ಬೆಂಗಳೂರು, ಜೂ.19 www.bengaluruwire.com : ರಾಜ್ಯದಲ್ಲಿ ನಿವೇಶನ, ಕೃಷಿ ಭೂಮಿ ಸೇರಿದಂತೆ ಆಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆಯ ಸುಳಿವನ್ನು ಕಂದಾಯ ಸಚಿವ ಕೃಷ್ಣ ಭೈರೇಗೌಡ ನೀಡಿದ್ದಾರೆ.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವರು, 2018ರಿಂದ ಆಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆಯಾಗಿಲ್ಲ. ಇದರಿಂದ ರೈತರಿಗೂ, ನಿವೇಶನ, ಭೂಮಿ ಮಾರಾಟಗಾರರಿಗೂ ಅನ್ಯಾಯ ಆಗುತ್ತಿದೆ. ಸದ್ಯದಲ್ಲೇ ಮಾರ್ಗಸೂಚಿ ದರ ಪರಿಷ್ಕರಣೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಮಾರುಕಟ್ಟೆ ಮೌಲ್ಯಕ್ಕೆ ತಕ್ಕಂತೆ ಗೈಡೆನ್ಸ್ ವ್ಯಾಲ್ಯೂ ಪರಿಷ್ಕರಣೆ ಮಾಡುತ್ತೇವೆ. ಒಂದೇ ಸಲ ಹೆಚ್ಚಳ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.
ನೋಂದಣಿ ಇಲಾಖೆಯಲ್ಲಿ ಹಲವು ಬದಲಾವಣೆಗಳನ್ನು ತರಲಾಗಿದ್ದು, ರಾಜ್ಯದ 251 ನೋಂದಣಿ ಕಚೇರಿಗಳಲ್ಲಿ ಜೂ.19ರ ಸಂಜೆಯೊಳಗೆ ಕಾವೇರಿ -2 ತಂತ್ರಾಂಶ ಜಾರಿಯಾಗಲಿದೆ. ಏಪ್ರಿಲ್ ನಿಂದ ಕಾವೇರಿ-2 ನೋಂದಣಿ ಪ್ರಕ್ರಿಯೆ ಅಳವಡಿಸಲಾಗಿದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಎಲ್ಲಾ ದಾಖಲೆಗಳನ್ನು ಕಾವೇರಿ-2 ತಂತ್ರಾಂಶದಲ್ಲಿ ಸಲ್ಲಿಕೆ ಮಾಡಬಹುದು. ಸಬ್ ರಿಜಿಸ್ಟ್ರಾರ್ ಕೂಡ ಅನ್ ಲೈನ್ ನಲ್ಲಿ ಮಾಡಬಹುದು. ನೋಂದಣಿ ಶುಲ್ಕವನ್ನು ಆನ್ ಲೈನ್ ನಲ್ಲೇ ಸಲ್ಲಿಕೆ ಮಾಡಬಹುದು. ಇದರಿಂದ ಜಮೀನು ಅಕ್ರಮವನ್ನು ತಡೆಯಬಹುದು. ಯಾರದ್ದೋ ಜಮೀನು ಯಾರಿಗೋ ನೋಂದಣಿ ಮಾಡಲು ಆಗಲ್ಲ ಎಂದು ಹೇಳಿದ್ದಾರೆ.
ಕಾವೇರಿ-2 ತಂತ್ರಾಂಶ ಉಪಯೋಗ :
ಹೊಸ ಕಾವೇರಿ-2 ತಂತ್ರಾಂಶದಿಂದ ಎಲ್ಲ ದಾಖಲೆಗಳನ್ನು ಮೊದಲೇ ಆನ್ ಲೈನ್ ನಲ್ಲೇ ಕಾವೇರಿ-2ನಲ್ಲಿ ಸಲ್ಲಿಕೆ ಮಾಡಬಹುದು. ಸಬ್ ರಿಜಿಸ್ಟ್ರಾರ್ ಕೂಡ ಆನ್ ಲೈನ್ ನಲ್ಲೇ ಪರಿಶೀಲನೆ ಮಾಡುತ್ತಾರೆ. ರಿಜಿಸ್ಟ್ರೇಷನ್ ಮಾಡುವವರು ಅವರ ಸಮಯಕ್ಕೆ ಅಪಾಯಿಟ್ಮೆಂಟ್ ನಿಗದಿ ಮಾಡಿಕೊಳ್ಳಬಹುದು. 15 ನಿಮಿಷಗಳಲ್ಲಿ ರಿಜಿಸ್ಟ್ರೇಷನ್ ಸ್ಲಾಟ್ ಆನ್ ಲೈನ್ ನಲ್ಲೇ ನಿಗದಿ ಮಾಡಿಕೊಳ್ಳಬಹುದು.
ನೊಂದಣಿ ಶುಲ್ಕ ಕೂಡ ಆನ್ ಲೈನ್ ನಲ್ಲೇ ಸಲ್ಲಿಕೆ ಮಾಡಬಹುದು. ಸಾಮಾನ್ಯ ರಿಜಿಸ್ಟ್ರೇಷನ್ 10-15 ನಿಮಿಷಗಳಲ್ಲಿ ಮುಗಿಸಬಹುದು. ಸರ್ಕಾರಕ್ಕೂ ಕೂಡ ಲೈವ್ ರಿಜಿಸ್ಟ್ರೇಷನ್ ಮಾಹಿತಿ ನಮಗೆ ಸಿಗುತ್ತೆ. ಸಬ್ ರಿಜಿಸ್ಟ್ರಾರ್ ಗೂ ಕೂಡ ಜವಾಬ್ದಾರಿ ಇರುವುದರಿಂದ ಶುಲ್ಕ ಸೋರಿಕೆ ಕೂಡ ತಡೆಯಬಹುದು ಎಂದು ಸಚಿವರು ತಿಳಿಸಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ಕಾವೇರಿ-1 ಇರುವಾಗ ಸರಾಸರಿ 63 ಆಗುತ್ತಾ ಇತ್ತು. ಕಾವೇರಿ-2 ಬಂದ ಮೇಲೆ ಸರಾಸರಿ 65 ದಾಖಲೆಗಳು ನೋಂದಣಿ ಆಗಿದೆ. ಒಂದು ದಿನ 132 ಡಾಕ್ಯುಮೆಂಟ್ ಕೂಡ ರಿಜಿಸ್ಟ್ರೇಷನ್ ಆಗಿದೆ. ಹೊಸ ತಂತ್ರಾಂಶ ಹಾಗೂ ತಂತ್ರಜ್ಞಾನದಲ್ಲಿ ಸಾಮರ್ಥ್ಯವಿದೆ ಎಂಬುದಕ್ಕೆ ಇದೊಂದು ಉದಾಹರಣೆ ಎಂದು ಕೃಷ್ಣ ಭೈರೇಗೌಡ ಹೇಳಿದ್ದಾರೆ.
ನೋಂದಣಿ ಪ್ರಕ್ರಿಯೆಯಿಂದ 2022 ಮೇ ತಿಂಗಳಿನಲ್ಲಿ 1024 ಕೋಟಿ ಆದಾಯ ಬಂದಿತ್ತು. 2023 ರ ಮೇ ನಲ್ಲಿ 1352 ಕೋಟಿ ರೂ. ಆದಾಯ ಬಂದಿದೆ. ಕಳೆದ ಜೂನ್ ತಿಂಗಳಲ್ಲಿ 721 ಕೋಟಿ ರೂ. ಆದಾಯ ಬಂದಿತ್ತು. ಈ ಜೂನ್ ತಿಂಗಳಲ್ಲಿ 840 ಕೋಟಿ ರೂ. ಆದಾಯ ಬಂದಿದೆ ಎಂದರು.
ರಾಜ್ಯದಲ್ಲಿ ಜೂನ್ ನಲ್ಲಿ ಮಳೆ ಕೊರತೆ :
ರಾಜ್ಯದಲ್ಲಿ ಮಳೆ ಕೊರತೆ ವಿಚಾರದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಕಂದಾಯ ಸಚಿವರು, ಜೂನ್ ತಿಂಗಳಲ್ಲಿ ಮಳೆಯ ಸ್ವಲ್ಪ ಸಮಸ್ಯೆ ಇದೆ. ಎಲ್ಲಾ ಜಿಲ್ಲೆಯಲ್ಲಿ ಮಳೆ ಕೊರತೆ ಇದೆ. ಮುಂಗಾರು ರಾಜ್ಯಕ್ಕೆ ತಡವಾಗಿ ಪ್ರವೇಶ ಮಾಡುತ್ತಿದೆ.
ಬಿಫೋರ್ ಜಾಯ್ ಚಂಡಮಾರುತದಿಂದ ದಕ್ಷಿಣ ಭಾರತದಲ್ಲಿ ತೇವಾಂಶ ಕಡಿಮೆ ಆಗಿ ಮಳೆ ಕೊರತೆ ಆಗಿದೆ. ವಿಜ್ಞಾನಿಗಳ ಮಾಹಿತಿ ಪ್ರಕಾರ ನಿನ್ನೆ ಇಂದ ರಾಜ್ಯದಲ್ಲಿ ಮಳೆ ಸ್ವಲ್ಪ ಪ್ರಾರಂಭ ಆಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 46 ಮಿಲಿ ಮೀಟರ್ ಮಳೆ ಆಗಿದೆ. ನಾಳೆಯಿಂದ ಕಲ್ಯಾಣ ಕರ್ನಾಟಕದಲ್ಲಿ ಮಳೆ ಪ್ರಾರಂಭ ಆಗಲಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.
ಮೋಡ ಬಿತ್ತನೆ ಬಗ್ಗೆ ಸರ್ಕಾರದ ಮುಂದೆ ಚಿಂತನೆ ಇಲ್ಲ :
ಮಳೆ ಬಗ್ಗೆ ಸರ್ಕಾರ ಸ್ವಲ್ಪ ಆತಂಕದಲ್ಲಿದೆ, ಆದರೆ ಪೂರ್ವಸಿದ್ದತೆಗಳನ್ನು ಮಾಡಿಕೊಂಡಿದ್ದೇವೆ. ಕರ್ನಾಟಕದಲ್ಲಿ ಮೋಡ ಬಿತ್ತನೆ ಇಲ್ಲ. ಸರ್ಕಾರದ ಮುಂದೆ ಚಿಂತನೆ ಇಲ್ಲ. ರಾಜ್ಯದಲ್ಲಿ ಮಳೆ ಕೊರತೆ ಆಗಲ್ಲ ಎಂಬ ವರದಿ ಇದೆ. ಹವಾಮಾನ ತಜ್ಞರು ಕೊಟ್ಟಿರುವ ವರದಿ ಪ್ರಕಾರ ಶೇ. 96ರಿಂದ ಶೇ.104 ವರೆಗೆ ಮಳೆ ಆಗಲಿದೆ ಎಂದಿದ್ದಾರೆ.