ವಿ ಮಾರ್ಕ್-3 (GSLV Mark-3) ಮೂಲಕ ಈ ಉಡಾವಣೆ ಕಾರ್ಯವು ನಡೆಯಲಿದೆ. ಚಂದ್ರಯಾನ-3ಕ್ಕೆ ಇಸ್ರೋ 615 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.
ಚಂದ್ರಯಾನ-3 ಯಶಸ್ವಿಯಾಗುವ ಕುರಿತು ಇಸ್ರೋದ ಬಾಹ್ಯಾಕಾಶ ವಿಜ್ಞಾನಿಗಳು ವಿಶ್ವಾಸ ಹೊಂದಿದ್ದಾರೆ. ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅತ್ಯಂತ ಸೂಕ್ಷ್ಮ ತಂತ್ರಜ್ಞಾನ ಬಳಸಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ–3 ಬಾಹ್ಯಾಕಾಶ ನೌಕೆಯನ್ನು ಇಳಿಸಲು ರೂಪುರೇಷೆ ರಚಿಸಿಕೊಳ್ಳಲಾಗಿದೆ. ಉಡ್ಡಯನ ಸಂದರ್ಭದಲ್ಲಿನ ಅತ್ಯಧಿಕ ವೇಗ ಮತ್ತು ಅತೀವ ಕಂಪನ ತಡೆದುಕೊಳ್ಳುವ ಸಾಮರ್ಥ್ಯದ ಕುರಿತಂತೆ ಅಗತ್ಯ ಪರೀಕ್ಷೆಗಳನ್ನು ಮಾರ್ಚ್‌ನಲ್ಲಿಯೇ ನಡೆಸಿ ಸಜ್ಜುಗೊಳಿಲಾಗಿದೆ.
ಚಂದ್ರನ ಮೇಲ್ಮೈಯಲ್ಲಿ ಗಗನನೌಕೆ ಮೃದುವಾಗಿ ಇಳಿಯುವ ಸಾಮರ್ಥ್ಯ ಪ್ರದರ್ಶಿಸುವುದು ಮತ್ತು ರೊಬೊಟಿಕ್ ರೋವರ್ ನಿರ್ವಹಿಸುವುದು ಚಂದ್ರಯಾನ-3ರ ಮುಖ್ಯ ಉದ್ದೇಶವಾಗಿದೆ. ಈ ಮಿಷನ್ ಚಂದ್ರನ ಕುರಿತ ನಮ್ಮ ತಿಳುವಳಿಕೆ ಹಾಗೂ ಜ್ಞಾನದ ಅರಿವನ್ನು ಮತ್ತಷ್ಟು ವಿಸ್ತಾರಗೊಳಿಸುವ ನಿರೀಕ್ಷೆ ಇದೆ ಎಂದು ಇಸ್ರೋ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.