ಬೆಂಗಳೂರು, ಜೂ.15 www.bengaluruwire.com : ರಾಜರಾಜೇಶ್ವರಿ ನಗರ ವಲಯದಲ್ಲಿ ಬಿಬಿಎಂಪಿಯಿಂದ ಕಾಮಗಾರಿ ಅಕ್ರಮದಲ್ಲಿ 118 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತ ದುರುಪಯೋಗವಾಗಿರುವುದು ಲೋಕಾಯುಕ್ತ ತನಿಖೆಯಲ್ಲಿ ರುಜುವಾದ ಹಿನ್ನಲೆಯಲ್ಲಿ ನಗರಾಭಿವೃದ್ಧಿ ಇಲಾಖೆ ಪಾಲಿಕೆಯ 8 ಅಧಿಕಾರಿಗಳನ್ನು ಅಮಾನತು ಮಾಡಿದೆ.
ಲೋಕಾಯಕ್ತ ವರದಿಯನ್ವಯ ಎಇಇ ಜೆ.ಎಂ.ಚಂದ್ರನಾಥ್ ಈಗಾಗಲೇ ನಿವೃತ್ತಿಯಾಗಿರುವುದರಿಂದ ಅವರನ್ನು ಹೊರತುಪಡಿಸಿ, 8 ಎಂಜಿನಿಯರ್ ಗಳನ್ನು ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಅಮಾನತ್ತು ಮಾಡಿ ಆದೇಶಿಸಿದ್ದಾರೆ.
ಸಂಸದ ಡಿಕೆ ಸುರೇಶ್ ನೀಡಿದ ದೂರಿನ ಅನ್ವಯ ಲೋಕಾಯುಕ್ತರ ಪ್ರಾಥಮಿಕ ತನಿಖೆಯಲ್ಲಿ ಅಧಿಕಾರಿಗಳ ಅಕ್ರಮ ಪತ್ತೆಯಾಗಿರುವ ಹಿನ್ನಲೆಯಲ್ಲಿ ಟಿವಿಸಿಸಿ ಮುಖ್ಯ ಅಭಿಯಂತರರಾಗಿದ್ದ ದೊಡ್ಡಯ್ಯ, ಟಿವಿಸಿಸಿ ಕೋಶ ಸಹಾಯಕ ಅಭಿಯಂತರ ಸತೀಶ್ ಕುಮಾರ್, ಆರ್ ಆರ್ ನಗರ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಹಾಗೂ ಪ್ರಭಾರ ಕಾರ್ಯ ಪಾಲಕ ಎಂಜನಿಯರ್ ಬಸವರಾಜ್, ಸಹಾಯಕ ಕಾರ್ಯ ಪಾಲಕ ಎಂಜನಿಯರ್ ಸಿದ್ದರಾಮಯ್ಯ, ಸಹಾಯಕ ಅಭಿಯಂತರರು ಎಸ್.ಜಿ.ಉಮೇಶ್, ಕಾರ್ಯಪಾಲಕ ಅಭಿಯಂತರ ಶ್ರೀನಿವಾಸ್, ಎಇಇ ವೆಂಕಟಲಕ್ಷ್ಮಿ, ಸಹಾಯಕ ಕಾರ್ಯಪಾಲಕ ಅಭಿಯಂತರರು ಶ್ರೀತೇಜ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ.
2019-20 ರ ಸಾಲಿನಲ್ಲಿ ಬಿಬಿಎಂಪಿಯಿಂದ ಕೆ.ಆರ್ ಐಡಿಎಲ್ ಗೆ ವಹಿಸಿರುವ ಎಲ್ಲಾ ಕಾಮಗಾರಿಗಳಲ್ಲಿ ಕಾಮಗಾರಿಗಳು ಜಾರಿಗೆ ಬಾರದಿದ್ದರು, ಕಾಮಗಾರಿ ಅನುಷ್ಠಾನಗೊಳಿಸದಿದ್ದರು ಅಕ್ರಮವಾಗಿ 250 ಕೋಟಿಯ ಕಾಮಗಾರಿ ಹಣ ದುರುಪಯೋಗವಾಗಿದೆ. ಕಾಮಗಾರಿ ಅಂದಾಜು ಪಟ್ಟಿಗೂ ಹಾಗೂ ಕಾಮಗಾರಿ ನಿರ್ವಹಿಸಿರುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ ಎಂದು ಸಂಸದ ಡಿಕೆ ಸುರೇಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಈ ದೂರಿನ ಆಧಾರದ ಮೇಲೆ ಲೋಕಾಯುಕ್ತ ಪ್ರಾಥಮಿಕ ತನಿಖೆ ನಡೆಸಿದಾಗ ಮೇಲ್ನೋಟಕ್ಕೆ 114 ಕಾಮಗಾರಿಗಳ ಪರಿಶೀಲನೆಯಿಂದ 118 ಕೋಟಿ ರೂ. ನಷ್ಟವಾಗಿರುವುದು ಕಂಡು ಬಂದಿದೆ. ಅಲ್ಲದೆ ಅಧಿಕಾರಿಗಳು ಸಾಕ್ಷಿ ನಾಶ, ದಾಖಲೆಗಳ ನಾಶ, ಕಡತಗಳ ತಿದ್ದುಪಡಿ, ತಿರುಚುವಿಕೆ ಪತ್ತೆಯಾಗಿದೆ ಎಂದು ನಗರಾಭಿವೃದ್ಧಿ ಇಲಾಖೆ ತನ್ನ ಆದೇಶದಲ್ಲಿ ತಿಳಿಸಿದೆ.