ಬೆಂಗಳೂರು, ಮೇ.29 www.bengaluruwire.com : ಕಾಮಗಾರಿಗಳಿಗೆ ಕೆಲಸ ಆಗದಿದ್ದರೂ ಬಿಲ್ ಮಾಡಲಾಗಿದೆ. ಒಂದೇ ಕಾಮಗಾರಿಗೆ ಎರಡೆರಡು ಬಿಲ್ ಮಾಡಲಾಗಿದೆ. ಒಂದೇ ಕಾಮಗಾರಿಗೆ ಎರಡು ಕಂಪನಿಗಳಿಂದ ಬಿಲ್ ಆಗಿದೆ. ಈ ಕುರಿತು ತನಿಖೆ ಮಾಡಿ 10 ದಿನದೊಳಗೆ ಮಾಹಿತಿ ನೀಡಬೇಕು ಎಂದು ಉಪ ಮುಖ್ಯಮಂತ್ರಿ, ಜಲ ಸಂಪನ್ಮೂಲ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಅಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಿದರು.
ಬಿಬಿಎಂಪಿಯ ಕೇಂದ್ರ ಕಛೇರಿಯಲ್ಲಿ ರವರು ಪಾಲಿಕೆಯ ಆಡಳಿತಗಾರರು, ಮುಖ್ಯ ಆಯುಕ್ತರು ಹಾಗೂ ಎಲ್ಲಾ ಹಿರಿಯ ಅಧಿಕಾರಿಗಳ ಜೊತೆ ಸೋಮವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಂದರ್ಭದಲ್ಲಿ ಅಧಿಕಾರಿಗಳನ್ನು ಘನತ್ಯಾಜ್ಯ ವಿಲೇವಾರಿ, ರಸ್ತೆ ಕಾಮಗಾರಿ, ಕಂದಾಯ ಸಂಗ್ರಹ, ಮತ್ತಿತರ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಹೀಗೆ ಹೇಳಿದರು.
ಅನುದಾನ ಪಡೆದು ಶುರು ಮಾಡದ ಕೆಲಸ
ಕಾಮಗಾರಿ ತಡೆ ಹಿಡಿಯಬೇಕು. ಕಾಲಮಿತಿಯೊಳಗೆ ಪೂರ್ಣಗೊಳಿಸದ ಯೋಜನೆ ಕೆಲಸಗಳನ್ನು ತಡೆ ಹಿಡಿಯಬೇಕು. ನಿಮ್ಮ ಪ್ರಾಮಾಣಿಕತೆಯನ್ನು ಒರೆಗೆ ಹಚ್ಚಿ ನೋಡುತ್ತೇನೆ. ನೀವು ಪಟ್ಟಿ ಕೊಡದಿದ್ದರೆ ನಾನೇ ನಿಮಗೆ ಪಟ್ಟಿ ಕೊಡುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಮೊದಲಿಗೆ, ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅವರು ಉಪ ಮುಖ್ಯಮಂತ್ರಿಗಳಿಗೆ ಪಾಲಿಕೆಯ ಇತಿಹಾಸ, ಪಾಲಿಕೆಯ ಎಲ್ಲಾ ಇಲಾಖಾ ಮುಖ್ಯಸ್ಥರ ವಿವರ ಹಾಗೂ ಎಲ್ಲಾ ಇಲಾಖೆಯ ಕಾರ್ಯವೈಖರಿ ಬಗ್ಗೆ ಪರಿಚಯಿಸಿದರು.
ಉಪ ಮುಖ್ಯಮಂತ್ರಿಗಳು ವಿವಿಧ ಇಲಾಖೆಯ ಕಾರ್ಯದ ಬಗ್ಗೆ ಪರಿಶೀಲಿಸಿ ಮೊದಲಿಗೆ ಆಸ್ತಿ ತೆರಿಗೆ ವಸೂಲಾತಿಯನ್ನು ಚುರುಕುಗೊಳಿಸುವ ಬಗ್ಗೆ ಹಾಗೂ ಆಸ್ತಿ ತೆರಿಗೆ ಪರಿಷ್ಕರಣೆ ಸಂಬಂಧಿಸಿದಂತೆ ಪಾಲಿಕೆ ವ್ಯಾಪ್ತಿಯ ಎಲ್ಲಾ ಆಸ್ತಿಗಳ ವಿವರಗಳನ್ನು ಮ್ಯಾಪಿಂಗ್ ಮಾಡಲು ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.
5 ವರ್ಷಗಳ ಪಾಲಿಕೆ ಕಾಮಗಾರಿ ಪೂರ್ಣ ವಿವರ ಸಲ್ಲಿಸಿ :
ತದನಂತರ ರಸ್ತೆ ಕಾಮಗಾರಿ ಸಂಬಂಧಿಸಿದಂತೆ ಮಾತನಾಡಿ ರಸ್ತೆಯ ಜಂಕ್ಷನ್ ಹಾಗೂ ರಾಜಕಾಲುವೆ ಕಾಮಗಾರಿಯ ಕಾಮಗಾರಿ ಪ್ರಾರಂಭದ ಮೊದಲು, ಕಾಮಗಾರಿ ಅಭಿವೃದ್ಧಿ, ಕಾಮಗಾರಿ ಸಂಪೂರ್ಣವಾಗಿ ಮುಗಿದ ಬಗ್ಗೆ ಛಾಯಾಚಿತ್ರ ಹಾಗೂ ವಿಡಿಯೋ ದಾಖಲಾತಿ ಸಮೇತ ವರದಿಯನ್ನು ಸಿದ್ದಪಡಿಸಿ ಮತ್ತು ಕಳೆದ ಐದು ವರ್ಷದಿಂದ ಪಾಲಿಕೆ ವತಿಯಿಂದ ನಡೆದ ಎಲ್ಲಾ ಕಾಮಗಾರಿಗಳ ಬಗ್ಗೆ ಪೂರ್ಣ ವಿವರವನ್ನು ನೀಡಲು ಸಭೆಯಲ್ಲಿ ಹಾಜರಿದ್ದ ಪ್ರಧಾನ ಅಭಿಯಂತರರು ರವರಿಗೆ ಸೂಚಿಸಿದರು. ಮುಂದಿನ ದಿನಗಳಲ್ಲಿ ಕಾಮಗಾರಿ ನಿರ್ವಹಣೆ ಬಗ್ಗೆ ಸ್ಥಳ ತಪಾಸಣೆ ಮಾಡುವುದಾಗಿ ತಿಳಿಸಿದರು.
ಮಳೆಗಾಲಕ್ಕೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಬದ್ಧರಾಗಿ :
ನಂತರ ಉಪ ಮುಖ್ಯಮಂತ್ರಿಗಳು ಮುಂಬರುವ ಮಳೆಗಾಲಕ್ಕೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಯಾವುದೇ ಅನಾಹುತಕ್ಕೆ ಎಡೆಮಾಡಿಕೊಡದಂತೆ ಕಾರ್ಯನಿರ್ವಹಿಸಲು ಎಲ್ಲಾ ಅಧಿಕಾರಿಗಳು ಸೂಚಿಸಿದರು. ಮಳೆಗಾಲದಲ್ಲಿ ಸರಾಗವಾಗಿ ನೀರು ಹರಿಯಲು ತಡೆಯಾಗಿರುವ ಬಾಟಲ್ ನೆಕ್ ಸ್ಥಳಗಳನ್ನು ಗುರುತಿಸಿ, ಸರಿಪಡಿಸಿ. ಮಳೆ ನೀರು ಸಮಸ್ಯೆಯಿಂದ ಬೆಂಗಳೂರಿಗೇ ಕೆಟ್ಟ ಹೆಸರು ಬರುತ್ತಿದೆ. ಇದನ್ನು ನಿವಾರಿಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ. ಅಕ್ರಮಗಳಿಗೆ ಆಸ್ಪದ ಇಲ್ಲದಂತೆ ಟಿ ಡಿ ಆರ್ ಯೋಜನೆ ಜಾರಿಗೆ ತರಬೇಕು. ರಸ್ತೆ ಮತ್ತಿತರ ಯೋಜನೆಗಳಿಗೆ ಆಸ್ತಿ ಕಳೆದುಕೊಂಡವರ ಹಿತ ಕಾಯಬೇಕು ಎಂದರು.
ಬಿಬಿಎಂಪಿ ಸಮುದ್ರ ಇದ್ದಂತೆ ಎಲ್ಲಿ ತೆಲುತ್ತೇವೆಯೋ, ಎಲ್ಲಿ ಮುಳುಗುತ್ತೇವೆಯೋ ಗೊತ್ತಿಲ್ಲ. ರಾಜಕಾರಣಿಗಳು, ಅಧಿಕಾರಿಗಳು ಸೇರಿ ಏನೆಲ್ಲಾ ಮಾಡುತ್ತಾರೆ ಎಂಬುದು ಗೊತ್ತಿದೆ. ಬೆಂಗಳೂರು ಬರೀ ಕರ್ನಾಟಕ್ಕದ್ದಲ್ಲ, ಇಡೀ ದೇಶದ ಆಸ್ತಿ. ನಮ್ಮ ಚುನಾವಣೆ ಹೋರಾಟವೇ ಭ್ರಷ್ಟಾಚಾರ ವಿರುದ್ದದ್ದು. ಎಲ್ಲರೂ ಕೆಟ್ಟವರು ಎಂದು ಹೇಳಲ್ಲ. ಒಳ್ಳೆಯವರೂ ಇದ್ದಾರೆ. ಆ ಮಂತ್ರಿಗೆ, ಈ ಮಂತ್ರಿಗೆ, ಶಾಸಕರಿಗೆ ಚಾಡಿ ಹೇಳಿಕೊಂಡು ಬದುಕುತ್ತೇನೆ ಎನ್ನುವವರನ್ನು ಮಟ್ಟ ಹಾಕುತ್ತೇನೆ. ನಾನೊಬ್ಬನೇ ಏನೊ ಮಾಡುತ್ತೇನೆ ಎಂಬ ಭ್ರಮೆ ಇಲ್ಲ. ನಾವು ನೀವು ಸೇರಿ ಕೆಲಸ ಮಾಡೋಣ ಎಂದು ಅಧಿಕಾರಿಗಳಿಗೆ ಬೆಂಗಳೂರು ಅಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿಕೆ ಶಿವಕುಮಾರ್ ಖಡಕ್ ಎಚ್ಚರಿಕೆ ಜೊತೆಗೆ ಕಿವಿ ಮಾತು ಹೇಳಿದರು.
ಸಮಯದ ಪರಿಮಿತಿ ಇಲ್ಲದೆ ಕೆಲಸ ಮಾಡಲು ಕರೆ :
ಸಮಯದ ಮಿತಿ ಇಲ್ಲದೇ ದುಡಿಯಬೇಕು. ನೂರಕ್ಕೆ ನೂರರಷ್ಟು ಬದ್ಧತೆಯಿಂದ, ನಿಷ್ಠೆಯಿಂದ ಕೆಲಸ ಮಾಡಿ.
ಆಡಳಿತಕ್ಕೆ ಚುರುಕು ಮುಟ್ಟಿಸಲು ಒಂದಷ್ಟು ಬದಲಾವಣೆ ಮಾಡುತ್ತೇವೆ. ಶಿಕ್ಷೆ ನೀಡೋದು ಮಾಡೋದು ದೊಡ್ಡ ಕೆಲಸ ಅಲ್ಲ. ಅದಕ್ಕೆ ಆಸ್ಪದ ಕೊಡಬೇಡಿ. ಒಳ್ಳೆ ಕೆಲಸ ಮಾಡಿ
ಒಳ್ಳೆ ಹೆಸರು ಪಡೆಯಿರಿ ಸರಕಾರಕ್ಕೆ ಒಳ್ಳೆ ಹೆಸರು ತನ್ನಿ ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಬುದ್ಧಿವಾದ ಹೇಳಿ ಮನವರಿಕೆ ಮಾಡಿದರು.
ಬೆಂಗಳೂರು ವಿಶ್ವದಲ್ಲೇ ಪ್ರಸಿದ್ಧಿ ಪಡೆದ ನಗರ ಬೆಂಗಳೂರು ನಗರಕ್ಕೆ ಯಾವುದೇ ಧಕ್ಕೆ ಬರದಂತೆ ಎಲ್ಲರೂ ಒಗ್ಗಟ್ಟಾಗಿ ಬೆಂಗಳೂರು ನಗರ ಅಭಿವೃದ್ಧಿ ಪಡಿಸಲು ಶ್ರಮಿಸಬೇಕೆಂದು ತಿಳಿಸಿದರು.
ಸಭೆಯಲ್ಲಿ ಆಡಳಿತಗಾರರಾದ ರಾಕೇಶ್ ಸಿಂಗ್, ಪಾಲಿಕೆಯ ಎಲ್ಲಾ ವಿಶೇಷ ಆಯುಕ್ತರುಗಳು, ಮುಖ್ಯ ಅಭಿಯಂತರರುಗಳು, ವಿವಿಧ ಇಲಾಖಾ ಮುಖ್ಯಸ್ಥರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.