ಬೆಂಗಳೂರು, ಮೇ 23 www.bengaluruwire.com : ಬೆಳ್ಳಂದೂರು ಬಳಿಕ ಈಗ ಕೆಂಗೇರಿ ಬಳಿಯ ಹೊಸಕೆರೆಯಲ್ಲೂ ನೊರೆ ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕೆರೆ ಬಹುತೇಕ ತುಂಬಿದ್ದು ನೀರು ಹರಿಯುತ್ತಿದೆ. ಈ ಹರಿಯುವ ನೀರಿನಲ್ಲಿ ನೊರೆಯ ರಾಶಿ ಕಾಣಿಸಿಕೊಂಡಿದ್ದು, ರಾಜಕಾಲುವೆಯ ಮೂಲಕ ಇಡೀ ಪ್ರದೇಶದಲ್ಲಿ ಇದು ಪಸರಿಸುತ್ತಿದ್ದು ಅನಾರೋಗ್ಯದ ಭೀತಿ ಹೆಚ್ಚಾಗಿದೆ.
ತ್ಯಾಜ್ಯ ನೀರು ಕೆರೆ ಸೇರುತ್ತಿದ್ದು, ಸುತ್ತಮುತ್ತಲ ಪ್ರದೇಶದಲ್ಲು ದುರ್ನಾತ ಬೀರುತ್ತಿದೆ. ಇದರಲ್ಲಿ ವಿಷಕಾರಿ ರಾಸಾಯನಿಕಗಳೂ ಸೇರಿರುವ ಕಾರಣ ಈ ರೀತಿ ನೊರೆ ಬರುತ್ತಿದೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ರಾಜಕಾಲುವೆಯಲ್ಲೂ ಕಿಲೋಮೀಟರ್ ಉದ್ದಕ್ಕೂ ನೊರೆ ಕಾಣಿಸುತ್ತಿದೆ. ಬಿಬಿಎಂಪಿ ಆರೋಗ್ಯ ಇಲಾಖೆ ಇತ್ತ ಗಮನ ಹರಿಸಿ ಸಮುದಾಯ ಆರೋಗ್ಯ ರಕ್ಷಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.