ಬೆಂಗಳೂರು, ಜೂ.4 www.bengaluruwire.com : ಕಾಂಗ್ರೆಸ್ ಸರ್ಕಾರದ ಪ್ರಣಾಳಿಕೆ ಯಲ್ಲಿನ ಐದು ಗ್ಯಾರಂಟಿಗಳ ಪೈಕಿ, ‘ಯುವ ನಿಧಿ ಯೋಜನೆ’ಯಡಿ ನಿರುದ್ಯೋಗ ಭತ್ಯೆ ಮತ್ತು ಅನ್ನಭಾಗ್ಯ ಯೋಜನೆಯಡಿ ಅಂತ್ಯೋದಯ ಹಾಗೂ ಆದ್ಯತಾ (ಬಿಪಿಎಲ್) ಕುಟುಂಬಗಳ ಪ್ರತಿ ಸದಸ್ಯರಿಗೆ ತಿಂಗಳಿಗೆ ತಲಾ 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ವಿತರಿಸಲು ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗಳು ಎರಡೂ ಯೋಜನೆಗಳ ಅನುಷ್ಠಾನಕ್ಕೆ ಪ್ರತ್ಯೇಕ ಆದೇಶಗಳನ್ನು ಹೊರಡಿಸಿವೆ. ಶುಕ್ರವಾರ ನಡೆದ ಸಂಪುಟ ಸಭೆಯ ನಿರ್ಣಯದಂತೆ ಈ ಆದೇಶಗಳನ್ನು ಮಾಡಿದೆ.
ಪದವಿ ಹಾಗೂ ಡಿಪ್ಲೊಮೊ ಕೋರ್ಸ್ ಗಳನ್ನು 2023ರಲ್ಲಿ ಪೂರೈಸುವವರಿಗೆ ‘ಯುವ ನಿಧಿ’ ಯೋಜನೆಯಡಿ ಅನುಕ್ರಮವಾಗಿ ತಿಂಗಳಿಗೆ 3,000 ಮತ್ತು ಕೆ 1,500 ನಿರುದ್ಯೋಗ ಭತ್ಯೆ ನೀಡಲಾಗುತ್ತದೆ. ಅನ್ನಭಾಗ್ಯ ಯೋಜನೆಯಡಿ ಅಂತ್ಯೋದಯ ಹಾಗೂ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳ ಎಲ್ಲ ಸದಸ್ಯರಿಗೆ ಜುಲೈ ತಿಂಗಳಿನಿಂದ ತಲಾ 10 ಕೆ.ಜಿ. ಅಕ್ಕಿ ಜತೆಗಿನ ಹಳೆಯ ವಿತರಿಸಲಾಗುತ್ತದೆ.
ಯುವನಿಧಿ ಯೋಜನೆಯ ಮಾರ್ಗಸೂಚಿಗಳು ಹೀಗಿವೆ :
*ಉತ್ತೀರ್ಣರಾದ ನಂತರ ಅರು ತಿಂಗಳವರೆಗೂ ಉದ್ಯೋಗ ದೊರಕದ ಕನ್ನಡಿಗರಿಗೆ ಯೋಜನೆ ಅನ್ವಯವಾಗುತ್ತದೆ.
*ಎರಡು ವರ್ಷಗಳವರೆಗೆ ಯೋಜನೆ ಯಡಿ ನಿರುದ್ಯೋಗ ಭತ್ಯೆ ಪಡೆಯ ಬಹುದು. ಎರಡು ವರ್ಷಕ್ಕೂ ಮೊದಲೇ ಉದ್ಯೋಗ ದೊರೆತರೆ ಭತ್ಯೆ ಪಾವತಿ ಸ್ಥಗಿತಗೊಳಿಸಲಾಗುತ್ತದೆ.
*ನಿರುದ್ಯೋಗ ಸ್ಥಿತಿಯ ಸ್ವತಂತ್ರ ಪರಿಶೀಲನೆ ನಡೆಸಲಾಗು ತ್ತದೆ. ಉದ್ಯೋಗ ದೊರಕಿದ ಕುರಿತು ತಪ್ಪು ಮಾಹಿತಿ ನೀಡಿದರೆ ಅಥವಾ ಘೋಷಣೆ ಮಾಡದಿದ್ದರೆ ದಂಡ ವಿಧಿಸಲಾಗುತ್ತದೆ.
*ನೇರ ನಗದು ಪಾವತಿ ವ್ಯವಸ್ಥೆ ಮೂಲಕ ನಿರುದ್ಯೋಗ ಭತ್ಯೆ ಪಾವತಿ ಮಾಡಲಾಗುತ್ತದೆ. ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಪಡೆದಿರುವವರು. ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ.
ಯಾರು ಯುವನಿಧಿ ಯೋಜನೆಗೆ ಅರ್ಹರಲ್ಲ :
*ಸರ್ಕಾರಿ ಅಥವಾ ಖಾಸಗಿ ವಲಯ ದಲ್ಲಿ ಉದ್ಯೋಗ ಪಡೆದಿರುವವರು.
*ರಾಜ್ಯ ಮತ್ತು ಕೇಂದ್ರದ ವಿವಿಧ ಯೋಜನೆಗಳಡಿ ಹಾಗೂ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಸ್ವಯಂ ಉದ್ಯೋಗ ಹೊಂದಿದವರು.
*ಪದವಿ ಅಥವಾ ಡಿಪ್ಲೊಮಾ ನಂತರ ಉನ್ನತ ವ್ಯಾಸಂಗಕ್ಕೆ ಪ್ರವೇಶ ಪಡೆದಿರುವವರು.
*ಶಿಶಿಕ್ಷು (ಅಪ್ರೆಂಟಿಸ್‌ಶಿಪ್) ವೇತನ ಪಡೆಯುತ್ತಿರುವವರು.
ಅನ್ನಭಾಗ್ಯ ಯೋಜನೆ ಮಾರ್ಗಸೂಚಿ ಈ ರೀತಿಯಿದೆ :
*ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಪ್ರತಿ ಕುಟುಂಬಕ್ಕೆ ಕೇಂದ್ರ ಸರ್ಕಾರ ತಿಂಗಳಿಗೆ 35 ಕೆ.ಜಿ. ಆಹಾರಧಾನ್ಯ ಉಚಿತವಾಗಿ ಒದಗಿಸುತ್ತಿದೆ.
*ಇನ್ನು ಮುಂದೆ ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಕುಟುಂಬಗಳಲ್ಲಿ ಮೂವರು ಸದಸ್ಯರಿದ್ದರೆ ತಿಂಗಳಿಗೆ 35 ಕೆ.ಜಿ. ಆಹಾರ ಧಾನ್ಯ ಉಚಿತವಾಗಿ ದೊರೆಯಲಿದೆ.
*ಈ ಕುಟುಂಬಗಳಲ್ಲಿ ನಾಲ್ಕು ಜನರಿದ್ದರೆ ತಲಾ 10 ಕೆ.ಜಿ.ಯಂತೆ ಒಟ್ಟು 40 ಕೆ.ಜಿ., ಐವರು ಇದ್ದರೆ ಒಟ್ಟು 50 ಕೆ.ಜಿ. ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಪ್ರತಿ ವ್ಯಕ್ತಿಗೆ ಹತ್ತು ಕೆ.ಜಿ.ಯಂತೆ ಉಚಿತ ಅಕ್ಕಿ ಸಿಗಲಿದೆ.
*ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳಲ್ಲಿ ಪ್ರತಿ ಸದಸ್ಯರಿಗೆ ಹತ್ತು ಕೆ.ಜಿ.ಯಂತೆ ಉಚಿತವಾಗಿ ಆಹಾರ ಧಾನ್ಯ ವಿತರಿಸಲಾಗುತ್ತದೆ.
*ಅಂತ್ಯೋದಯ ಪಡಿತರ ಚೀಟಿ ಹೊಂದಿದ ಕುಟುಂಬಗಳಿಗೆ ತಲಾ 35 ಕೆ.ಜಿ. ಹಾಗೂ ಬಿಪಿಎಲ್ ಕುಟುಂಬಗಳ ಪ್ರತಿ ಸದಸ್ಯರಿಗೆ ತಲಾ ಐದು ಕೆ.ಜಿ. ಆಹಾರ ಧಾನ್ಯವನ್ನು ಕೇಂದ್ರ ಸರ್ಕಾರವು ಆಹಾರ ಭದ್ರತಾ ಕಾಯ್ದೆಯಡಿ ಉಚಿತವಾಗಿ ಒದಗಿಸುತ್ತಿದೆ. ಹೆಚ್ಚುವರಿ ಅಹಾರ ಧಾನ್ಯದ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ.
ಶೇ.96ರಷ್ಟು ಗ್ರಾಹಕರಿಗೆ “ಗೃಹಜ್ಯೋತಿ” ಭಾಗ್ಯ ಸಿಗಲಿದೆ :
ರಾಜ್ಯದಲ್ಲಿ 2.14 ಕೋಟಿ ವಿದ್ಯುತ್ ಗ್ರಾಹಕರಿದ್ದಾರೆ. ಅವರ ಪೈಕಿ ಶೇ 94ರಿಂದ 96ರಷ್ಟು ಗ್ರಾಹಕರಿಗೆ “ಗೃಹಜ್ಯೋತಿ” ಯೋಜನೆ ಲಾಭ ಸಿಗಲಿದೆ. ಯೋಜನೆಗೆ ವಾರ್ಷಿಕ 13 ಸಾವಿರ ಕೋಟಿ ರೂಪಾಯಿ ಆಗಲಿದೆ’ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಇಲ್ಲಿ ಮಾಲೀಕರು, ಬಾಡಿಗೆದಾರರು ಎನ್ನುವ ವಿಷಯ ಬಾರದು. ಪ್ರತಿ ಮನೆಯ ವಿದ್ಯುತ್ ಮೀಟರ್ ಆರ್.ಆರ್. ನಂಬರ್ ಮೇಲೆ ಬಿಲ್ ಬರುವುದರಿಂದ ಬಾಡಿಗೆದಾರರಿಗೂ ಯೋಜನೆಯ ಪ್ರಯೋಜನ ಸಿಗಲಿದೆ. ಇಲಾಖೆಗೆ ಸರ್ಕಾರ ಅನುದಾನ ಕೊಡಲಿದೆ’ ಎಂದು ತಿಳಿಸಿದ್ದಾರೆ.
’12 ತಿಂಗಳು ಎಷ್ಟು ಯೂನಿಟ್ ವಿದ್ಯುತ್ ಬಳಸಿದ್ದಾರೆಂದು ಲೆಕ್ಕ ಮಾಡಿ, 200 ಯೂನಿಟ್‌ವರೆಗೆ ವಿನಾಯಿತಿ ಕೊಡಲು ನಿರ್ಧರಿಸಿದ್ದೇವೆ. 12 ತಿಂಗಳ ಸರಾಸರಿ ತೆಗೆದುಕೊಳ್ಳಲು ಸ್ಪಷ್ಟ ಕಾರಣವಿದೆ. ಬೇಸಿಗೆ ಹಾಗೂ ಚಳಿಗಾಲದಲ್ಲಿ ಬಳಕೆಯಾಗುವ ವಿದ್ಯುತ್ ಪ್ರಮಾಣದಲ್ಲಿ ವ್ಯತ್ಯಾಸವಿರುತ್ತದೆ. ಆದ್ದರಿಂದ ಗ್ರಾಹಕರು ಬಳಸುವ ವಿದ್ಯುತ್ ಮೇಲೆ ಶೇ.10ರಷ್ಟು ಹೆಚ್ಚು ಬಳಕೆಗೆ ಅವಕಾಶ ಕೊಟ್ಟಿದ್ದೇವೆ. 200 ಯೂನಿಟ್ ಬಳಿಕ ಎಷ್ಟು ಹೆಚ್ಚು ಬಳಕೆ ಮಾಡುತ್ತಾರೋ ಅದಕ್ಕೆ ಕರೆಂಟ್ ಬಿಲ್ ಕಟ್ಟಬೇಕಾಗುತ್ತದೆ’ ಎಂದಿದ್ದಾರೆ.