ಬೆಂಗಳೂರು, ಜೂ.13 www.bengaluruwire.com : ರಾಜಧಾನಿಯ ಆಡಳಿತಾತ್ಮಕ ದೃಷ್ಟಿಯಿಂದ ಹಾಗೂ ಬ್ರಾಂಡ್ ಬೆಂಗಳೂರು ಹೆಸರಿಗೆ ಹೊಸ ರೂಪನೀಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಪುನರ್ ರಚನೆಗೆ ಅಧ್ಯಯನ ಕೈಗೊಂಡು ವರದಿ ನೀಡಲು ರಾಜ್ಯ ಸರ್ಕಾರವು ತಜ್ಞರ ಸಮಿತಿ ರಚಿಸಿ ಸೋಮವಾರ ಆದೇಶ ಹೊರಡಿಸಿದೆ.
ಬೆಂಗಳೂರನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ಪುನರ್ ರಚಿಸಲು ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್ ಪಾಟೀಲ್, ಮಾಜಿ ಪಾಲಿಕೆ ಆಯುಕ್ತ ಎಚ್. ಸಿದ್ದಯ್ಯ ಹಾಗೂ ಬೆಂಗಳೂರು ಅಜೆಂಡಾ ಟಾಸ್ಕ್ ಫೋರ್ಸ್ ಸದಸ್ಯ ರವಿಚಂದರ್ ರವರನ್ನೊಳಗೊಂಡ ತಜ್ಞರ ಸಮಿತಿಯನ್ನು ನೇಮಿಸಲಾಗಿದೆ.
ಸಮಿತಿಗೆ ಬೇಕಾಗುವ ಅಗತ್ಯ ಮಾಹಿತಿ ಒದಗಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸರ್ಕಾರ ಸೂಚನೆ ನೀಡಿದೆ. ಬಿಬಿಎಂಪಿ ಆಡಳಿತ ಹಿತದೃಷ್ಟಿಯಿಂದ ವಿಭಜಿಸಲು ಸರ್ಕಾರ ಮುಂದಾಗಿದೆ. ಪಾಲಿಕೆ ವಿಭಜನೆಯ ಕುರಿತು ತಜ್ಞರ ಸಮಿತಿ ಗ್ರೇಟರ್ ಬೆಂಗಳೂರು ರಚನೆ, ವಲಯ ಸಂಖ್ಯೆ ಹೆಚ್ಚಳ ಸಂಬಂಧ ಸಮಿತಿ ಅಧ್ಯಯನ ವರದಿ ಆಧರಿಸಿ ಸರ್ಕಾರ ತೀರ್ಮಾನ ಮಾಡಲಿದೆ.
ಬಿಬಿಎಂಪಿ, ರಾಜ್ಯ ಸರ್ಕಾರದ ಇಲಾಖೆಗಳಾದ ನಗರಾಭಿವೃದ್ಧಿ ಇಲಾಖೆ (UDD), ಬಿಡಿಎ (BDA), ಬಿಡಬ್ಲ್ಯುಎಸ್ ಎಸ್ ಬಿ (BWSSB), ಬಿಎಂಆರ್ ಡಿಎ (BMRDA), ಡಲ್ಟ್ (DULT), ಬಿಎಂಎಲ್‌ಟಿಎ (BMLTA), ಬೆಂಗಳೂರು ನಗರ ಪೊಲೀಸ್, ಅಗ್ನಿಶಾಮಕ ಸೇವೆಗಳು, ಸ್ಲಂ ಬೋರ್ಡ್, ಇತ್ಯಾದಿ ಮತ್ತು ಬಿಎಂಟಿಸಿ (BMTC), ಬೆಸ್ಕಾಂ (BESCOM), ಬೆಂಗಳೂರುಮೆಟ್ರೊ (BMRCL) ನಂತಹ ನಿಗಮಗಳನ್ನು ಒಳಗೊಂಡ ಮತ್ತು ಸಬ್ ಅರ್ಬನ್ ರೈಲು ಸೇರಿದಂತೆ ಬೆಂಗಳೂರಿನ ಆಡಳಿತ ಮತ್ತು ಆಡಳಿತಕ್ಕೆ ಹೊಸ ರೂಪ ನೀಡುವ ಕುರಿತ ಅಂಶಗಳ ಬಗ್ಗೆ ಅಧ್ಯಯನ ನಡೆಸಿ ತಜ್ಞರ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಈ ಕ್ರಮಗಳ ಮೂಲಕ ಸರ್ಕಾರದ ಅನುಮೋದನೆಗೆ ಒಳಪಟ್ಟು ಸಮಿತಿಯು ಬ್ರಾಂಡ್ ಬೆಂಗಳೂರನ್ನು ಬಲಪಡಿಸಿ, ತನ್ನ ಶಿಫಾರಸುಗಳ ಅನುಷ್ಠಾನಕ್ಕೆ ಕೆಲಸ ಮಾಡುವುದು ಮತ್ತು ಬೆಂಗಳೂರಿನ ಎಲ್ಲಾ ನಾಗರಿಕರ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಮಿತಿಯು ಕ್ರಮ ಕೈಗೊಳ್ಳಲಿದೆ ಎಂದು ಸರ್ಕಾರ ಸಮಿತಿಯ ಕಾರ್ಯ, ಜವಾಬ್ದಾರಿಗಳನ್ನು ಹೇಳಿದೆ.
ನಗರದ ಆಡಳಿತವನ್ನು ಸುಧಾರಿಸಲು ಮೆಟ್ರೋಪಾಲಿಟನ್ ಸೇರಿದಂತೆ ಸಂವಿಧಾನದ 74ನೇ ತಿದ್ದುಪಡಿಯ ಆಶಯಕ್ಕೆ ಅನುಗುಣವಾಗಿ ಯೋಜನಾ ಸಮಿತಿಯನ್ನು (MPC) ಸ್ಥಾಪಿಸಿ, ವಾರ್ಡ್ ಮಟ್ಟದಲ್ಲಿ ನಾಗರಿಕರು ಪಾಲ್ಗೊಳ್ಳುವಿಕೆಯೊಂದಿಗೆ ಆಳವಾದ ವಿಕೇಂದ್ರೀಕರಣವನ್ನು ಖಚಿತಪಡಿಸಿಕೊಳ್ಳುವುದು ಮತ್ತು ಉನ್ನತ ಮಟ್ಟದಲ್ಲಿ ಸೂಕ್ತ ಕೇಂದ್ರೀಕರಣವನ್ನು ಖಚಿತಪಡಿಸಿಕೊಳ್ಳುವ ವಿಷಯಗಳ ಬಗ್ಗೆ ಸಮಿತಿಯು ಅಧ್ಯಯನ ನಡೆಸಿ ಸರ್ಕಾರಕ್ಕೆ ಸಲ್ಲಿಸಬೇಕಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.