- – ಲೇಖನ : ಕೆ.ಎಸ್. ರಾಜಮನ್ನಾರ್, ಹಿರಿಯ ಪತ್ರಕರ್ತರು
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳು ಕಳೆದಿದೆ. ಹೊಸ ಸರ್ಕಾರದ ಮೇಲೆ ಭಾರೀ ನಿರೀಕ್ಷೆಯಿದೆ.ಇದಕ್ಕೆ ಕಾರಣ ಕಾಂಗ್ರೆಸ್ ಪಕ್ಷವೇ ಹೊರತು ಜನರಲ್ಲ.! ಸಿದ್ದರಾಮಯ್ಯನವರ ಸರ್ಕಾರಕ್ಕಿಂತ ಪಕ್ಷ ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದ್ದ ಗ್ಯಾರೆಂಟಿಗಳೆ ಹೆಚ್ಚು ಸದ್ದು, ಗದ್ದಲ ಮಾಡುತ್ತಿವೆ. ಇದು ಎಲ್ಲಿಗೆ ಯಾವ ಮಟ್ಟಕ್ಕೆ ಹೋಗುತ್ತದೆ, ಇದರಿಂದ ಮುಂದೆ ಉಂಟಾಗಬಹುದಾದ ಅಸಮಾಧಾನ, ಆಕ್ರೋಶ, ಅಸ್ಟೋಟ ಯಾವ ಪರಿಣಾಮ ಬೀರಲಿದೆ ಎಂಬುದನ್ನು ಕಾದುನೋಡಬೇಕಿದೆ. ಆದರೆ ಗ್ಯಾರೆಂಟಿ ಭಾಗ್ಯ ಮುಖ್ಯಮಂತ್ರಿಗೆ ಮತ್ತು ಅಧಿಕಾರಿಗಳಿಗೆ ತಲೆನೋವು ಮತ್ತು ಕಿರಿಕಿರಿ ತಂದಿರುವುದು ಸತ್ಯ.
ಗ್ಯಾರೆಂಟಿ ಭಾಗ್ಯ ಜಾರಿಗೆ ತರುವುದು ಹೇಳಿದಷ್ಟು ಸುಲಭವಲ್ಲ. ಎಂಬುದು 13 ಬಜೆಟ್ ಮಂಡಿಸಿ, ತಮ್ಮ ರಾಜಕೀಯ ಗುರು ರಾಮಕೃಷ್ಣ ಹೆಗ್ಗಡೆ ಅವರನ್ನು ಬಜೆಟ್ ಮಂಡನೆಯ ವಿಚಾರದಲ್ಲಿ ಸರಿಗಟ್ಟಿರುವ ಸಿದ್ದರಾಮಯ್ಯ ನವರಿಗೆ ಏನೆಲ್ಲಾ ಕಷ್ಟ-ನಷ್ಟಗಳಿವೆ ಎಂಬ ಅರಿವಿದೆ. ಆದರೆ ರಾಜ್ಯದ ಆರ್ಥಿಕ ಪರಿಸ್ಥಿತಿ ಅದಕ್ಕೆ ಪೂರಕವಾಗಿಲ್ಲ.
ಹೊಸದಾಗಿ ಸಂಪನ್ಮೂಲ ಕ್ರೋಡೀಕರಣ ಮಾಡಿ ಜಾರಿಗೆ ತರಲು ಹೋದರೆ ಜನರ ಆಕ್ರೋಶ ಸಿಟ್ಟು, ಅಸಮಾಧಾನ ಸರ್ಕಾರವನ್ನೇ ಅಪೋಶನ ತೆಗೆದುಕೊಳ್ಳುವ ಹೋದರೆ ಎಂಬ ಅಳುಕು- ಆತಂಕ ಇನ್ನೊಂದು ಕಡೆ. ಮೇಲಾಗಿ ದೇಶದ ಹೊಸ ತೆರಿಗೆ ಆಡಳಿತ ಜಿಎಸ್ ಟಿ ವ್ಯವಸ್ಥೆ ಜಾರಿಯನಂತರ ರಾಜ್ಯ ಸರ್ಕಾರಗಳಿಗೆ ತೆರಿಗೆ ವಿಧಿಸುವ ಅಧಿಕಾರ, ಅವಕಾಶ ಎರಡು ಕಡಿಮೆ ಹೀಗಾಗಿ ಪ್ರತಿದಿನ ಹೇಗಾದರೂ ಒಂದು ಕುಂಟುನೆಪ, ಇಲ್ಲ-ಸಲ್ಲದ ಷರತ್ತುಗಳು, ನಿಬಂಧನೆಗಳನ್ನು ಹಾಕಿ ಎಷ್ಟು ಸಾಧ್ಯವೋ ಅಷ್ಟು ಮುಂದಕ್ಕೆ ಹೋದರೆ ಸಾಕಪ್ಪ ಎನ್ನುವ ಸ್ಥಿತಿಯಿದೆ.
ಕಾಂಗ್ರೆಸ್ ಕೊಟ್ಟ ಮಾತಿನಂತೆ ಗ್ಯಾರೆಂಟಿ ಭಾಗ್ಯ ಜಾರಿಗೆ ತರದೇ ಹೋದರೆ ರಾಜಕೀಯ ಅಶಾಂತಿಗೆ ಕಾರಣವಾಗಲಿದೆ. ಏಕೆಂದರೆ ಹಳೆ ಮೈಸೂರು ಭಾಗದಲ್ಲಿ ಪ್ರಬಲವಾಗಿರುವ ಒಕ್ಕಲಿಗ ಸಮುದಾಯ ಸಿದ್ದರಾಮಯ್ಯ ವಿರುದ್ಧ ಅಸಮಾಧಾನದಿಂದ ಕುದಿಯುತ್ತಿದೆ. ಇದನ್ನೇ ಪ್ರಬಲ ಅಸ್ತ್ರವಾಗಿ ಮಾಡಿಕೊಳ್ಳಲು ಹೊಂಚು ಹಾಕುತ್ತಿದೆ. ಇದೊಂದು ಬಾರಿ ನನಗೆ ಅವಕಾಶ ಕೊಡಿ . ನಾನು ನಿಮ್ಮ ಮನೆಯ ಮಗ ಎಂದು ಡಿ.ಕೆ.ಶಿವಕುಮಾರ್ ಕೈಮುಗಿದು ಮಾಡಿದ ಪ್ರಾರ್ಥನೆ ಫಲ ಕೊಟ್ಟಿದ್ದು ವಿಶೇಷವಾಗಿ ಒಕ್ಕಲಿಗ ಮತ್ತು ಮುಸ್ಲಿಂ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬಲವಾಗಿ ಅಪ್ಪಿಕೊಂಡಿತು. ಇದರ ಪರಿಣಾಮ ಮತಗಳಿಕೆ ಪ್ರಮಾಣ ಶೇ.೫ರಷ್ಟು ಹೆಚ್ಚಾಗಲು ಕಾರಣವಾಯಿತು.
ಜೆಡಿಎಸ್ 36 ಸ್ಥಾನಗಳಿಂದ 19 ಸ್ಥಾನಕ್ಕೆ ಕುಸಿದು ಮುಂದಿನ ಭವಿಷ್ಯ ಹೇಗೆ ಎಂದು ತಲೆಮೇಲೆ ಕೈಇಟ್ಟುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಈಗ ಗ್ಯಾರೆಂಟಿ ಭಾಗ್ಯಗಳನ್ನು ಜಾರಿಗೆ ತರುವುದು ಹೇಗೆ ಎಂಬ ಚಿಂತೆ ಸಿದ್ದರಾಮಯ್ಯ ಅವರನ್ನು ಕಾಡುತ್ತಿದೆ. ಜನರಿಗೆ ಮತ್ತು ಶಾಸಕರಿಗೆ ಹತ್ತಿರವಾಗಿ ಮತ್ತಷ್ಟು ಜನಾನುರಾಗಿಯಾಗುವುದು ಹೇಗೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಲೆಕ್ಕಾಚಾರದ ಹೆಜ್ಜೆ ಇಡುತ್ತಿದ್ದಾರೆ . ಇದರ ತಾತ್ಪರ್ಯ ಇಷ್ಟೆ. ಶಿವಕುಮಾರ್ ಮುಂದಿನ ನಡೆ ಮೇಲೆ ಸರ್ಕಾರದ ಭವಿಷ್ಯ ನಿಂತಿದೆ ಎಂಬುದು ಸ್ಪಷ್ಟ. ಒಕ್ಕಲಿಗ, ಲಿಂಗಾಯಿತ ಸಮುದಾಯಕ್ಕೆ ಇದ್ದ ಸುವರ್ಣ ಅವಕಾಶವನ್ನು ಸಿದ್ದರಾಮಯ್ಯ ತಪ್ಪಿಸಿಬಿಟ್ಟರು ಎಂಬ ಒಳಬೇಗುದಿ ಆಯಾ ಸಮುದಾಯವನ್ನು ಕಾಡುತ್ತಿದೆ. ಹೀಗಾಗಿ ಅಧಿಕಾರದಲ್ಲಿ ಎರಡು ಪವರ್ ಸೆಂಟರ್ ಗಳು ಮುಂದಿನ ಅವಕಾಶಕ್ಕಾಗಿ ಒಳಗೊಳಗೆ ಕತ್ತಿ ಮಸೆಯುತ್ತಿರುವುದು ಗೊತ್ತಿಲ್ಲದ ಸಂಗತಿಯೇನಲ್ಲ.! ಆದರೆ ಇದು ಯಾವಾಗ ಅಸ್ಪೋಟವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಎರಡುವರೆ ವರ್ಷಗಳ ಆಡಳಿತದ ನಂತರ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನವನ್ನು ಡಿ.ಕೆ. ಶಿವಕುಮಾರ್ ಅವರಿಗೆ ಬಿಟ್ಟುಕೊಡುತ್ತಾರೆ ಎಂದು ಘಂಟಾಘೋಷವಾಗಿ ಹೇಳುವ ಸ್ಥಿತಿಯಲ್ಲಿ ಯಾರು ಇಲ್ಲ. ಮೇಲಾಗಿ ಹೈಕಮಾಂಡ್ ಮಟ್ಟದಲ್ಲಿ ಇಂತಹ ಅಧಿಕಾರ ಹಸ್ತಾಂತರದ ರಾಜಿ ಸೂತ್ರ ಅಧಿಕೃತವಾಗಿ, ಮನಃಸಾಕ್ಷಿಯಾಗಿ, ಸರ್ವಸಮ್ಮತವಾಗಿ ರೂಪುಗೊಂಡಿದೆ ಎಂಬುದೇ ಅನುಮಾನ.!
ಸಿದ್ದು ದಾಳಕ್ಕೆ ಹೈಕಮಾಂಡ್ ಸಮ್ಮತಿ:
ಚುನಾವಣಾ ಫಲಿತಾಂಶ ಹೊರಬಿದ್ದ ನಂತರ ಮುಂದಿನ ನಾಯಕ ಯಾರಾಗಬೇಕು ಎಂಬುದಕ್ಕೆ ಹಸ್ತಿನಾವತಿಯಲ್ಲಿ 3-4 ದಿನ ರಾಜಕೀಯ ಜಿದ್ದಾಜಿದ್ದಿ ನಡೆಯಿತು.
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬಿಗಿಪಟ್ಟನ್ನು ಸಡಿಲ ಮಾಡದೇ ಕಡೆಯವರೆಗೆ ಹಠ ಸಾಧಿಸಿಕೊಂಡೆ ಬಂದರು . ಕಡೆಗೆ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 25 ಸ್ಥಾನಗಳನ್ನು ಗೆಲ್ಲಿಸಿಕೊಂಡು ಬರುತ್ತೇನೆ. ಇದರ ಸಂಪೂರ್ಣ ಜವಾಬ್ದಾರಿ ನನ್ನದೆ, ಇಲ್ಲವಾದರೆ ನನ್ನ ದಾರಿ ನನಗೆ, ನಿಮ್ಮ ದಾರಿ ನಿಮಗೆ ಎಂಬ ಸಿದ್ದರಾಮಯ್ಯ ಬಿಗಿಪಟ್ಟಿಗೆ ಹೈಕಮಾಂಡ್ ತಲೆಬಾಗಿ ಇಷ್ಟವೋ, ಕಷ್ಟವೋ ಹೈಕಮಾಂಡ್ ದೇಶ ಆಡಳಿತ ಚುಕ್ಕಾಣಿ ಹಿಡಿಯುವ ಮುಂದಿನ ಲೆಕ್ಕವನ್ನು ಗಮನದಲ್ಲಿ ಇಟ್ಟುಕೊಂಡು ಸಿದ್ದರಾಮಯ್ಯ ಬೇಡಿಕೆಗೆ ತಥಾಸ್ತು ಎಂದಿದೆ.
ನಂತರ ಡಿಕೆಶಿ ಸಮಾಧಾನಕ್ಕಾಗಿ ಮೊದಲ ಎರಡುವರೆ ವರ್ಷ ಸಿದ್ದರಾಮಯ್ಯ ಅವರಿಗೂ ನಂತರದ ಎರಡೂವರೆ ವರ್ಷದ ನಾಯಕ ಸ್ಥಾನವನ್ನು ಡಿ.ಕೆ. ಶಿವಕುಮಾರ್ ಅವರಿಗೆ ಬಿಟ್ಟುಕೊಡುವುದು ಎಂಬ ಒಗ್ಗರಣೆಯ ಸಾಲನ್ನು ಸೇರಿಸಲಾಗಿದೆ ಎಂಬ ಮಾತು ಹರಿದಾಡುತ್ತಿದೆ.
ಗ್ಯಾರೆಂಟಿಗೆ ಬೇಕು ಒಂದು ಲಕ್ಷ ಕೋಟಿ:
ಚುನಾವಣಾ ಪೂರ್ವದಲ್ಲಿ ಜನತೆಗೆ ಕೊಟ್ಟಿರುವ ಎಲ್ಲಾ ವಾಗ್ದಾನಗಳನ್ನು ಮುಂದಿನ 5 ವರ್ಷಗಳ ಅವಧಿಯಲ್ಲಿ ಜಾರಿಗೆ ತರಬೇಕಾದರೆ ಸರ್ಕಾರಕ್ಕೆ ಪ್ರತಿ ವರ್ಷ ಒಂದು ಲಕ್ಷ ಕೋಟಿ ರೂಪಾಯಿ . ಹಣ ಬೇಕಾಗಬಹುದು. ರಾಜ್ಯದ ಬಜೆಟ್ ಗಾತ್ರ ಮೂರನೆ ಒಂದು ಭಾಗದ ಹಣ ಗ್ಯಾರೆಂಟಿ ಯೋಜನೆಗಳ ಜಾರಿಗೆ ಹೋಗಲಿದೆ.
ಇನ್ನೂ ಸಾಲ ಮರುಪಾವತಿಸಲು ವಾರ್ಷಿಕವಾಗಿ 70 ರಿಂದ 80 ೦ಸಾವಿರ ಕೋಟಿ ರೂ. ಬೇಕಾಗಲಿದೆ . ಇನ್ನು ನೌಕರರ ಸಂಬಳ, ಆಡಳಿತದ ವೆಚ್ಚ ಇವೆಲ್ಲವನ್ನೂ ಲೆಕ್ಕ ಹಾಕಿದರೆ ರಾಜ್ಯದ ವರಮಾನಕ್ಕಿಂತ ಖರ್ಚು ಹೆಚ್ಚಾಗಲಿದೆ. ಇದನ್ನು ಸರಿದೂಗಿಸುವುದು ಸುಲಭದ ಮಾತಲ್ಲ. ಬೇಕಾಬಿಟ್ಟಿ ಜನರ ಮೇಲೆ ತೆರಿಗೆ ಹಾಕಿ ಸಂಕಟಕ್ಕೆ ನೂಕಿದರೆ ಅದರ ಪರಿಣಾಮ ಮುಂಬರುವ ಚುನಾವಣೆಗಳ ಮೇಲೆ ಬೀರುವುದು ಶತಸಿದ್ದ. ಗ್ಯಾರೆಂಟಿ ಭಾಗ್ಯ ಈಡೇರಿಸದಿದ್ದರೆ ಜನ ಸಿಟ್ಟಿಗೇಳುತ್ತಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕನಿಷ್ಟ 25 ಸ್ಥಾನಗಳನ್ನು ಗೆಲ್ಲಿಸಿಕೊಡದೇ ಹೋದರೆ ಸಿದ್ದರಾಮಯ್ಯನವರ ಕುರ್ಚಿ ಅಲುಗಾಡಲಿದೆ. ಹೀಗಾಗಿ ಗ್ಯಾರಂಟಿ ಭಾಗ್ಯವನ್ನು ಜಾರಿಗೆ ಲೆಕ್ಕಾಚಾರ ಹಾಕುತ್ತಿದ್ದಾರೆ, ಆದರೆ ದಾರಿ ಸ್ಪಷ್ಟವಾಗಿಲ್ಲ.
ಸಂಪನ್ಮೂಲದ ಮಾರ್ಗಗಳು:
ಜಿಎಸ್ಟಿ ಜಾರಿಗೆ ಬಂದ ನಂತರ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಆದಾಯದ ಮೂಲಗಳೇ ಇಲ್ಲವಾಗಿದೆ.!! ಈಗ ಹೆಚ್ಚೆಂದರೆ ಸ್ಟಾಂಪ್ ಮತ್ತು ರಿಜಿಸ್ಟ್ರೇಷನ್, ಪೆಟ್ರೋಲ್ ಮತ್ತು ಡೀಸೆಲ್, ಮದ್ಯದ ಮೇಲೆ ತೆರಿಗೆಯನ್ನು ಹೆಚ್ಚಿಸಿ ಹೆಚ್ಚುವರಿ ವೆಚ್ಚ ಸರಿದೂಗಿಸಬೇಕಾಗಿದೆ. ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬ ಗಾದೆ ಮಾತಿನಂತೆ ಗ್ಯಾರೆಂಟಿ ಭಾಗ್ಯವನ್ನು ಪೂರ್ಣವಾಗಿ ಜಾರಿಗೆ ತರುವಷ್ಟು ಸಂಪನ್ಮೂಲ ಕ್ರೋಡೀಕರಣವಾಗುವುದಿಲ್ಲ. ಹೀಗಾಗಿ ಸರ್ಕಾರಕ್ಕೆ ಗ್ಯಾರಂಟಿ ಭಾಗ್ಯವೇ ಒಂದು ರೀತಿ ಮುಳುವಾಗುತ್ತಿದೆ.
ಇನ್ನು ಸಿದ್ದರಾಮಯ್ಯ ಗಮನವೆಲ್ಲಾ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕನಿಷ್ಟ 20 ಲೋಕಸಭಾ ಸ್ಥಾನಗಳನ್ನು ಗೆದ್ದು ಹೈಕಮಾಂಡಿಗೆ ಮತ್ತಷ್ಟು ಹತ್ತಿರವಾಗುವುದು , 5 ವರ್ಷಗಳ ಕಾಲ ಅಧಿಕಾರದಲ್ಲಿ ಮುಂದುವರಿಯಬೇಕು ಎಂಬುದರ ಕಡೆಗೆ ಹೆಚ್ಚು ಗಮನ. ಎಷ್ಟು ಬೇಗ ಹೈಕಮಾಂಡ್ ಅವ ಕೃಪೆಗೆ ಸಿದ್ದರಾಮಯ್ಯ ಗುರಿಯಾಗಿ ಅಧಿಕಾರ ಬಿಟ್ಟುಕೊಡುತ್ತಾರೋ ಎಂಬ ಲೆಕ್ಕಚಾರದಲ್ಲಿ ಡಿ.ಕೆ. ಶಿವಕುಮಾರ್ ನಾಳೆಗಳನ್ನು ಕಳೆಯುತ್ತಿದ್ದಾರೆ….!
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಕ್ಕಲಿಗ ಮತ್ತು ಮುಸ್ಲಿಂ ಸಮುದಾಯದ ಮತಗಳು ಕಾಂಗ್ರೆಸ್ ಪಕ್ಷದ ಕಡೆಗೆ ವಾಲುವಂತೆ ಮಾಡುವಲ್ಲಿ ಶಿವಕುಮಾರ್ ಮಾಡಿದ ತಂತ್ರ ಫಲಕೊಟ್ಟಿದೆ. ಪರಿಣಾಮ ಒಕ್ಕಲಿಗರು, ಲಿಂಗಾಯಿತರು ಮತ್ತು ಮುಸ್ಲಿಂ ಸಮುದಾಯ ಸಾರಾಸಗಟಾಗಿ ಜೆಡಿಎಸ್ ತಿರಸ್ಕರಿಸಿ ಕಾಂಗ್ರೆಸ್ ಅನ್ನು ಅಪ್ಪಿಕೊಂಡಿತು. ಇನ್ನು ಖರ್ಗೆ ಎಐಸಿಸಿ ಅದ್ಯಕ್ಷರಾದ ನಂತರ ಪರಿಶಿಷ್ಟ ಸಮುದಾಯ ಸಹ ಕಾಂಗ್ರೆಸ್ ಕಡೆ ವಾಲಿದೆ. ಇದರ ಒಟ್ಟು ಪರಿಣಾಮ ಕಾಂಗ್ರೆಸ್ 135 ಗಡಿ ದಾಟಲು ನೆರವಾಗಿದೆ.
39 ಲಿಂಗಾಯಿತ ಹಾಗೂ 21 ಒಕ್ಕಲಿಗ ಶಾಸಕರು ಸಿಡಿದು ನಿಂತರೆ ಮುಂದಿನ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಯಾರು ಬೇಕಾದರೂ ಊಹಿಸಬಹುದು. ರಾಜಕೀಯ ನಿಂತ ನೀರಲ್ಲ. ನಾಳೆ ಇದು ಹೀಗೆಯೇ ಇರುವುದಿಲ್ಲ. ಬೂದಿ ಮುಚ್ಚಿದ ಕೆಂಡದಂತಿರುವ ಪ್ರಬಲ ಸಮುದಾಯದ ಆಕ್ರೋಶ ಲೋಕಸಭಾ ಚುನಾವಣೆಗೆ ಮೊದಲು ಅಥವಾ ನಂತರ ಯಾವಾಗ ಬೇಕಾದರು ಆಸ್ಪೋಟವಾಗಿ, ರಾಜಕೀಯ ಅಶಾಂತಿಗೂ ಕಾರಣವಾಗಬಹುದು.