ಬೆಂಗಳೂರು, ಜೂ.14 www.bengaluruwire.com : ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವವನ್ನು “ಬೆಂಗಳೂರು ಹಬ್ಬದಂತೆ’ ಆಚರಿಸಬೇಕು ಎಂದು ಉಪಮು- ಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ಮೇಯರ್ ಪಿ.ಆರ್. ರಮೇಶ್ ಮನವಿ ಮಾಡಿದ್ದಾರೆ.
ಜೂನ್ 27ರಂದು ಕೆಂಪೇಗೌಡರ ಜಯಂತ್ಯುತ್ಸವ ಆಚರಿಸಲು ಸರ್ಕಾರ ಆದೇಶಿಸಿದೆ. ಇದು ಶ್ಲಾಘನೀಯ ವಿಷಯ. ಆದರೆ, ಬೆಂಗಳೂರಿನಲ್ಲಿ ಕರಗ ಉತ್ಸವ ಸಂದರ್ಭದಲ್ಲಿ ಕೆಂಪೇಗೌಡರ ಜಯಂತಿ ಆಚರಿಸಲಾಗುತ್ತಿದೆ. ಇದರ ಬದಲು, ಜೂನ್‌ನಲ್ಲಿ ಹಬ್ಬ ಆಚರಿಸಬೇಕು ಎಂದು ಅವರು ತಮ್ಮ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಬಿಬಿಎಂಪಿಯ ಪ್ರತಿ ವಾರ್ಡ್‌ಗಳು ಸೇರಿದಂತೆ ಎಲ್ಲ ನಾಗರಿಕರು, ಸಂಘ-ಸಂಸ್ಥೆಗಳನ್ನು ಒಳಗೊಂಡಂತೆ ಜೂನ್ 25ರಿಂದ 27ರವರೆಗೆ ಬಿಬಿಎಂಪಿ ಆಶ್ರಯದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಹಾಗೂ ಬೆಂಗಳೂರು ಇತಿಹಾಸ ಕಾರ್ಯಾಗರ ಏರ್ಪಡಿಸಿ ಅರ್ಥಪೂರ್ಣವಾಗಿ ಬೆಂಗಳೂರು ಹಬ್ಬವಾಗಿ ಆಚರಿಸಬೇಕು. ಇದಕ್ಕಾಗಿ ಪಾಲಿಕೆಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ.