ಕೋಲ್ಕತಾ, ಜೂ.3 www.bengaluruwire.com :
ಒಡಿಶಾದ ಬಾಲಸೋರ್‌ನಲ್ಲಿ ಮೂರು ರೈಲುಗಳ ಭೀಕರ ಅಪಘಾತದಲ್ಲಿ ಕನಿಷ್ಠ 261 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 900 ಜನರು ಗಾಯಗೊಂಡಿದ್ದಾರೆ. ಇಷ್ಟು ದೊಡ್ಡ ರೈಲು ಅವಘಡವು ಕಳೆದ 20 ವರ್ಷಗಳಲ್ಲಿ ನಡೆದ ದೇಶದ ಅತ್ಯಂತ ಭೀಕರ ರೈಲು ಅಪಘಾತವಾಗಿದೆ ಎಂದು ರೈಲ್ವೇ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ರೈಲು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಮತ್ತು ಕಟಕ್‌ನ ಆಸ್ಪತ್ರೆಗಳಲ್ಲಿ ಗಾಯಗೊಂಡವರನ್ನು ಭೇಟಿ ಮಾಡಲಿದ್ದಾರೆ. ಅಪಘಾತದಲ್ಲಿ ಬೆಂಗಳೂರು- ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲು ಸೇರಿವೆ. ಪ್ರಸ್ತುತ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಪುನಃಸ್ಥಾಪನೆ ಕಾರ್ಯ ಆರಂಭವಾಗಿದೆ.
ರೈಲು ನಂ.12841 ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ರೈಲು ನಂ.12864 ಸರ್ ಎಂ ವಿಶ್ವೇಶ್ವರಯ್ಯ-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಜೂ.2 ರಂದು ಸುಮಾರು 6.55 ಗಂಟೆಗೆ ಬಹನಾಗ ಬಜಾರ್ ರೈಲು ನಿಲ್ದಾಣದ ಬಳಿ ಹಳಿತಪ್ಪಿತು.
ಇಲ್ಲಿಯವರೆಗೆ ಬಂದಿರುವ ಮಾಹಿತಿ ಪ್ರಕಾರ 261 ಮಂದಿ ಸಾವನ್ನಪ್ಪಿದ್ದಾರೆ. ಗಾಯಗೊಂಡ ಪ್ರಯಾಣಿಕರನ್ನು ಗೋಪಾಲ್‌ಪುರ, ಖಾಂತಪಾರಾ, ಬಾಲಸೋರ್, ಭದ್ರಕ್ ಮತ್ತು ಸೊರೊ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ರೈಲ್ವೇ ಸಚಿವರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಮತ್ತು ಪುನಃಸ್ಥಾಪನೆ ಕಾರ್ಯವನ್ನು ನೋಡಿಕೊಳ್ಳುತ್ತಿದ್ದಾರೆ. ರೈಲ್ವೇ ಮಂಡಳಿಯ ಅಧ್ಯಕ್ಷರು ಕಟಕ್ ಆಸ್ಪತ್ರೆಯಲ್ಲಿದ್ದಾರೆ ಮತ್ತು ಡಿಜಿ/ಆರೋಗ್ಯ, ರೈಲ್ವೇ ಮಂಡಳಿಯು ಬಾಲಸೋರ್ ಆಸ್ಪತ್ರೆಯಲ್ಲಿ ಗಾಯಗೊಂಡಿರುವ ಪ್ರಯಾಣಿಕರ ಚಿಕಿತ್ಸೆಯನ್ನು ಮೇಲ್ವಿಚಾರಣೆ ಮಾಡುತ್ತಿದೆ. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 10 ಲಕ್ಷ, ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ಹಾಗೂ ಸಣ್ಣಪುಟ್ಟ ಗಾಯಗಳಾದವರಿಗೆ 50,000 ರೂಪಾಯಿ ಪರಿಹಾರ ನೀಡುವುದಾಗಿ ವೈಷ್ಣವ್ ಘೋಷಿಸಿದ್ದಾರೆ.
ರೈಲು ದುರಂತದ ಕುರಿತು ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಭೀಕರ ರೈಲು ದುರಂತದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಒಂದು ದಿನದ ಶೋಕಾಚರಣೆಯನ್ನು ಘೋಷಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಅಪಘಾತದ ಬಗ್ಗೆ ತಮ್ಮ ದುಖಃ ವ್ಯಕ್ತಪಡಿಸಿದ್ದಾರೆ ಮತ್ತು ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50,000 ರೂಪಾಯಿಗಳನ್ನು ಪ್ರಧಾನ ಮಂತ್ರಿಯವರ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ಘೋಷಿಸಿದರು.
ಅಪಘಾತವು ಒಂದು ರೈಲು ಇನ್ನೊಂದಕ್ಕೆ ತುಂಬಾ ಬಲವಾಗಿ ಡಿಕ್ಕಿ ಹೊಡೆದು, ರೈಲು ಗಾಡಿಗಳು ಗಾಳಿಯಲ್ಲಿ ಎತ್ತರಕ್ಕೆ ಹಾರಿ ತಿರುಚಿದ ನಂತರ ಹಳಿಗಳು ಸಂಪೂರ್ಣವಾಗಿ ಜಖಂಗೊಂಡವು. ಅಲ್ಲದೆ ಮತ್ತೊಂದು ರೈಲು ಗಾಡಿಯನ್ನು ಸಂಪೂರ್ಣವಾಗಿ ಅದರ ಛಾವಣಿಯ ಮೇಲೆ ಎಸೆಯಲ್ಪಟ್ಟಿದ್ದರಿಂದ, ಪ್ರಯಾಣಿಕರ ವಿಭಾಗದ ಕೋಚ್ ಗಳಿಗೆ ತೀವ್ರ ರೀತಿಯ ಹಾನಿಯಾಯಿತು.
ರೈಲ್ವೆ ಮಂಡಳಿ ಮೂಲಸೌಕರ್ಯ ಸದಸ್ಯರು ಹಳಿತಪ್ಪಿದ ಸ್ಥಳದಲ್ಲಿ ಉಪಸ್ಥಿತರಿದ್ದು, ಪುನಃಸ್ಥಾಪನೆ ಕಾರ್ಯವನ್ನು ನೋಡಿಕೊಳ್ಳುತ್ತಿದ್ದಾರೆ.
“ಎಲ್ಲವೂ ಅಲುಗಾಡುತ್ತಿದೆ ಮತ್ತು ಕೋಚ್ ಉರುಳುತ್ತಿರುವುದನ್ನು ನಾವು ನೋಡುತ್ತಿದ್ದೆವು” ಎಂದು ಕೋರಮಂಡಲ್-ಶಾಲಿಮಾರ್ ಎಕ್ಸ್‌ಪ್ರೆಸ್‌ನಲ್ಲಿ ಚೆನ್ನೈಗೆ ಪ್ರಯಾಣಿಸುತ್ತಿದ್ದ ದಿನಗೂಲಿ ಕೆಲಸಗಾರನೊಬ್ಬ ತನಗಾದ ಗಾಯಗಳನ್ನು ತೋರಿಸುತ್ತಾ ಹೇಳಿದರು.
ಇನ್ನೊಬ್ಬ ಬದುಕುಳಿದವರ ಪ್ರಕಾರ, “ಸೀಳಿರುವ ಲೋಹದ ಅವಶೇಷಗಳ ಮೇಲೆ ಕತ್ತರಿಸಿದ ಕೈಕಾಲುಗಳು ಚದುರಿಹೋಗಿದ್ದವು ಎಂದಿದ್ದಾರೆ. “ರೈಲು ಹಳಿತಪ್ಪಿದಾಗ ನಾನು ಮಲಗಿದ್ದೆ. ಸುಮಾರು 10-15 ಜನರು ನನ್ನ ಮೇಲೆ ಬಿದ್ದಿದ್ದರು. ನಾನು ಕೋಚ್‌ನಿಂದ ಹೊರಬಂದಾಗ, ಸುತ್ತಲೂ ಕೈಕಾಲುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ನೋಡಿದೆ. ಇಲ್ಲಿ ಒಂದು ಕಾಲು, ಅಲ್ಲಿ ಒಂದು ಕೈ, ಹಲವು ಮುಖಗಳು ವಿರೂಪಗೊಂಡಿತ್ತು” ಬದುಕುಳಿದವರೊಬ್ಬರು ರಣಭೀಕರ ಮೃತ್ಯು ಬಂದೆರಗಿದ ಸಂದರ್ಭದವನ್ನು ತೆರೆದಿಟ್ಟರು.
ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಈಗ ಆ ಸ್ಥಳದಲ್ಲಿ ರೈಲು ಸೌಕರ್ಯಗಳನ್ನು ಪುನಃಸ್ಥಾಪನೆ ಮಾಡುವ ಕಾರ್ಯದತ್ತ ಗಮನ ಹರಿಸಲಾಗಿದೆ ಎಂದು ರೈಲ್ವೆ ವಕ್ತಾರ ಅಮಿತಾಭ್ ಶರ್ಮಾ ತಿಳಿಸಿದ್ದಾರೆ.
ಒಡಿಶಾಗೆ ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಹೊರಟ ಸಂತೋಷ್ ಲಾಡ್ :
ಬೆಂಗಳೂರು ಎಚ್ ಎಎಲ್ ವಿಮಾನ ನಿಲ್ದಾಣದಿಂದ ವಿಮಾನದಲ್ಲಿ ಸಚಿವ ಸಂತೋಷ್ ಲಾಡ್, ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರಾದ ಮನೋಜ್ ರಾಜನ್ ಸೇರಿದಂತೆ ಐದು ಮಂದಿಯ ತಂಡ ಕರ್ನಾಟಕವನ್ನು ಪ್ರತಿನಿಧಿಸಿ ಘಟನೆ ನಡೆದ ಸ್ಥಳಕ್ಕೆ ತೆರಳಿ ರಾಜ್ಯದ ಪ್ರಯಾಣಿಕರ ಸಂಬಂಧಿಕರ ಜೊತೆ ಸಂವಹನ ಹಾಗೂ ಪರಿಹಾರ ಕೈಗೊಳ್ಳಲು ಮಧ್ಯಾಹ್ನ 2.30ಕ್ಕೆ ತೆರಳಿದರು.
ಖರಗ್ ಪುರ ವಿಭಾಗದಲ್ಲಿ ಶುಕ್ರವಾರ ಸಂಜೆ ನಡೆದ ಭೀಕರ ಅಪಘಾತದ ಹಿನ್ನಲೆಯಲ್ಲಿ ಈ ಕೆಳಕಂಡ 33 ರೈಲುಗಳನ್ನು ಜೂ.3 ಹಾಗೂ 4ರಂದು ರದ್ದುಪಡಿಸಲಾಗಿದೆ.