ನವದೆಹಲಿ, ಜೂ.15 www.bengaluruwire.com : ಹಣದುಬ್ಬರ ಪ್ರವೃತ್ತಿಯನ್ನು ನಿಯಂತ್ರಿಸಲು ಮತ್ತು ಏರುತ್ತಿರುವ ಗೋಧಿ ಮತ್ತು ಅಕ್ಕಿಯ ಬೆಲೆಯನ್ನು ನಿಯಂತ್ರಿಸಲು, ಕೇಂದ್ರ ಸರ್ಕಾರದ ಮಾರುಕಟ್ಟೆ ಮಧ್ಯಸ್ಥಿಕೆ ಕಾರ್ಯಕ್ರಮದ ಭಾಗವಾಗಿ, ಭಾರತೀಯ ಆಹಾರ ನಿಗಮದ ಮೂಲಕ ಗೋಧಿ ಮತ್ತು ಅಕ್ಕಿಯ ಮುಕ್ತ ಮಾರುಕಟ್ಟೆ ಮಾರಾಟ ಮಾಡಲಿದೆ. 2023-24ನೇ ಹಣಕಾಸು ವರ್ಷಕ್ಕೆ ಮೊದಲ ಹರಾಜು 28ನೇ ಜೂನ್ 2023 ರಂದು ನಡೆಯಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕೇಂದ್ರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ಭಾರತೀಯ ಆಹಾರ ನಿಗಮದಿಂದ (FCi) ರಾಜ್ಯಕ್ಕೆ, ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ ಡೊಮೆಸ್ಟಿಕ್ (ಒ ಎಂ ಎಸ್ ಎಸ್(ಡಿ) OMSSD) ಅಡಿಯಲ್ಲಿ ಗೋಧಿ ಮತ್ತು ಅಕ್ಕಿ ಮಾರಾಟವನ್ನು ಸ್ಥಗಿತಗೊಳಿಸಿದೆ ಎಂಬ ರಾಜ್ಯ ಸರ್ಕಾರ ಮಾಡಿರುವ ಆರೋಪಕ್ಕೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಈ ಒ ಎಂ ಎಸ್ ಎಸ್ (ಡಿ) ಯ ಒಂದು ಬಿಡ್‌ನಲ್ಲಿ ಈ ಹಿಂದೆ ಮುಕ್ತ ಮಾರಾಟದಲ್ಲಿ ಖರೀದಿದಾರರಿಗೆ ಅನುಮತಿಸಲಾದ ಗರಿಷ್ಠ ಪ್ರಮಾಣವು ಪ್ರತಿ ಬಿಡ್‌ಗೆ 3,000 ಮೆಟ್ರಿಕ್ ಟನ್ ಆಗಿತ್ತು. ಆದರೆ ಈಗ ಬಿಡ್‌ದಾರರು 10-100 ಮೆಟ್ರಿಕ್ ಟನ್ ಗಳಷ್ಟನ್ನು ಖರೀದಿಸಬಹುದಾಗಿದೆ. ಹೆಚ್ಚು ಹೆಚ್ಚಾಗಿ ಸಣ್ಣ ಮತ್ತು ಅತಿ ಸಣ್ಣ ಖರೀದಿದಾರರಿಗೆ ಅವಕಾಶ ಕಲ್ಪಿಸಲು ಮತ್ತು ಯೋಜನೆಯ ಹೆಚ್ಚಿನ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳಲು ಈ ಬಾರಿ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಸಮಜಾಯುಷಿ ನೀಡಿದೆ.
ಇದು ಸಾರ್ವಜನಿಕರಿಗೆ ಧಾನ್ಯಗಳನ್ನು ತಕ್ಷಣವೇ ತಲುಪಿಸಲು ಒಎಂಎಸ್‌ಎಸ್ (ಡಿ) ಅಡಿಯಲ್ಲಿ ಮಾರಾಟವಾದ ಸಂಗ್ರಹಗಳನ್ನು ಬಿಡುಗಡೆ ಮಾಡಲು ಇದರಿಂದ ಅನುಕೂಲವಾಗುತ್ತದೆ. ಕೇಂದ್ರೀಯ ದಾಸ್ತಾನಿನಲ್ಲಿ ಸಾಕಷ್ಟು ಸಂಗ್ರಹವನ್ನು ಖಾತ್ರಿಪಡಿಸಿಕೊಂಡು ಹಣದುಬ್ಬರ ಪ್ರವೃತ್ತಿಯನ್ನು ನಿಯಂತ್ರಣದಲ್ಲಿರುವುದನ್ನು ಖಚಿತಪಡಿಸಿಕೊಳ್ಳಲು ಈ ಬಾರಿ ಒ ಎಂ ಎಸ್ ಎಸ್ (ಡಿ) ವ್ಯಾಪ್ತಿಯಿಂದ ರಾಜ್ಯ ಸರ್ಕಾರದ ಯೋಜನೆಯನ್ನು ಹೊರಗಿಡಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಕೇಂದ್ರ ಆಹಾರ ಸಚಿವಾಲಯವು ಜೂನ್ 13 ರಂದು ವಿವಿಧ ರಾಜ್ಯ ಸರ್ಕಾರಗಳಿಗೆ ಧಾನ್ಯಗಳನ್ನು ಮಾರಾಟ ಮಾಡದಂತೆ ಎಫ್‌ಸಿಐಗೆ ನಿರ್ದೇಶನ ನೀಡಿದೆ. ಇದು ಕರ್ನಾಟಕವು ಬಡವರಿಗೆ ಧಾನ್ಯಗಳನ್ನು ಪೂರೈಸುವುದನ್ನು ತಡೆಯುವ ಕೇಂದ್ರದ ‘ರಾಜಕೀಯ ನಿರ್ಧಾರ’ ಎಂಬ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪಕ್ಕೆ ಈ ಸ್ಪಷ್ಟನೆಯನ್ನು ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ‘ಅನ್ನಭಾಗ್ಯ’ ಯೋಜನೆಯಡಿ ಹೆಚ್ಚುವರಿ ತಲಾ 5 ಕೆ.ಜಿ. ಅಕ್ಕಿ ವಿತರಣೆಗಾಗಿ ತಿಂಗಳಿಗೆ 2,08,425 ಮೆಟ್ರಿಕ್ ಟನ್ ಅಕ್ಕಿ ನೀಡಲು ಒಪ್ಪಿದ್ದ ಭಾರತೀಯ ಆಹಾರ ನಿಗಮ ಈಗ ಹಿಂದೇಟು ಹಾಕಿದೆ. ಇದು ಬಿಜೆಪಿಯ ಬಡವರ ವಿರೋಧಿ ಧೋರಣೆಯಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರತಿಭಟನಾ ಪತ್ರ ಬರೆಯಬೇಕಾಗುತ್ತದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದರು. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.