ಬೆಂಗಳೂರು, ಜೂ.16 www.bengaluruwire.com : ರಾಜ್ಯದ ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡುವಲ್ಲಿ ಕೇಂದ್ರದ ಅಕ್ಕಿ ರಾಜಕೀಯದ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಜಿಲ್ಲಾ ಮಟ್ಟದಲ್ಲಿ ಜೂ.20ರಂದು ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ನಗರದ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡುತ್ತಾ ಈ ವಿಷಯ ತಿಳಿಸಿದರು.
ಬಿಜೆಪಿ ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸಕ್ಕೆ ಹೊರಟಿದೆ. ಕಾಂಗ್ರೆಸ್ ಗೆ ಮತ ಹಾಕಿದ ಮತದಾರರ ಹೊಟ್ಟೆ ಮೇಲೆ ಹೊಡೆದು ದ್ರೋಹ ಮಾಡುತ್ತಿದೆ. ಇದಕ್ಕೆ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರವು ಬಿಜೆಪಿ ಪಕ್ಷಕ್ಕೆ ಧಿಕ್ಕಾರ ವ್ಯಕ್ತಪಡಿಸುತ್ತದೆ. ಮುಂದಿನ ಜೂ.20ರ ಮಂಗಳವಾರ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ಪಕ್ಷ 11 ಗಂಟೆಗೆ ನಮಗಾದ ಅನ್ಯಾಯಕ್ಕೆ ಬಿಜೆಪಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಕೈಗೊಳ್ಳಲು ನಿರ್ಧರಿಸಿದ್ದೇವೆ. ಆಯಾ ಜಿಲ್ಲಾ ನಾಯಕರು ಆ ಪ್ರತಿಭಟನೆ ನೇತೃತ್ವ ವಹಿಸಲು ಸೂಚಿಸಿದ್ದೇವೆ. ಆ ಮೂಲಕ ಬಡವರಿಗಾಗುವ ಅನ್ಯಾಯವನ್ನು ಇಡೀ ರಾಷ್ಟ್ರದ ಜನರ ಗಮನಕ್ಕೆ ತರುತ್ತೇವೆ ಎಂದರು.
ಕಾಂಗ್ರೆಸ್ ಐದು ಗ್ಯಾರಂಟಿ ಜನರ ಮುಂದೆ ಇಟ್ಟಿದ್ದೇವೆ. ಅದನ್ನು ಅನುಷ್ಠಾನಕ್ಕೆ ತರುತ್ತೇವೊ ಇಲ್ಲವೊ ಅಂತ ವಿರೋಧ ಪಕ್ಷಗಳು ಮಾಧ್ತಮದ ಮುಂದೆ ಟೀಕೆ ಟಿಪ್ಪಣಿ ಮಾಡಿದ್ದಾರೆ. ಆದರೆ ನಾವು ಸರ್ಕಾರದ ರಚನೆ ಮೊದಲ ದಿನವೇ ಸಚಿವ ಸಂಪುಟ ಮಾಡಿ ಜಾರಿಗೆ ಬದ್ಧತೆ ತೋರಿದ್ದೇವೆ.
ಎರಡನೇ ಸಚಿವ ಸಂಪುಟ ನಡೆಸಿ ಜಾರಿಗೆ ಸೂಕ್ತ ಕಾಲಾವಧಿ ನಿಗದಿ ಮಾಡಿದ್ದೆವು. ಈಗಲೂ ಸಾರ್ವಜನಿಕರು, ಮಾಧ್ಯಮಗಳು ಜನರ ಅಭಿಪ್ರಾಯವನ್ನು ತಿಳಿಸಿ, ಎಚ್ಚರಿಕೆ ಗಂಟೆ ನೀಡಿದ್ದಾರೆ. ನಾವು ನುಡಿದಂತೆ ನಡೀತಿದ್ದೇವೆ. ನಾನಿಲ್ಲಿ ಬೆನ್ನು ತಟ್ಟಿಕೊಳ್ಳಲು ಕೂತಿಲ್ಲ. 136 ಸ್ಥಾನ ನೀಡಿ ಜನ ಅಧಿಕಾರ ಕೊಟ್ಟಿದ್ದಾರೆ. ಟೀಕೆಗಳು ಸಾಯುತ್ತವೆ. ಕೆಲಸಗಳು ಉಳಿಯುತ್ತವೆ. ಚುನಾವಣಾ ಪೂರ್ವದಲ್ಲಿ ಬಿಜೆಪಿ ಸೋತರೆ ಕೇಂದ್ರದ ಯೋಜನೆಗಳನ್ನು ನಿಲ್ಲಿಸಲಾಗುತ್ತದೆ ಎಂದು ಜೆಪಿ ನಡ್ಡಾ ಹೇಳಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ್ಯದ ಜನರು ಹಸಿವಿನಿಂದ ಇರಬಾರದು ಅಂತ ಐದರಿಂದ ಏಳು ಕೆಜಿ ಅಕ್ಕಿ ಉಚಿತ ನೀಡುತ್ತಿದ್ದೆವು. ಅದನ್ನು ಬಿಜೆಪಿ ಬಂದು ಐದು ಕೆಜಿ ಮಾಡಿದವು.
ಮುಂದಿನ ತಿಂಗಳಿನಿಂದ ಪ್ರತಿ ಬಿಪಿಎಲ್ ರೇಷನ್ ಕಾರ್ಡ್ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿ ಕೊಡುತ್ತೇವೆ. ಈ ಯೋಜನೆಗೆ ಕೇಂದ್ರ ಆಹಾರ ನಿಗಮ. (FCI) ಜುಲೈ ನಲ್ಲಿ ಇ-ಹರಾಜು ಮಾಡಿ ನಿಮ್ಮ ಪತ್ರಕ್ಕೆ ಒಪ್ಪಿಗೆ ನೀಡಿ 2.80 ಲಕ್ಷ ಟ್ರಿಕ್ 3,400 ರೂ. ಪ್ರತಿ ಕ್ವಿಂಟಾಲ್ ಗೆ ಕೊಡುತ್ತೇವೆ. ಮುಂದಿನ ಏಳು ದಿನಗಳಲ್ಲಿ ಲಿಫ್ಟ್ ಮಾಡಲು ಅವಕಾಶ ನೀಡುತ್ತೇವೆ ಎಂದು ಜೂ.12ರಂದು ಪತ್ರ ಬರೆದಿದ್ದರು. ಆದರೆ ಜೂ.13ರಂದು ಎಫ್ ಸಿಐ ಎಲ್ಲಾ ರಾಜ್ಯಗಳಿಗೆ ಪತ್ರ ಬರೆದು ಆಗಲ್ಲ ಎಂದರು. ಇದು ಬಿಜೆಪಿಯ ದ್ವೇಷದ ರಾಜಕಾರಣಕ್ಕೆ ಸಾಕ್ಷಿ ಕೆಪಿಸಿಸಿ ಅಧ್ಯಕ್ಷರು ವಾಗ್ದಾಳಿ ನಡೆಸಿದರು.
ಅನ್ನಭಾಗ್ಯ ಯೋಜನೆಗೆ ಈಗಿರುವ ಐದು ಕೆಜಿಗೆ ಮತ್ತೆ ಐದು ಕೆಜಿ ಹೆಚ್ಚವರಿ ಅಕ್ಕಿ ಕೊಡುತ್ತೇವೆ. ಇದಕ್ಕಾಗಿ ಛತ್ತೀಸ್ ಘಡ, ತೆಲಂಗಾಣ ರಾಜ್ಯಗಳಿಂದಲೂ ಅಕ್ಕಿ ಖರೀದಿ ಪ್ರಕ್ರಿಯೆಗೆ ಯತ್ನಿಸುತ್ತಿದ್ದೇವೆ. ಅಕ್ಕಿ ವಿತರಣೆ ಒಂದೆರಡು ದಿನ ತಡವಾಗಬಹುದು. ಎಫ್ ಸಿಐ ಬಳಿ ಏಳು ಲಕ್ಷ ಟನ್ ಅಕ್ಕಿ ದಾಸ್ತಾನಿದೆ. ನಾವು ಬೇರೆ ಕಡೆಯಿಂದ ಅಕ್ಕಿ ಖರೀದಿಸಲು ಅವಕಾಶವಿದೆ. ಅದಕ್ಕೂ ಪ್ರಯತ್ನಿಸುತ್ತೇವೆ. ಪ್ರತಿಯೊಬ್ಬರಿಗೂ 10 ಕೆಜಿ ಅಕ್ಕಿ ನೀಡುವ ಯೋಜನೆ ಒಂಚೂರು ತಡವಾದರೂ ನಿಶ್ಚಳವಾಗಿ ಈ ಅನ್ನಭಾಗ್ಯ ಯೋಜನೆ ಜಾರಿ ಮಾಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ನಾವು ಅಕ್ಕಿ ಖರೀದಿ ಬಗ್ಗೆ ಪಾರದರ್ಶಕ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತೇವೆ. ಹಾಗಾಗಿಯೇ ಎಫ್ ಸಿಐ ಗೆ ಉಚಿತ ಅಕ್ಕಿ ಕೊಡಿ ಅಂತ ನಾವು ಹೇಳಿಲ್ಲ. ಎಫ್ ಸಿಐ ಒಮ್ಮೆ, ಅಕ್ಕಿ ಕೊಡುತ್ತೇವೆ, ಆನಂತರ ಕೊಡಲ್ಲ ಅಂತಿದ್ದಾರೆ. ಇದು ಸರಿಯಿಲ್ಲ. ಅನ್ನಭಾಗ್ಯ ಯೋಜನೆ ಜಾರಿಗೆ ಅಗತ್ಯ ಬಂದರೆ ತಾವು, ಮುಖ್ಯಮಂತ್ರಿಗಳು ಅಕ್ಕಿ ಖರೀದಿಗಾಗಿ ಬೇರೆ ರಾಜ್ಯಗಳಿಗೂ ಹೋಗುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ಯೋಜನೆಗೆ ಅರ್ಜಿ- ನೋಂದಣಿ ಪ್ರಕ್ರಿಯೆ ವಿಸ್ತರಣೆ :
ಎರಡೂವರೆ ಸಾವಿರ ಕುಟುಂಬಕ್ಕೆ ಒಂದು ಗ್ರಾಮ ಒನ್ ಕೇಂದ್ರಗಳಿವೆ. ಒಂದು ದಿನಕ್ಕೆ ಇನ್ನೂರು ಅರ್ಜಿ ಸಲ್ಲಿಕೆ ಮಾಡಲು ಮಾತ್ರ ಸಾಧ್ಯವಿದೆ. ಸೇವಾ ಕೇಂದ್ರದಲ್ಲಿ ಪ್ರತಿದಿನ 200 ಅರ್ಜಿ ಹಾಕಲು ಅವಕಾಶ ಆಗುತ್ತಿದೆ. ಒಂದೆರಡು ದಿನತಡವಾದರೂ ಆನ್ ಲೈನ್ ಅಥವಾ ಮೊಬೈಲ್ ಆಪ್ ಮೂಲಕ ಜನರೇ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವ ವ್ಯವಸ್ಥೆ ಕಲ್ಪಿಸುತ್ತಿದ್ದೇವೆ. ಜು.15ರ ತನಕ ಅಂತಿಮ ಅವಕಾಶವನ್ನು ವಿಸ್ತರಿಸುತ್ತೇವೆ. ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಯೋಜನೆ ಅನುಷ್ಠಾನ ಜವಾಬ್ದಾರಿ ನೀಡಿದ್ದಾರೆ.
ಅಕ್ಕಿ ಹೆಚ್ಚಾಗಿ ಬೆಳೆಯುವ ರಾಜ್ಯಗಳ ಜೊತೆ ನಾವು ಸಂಪರ್ಕದಲ್ಲಿದ್ದೇವೆ. ಮುಂದಿನ ದಿನಗಳಲ್ಲಿ ಅನ್ನಭಾಗ್ಯ ರಾಜ್ಯದ ಯೋಜನೆ ಎಲ್ಲಾ 28 ಸಂಸದರಿಗೆ ಕೇಂದ್ರದಲ್ಲಿ ಧ್ವನಿ ಎತ್ತಲು ಸಹಕಾರ ನೀಡುವಂತೆ ಅವರಿಗೂ ಪತ್ರ ಬರೆಯುತ್ತೇವೆ. ಜೂ.21 ಎಐಸಿಸಿ ಅಧ್ಯಕ್ಷರು ರಾಜ್ಯದ ನಾಯಕರನ್ನು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಜಾರಿ ಸಂಬಂಧ ಸಭೆ ಕರೆದಿದ್ದಾರೆ. ನಾವು ಕೇಂದ್ರದ ಸಚಿವರನ್ನು ಭೇಟಿ ಮಾಡಿ ಕೇಂದ್ರ ಯೋಜನೆಗಳನ್ನು ಅನುಷ್ಠಾನಕ್ಕೆ ಸಹಕಾರ ನೀಡಲು ಕೋರುತ್ತೇವೆ.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಮ್ ಅಹಮದ್, ಚಂದ್ರಪ್ಪ, ಶಾಸಕ ಎಂ.ಸಿ.ಸುಧಾಕರ್, ವಿಧಾನ ಪರಿಷತ್ ಸದಸ್ಯ ದಿನೇಶ್ ಸೇರಿದಂತೆ ಮೊದಲಾದವರು ಭಾಗವಹಿಸಿದ್ದರು.