ಬೆಂಗಳೂರು, ಜೂ.6 www.bengaluruwire.com : ರಾಜ್ಯ ಸರ್ಕಾರವು “ಶಕ್ತಿ ಯೋಜನೆ”ಯಡಿ ಕರ್ನಾಟಕದ ಎಲ್ಲಾ ಮಹಿಳೆಯರಿಗೂ ಉಚಿತವಾಗಿ ನಾಲ್ಕು ಸಾರಿಗೆ ಸಂಸ್ಥೆಗಳ ಬಸ್ ಗಳಲ್ಲಿ ಪ್ರಯಾಣಿಸಲು ಅಧಿಕೃತವಾಗಿ ಸೋಮವಾರ ಆದೇಶ ಹೊರಡಿಸಿದೆ. ಜೂ.11ರಿಂದ ಈ ಯೋಜನೆಯು ಅಧಿಕೃತವಾಗಿ ಜಾರಿಗೆ ಬರುವುದಾಗಿ ತಿಳಿಸಿದೆ.
ಈ ಯೋಜನೆ ಜಾರಿಗೆ ಸಂಬಂಧಿಸಿದಂತೆ ಫಲಾನುಭವಿಗಳಿಂದ ಸೇವಾ ಸಿಂಧು ಮೂಲಕ ಅರ್ಜಿಗಳನ್ನು ಪಡೆದು, “ಶಕ್ತಿ ಸ್ಮಾರ್ಟ್ ಕಾರ್ಡ್ ಗಳನ್ನು ವಿತರಿಸುವ ಪ್ರಕ್ರಿಯೆಯನ್ನು ಮುಂದಿನ ಮೂರು ತಿಂಗಳೊಳಗಾಗಿ ಪೂರ್ಣಗೊಳಿಸತಕ್ಕದ್ದು ಎಂದು ಹೇಳಲಾಗಿದೆ.
“ಶಕ್ತಿ ಯೋಜನೆ”ಯಡಿ ರಾಜ್ಯದ ಎಲ್ಲಾ ಮಹಿಳೆಯರು ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕ.ರಾ.ರ.ಸಾ.ನಿಗಮ KSRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬೆಂ.ಮ.ಸಾ.ಸಂಸ್ಥೆ – BMTC), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ವಾ.ಕ.ರ.ಸಾ.ಸಂಸ್ಥೆ NWSRTC) ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ (ಕ.ಕ.ರ.ಸಾ.ನಿಗಮ – KKRTC) ಸಾಮಾನ್ಯ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯ ಒದಗಿಸಲು ತಾತ್ವಿಕ ಅನುಮೋದನೆ ನೀಡಿದೆ.
ಪ್ರಸ್ತುತ ರಾಜ್ಯ ಸರ್ಕಾರದ ‘ಶಕ್ತಿ ಯೋಜನೆಯಡಿ ರಾಜ್ಯದ ಎಲ್ಲಾ ಮಹಿಳೆಯರು (ವಿದ್ಯಾರ್ಥಿನಿಯರು ಸೇರಿದಂತೆ) ಮತ್ತು ಲಿಂಗತ್ವ ಅಲ್ಪಸಂಖ್ಯಾತರು, ನಗರ, ಸಾಮಾನ್ಯ ಮತ್ತು ವೇಗಧೂತ ಸಾರಿಗೆಗಳಲ್ಲಿ (ಎ.ಸಿ ಬಸ್ ಮತ್ತು ಐಷಾರಾಮಿ (Luxury) ಬಸ್‌ಗಳನ್ನು ಹೊರತುಪಡಿಸಿ) ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡುವ ಬಗ್ಗೆ ಪರಿಶೀಲಿಸಿ, ಸರ್ಕಾರವು ಈ ಕೆಳಕಂಡ ಷರತ್ತುಗಳನ್ನು ವಿಧಿಸಿ ಆದೇಶಿಸಿದೆ :
1. ರಾಜ್ಯದೊಳಗಿನ ಪ್ರಯಾಣಕ್ಕೆ ಮಾತ್ರ (ಎಲ್ಲಾ ಅಂತರ ರಾಜ್ಯ ಸಾರಿಗೆ ಅನುಸೂಚಿಗಳನ್ನು ಹೊರತುಪಡಿಸಿ) ಈ ಯೋಜನೆಯು ಅನ್ವಯಿಸತಕ್ಕದ್ದು.
2. ಐಷಾರಾಮಿ (Luxury) ಬಸ್‌ಗಳಾದ ರಾಜಹಂಸ, ನಾನ್-ಎ.ಸಿ. ಸೀಪರ್ ಹಾಗೂ ವಜ್ರ ವಾಯುವಜ್ರ ಐರಾವತ, ಐರಾವತ ಕ್ಲಬ್ ಕ್ಲಾಸ್, ಐರಾವತ ಗೋಲ್ ಕ್ಲಾಸ್, ಅಂಬಾರಿ, ಅಂಬಾರಿ ಗ್ರೀಮ್ ಕ್ಲಾಸ್, ಅಂಬಾರಿ ಉತ್ಸವ್, ಫ್ರ ಬಸ್, ಇವಿ ಪವರ್ ಪ್ಲಸ್ (ಎ.ಸಿ. ಬಸ್‌ಗಳು) ಇವುಗಳಿಗೆ ಈ ಯೋಜನೆಯು ಅನ್ವಯಿಸುವುದಿಲ್ಲ.
3. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ಹೊರತುಪಡಿಸಿ ಉಳಿದ ರಸ್ತೆ ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಎಲ್ಲಾ ಬಸ್‌ಗಳಲ್ಲಿ (ಅಂತರರಾಜ್ಯ ಎ.ಸಿ. ಮತ್ತು ಐಷಾರಾಮಿ (Luxury) ಬಸ್‌ಗಳನ್ನು ಹೊರತುಪಡಿಸಿ) ಶೇ.50ರಷ್ಟು ಆಸನಗಳನ್ನು ಪುರುಷರಿಗೆ ಕಾಯ್ದಿರಿಸತಕ್ಕದ್ದು.
4. ಈ ಯೋಜನೆಯಡಿ ನಾಲ್ಕು ಸಾರಿಗೆ ಸಂಸ್ಥೆಗಳಿಗೆ ತಗಲುವ ವೆಚ್ಚವನ್ನು ಸರ್ಕಾರದಿಂದ ಶೂನ್ಯ ಟಿಕೆಟ್/ಶಕ್ತಿ ಸ್ಮಾರ್ಟ್ ಕಾರ್ಡ್ ದತ್ತಾಂಶವನ್ನು ಆಧರಿಸಿ ಭರಿಸಲಾಗುವುದು. (Reimbursement to Road Transport Corporation would be made on the basis of actual distance travelled by women passengers)
5. ಫಲಾನುಭವಿಗಳಿಂದ ಸೇವಾ ಸಿಂಧು ಮೂಲಕ ಅರ್ಜಿಗಳನ್ನು ಪಡೆದು, “ಶಕ್ತಿ ಸ್ಮಾರ್ಟ್ ಕಾರ್ಡ್ ಗಳನ್ನು ವಿತರಿಸುವ ಪ್ರಕ್ರಿಯೆಯನ್ನು ಮುಂದಿನ ಮೂರು ತಿಂಗಳೊಳಗಾಗಿ ಪೂರ್ಣಗೊಳಿಸತಕ್ಕದ್ದು.
6. “ಶಕ್ತಿ ಸ್ಮಾರ್ಟ್ ಕಾರ್ಡ್’ನ್ನು ವಿತರಿಸುವವರೆಗೆ ಭಾರತ ಸರ್ಕಾರ/ಕರ್ನಾಟಕ ಸರ್ಕಾರದ ಇಲಾಖೆ/ಸರ್ಕಾರಿ ಸ್ವಾಮ್ಯದ ಕಛೇರಿಗಳಿಂದ ವಿತರಿಸಿರುವ ಭಾವಚಿತ್ರ ಹಾಗೂ ವಾಸದ ವಿಳಾಸವಿರುವ ಗುರುತಿನ ಚೀಟಿಗಳನ್ನು ಶೂನ್ಯ ಟಿಕೆಟ್ ವಿತರಿಸುವ ಸಂದರ್ಭದಲ್ಲಿ ಪರಿಗಣಿಸತಕ್ಕದ್ದು.