ಬೆಂಗಳೂರು, ಜೂ.24 www.bengaluruwire.com : ಇತ್ತೀಚೆಗೆ ಸರ್ಕಾರವು ಜಾರಿಗೆ ತಂದಿರುವ “ಶಕ್ತಿ” ಯೋಜನೆಯಿಂದ ಸಾರ್ವಜನಿಕ ಸಾರಿಗೆಗೆ ಬಲ ನೀಡಿದಂತಾಗಿದೆ. ಈ ಯೋಜನೆ ಜಾರಿಗೆ ಮೊದಲು ಸಾರಿಗೆ ಸಂಸ್ಥೆಗಳ ಒಟ್ಟು ಪ್ರಯಾಣಿಕರ ಸಂಖ್ಯೆ ಪ್ರತಿದಿನ ಸರಾಸರಿ 84.15 ಲಕ್ಷಗಳಿದ್ದು, ಇಂದು ಸರಾಸರಿ 1.5 ಕೋಟಿ ಗಳಾಗಿರುವುದು ಶಕ್ತಿ ಯೋಜನೆ ಯಶಸ್ವಿಯಾಗಿದೆಯೆಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಆರ್ಥಿಕ ಸಬಲೀಕರಣ ಹಾಗೂ ಪುನಶ್ಚೇತನಾ ಸಮಿತಿ ಅಧ್ಯಕ್ಷ ಎಂ.ಆರ್ ಶ್ರೀನಿವಾಸಮೂರ್ತಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರುಗಳೊಡನೆ, ಕೆ ಎಸ್ ಆರ್ ಆರ್ ಟಿ ಸಿ ಕೇಂದ್ರ ಕಛೇರಿಯಲ್ಲಿ ಸಭೆ ನಡೆಸಿದ ಸಂದರ್ಭದಲ್ಲಿ ಮಾತನಾಡುತ್ತಾ,
ಮುಂದುವರಿದ ದೇಶಗಳಲ್ಲಿ ಸಹ ಸಾರ್ವಜನಿಕ ಸಾರಿಗೆಗೆ ಒತ್ತು ನೀಡಲು ಹಲವು ಮಹತ್ತರ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ಬಗೆಗಿನ ಮಾಹಿತಿಯನ್ನು ಹಂಚಿಕೊಂಡರು.
ಏಕ ಸದಸ್ಯ ಸಮಿತಿಯ ಅಧ್ಯಕ್ಷರಾದ ಎಂ.ಆರ್.ಶ್ರೀನಿವಾಸಮೂರ್ತಿಯವರು, ಸಚಿವರಿಗೆ ಈಗಾಗಲೇ ಸಲ್ಲಿಕೆಯಾಗಿರುವ ವರದಿಯ ಪ್ರತಿಯನ್ನು ನೀಡಿ, ವರದಿಯ ಪ್ರಮುಖ ಅಂಶಗಳನ್ನು ಸಂಕ್ಷಿಪ್ತ ಪ್ರಾತ್ಯಕ್ಷಿತೆಯ ಮೂಲಕ ವಿವರಿಸಿದರು. ಹಾಗೂ ಯೋಜನೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಸಚಿವರು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಸಬಲೀಕರಣಕ್ಕೆ ಅನುಕೂಲವಾಗುವ ತುರ್ತು ಕ್ರಮಗಳಾದ ಹೊಸ ಬಸ್ಸುಗಳ ಸೇರ್ಪಡೆ, ಹಳೆಯ ಬಸ್ಸುಗಳ ನವೀಕರಣಗಳ (Refurbishing ) ಕಾರ್ಯ, ಪರಿಣಾಮಕಾರಿ ಮಾಹಿತಿ ತಂತ್ರಜ್ಞಾನ ಬಳಕೆ, ಕಾರ್ಮಿಕ ಸ್ನೇಹಿ ಉಪಕ್ರಮಗಳು, ಸಿಬ್ಬಂದಿಗಳ ನೇಮಕ ಇತರೆ ವಿಷಯಗಳನ್ನು ಆದ್ಯತೆಯ ಮೇರೆಗೆ ಅನುಷ್ಠಾನಕ್ಕೆ ತರಬೇಕು ಎಂದು ತಿಳಿಸಿದರು.
ಹಾಗೆಯೇ ಸಂಪನ್ಮೂಲ ನಗದೀಕರಣದ ಬಗ್ಗೆ ಕೂಡಲೇ ಕ್ರಿಯಾ ಯೋಜನೆಯನ್ನು ತಯಾರಿಸಿ, ನಾಲ್ಕು ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಖಾಲಿ ಜಾಗಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿಕೊಂಡು ವಾಣಿಜ್ಯ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯೋಜನೆ ತಯಾರಿಸಿ ಕೂಡಲೇ ಕಾಲಮಿತಿಯೊಳಗೆ ಅನುಷ್ಠಾನಗೊಳಿಸಲು ಸೂಚಿಸಿದರು.
ಕೆಎಸ್ಆರ್ ಟಿ ಸಿ ವ್ಯಾಪ್ತಿಯ ವಿಭಾಗ ಹಾಗೂ ಕಾರ್ಯಾಗಾರಗಳಲ್ಲಿ 460 ಕ್ಕೂ ಹೆಚ್ಚು ನವೀಕರಿಸಿದ ಬಸ್ಸುಗಳನ್ನು ನಿರ್ಮಿಸಿರುವುದಕ್ಕೆ ಪ್ರಶಂಸಿಸಿದರು. ಈ ಕಾರ್ಯವು ಎಲ್ಲಾ ಸಂಸ್ಥೆಗಳಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ನಡೆಯಬೇಕೆಂದು ತಿಳಿಸಿದರು.
ಮುಂದುವರೆದು ಮಾತನಾಡಿದ ಸಚಿವರು, ಸಾರಿಗೆ ಸಂಸ್ಥೆಗಳ ಬಸ್ ನಿಲ್ದಾಣಗಳಲ್ಲಿ ಸ್ವಚ್ವತೆಯನ್ನು ಕಾಪಾಡಬೇಕು, ಪ್ರಮುಖವಾಗಿ ಆಸನಗಳ ವ್ಯವಸ್ಥೆ, ಶೌಚಾಲಯಗಳು, ಕುಡಿಯುವ ನೀರಿನ ವ್ಯವಸ್ಥೆಗಳ ಬಗ್ಗೆ ಗಮನಹರಿಸಲು ಸೂಚಿಸಿ, ತಾವೇ ಖುದ್ದು ಬಸ್ ನಿಲ್ದಾಣಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸುವುದಾಗಿ ಎಚ್ಚರಿಕೆ ನೀಡಿದರು. ಅಧಿಕಾರಿಗಳು ಸಹ ಬಸ್ ನಿಲ್ದಾಣಗಳಿಗೆ ಆಗಾಗ್ಗೆ ಭೇಟಿ ನೀಡಬೇಕೆಂದು ಸೂಚಿಸಿದರು.
ಇವತ್ತಿನ ಸಭೆಯಲ್ಲಿ ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ,ಜಿ.ಸತ್ಯವತಿ, ವಾಕರಸಾಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್.ಎಸ್, ಕೆ ಎಸ್ ಆರ್ ಟಿ ಸಿ (ಸಿಬ್ಬಂದಿ & ಜಾಗೃತ) ನಿರ್ದೇಶಕರಾದ ಪ್ರಶಾಂತ್ ಕುಮಾರ್ ಮಿಶ್ರ ಹಾಗೂ ಇಲಾಖಾ ಮುಖ್ಯಸ್ಥರುಗಳು ಭಾಗವಹಿಸಿದ್ದರು.