ಬೆಂಗಳೂರು, ಮೇ.24 www.bengaluruwire.com : ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯು ಅಮೇರಿಕದ ಮೆಕ್ಟ್ರಾನಿಕ್ಸ್ ಹಾಗೂ ವಿಸ್ಕಿನ್ ಸನ್ ಡಾ.ಗೋವಿಂದರಾಜು ಸುಬ್ರಮಣಿ ಹಾರ್ಟ್ ಫೌಂಡೇಷನ್ ಸಹಯೋಗದೊಂದಿಗೆ 200 ರೋಗಿಗಳಿಗೆ ಆಂಜಿಯೋಪ್ಲಾಸ್ಟಿ ಕಾರ್ಯಾಗಾರವನ್ನು 12ನೇ ಜೂನ್ ನಿಂದ 18ನೇ ಜೂನ್ 2023ರವರೆಗೆ ಜಯದೇವ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಜೂನ್ 12 ರಿಂದ 14 ಹಾಗೂ ಮೈಸೂರು ಶಾಖೆಯ ಜಯದೇವ ಆಸ್ಪತ್ರೆ 15 ಮತ್ತು 16ರಂದು ಹಾಗೂ ಜೂನ್ 17 ಮತ್ತು 18ರಂದು ಕಲಬುರಗಿ ಶಾಖೆಯಲ್ಲಿ 200 ಜನ ಬಡರೋಗಿಗಳು ಹಾಗೂ ಬಡತನ ರೇಖೆಗಿಂತ ಕೆಳಗಿರುವ ಹಿರಿಯ ನಾಗರೀಕರಿಗಾಗಿ ಉನ್ನತ ಗುಣಮಟ್ಟದ ಮೆಡಿಕೇಟೆಡ್ ಸ್ಟಂಟ್‌ಗಳನ್ನು ಉಚಿತವಾಗಿ ಅಳವಡಿಸಲಾಗುವುದು ಎಂದು ಆಸ್ಪತ್ರೆಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಜಯದೇವ ಆಸ್ಪತ್ರೆಯ ನಿರ್ದೇಶಕರಾದ ಡಾ.ಸಿ.ಎನ್.ಮಂಜುನಾಥ್, ಈಗಾಗಲೇ ಅಂಜಿಯೋಗ್ರಾಂ ತಪಾಸಣೆಗೆ ಒಳಪಟ್ಟಿರುವ ರೋಗಿಗಳು ಈ ಉಚಿತ ಸೌಲಭ್ಯವನ್ನು ಪಡೆಯಬಹುದಾಗಿದೆ. ಅವಶ್ಯಕ ರೋಗಿಗಳು ದಾಖಲಾತಿ ಸಂದರ್ಭದಲ್ಲಿ ಬಿಪಿಎಲ್ ಕಾರ್ಡ್ ಅಥವಾ ಕಡಿಮೆ ಆದಾಯ ಪ್ರಮಾಣ ಪತ್ರವನ್ನು ಹೊಂದಿರಬೇಕು ಎಂದು ತಿಳಿಸಿದ್ದಾರೆ.
ಬಡತನ ರೇಖೆಗಿಂತ ಕೆಳಗಿರುವ ರೋಗಿಗಳು ಮತ್ತು ಹಣಕಾಸಿನ ಮುಗ್ಗಟ್ಟಿನಿಂದ ಚಿಕಿತ್ಸೆ ಮಾಡಿಸಿಕೊಳ್ಳಲು ನಿಸ್ಸಹಾಯಕ ರೋಗಿಗಳು ತಮ್ಮ ಹೆಸರನ್ನು 8ನೇ ಜೂನ್ ರೊಳಗೆ ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 4.00 ವರೆಗೆ ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ.
ದಾಖಲಾತಿಗಾಗಿ ಈ ಮುಂದಿನ ವಿಳಾಸ ಹಾಗೂ ದೂರವಾಣಿಯ ಮೂಲಕ ಸಂಪರ್ಕಿಸಿ : ನಿರ್ದೇಶಕರ ಕಛೇರಿ, ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಬನ್ನೇರುಘಟ್ಟ ರಸ್ತೆ, ಜಯನಗರ 9ನೇ ಬ್ಲಾಕ್, ಬೆಂಗಳೂರು: 560 069.
ಬೆಂಗಳೂರು ಕಚೇರಿ ದೂರವಾಣಿ ಸಂಖ್ಯೆ: 9480827888 ಅಥವಾ 080-26944874, ಮೈಸೂರು ಕಚೇರಿ ದೂರವಾಣಿ ಸಂಖ್ಯೆ : 8660105492, 0821-2263255, ಕಲಬುರುಗಿ ಕಚೇರಿ ದೂರವಾಣಿ ಸಂಖ್ಯೆ : 9482114611, 08472-230511.