ಬೆಂಗಳೂರು, ಜೂ.19 www.bengaluruwire.com : ಸ್ವದೇಶಿ ನಿರ್ಮಿತ ‘ತಪಸ್’ ಮಾನವ ರಹಿತ ವಿಮಾನದ (ಯುಎವಿ) ನಿಯಂತ್ರಣವನ್ನು ಭೂ ಮೇಲ್ಮೈನಿಂದ ಸಮುದ್ರದಲ್ಲಿನ ನೌಕೆಗೆ ವರ್ಗಾವಣೆ ಮಾಡುವ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ.
ಡಿಅರ್‌ಡಿಒ ಹಾಗೂ ಭಾರತೀಯ ನೌಕಾಪಡೆಗಳು ಜಂಟಿಯಾಗಿ ಈ ಕಾರ್ಯಕ್ರಮವು ಯಶಸ್ವಿಯಾಗಿದ್ದು, ‘ತಪಸ್’ ಯುಎವಿಯನ್ನು ಸುಮಾರು 285 ಕಿಲೋ ಮೀಟರ್ ದೂರದಿಂದ ನಿಯಂತ್ರಿಸುವ ಸಾಮರ್ಥ್ಯಗಳನ್ನು ಜೂ.16ರಂದು ಪರೀಕ್ಷೆಗೆ ಒಳಪಡಿಸುವ ಉದ್ದೇಶ ಸಫಲವಾಗಿದೆ.
ಚಿತ್ರದುರ್ಗದ ನಾಯಕನಹಟ್ಟಿ ಸಮೀಪದ ಏರೊನಾಟಿಕಲ್ ಟೆಸ್ಟ್ ರೇಂಜ್‌ನಿಂದ (ಎಟಿಆರ್) ತಪಸ್ ಯುಎವಿ ಹಾರಾಟ ಶುರು ಮಾಡಿ, ಕಾರವಾರದ ನೌಕಾನೆಲೆಯಿಂದ 148 ಕಿಲೋ ಮೀಟರ್ ದೂರದಲ್ಲಿದ್ದ ಐಎನ್‌ಎಸ್ ಸುಭದ್ರ ನೌಕೆಯಿಂದ ಈ ಯುಎವಿ ಹಾರಾಟವನ್ನು ನಿಯಂತ್ರಣ ಮಾಡಲಾಯಿತು.
ಇದಕ್ಕಾಗಿ, ಒಂದು ಭೂನಿಯಂತ್ರಣ ಘಟಕ (ಜಿಸಿಎಸ್) ಹಾಗೂ ಎರಡು ಶಿಪ್ ಡೇಟಾ ಟರ್ಮಿನಲ್‌ಗಳನ್ನು (ಎಸ್‌ಡಿಟಿ) ಐಎನ್‌ಎಸ್ ಸುಭದ್ರಾನೌಕೆಯಲ್ಲಿ ಅಳವಡಿಸಲಾಗಿತ್ತು. ಸುಮಾರು 20,000 ಅಡಿ ಎತ್ತರದಲ್ಲಿ ತಪಸ್ ಹಾರಾಟ ನಡೆಸಿದೆ. 3.30 ಗಂಟೆಗಳ ಸಂಚಾರದ ಅವಧಿಯಲ್ಲಿ, ಸುಭದ್ರಾ ನೌಕೆಯಲ್ಲಿ ಅಳವಡಿಸಿದ್ದ ನಿಯಂತ್ರಣ ಉಪಕರಣಗಳ ಸಹಾಯದಿಂದ 40 ನಿಮಿಷ ತಪಸ್‌ನ ಹಾರಾಟ ನಿಯಂತ್ರಣ ಮಾಡಲಾಯಿತು.