ಬೆಂಗಳೂರು, ಜೂ.7 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಒಂದೇ ವಾರ್ಡ್ ಮತ್ತು ಇಲಾಖೆಯಲ್ಲಿ ದೀರ್ಘಕಾಲದಿಂದ ಕೆಲಸ ಮಾಡುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ವರ್ಗಾವಣೆ ಮಾಡಲು ನಿರ್ಧಾರಿಸಲಾಗಿದ್ದು, ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರ್ಗಾವಣೆ ಸಂಬಂಧ ಹೊಸ ಮಾರ್ಗ ಸೂಚಿ ಸಿದ್ಧಪಡಿಸಲಾಗಿದ್ದು, ಸರ್ಕಾರದ ಅನುಮೋದನೆಗೆ ರವಾನಿಸಲಾಗಿದೆ. ಸರ್ಕಾರ ಒಪ್ಪಿಗೆ ಸೂಚಿಸುತ್ತಿದ್ದಂತೆಯೇ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಹೇಳಿದರು.
ಬಿಬಿಎಂಪಿ ಸಿಬ್ಬಂದಿ ಮತ್ತು ಅಧಿಕಾರಿಗಳ ವರ್ಗಾವಣೆಗೆ ಪ್ರತ್ಯೇಕ ಮಾರ್ಗ ಸೂಚಿಗಳ ಅಗತ್ಯವಿದೆ. ಹೀಗಾಗಿ 2023ರ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಸಾಮಾನ್ಯ ವರ್ಗಾವಣೆಯ ಮಾರ್ಗಸೂಚಿಗೆ ಅನುಮೋದನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮಂಗಳವಾರ ಪ್ರಸ್ತಾವನೆ ಸಲ್ಲಿಸಲಾಗಿದೆ. ವರ್ಗಾವಣೆಗೆ ಸಂಬಂಧಿಸಿದಂತೆ ಪ್ರಸ್ತುತ ಮಾರ್ಗಸೂಚಿಗಳು ಹಳೆಯವಾಗಿವೆ. ಹಲವು ವರ್ಷಗಳಿಂದ ಒಂದೇ ವಾರ್ಡ್‌ಗಳಲ್ಲಿ ಜನರೊಂದಿಗೆ ಸಂಪರ್ಕದಲ್ಲಿರುವ ಅಧಿಕಾರಿಗಳನ್ನು ಬದಲಾಯಿಸಿಬೇಕು, ಅದರಲ್ಲೂ ಎ, ಬಿ,ಸಿ ಗ್ರೂಪ್ ಅಧಿಕಾರಿಗಳ ಬದಲಾವಣೆ ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ 2023ರ ಹೊಸ ಮಾರ್ಗಸೂಚಿ ಅನುಷ್ಠಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದೇ ಅನುಮೋದನೆ ದೊರೆಯುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಬಿಬಿಎಂಪಿಯು ನಗರಾಭಿವೃದ್ಧಿ ಇಲಾಖೆಗೆ ಮಂಗಳವಾರ ಈ ಪ್ರಸ್ತಾವನೆ ಸಲ್ಲಿಸಿದ್ದು, ಅಲ್ಲಿಂದ ಬೆಂಗಳೂರು ಅಭಿವವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅನುಮೋದನೆ ಬಳಿಕ ಈ ಮಾರ್ಗಸೂಚಿಯನ್ನು ಪಾಲಿಕೆಯು ಪರಿಪಾಲನೆ ಮಾಡಲಿದೆ. ಜೂನ್ 15ರ ಒಳಗಾಗಿ ಸಾರ್ವತ್ರಿಕ ವರ್ಗಾವಣೆ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರ ಈಗಾಗಲೇ ಆದೇಶಿಸಿರುವ ಹಿನ್ನಲೆಯಲ್ಲಿ ಜೂ.10ರ ಒಳಗೆ ಬಿಬಿಎಂಪಿಯ ವರ್ಗಾವಣೆ ಮಾರ್ಗಸೂಚಿ ಅನುಮೋದನೆಯಾಗಿ ಪಾಲಿಕೆಗೆ ವಾಪಸ್ ಬರುವ ಸಾಧ್ಯತೆಯಿದೆ. ಅದಾದ ಬಳಿಕ ಜೂ.15ರ ಒಳಗೆ ವರ್ಗಾವಣೆ ಪ್ರಕ್ರಿಯೆ ಮುಗಿಸಬೇಕಿದೆ ಎಂದು ಉನ್ನತ ಮೂಲಗಳು ಬೆಂಗಳೂರು ವೈರ್ ಗೆ ಖಚಿತಪಡಿಸಿದೆ.
ಪಾಲಿಕೆಯಲ್ಲಿ 6,500ಕ್ಕೂ ಹೆಚ್ಚು ಅಧಿಕಾರಿ, ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರದ ನಿಯಮಗಳ ಪ್ರಕಾರ ಎ ಮತ್ತು ಬಿ ಗ್ರೂಪ್ ಅಧಿಕಾರಿಗಳಿಗೆ 2 ವರ್ಷ, ಸಿ ಗ್ರೂಪ್ ಅಧಿಕಾರಿಗಳಿಗೆ 3 ವರ್ಷ ಹಾಗೂ ಡಿ ಗ್ರೂಪ್ ಅಧಿಕಾರಿಗಳಿಗೆ 7 ವರ್ಷ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸಿದವರನ್ನು ವರ್ಗಾವಣೆ ಮಾಡಲು ಅವಕಾಶವಿದೆ. ಅದರಂತೆ ಸರ್ಕಾರದ ನಿಯಮಗಳ ಪ್ರಕಾರ ಒಟ್ಟಾರೆ ವರ್ಗಾವಣೆ ಪ್ರಮಾಣ ಶೇ.6ರಷ್ಟು ಮೀರದಂತೆ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ. ಯಾವ ಗ್ರೂಪ್ ಅಧಿಕಾರಿ, ನೌಕರರನ್ನು ಯಾರು ವರ್ಗಾವಣೆ ಮಾಡುವ ಅಧಿಕಾರ ಹೊಂದಿದ್ದಾರೆ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆಯೂ ಸರ್ಕಾರಕ್ಕೆ ಪ್ರಸ್ತಾವನೆಯಲ್ಲಿ ಕೋರಲಾಗಿದೆ. ಒಂದು ಸ್ತರದ ಹುದ್ದೆಯಲ್ಲಿ ಅವಧಿ ಮೀರಿದ ಅಧಿಕಾರಿಗಳ ಪಟ್ಟಿ ಮಾಡಿದಾಗ ಒಟ್ಟಾರೆ ಶೇ.6ರಕ್ಕೆ ಮೀರಿದಂತೆ ಅಧಿಕಾರಿ, ನೌಕರರನ್ನು ಆ ಸ್ಥಳದಿಂದ ಬದಲಾವಣೆ ಮಾಡಲಾಗುತ್ತದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಾಲಿಕೆಯಲ್ಲಿ 30 ರಿಂದ 35 ವಿವಿಧ ಸ್ತರದ ಹುದ್ದೆಗಳಿದ್ದು, ಅವುಗಳಲ್ಲಿ ಮಾರ್ಗಸೂಚಿ ಪ್ರಕಾರ ಸಾರ್ವತ್ರಿಕ ವರ್ಗಾವಣೆಯಾಗಲಿದೆ. ಒಂದೊಮ್ಮೆ ಸರ್ಕಾರದಿಂದ ಪಾಲಿಕೆ ಪ್ರಸ್ತಾವನೆಗೆ ಅನುಮೋದನೆ ದೊರೆಯುವುದು ತಡವಾದರೆ ಕಳೆದ ಎರಡು ವರ್ಷಗಳಿಂದಲೂ ಸಾರ್ವತ್ರಿಕ ವರ್ಗಾವಣೆಗಳು ಪಾಲಿಕೆಯಲ್ಲಿ ನಡೆದಿರಲಿಲ್ಲ. ಅದರಂತೆ ಈ ವರ್ಷವೂ ವರ್ಗಾವಣೆ ಮುಂದುವರೆಯಬಹುದು ಎನ್ನಲಾಗಿದೆ.
ಸಾರ್ವತ್ರಿಕ ವರ್ಗಾವಣೆ ಸ್ವಾಗತಾರ್ಹ :
“ಬಿಬಿಎಂಪಿಯಲ್ಲಿ ಪಾಲಿಕೆ ಅಧಿಕಾರಿ ಮತ್ತು ನೌಕರರ ಸಾರ್ವತ್ರಿಕ ವರ್ಗಾವಣೆ 2023ರ ಮಾರ್ಗಸೂಚಿಯಂತೆ ಶೇ.6ಕ್ಕೆ ಮೀರದಂತೆ ವರ್ಗಾವಣೆ ಮಾಡುತ್ತಿರುವುದು ಸ್ವಾಗತಾರ್ಹ. ಅದರಲ್ಲೂ 10 ವರ್ಷಕ್ಕಿಂತಲೂ ಅಧಿಕ ಅವಧಿಗೆ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುವವರನ್ನು ವರ್ಗಾವಣೆ ಮಾಡುವುದು ಪ್ರಮುಖ ಉದ್ದೇಶವಾಗಿದೆ. ಕಳೆದ 2021 ಹಾಗೂ 2022ರಲ್ಲೂ ಕಂದಾಯ ವಸೂಲಿ, ಚುನಾವಣೆ ಮತ್ತಿತರ ಕಾರಣಕ್ಕೆ ಸಾರ್ವತ್ರಿಕ ವರ್ಗಾವಣೆಯಾಗಿರಲಿಲ್ಲ. ಈ ವರ್ಷವಾದರೂ, ಸರ್ಕಾರದಿಂದ ಸಕಾಲಕ್ಕೆ ಪ್ರಸ್ತಾವನೆಗೆ ಅನುಮೋದನೆ ದೊರೆತರೆ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ. ಇಲ್ಲವಾದಲ್ಲಿ ವರ್ಗಾವಣೆ ಮತ್ತೆ ಮುಂದಕ್ಕೆ ಹೋಗಬಹುದು. ಎಲ್ಲವೂ ಸರ್ಕಾರ ಎಷ್ಟು ಬೇಗ ಪಾಲಿಕೆ ಪ್ರಸ್ತಾವನೆಗೆ ಅನುಮೋದನೆ ನೀಡಲಿದೆ ಎಂಬುದರ ಮೇಲೆ ಅವಲಂಬಿತವಾಗಲಿದೆ.”
- ಅಮೃತ್ ರಾಜ್, ಅಧ್ಯಕ್ಷರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಸಂಘ