ಬೆಂಗಳೂರು, ಜೂ.5 www.bengaluruwire.com : ಐಟಿ ಸಿಟಿ ಬೆಂಗಳೂರಿನಲ್ಲಿ ತಡರಾತ್ರಿ 1 ಗಂಟೆಯವರೆಗೆ ಎಲ್ಲಾ ಹೋಟೆಲ್, ಬೇಕರಿ, ಸ್ವೀಟ್ ಸ್ಟಾಲ್ ಹಾಗೂ ಐಸ್ ಕ್ರೀಮ್ ಪಾರ್ಲರ್ ಗಳನ್ನು ತೆರೆಯಲು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಅನುಮತಿ ನೀಡಿದ್ದಾರೆ. ಆದರೆ ಅದೇ ರೀತಿ ದಿನದ 24 ಗಂಟೆ ಇವುಗಳನ್ನು ತೆರೆದಿಡಲು ರಾಜ್ಯ ಸರ್ಕಾರ ಅನುಮತಿ ನೀಡಿದ್ದರೂ ಪೊಲೀಸ್ ಇಲಾಖೆ ಈ ಬಗ್ಗೆ ಅನುಮತಿ ಕೊಟ್ಟಿಲ್ಲ. ಇದಕ್ಕೆ ಅವಕಾಶ ಕೊಡಿ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೋಟೆಲುಗಳ ಸಂಘ ಗೃಹ ಸಚಿವರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ದಿನದ 24 ಗಂಟೆಗಳ ಕಾಲ ಹೋಟೆಲ್, ಬೇಕರಿ ಮತ್ತಿತರ ಅಂಗಡಿಗಳನ್ನು ತೆರೆದಿಡಲು ಮಾರ್ಗೂಸೂಚಿ ಹೊರಡಿಸಿದೆ. ಇದರ ಜೊತೆಗೆ ಕೇರಳ, ತಮಿಳುನಾಡು ಹೈಕೋರ್ಟ್ ಗಳು ಕೂಡ ಇದರ ಬಗ್ಗೆ ಸಮಂಜಸ ತೀರ್ಪು ಕೊಟ್ಟಿದೆ. ದೇಶದ ಇತರ ರಾಜ್ಯಗಳಾದ ದೆಹಲಿ, ತಮಿಳುನಾಡು, ಕೇರಳ, ಗುಜರಾತ್ ಮುಂತಾದ ರಾಜ್ಯಗಳಲ್ಲಿ ಈಗಾಗಲೇ 24/7 ಹೋಟೆಲ್ ತೆರದಿಡಲು ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಬಹಳಷ್ಟು ಜನರಿಗೆ ಅನುಕೂಲವಾಗಿದೆ. ಆದರೆ ಬೆಂಗಳೂರಿನಲ್ಲಿ ಪೊಲೀಸರು ಇದಕ್ಕೆ ಅವಕಾಶ ಕೊಟ್ಟಿಲ್ಲ ಎಂದು ಸರ್ಕಾರಕ್ಕೆ ಬರೆದ ಪತ್ರದಲ್ಲಿ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಹೇಳಿದ್ದಾರೆ.
ವ್ಯಾಪಾರವನ್ನು ಹೆಚ್ಚಿಸಲು ಮತ್ತು ಗ್ರಾಹಕರಿಗೆ ಹೆಚ್ಚಿನ ಸೇವೆ ಒದಗಿಸುವ ಉದ್ದೇಶದಿಂದ, ಸಂಘವು ಕಳೆದ ಒಂದು ವರ್ಷದಿಂದ ಈ ಬಗ್ಗೆ ಮನವಿ ಮಾಡುತ್ತಿದೆ. ಆದರೆ, ಪೊಲೀಸ್ ಇಲಾಖೆ ಇದಕ್ಕೆ ಒಪ್ಪಿಗೆ ನೀಡುತ್ತಿಲ್ಲ. ಇನ್ನಾದರೂ ಸರ್ಕಾರ ಹೊಟೆಲ್ ಉದ್ಯಮಿಗಳಿಗೆ ನೆರವಾಗಬೇಕು. ನಾವು ಈಗ ಮತ್ತೊಮ್ಮೆ ಹೊಸ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಸರ್ಕಾರ ಮತ್ತು ಪೊಲೀಸರು ನಮ್ಮ ಮನವಿಗೆ ಸ್ಪಂದಿಸುತ್ತಾರೆ ಎಂಬ ನಂಬಿಕೆಯಿದೆ. ಒಂದೊಮ್ಮೆ 30 ದಿನಗಳಲ್ಲಿ ನಮಗೆ ಅನುಮತಿ ನೀಡದಿದ್ದರೇ ಕಾನೂನುಬದ್ಧವಾಗಿ ಹೋರಾಟ ನಡೆಸಲು ಸಿದ್ದರಾಗಿದ್ದೇವೆ ಎಂದು ಹೇಳಿದರು.
ಹಾಲು ಮತ್ತು ದಿನಪತ್ರಿಕೆ ವಿತರಣೆ ಮಾಡುವವರು, ತರಕಾರಿ, ಹೂವು, ಹಣ್ಣು ಮುಂತಾದವುಗಳನ್ನು ಮಾರ್ಕೆಟ್ ಗೆ ತರುವ ರೈತರು ಹಾಗೂ ವ್ಯಾಪಾರಿಗಳು, ಶಿಫ್ಟ್ ಗಳಲ್ಲಿ ಕೆಲಸಕ್ಕೆ ಹೋಗುವವರು ಮುಂತಾದವರಿಗೆ ಅನುಕೂಲವಾಗಲಿದೆ. ಇಂತಹವರಿಗೆ ಆಹಾರದ ಅವಶ್ಯಕತೆಯಿರುತ್ತದೆ. ಇದಲ್ಲದೆ ಬಹಳಷ್ಟು ಪ್ರವಾಸಿಗರು ಬಸ್, ರೈಲು ಹಾಗೂ ವಿಮಾನದ ಮೂಲಕ ರಾತ್ರಿ ನಗರಕ್ಕೆ ಬಂದಿಳಿಯುತ್ತಾರೆ. ಅಲ್ಲದೆ ನಾಗರೀಕರಿಗೆ ಅಗತ್ಯ ಸೇವೆ ಒದಗಿಸುವ ಪೊಲೀಸ್, ಆಂಬ್ಯುಲೆನ್ಸ್, ವೈದ್ಯಕೀಯ ಸಿಬ್ಬಂದಿಯೂ ಕೂಡ ರಾತ್ರಿ ವೇಳೆ ಕಾರ್ಯನಿರ್ವಹಿಸುತ್ತಿದ್ದು, ಅವರಿಗೂ 24/7 ಹೋಟೆಲ್ ಹಾಗೂ ಸಂಬಂಧಿಸಿದ ಆಹಾರ ಪೂರೈಸುವ ಉದ್ಯಮ ತೆರೆದಿದ್ದರೆ ಸಹಾಯಕವಾಗಲಿದೆ. ಅಲ್ಲದೆ ದಿನದ 24 ಗಂಟೆ ಹಾಗೂ ವಾರದ 7 ದಿನವೂ ಹೋಟೆಲ್, ಬೇಕರಿ, ಮತ್ತಿತರ ಸಂಬಂಧಿಸಿದ ಅಂಗಡಿಗಳು ತೆರೆದಿದ್ದರೆ ಆ ಮೂಲಕ ಹೊಸ ಉದ್ಯಮಗಳು ಹಾಗೂ ಹೆಚ್ಚಿನ ಉದ್ಯೋಗವಕಾಶಗಳು ಸೃಷ್ಟಿಯಾಗುತ್ತದೆ ಎಂದು ತಮ್ಮ ಬೇಡಿಕೆಗಳಿಗೆ ಪತ್ರದಲ್ಲಿ ಸಮರ್ಥನೆ ನೀಡಿದ್ದಾರೆ.
‘ನೂತನ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಹೋಟೆಲ್, ಬೇಕರಿ, ಮತ್ತಿತರ ಅಂಗಡಿಗಳನ್ನು ತೆರೆಯಲು ಅನುಮತಿ ನೀಡುವಂತೆ ಕೋರಿ ಮನವಿ ಸಲ್ಲಿಸಿದ್ದೇವೆ. ಹೊಸ ಸರ್ಕಾರ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ ಎಂಬ ನಂಬಿಕೆಯಿದೆ. ಈಗಾಗಲೇ ದೇಶದ ಹಲವು ಮೆಟ್ರೋ ನಗರಗಳಲ್ಲಿ 24/7 ಹೋಟೆಲೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಇಲ್ಲೂ ಕೂಡ ಈ ಅವಕಾಶ ಪೊಲೀಸ್ ಇಲಾಖೆಯಿಂದ ದೊರೆತಲ್ಲಿ. ಈ ಉದ್ಯಮವೂ ಚೇತರಿಕೊಳ್ಳುತ್ತದೆ ಅಲ್ಲದೆ ಉದ್ಯೋಗವಕಾಶ, ನಾಗರೀಕರಿಗೆ ರಾತ್ರಿ ಹೊತ್ತು ಆಹಾರ, ನೀರು, ಶೌಚಾಲಯ ಬಳಸಲು ಅನುಕೂಲವಾಗುತ್ತದೆ. ಸರ್ಕಾರದಿಂದ ಅನುಮತಿ ದೊರೆತರೆ ನಗರದಲ್ಲಿನ ಶೇ.20 ರಿಂದ 25ರಷ್ಟು ಹೋಟೆಲ್ ತತ್ಸಂಬಂಧಿ ಅಂಗಡಿಗಳು ತೆರೆಯಬಹುದು.’ ಎಂದು ಬೆಂಗಳೂರು ಹೋಟೆಲುಗಳ ಸಂಘದ ಗೌರವ ಕಾರ್ಯದರ್ಶಿ ವೀರೇಂದ್ರ ಕಾಮತ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.