ಬೆಂಗಳೂರು, ಜೂ.14 www.bengaluruwire.com : ರಾಜ್ಯದಲ್ಲಿ ಈಗ ಸಿದ್ದರಾಮಯ್ಯ ಸರ್ಕಾರದ 5 ಗ್ಯಾರಂಟಿ ಸ್ಕೀಮ್ ಗಳ ಜಾರಿ ಮಾಡುವತ್ತಲೇ ಎಲ್ಲರ ಚಿತ್ತ ಹರಿದಿದೆ. ಆದರೆ ಹಲವು ತಿಂಗಳುಗಳಿಂದ ಎಪಿಎಲ್, ಬಿಪಿಎಲ್ ಕಾರ್ಡಿಗೆ ಅರ್ಜಿ ಹಾಕಿ ಕುಳಿತವರಿಗೆ ಮತ್ತು ಹೊಸದಾಗಿ ಅರ್ಜಿ ಹಾಕಲು ಕಾಯುತ್ತಿರುವವರಿಗೆ ಆಹಾರ ಇಲಾಖೆಯ ವೆಬ್ ಪೋರ್ಟಲ್ ನಲ್ಲಿ ಅರ್ಜಿ ಹಾಕಲು ಇನ್ನು ಅವಕಾಶ ನೀಡಿಲ್ಲ. ಈ ತಿಂಗಳು ಆಹಾರ ಇಲಾಖೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ನೀಡುವುದಿಲ್ಲ ಎಂದು ಆಹಾರ ಇಲಾಖೆಯ ಮೂಲಗಳು ತಿಳಿಸಿದೆ.
ಕಾಂಗ್ರೆಸ್ ಸರ್ಕಾರದ ಪ್ರಣಾಳಿಕೆಯಂತೆ ಈ ಹಿಂದೆ ಬಿಪಿಎಲ್ ಕಾರ್ಡಿನ ಪ್ರತಿ ಸದಸ್ಯರಿಗೆ ತಿಂಗಳಿಗೆ ನೀಡುತ್ತಿದ್ದ 5 ಕೆಜಿ ಅಕ್ಕಿಯ ಬದಲಾಗಿ ತಲಾ 10 ಕೆಜಿ ಅಕ್ಕಿಯನ್ನು ಜುಲೈ 1 ರಿಂದ ನೀಡುವ ಅನ್ನಭಾಗ್ಯ ಯೋಜನೆ ಜಾರಿಗೆ ಬರುತ್ತಿದೆ. ಹೀಗಾಗಿ ಪ್ರತಿದಿನ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಕಚೇರಿಗೆ ಬಿಪಿಎಲ್ ಕಾರ್ಡ್ ಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ಪ್ರತಿದಿನ ಸರಾಸರಿ 300 ರಿಂದ 400 ಕರೆಗಳು ಬರುತ್ತಿದೆ. ಹೀಗೆ ಸಾಕಷ್ಟು ಒತ್ತಡವಿದ್ದರೂ ಹೊಸದಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಇಲಾಖೆ ಅವಕಾಶ ನೀಡುತ್ತಿಲ್ಲ. ಇದರಿಂದಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾವಿರಾರು ರೋಗಿಗಳಿಗೆ ಬಿಪಿಎಲ್ ಕಾರ್ಡ್ ಇದ್ದಲ್ಲಿ ಒಂದು ಮಿತಿವರೆಗೆ ಉಚಿತ ಚಿಕಿತ್ಸೆ ಸೌಲಭ್ಯವಿದೆ. ಹೀಗಾಗಿ ಹೊಸದಾಗಿ ಬಿಪಿಎಲ್ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ಸಿಗದ ಕಾರಣ ಸಾಕಷ್ಟು ರೋಗಿಗಳು ತೊಂದರೆಗೊಳಗಾಗಿದ್ದಾರೆ. ಈ ತಿಂಗಳು ಹೊಸದಾಗಿ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುತ್ತಿಲ್ಲ ಎಂದು ಆಹಾರ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಈವರೆಗೆ ಒಟ್ಟಾರೆ 1,53,070,32 ಅಂತ್ಯೋದಯ (AAY), ಆದ್ಯತಾ ಪಡಿತರ ಚೀಟಿ (BPL) ಹಾಗೂ ಆದ್ಯತಾ ಪಡಿತರ ಚೀಟಿಯಲ್ಲದ (APL) ಕಾರ್ಡ್ ಗಳಿದ್ದು, ಒಟ್ಟಾರೆ 5,28,21,734 ಫಲಾನುಭವಿಗಳಿದ್ದಾರೆ. ಆ ಪೈಕಿ 10,90,047 ಮಂದಿ ಅಂತ್ಯೋದಯ ಕಾರ್ಡ್, 1,17,27,988 ಬಿಪಿಎಲ್ ಕಾರ್ಡ್ ಹಾಗೂ 24,88,997 ಎಪಿಎಲ್ ಕಾರ್ಡ್ ಗಳನ್ನು ವಿತರಿಸಲಾಗಿದೆ.
ಇನ್ನೂ 2.42 ಲಕ್ಷ ಅರ್ಜಿಗಳಿಗೆ ಸಿಗದ ಮುಕ್ತಿ :
2019-2020ನೇ ಸಾಲಿನಲ್ಲಿ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ https://ahara.kar.nic.in/home/eservices ಹೊಸ ಪಡಿತರ ಚೀಟಿ ವಿತರಣೆಗೆ ಆನ್ ಲೈನ್ ಮೂಲಕ ಅರ್ಜಿ ಕರೆದಾಗ ಒಟ್ಟಾರೆ 1,97,338 ಜನರು ಬಿಪಿಎಲ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಆ ಪೈಕಿ ಈವರೆಗೆ 98,332 ಕಾರ್ಡ್ ವಿತರಣೆಗೆ ಮಾತ್ರ ಒಪ್ಪಿಗೆ ದೊರೆತಿದ್ದು, 99,006 ಅರ್ಜಿಗಳಿಗೆ ಇನ್ನು ಮುಕ್ತಿ ದೊರೆಕಿಲ್ಲ. ಅದೇ ರೀತಿ 2021-22ನೇ ಸಾಲಿನಲ್ಲಿ 4,23,888 ಮಂದಿ ಆನ್ ಲೈನ್ ಮೂಲಕ ಎಪಿಎಲ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದ್ದರೆ, 2,80,568 ಕಾರ್ಡ್ ವಿತರಣೆಗೆ ಅನುಮತಿ ನೀಡಿದ್ದು, ಇನ್ನು 1,43,320 ಅರ್ಜಿಗಳು ಬಾಕಿ ಉಳಿದಿದೆ. ಅಲ್ಲಿಗೆ ಒಟ್ಟಾರೆ 2,42,326 ಅರ್ಜಿಗಳು ಬಾಕಿ ಉಳಿದಿದೆ.
ಗೃಹಲಕ್ಷ್ಮಿ ಯೋಜನೆ ಪಡೆಯಲು ರೇಷನ್ ಕಾರ್ಡಿಗೆ ಬೇಡಿಕೆ :
ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಮನೆಯೊಡತಿಗೆ ತಿಂಗಳಿಗೆ ಎರಡು ಸಾವಿರ ರೂಪಾಯಿ ಹಣವನ್ನು ಅವರ ಬ್ಯಾಂಕ್ ಖಾತೆಗೆ ರವಾನಿಸಲು ಪ್ರಮುಖವಾಗಿ ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ಮೂಲಕವೇ ಸೇವಾಸಿಂಧು ಪೋರ್ಟಲ್ ಮುಖಾಂತರವೇ ಜೂನ್ 15 ರಿಂದ ಜುಲೈ 15ರನತಕ ಅರ್ಜಿ ಸಲ್ಲಿಸಬೇಕು. ಈಗಾಗಲೇ ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ಇದ್ದವರು ಸೇವಾಸಿಂಧು ಮುಖಾಂತರ ಅರ್ಜಿ ಸಲ್ಲಿಸಲು ಸಮಸ್ಯೆಯಾಗದು. ಆದರೆ ಎಪಿಎಲ್, ಬಿಪಿಎಲ್ ಕಾರ್ಡ್ ಇಲ್ಲದವರು ಹೊಸದಾಗಿ ಪಡಿತರ ಚೀಟಿ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಅದಲ್ಲದೆ ಸದ್ಯಕ್ಕೆ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ವೆಬ್ ಸೈಟ್ ನಲ್ಲಿ ಆನ್ ಲೈನ್ ಮೂಲಕ ಅಪ್ಲೈ ಮಾಡಲು ಅವಕಾಶ ನೀಡಿಲ್ಲ. ಆಗಸ್ಟ್ 15ರಂದು ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ಪ್ರಾರಂಭವಾಗುವ ತನಕ ಈ ಆನ್ ಲೈನ್ ನಲ್ಲಿ ಎಪಿಎಲ್, ಬಿಪಿಎಲ್ ಕಾರ್ಡ್ ನಡಿ ಅರ್ಜಿ ಸಲ್ಲಿಸಲು ಸರ್ಕಾರ ಈ ತಿಂಗಳು ಅವಕಾಶ ನೀಡುವ ಸಾಧ್ಯತೆಗಳಿಲ್ಲ ಎಂದು ಉನ್ನತ ಮೂಲಗಳು ಖಚಿತಪಡಿಸಿದೆ.
ಆಹಾರ ಇಲಾಖೆ ಸಾಫ್ಟ್ ವೇರ್ ಸಿಸ್ಟಮ್ ಬದಲಾವಣೆ :
ರಾಜ್ಯ ಸರ್ಕಾರವು ತನ್ನ ಯೋಜನೆಗಳ ಜಾರಿ, ನಿರ್ವಹಣೆಗೆ ಪ್ರಮುಖವಾಗಿ ನಾಗರೀಕರ ದತ್ತಾಂಶಕ್ಕಾಗಿ ಪ್ರಮುಖವಾಗಿ ಅವಲಂಬನೆಯಾಗಿರುವುದು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯು ವಿತರಿಸುವ ಪಡಿತರ ಚೀಟಿಯಿಂದಲೇ. ಯಾಕೆಂದರೆ ಇಲಾಖೆ ಬಳಿ ಒಟ್ಟಾರೆ 5.28 ಕೋಟಿ ಪಡಿತರ ಚೀಟಿಯ ಫಲಾನುಭವಿಗಳ ದತ್ತಾಂಶವಿದೆ. ಹೀಗಾಗಿ ಆಹಾರ ಇಲಾಖೆಯಲ್ಲಿನ ವೆಬ್ ಸೈಟ್ ಮತ್ತು ಕಾರ್ಯಾಚರಣೆ ಸಂಬಂಧ ಸಾಫ್ಟ್ ವೇರ್ ಬದಲಾವಣೆ ಹಾಗೂ ಅತ್ಯಾಧುನಿಕ ವ್ಯವಸ್ಥೆ ಅಳವಡಿಸಿಕೊಳ್ಳುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಇದೂ ಕೂಡ ಆನ್ ಲೈನ್ ಅರ್ಜಿ ಸ್ಥಗಿತಗೊಳಿಸಿರುವ ಕಾರಣಗಳಲ್ಲಿ ಒಂದಾಗಿದೆ ಎಂದು ಆಹಾರ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
2011ರ ಜನಸಂಖ್ಯಾ ಸಮೀಕ್ಷೆಯ ಆಧಾರದ ಮೇಲೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಒಟ್ಟಾರೆ 4.10 ಕೋಟಿ ಫಲಾನುಭವಿಗಳಿಗಷ್ಟೇ ಬಿಪಿಎಲ್ ಕಾರ್ಡ್ ವಿತರಿಸಲು ಅವಕಾಶವಿದೆ. ಆದರೆ ರಾಜ್ಯ ಸರ್ಕಾರವು 4.42 ಕೋಟಿ ಬಿಪಿಎಲ್ ಕುಟುಂಬದ ಫಲಾನುಭವಿಗಳಿಗೆ ಕಾರ್ಡ್ ಹಂಚಿಕೆ ಮಾಡಿ, ಆ ಮೂಲಕ ಆಹಾರ ಧಾನ್ಯ ವಿತರಿಸುತ್ತಿದೆ. ಕೇಂದ್ರದ 4.10 ಕೋಟಿ ಫಲಾನುಭವಿಗಳ ಮಿತಿಗಿಂತ ಹೆಚ್ಚಿನ ಫಲಾನುಭವಿಗಳಿಗೆ ಕರ್ನಾಟಕ ಸರ್ಕಾರವೇ ಪ್ರತಿ ವರ್ಷ ಎರಡು ಸಾವಿರ ಕೋಟಿ ರೂ. ಹಣವನ್ನು ಬಜೆಟ್ ನಲ್ಲಿ ಮೀಸಲಿಟ್ಟು ಆಹಾರ ಧಾನ್ಯ ಖರೀದಿಸಿ ವಿತರಿಸುತ್ತಿದೆ.
ಇದನ್ನೂ ಓದಿ : Electricity Bill Hike Actual Facts | ಜೂನ್ ತಿಂಗಳ ವಿದ್ಯುತ್ ಬಿಲ್ ಕಂಡು ಹೌಹಾರಿದ್ರಾ? ಇಲ್ಲಿದೆ ಬೆಸ್ಕಾಂ ಬಿಲ್ ಲೆಕ್ಕಾಚಾರದ ಮಾಹಿತಿ
ಎಪಿಎಲ್ ನಲ್ಲಿ ಶೇ.62ರಷ್ಟು ಮಂದಿಯಷ್ಟೆ ಯುಐಡಿ ಜೊತೆ ಲಿಂಕ್ :
ಪಡಿತರ ಚೀಟಿದಾರರು ರೇಷನ್ ಕಾರ್ಡ್ ಜೊತೆಗೆ ತಮ್ಮ ವೈಯುಕ್ತಿಕ ಆಧಾರ್ ಸಂಖ್ಯೆ (UID)ಗೆ ಲಿಂಕ್ ಮಾಡಿ ಸೀಡಿಂಗ್ ಮಾಡುವುದು ಅತ್ಯಗತ್ಯವಾಗಿರುತ್ತದೆ. ರಾಜ್ಯದಲ್ಲಿ ಈವರೆಗೆ 1,28,17,641 ಬಿಪಿಎಲ್ ಕಾರ್ಡ್ ಅಡಿಯಲ್ಲಿ ಬರುವ 4,41,96,465 (ಶೇ.99ರಷ್ಟು) ಫಲಾನುಭವಿಗಳು ತಮ್ಮ ಯುಐಡಿ ಸಂಖ್ಯೆಗೆ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಸೀಡ್ ಮಾಡಿಕೊಂಡಿದ್ದಾರೆ. ಆದರೆ ರಾಜ್ಯದಲ್ಲಿನ 24,88,997 (24.88 ಲಕ್ಷ) ಎಪಿಎಲ್ ಕಾರ್ಡ್ ನಡಿ 86,23,263 (86.23 ಲಕ್ಷ) ಫಲಾನುಭವಿಗಳಿದ್ದು, ಶೇ.62ರಷ್ಟು (15,63,191 ಪಡಿತರ ಚೀಟಿಗಳು) ರೇಷನ್ ಕಾರ್ಡ್ ನ 47,14,643 (ಶೇ.54ರಷ್ಟು) ಮಂದಿ ಫಲಾನುಭವಿಗಳಷ್ಟೇ ಆಧಾರ್ ಜೊತೆ ತಮ್ಮ ರೇಷನ್ ಕಾರ್ಡ್ ಅನ್ನು ಲಿಂಕ್ ಮಾಡಿಕೊಂಡಿದ್ದಾರೆ.
ಒಟ್ಟಾರೆ ಹೊಸದಾಗಿ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಸಾಮಾನ್ಯರು, ಬಡ ಜನರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಈಗಾಗಲೇ ಅರ್ಜಿ ಸಲ್ಲಿಸಿದವರು ಹಲವು ತಿಂಗಳುಗಳಾದರೂ ಅರ್ಜಿ ವಿಲೇವಾರಿಯಾಗದೆ ಪಡಿತರ ಚೀಟಿಯಿಲ್ಲದೆ, ದುಬಾರಿ ಹಣಕೊಟ್ಟು ಅಂಗಡಿಯಿಂದ ಆಹಾರ ಧಾನ್ಯ ಪಡೆದು ಜೀವನ ನಿರ್ವಹಣೆ ಮಾಡಬೇಕಾದ ದುಸ್ಥಿತಿಯಲ್ಲಿದ್ದಾರೆ. ಸರ್ಕಾರ ಈ ಬಗ್ಗೆ ಅರ್ಹ ಅರ್ಜಿದಾರರ ಅನುಕೂಲಕ್ಕಾಗಿ ಆದಷ್ಟು ಶೀಘ್ರವಾಗಿ ಕ್ರಮ ಕೈಗೊಳ್ಳಬೇಕಾಗಿದೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.