ಬೆಂಗಳೂರು, ಜೂ.23 www.bengaluruwire.com : ಹೊಸದಾಗಿ ಆಯ್ಕೆಯಾದ ಶಾಸಕರಿಗೆ ತರಬೇತಿ ಶಿಬಿರ ಏರ್ಪಡಿಸುವ ವಿಚಾರದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರ ನಿಲುವು ಮತ್ತು ವಿಚಾರಧಾರೆಗಳ ಬಗ್ಗೆ ಕೆಲ ಬುದ್ಧಿಜೀವಿವಲಯದ ಟೀಕೆ -ಟಿಪ್ಪಣಿ ಅತ್ಯಂತ ಅಸಹ್ಯಕರ. ಕೊಳಕು ಮನಸ್ಸಿನ ವಿಕೃತಿ ಎಂದು ಹಿಂದುಳಿದವರ್ಗಗಳ ಮುಖಂಡ ಪ್ರೊ. ನರಸಿಂಹಪ್ಪ ಅಭಿಪ್ರಾಯಪಟ್ಟಿದ್ದಾರೆ.
ಸ್ಫೀಕರ್ ಯು. ಟಿ. ಖಾದರ್ ಏನೋ ಮಾಡಬಾರದ ಮಹಾಪರಾಧ ಮಾಡಿದ್ದಾರೆ. ಇವರು ಸ್ಪೀಕರ್ ಆಗಲು ನಾಲಾಯಕ್ ಎಂಬ ಬಾಲಿಷ ಟೀಕೆ ಹೊರಬರುತ್ತಿರುವುದು ಬುದ್ಧಿಜೀವಿಗಳ ಸೋಗಲಾಡಿತನಕ್ಕೆ ಹಿಡಿದ ಕನ್ನಡಿ ಎಂದು ಯಾರನ್ನೋ ಮೆಚ್ಚಿಸಲು, ಅಥವಾ ಯಾರನ್ನೋ ಒಲೈಕೆ ಮಾಡುವ ಉದ್ದೇಶದಿಂದಲೇ, ಈ ರೀತಿಯ ಬಾಲಿಷ ಟೀಕೆ ಹೊರಬರುತ್ತಿದೆ ಎಂಬ ಅನುಮಾನವಿದೆ. ಅಥವಾ ಇವರ ಹಿಂದೆ ಯಾರೊದ್ದೋ ಮುಖವಾಡವಿದೆ ಎಂಬುದು ಇಂತಹ ಮನಸ್ಥಿತಿಯ ವ್ಯಕ್ತಿಗಳ ಹೇಳಿಕೆಯಿಂದ ಸುಲಭವಾಗಿ ಅರ್ಥವಾಗಲಿದೆ ಎಂದು ನರಸಿಂಹಪ್ಪ ವಾಗ್ದಾಳಿ ನಡೆಸಿದ್ದಾರೆ.
ನೂತನವಾಗಿ ಆಯ್ಕೆಗೊಂಡ ಶಾಸಕರಿಗೆ ಮೂರು ದಿನಗಳ ಕಾಲ ತರಬೇತಿ ಶಿಬಿರವನ್ನು ಸ್ಪೀಕರ್ ಯು.ಟಿ ಖಾದರ್ ಹಮ್ಮಿಕೊಂಡಿದ್ದು, ಇದಕ್ಕೆ ಧಾರ್ಮಿಕ ಹಾಗೂ ಆಧ್ಯಾತ್ಮಕ ಗುರುಗಳನ್ನು ಸ್ಫೂರ್ತಿದಾಯಕ ಪಾಠಕ್ಕೆ ಆಹ್ವಾನ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಹಲವು ಪ್ರಗತಿಪರ ಚಿಂತಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೂನ್ 26 ರಿಂದ 28 ರವರೆಗೆ ನಗರದ ನೆಲಮಂಗಲದಲ್ಲಿರುವ ಕ್ಷೇಮವನ ಪ್ರಕೃತಿ ಚಿಕಿತ್ಸಾಲಯದಲ್ಲಿ ಮೂರು ದಿನಗಳ ಕಾಲ ನೂತನ ಶಾಸಕರಿಗೆ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಫ್ರೊ.ನರಸಿಂಹಪ್ಪ ಈ ಸ್ಪೀಕರ್ ಯು.ಟಿ.ಖಾದರ್ ವಿರುದ್ಧ ಕಾರ್ಯಕ್ರಮದ ರೂಪುರೇಷೆ ಬಗ್ಗೆ ಕೇಳಿ ಬಂದ ಟೀಕೆಗಳಿಗೆ ತಮ್ಮದೇ ಶೈಲಿಯಲ್ಲಿ ಛಾಟಿ ಬೀಸಿದ್ದಾರೆ.

ಸಂವಿಧಾನ, ಅಂಬೇಡ್ಕರ್, ನೆಹರು ತತ್ವ- ಸಿದ್ಧಾಂತಗಳನ್ನು ತಾವೇ ಗುತ್ತಿಗೆ ಪಡೆದಿದ್ದೇವೆ. ಅದು ನಮ್ಮ ಜನ್ಮ ಸಿದ್ದ ಹಕ್ಕು. ನಮ್ಮನ್ನು ಬಿಟ್ಟು ಈ ವಿಚಾರದಲ್ಲಿ ಬೇರೆಯವರು ಮಾತನಾಡುವಂತಿಲ್ಲ, ಬಾಯಿಬಿಡುವಂತಿಲ್ಲ. ಸಂವಿಧಾನ ಹಾಗೂ ನೆಲದ ಕಾನೂನು ನಮಗೆ ಮಾತ್ರ ಗೊತ್ತು ಬೇರೆಯವರಿಗೆ ಏನು ಗೊತ್ತಿಲ್ಲ ಎಂಬ ಮನಸ್ಥಿತಿಯ ಸೋ ಕಾಲ್ಡ್ ಕೆಲ ಬುದ್ಧಿಜೀವಿಗಳ ಟೀಕೆ ಅಸಹ್ಯಕರವಾಗಿದೆ. ಕಾನೂನು ಹಾಗೂ ಸದನದ ನಿಯಮಾವಳಿಗಳನ್ನು ಪುಸ್ತಕದಲ್ಲಿ ಓದಿಕೊಳ್ಳಬಹುದು ಅಥವಾ ಬೇರೆಯವರಿಂದ ಕೇಳಿ ತಿಳಿದುಕೊಳ್ಳಬಹುದು. ಆದರೆ ಅದಕ್ಕೆ ಬೇಕಾದ ಮಾನಸಿಕ ಸದೃಢತೆಯನ್ನು ಅವರೇ ರೂಪಿಸಿಕೊಳ್ಳಬೇಕಲ್ಲವೇ? ಇದರ ಒಂದು ಪ್ರೇರಣೆಗೆ ಒಂದು ವೇದಿಕೆ ಅಗತ್ಯವಲ್ಲವೇ? ಇದನ್ನು ಒದಗಿಸಿಕೊಡುವುದು ಕೊಡುವುದು ಮಹಾ ಅಪರಾಧವೇ? ಎಂದು ನೀರಾವರಿ ತಜ್ಞರೂ ಆಗಿರುವ ಪ್ರೊ.ನರಸಿಂಹಪ್ಪ ಪ್ರಶ್ನಿಸಿದ್ದಾರೆ.

ಇನ್ನು ಖಾದರ್ ಬುದ್ಧಿಜೀವಿ ಅಥವಾ ಕಾನೂನು ತಜ್ಞ ಅಲ್ಲದೆ ಇರಬಹುದು. ಆದರೆ ಅವರಲ್ಲಿನ ಜಾತ್ಯಾತೀತತೆ ಧೋರಣೆಯನ್ನು ಅಪಹಾಸ್ಯ ಮಾಡುವುದು, ಬಾಲಿಷವಾಗಿ ಟೀಕಿಸುವುದು ಎಷ್ಟರಮಟ್ಟಿಗೆ ಸರಿ? ಸಮಂಜಸ? ಖಾದರ್ ಮಸೀದಿಗೂ ಚರ್ಚ್ ಹಾಗೂ ದೇವಸ್ಥಾನಗಳಿಗೂ ಹೋಗುತ್ತಾರೆ. ಹೀಗಾಗಿ ಶಾಸಕರಿಗೆ ತರಬೇತಿ ನೀಡುವ ವಿಚಾರದಲ್ಲಿ ಅವರು ಪ್ರಸ್ತಾಪ ಮಾಡಿರುವ ಕೆಲವು ಹೆಸರುಗಳು ಇಷ್ಟವಿಲ್ಲದಿದ್ದರೆ, ಒಪ್ಪಿಕೆಯಾಗದಿದ್ದರೆ ಬೇರೆಯವರ ಹೆಸರು ಹೇಳಲಿ, ಸಲಹೆ ನೀಡಲಿ ಅದನ್ನು ಬಿಟ್ಟು ಖಾದರ್ ಮುಂದೆ ಒಂದು ದಿನ ಮೋದಿ ಬಂಟನಾಗಬಹುದೇ ಹೊರತು ಸಂವಿಧಾನದ ಪಾಲಕನಾಗಲು ಸಾಧ್ಯವಿಲ್ಲ ಎಂಬ ರೀತಿಯಲ್ಲಿ ಹಗುರವಾಗಿ ಮಾತನಾಡುವವರು ನಿಜವಾಗಿ ಯಾರ ಬಂಟನಾಗಲು, ಯಾರ ಒಲೈಕೆಗಾಗಿ ಹೀಗೆ ಮಾತನಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಅವರ ಬಳಿ ಯಾವ ಉತ್ತರವಿದೆ. ಮೇಲಾಗಿ ಯಾವ ರೀತಿಯ ಉತ್ತರ ಕೊಡಬಲ್ಲರು?
