ಬೆಂಗಳೂರು, ಜೂ.15 www.bengaluruwire.com : ಬಹಳ ಸಮಯ ಅರ್ಧಬಂರ್ಧ ತುಂಬಿರುತ್ತಿದ್ದ ಕೆಎಸ್ ಆರ್ ಟಿಸಿ, ಬಿಎಂಟಿಸಿ ಬಸ್ ಗಳೆಲ್ಲವೂ ಶಕ್ತಿ ಯೋಜನೆ ಜಾರಿಗೆ ಬಂದ ಮೇಲೆ ದಟ್ಟಣೆ ಅವಧಿಯಲ್ಲಿ ಬಹುತೇಕ ಮಹಿಳೆಯರಿಂದಲೇ ತುಂಬಿಹೋಗುತ್ತಿದೆ. ಜೂನ್ 11ರಿಂದ ಜೂ.14ರ ತನಕದ ನಾಲ್ಕು ದಿನಗಳಲ್ಲಿ ರಾಜ್ಯದಾದ್ಯಂತ 1.48 (1,48,75,692) ಕೋಟಿ ಮಹಿಳೆಯರು ಬಸ್ ಗಳಲ್ಲಿ ಪ್ರಯಾಣಿಸಿದ್ದಾರೆ.
ಕೆಎಸ್ ಆರ್ ಟಿಸಿ, ಬಿಎಂಟಿಸಿ, ಈಶಾನ್ಯ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಈ ನಾಲ್ಕು ದಿನಗಳ ಅವಧಿಯಲ್ಲಿ 1.48 ಮಹಿಳೆಯರು ಪ್ರಯಾಣಿಸಿದ ಬಸ್ ಟಿಕೆಟ್ ಮೌಲ್ಯವು 32.56 ಕೋಟಿ (32,56,86,827 ಕೋಟಿ) ರೂ.ಗಳಾಗಿದೆ ಎಂದು ಕೆಎಸ್ ಆರ್ ಟಿಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಪೈಕಿ ಮೊದಲ ಗ್ಯಾರಂಟಿಯಾಗಿ ಶಕ್ತಿ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಸಾರಿಗೆ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿತ್ತು. ಜೂನ್.11 ರಿಂದ ಆರಂಭಗೊಂಡ ಈ ಯೋಜನೆಯ ಮೊದಲ ದಿನ 5,71,023 ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿದ್ದರೆ, ಜೂ.12ರಂದು 41,34,726, ಜೂ.13ರಂದು 51,52,769 ಮಂದಿ ಹಾಗೂ ಜೂ.14ರಂದು ಒಟ್ಟು 50,17,174 ಮಹಿಳೆಯರು ಶಕ್ತಿ ಯೋಜನೆ ಬಳಸಿಕೊಂಡು ಉಚಿತವಾಗಿ ಬಸ್ ನಲ್ಲಿ ಪ್ರಯಾಣಿಸಿದ್ದಾರೆ.
ದಿನಾಂಕ 14-06-2023ರಂದು KSRTC ಬಸ್ಸಿನಲ್ಲಿ 14,00,114 ಮಂದಿ BMTC ಬಸ್ಸಿನಲ್ಲಿ 16,85,447, NWKRTCಯಲ್ಲಿ 12,71,536 ಮಹಿಳೆಯರು ಹಾಗೂ KKRTC ಸಾರಿಗೆ ಬಸ್ಸುಗಳಲ್ಲಿ 6,60,077 ಮಂದಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಿದೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.