ಬೆಂಗಳೂರು, ಮೇ.20 www.bengaluruwire.com : ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಐದು ‘ಗ್ಯಾರಂಟಿ’ಗಳ ಅನುಷ್ಠಾನಕ್ಕೆ ಶನಿವಾರ ನಡೆದ ಸಚಿವ ಸಂಪುಟದ ಮೊದಲ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದು, ಈ ಐದು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲು ನಿರ್ಧರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಹೊಸ ಸಂಪುಟದ 8 ಸದಸ್ಯರು ಮಧ್ಯಾಹ್ನ 12.40ಕ್ಕೆ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ವಿಧಾನಸೌಧಕ್ಕೆ ಆಗಮಿಸಿ ಮೊದಲ ಸಚಿವ ಸಂಪುಟದಲ್ಲಿ ಈ ತೀರ್ಮಾನ ಕೈಗೊಂಡಿದ್ದಾರೆ.
ಎರಡನೇ ಬಾರಿಗೆ ಸಿಎಂ ಆದ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಚಿವ ಸಂಪುಟದ ಸಹದ್ಯೋಗಿಗಳ ಜೊತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸಿದ್ದರಾಮಯ್ಯ ಮಾತಾನಾಡುತ್ತಾ, ಕಾಂಗ್ರೆಸ್ ಗೆ ಬಹುಮತ ನೀಡಿದ ನಾಡಿನ ಜನತೆಗೆ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ರಾಷ್ಟ್ರದ ಮಾಜಿ ಮುಖ್ಯಮಂತ್ರಿಗಳು, ಕಾಂಗ್ರೆಸ್ ಅಧ್ಯಕ್ಷರು, ಮಾಜಿ ಅಧ್ಯಕ್ಷರು ಲೋಕಸಭಾ ಸದಸ್ಯರು, ರಾಜ್ಯಸಭೆ ಸದಸ್ಯರು, ಬಿಜೆಪಿಯೇತರ ಪಕ್ಷದ ಅಧ್ಯಕ್ಷರು, ನಾಯಕರು ಆಗಮಿಸಿ ಹೊಸ ಸರ್ಕಾರಕ್ಕೆ ಶುಭಕೋರಿದ್ದಾರೆ.
ಸರ್ಕಾರ ರಚನೆಯಾದ ಮೇಲೆ ಮೊದಲ ಸಚಿವ ಸಂಪುಟ ಸಭೆ ನಡೆದಿದೆ. ಡಿಸಿಎಂ ಹಾಗೂ ಎಲ್ಲ ಸಚಿವರು ಭಾಗವಹಿಸಿದ್ದರು. ನಾವು ಪ್ರಣಾಳಿಕೆಯಲ್ಲಿ ಹಲವು ಭರವಸೆ ಕೊಟ್ಟಿದ್ದೇವೆ. ಅದನ್ನೆಲ್ಲ ಒಂದೇ ವರ್ಷದಲ್ಲಲ್ಲ ಐದು ವರ್ಷದಲ್ಲಿ ಈಡೇರಿಸುತ್ತೇವೆ.
ಪ್ರಮುಖ ಐದು ಗ್ಯಾರಂಟಿಗಳನ್ನು ಜನರಿಗೆ ಕೊಟ್ಟಿದ್ದೇವೆ. ಇದಕ್ಕೆ ಮೊದಲ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ಅದಕ್ಕೆ ಸಂಬಂಧಿಸಿದ ಆದೇಶ ಸದ್ಯದಲ್ಲೇ ಹೊರಡಿಸುತ್ತೇವೆ. ನಮ್ಮ ಸರ್ಕಾರ ನುಡಿದಂತೆ ನಡೆಯುತ್ತದೆ. ಹಿಂದೆ 165ರಲ್ಲಿ 158 ಭರವಸೆ ಈಡೆರಿಸಿದ್ದೇವೆ, 2013-2018ರ ಅವಧಿಯಲ್ಲಿ. ಅದಲ್ಲದೇ 30 ಕಾರ್ಯಕ್ರಮ ಕೊಟ್ಟಿದ್ದೆವು. ಜನರಿಗೆ ನಮ್ಮ ಮೇಲೆ ವಿಶ್ವಾಸ, ನಂಬಿಕೆಯಿದೆ.ಆದರೆ ವಿರೋಧ ಪಕ್ಷ ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದೆ. ಈ ದೇಶದ ಪ್ರಧಾನಮಂತ್ರಿಗಳೇ ತಮ್ಮ ಮನಕಿ ಬಾತ್ ನಲ್ಲೇ ಹೇಳಿದ್ದಾರೆ. ಬಿಜೆಪಿ ನಾಯಕರು ಇದನ್ನೇ ತಿಳಿಸುತ್ತಿದ್ದಾರೆ.
15ನೇ ಹಣಕಾಸು ಆಯೋಗದಿಂದ ಅನ್ಯಾಯ :
ಈ ಎಲ್ಲಾ ಐದು ಭರವಸೆ ಈಡೇರಿಸಲು ತತಕ್ಷಣದ ಲೆಕ್ಕಾಚಾರದಂತೆ 50,000 ಕೋಟಿ ರೂ.ಆಗಬಹುದು. ನಮ್ಮ ರಾಜ್ಯದ ಬಜೆಟ್ 3.10 ಲಕ್ಷ ಕೋಟಿ ರೂ.ಗಳು. ಪ್ರತಿವರ್ಷ ಶೇ.10ರಂತೆ ಬಜೆಟ್ ಗಾತ್ರ ಹೆಚ್ಚಾಗುತ್ತೆ ಹೋಗುತ್ತೆ. ತೆರಿಗೆ ಕಟ್ಟುನುಟ್ಟಾಗಿ ವಸೂಲಿ ಮಾಡಿದರೆ ಸಂಗ್ರಹ ಹೆಚ್ಚಾಗಲಿದೆ. ಕೆಲವು ಕಡೆ ತೆರಿಗೆ ಹೆಚ್ಚು ಮಾಡಲು ಆಗದು. ನಮಗೆ ಪೆಟ್ರೋಲ್, ಡೀಸೆಲ್, ಸಾರಿಗೆ, ಮದ್ಯ, ನೋಂದಣಿ ಮತ್ತು ಮುದ್ರಾಂಕ ರಾಜ್ಯಕ್ಕೆ ಬರುವ ತೆರಿಗೆಗಳು.
ಕೇಂದ್ರ 15ನೇ ಹಣಕಾಸು ಆಯೋಗದ ಪ್ರಕಾರ 50,000 ಬದಲಿಗೆ ಒಂದು ಲಕ್ಷ ರೂ. ಬರಬೇಕಿತ್ತು. 37,000 ನಮ್ಮ ತೆರಿಗೆ ಪಾಲು, 13,000 ಕೇಂದ್ರದ ಸಹಾಯಧನ ಸೇರಿ 50 ಸಾವಿರ ಕೋಟಿರೂ. ಬರಲಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ 14ಕ್ಕೆ ಹೋಲಿಸಿದರೆ 15 ನೇ ಹಣಕಾಸು ಆಯೋಗದಲ್ಲಿನ ಅನುದಾನ ಕಡಿಮೆಯಾಗಿದೆ. 4 ಲಕ್ಷ ಕೋಟಿ ರೂ. ಹಣ ಕರ್ನಾಟಕವು ಜಿಎಸ್ ಟಿ, ಇಂಧನ ಮೇಲಿನ ಸರ್ ಚಾರ್ಜ್ ಮತ್ತಿತರ ಹಣ ಕೇಂದ್ರಕ್ಕೆ ಹೋಗುತ್ತದೆ. ಆದರೆ ತೆರಿಗೆಯಲ್ಲಿ ರಾಜ್ಯಕ್ಕೆ ಬರುತ್ತಿರೋದು ಕೇವಲ 50,000 ಕೋಟಿ ರೂ. ಮಾತ್ರ.
5,495 ಕೋಟಿ ರೂ. ವಿಶೇಷ ಅನುದಾನ ರಾಜ್ಯಕ್ಕೆ ನಷ್ಟ :
5,495 ಕೋಟಿ ರೂ. ವಿಶೇಷ ಅನುದಾನ ನೀಡುವಂತೆ ಕೇಂದ್ರದ ಹಣಕಾಸು ಆಯೋಗದ ಮಧ್ಯಂತರ ಹಣವನ್ನು ಹಿಂದಿನ ಬಿಜೆಪಿ ಸರ್ಕಾರ ತೆಗೆದುಕೊಳ್ಳಲೇ ಇಲ್ಲ. ಅಂತಿಮ ವರದಿಯಲ್ಲಿ ರಾಜ್ಯದ ರಾಜ್ಯಸಭಾ ಸದಸ್ಯರಾದ ಹಣಕಾಸು ಸಚಿವೆ ಆ ಹಣವನ್ನು ತೆಗೆದೇ ಹಾಕಿದರು. ಮೋದಿ ಸರ್ಕಾರದಿಂದ ರಾಜ್ಯಕ್ಕೆ ನಷ್ಟವಾಯಿತು.
ಬಸವರಾಜ ಬೊಮ್ಮಾಯಿ ಜಿಎಸ್ ಟಿ ಕೌನ್ಸಿಲ್ ಸದಸ್ಯರಾಗಿದ್ದರೂ ರಾಜ್ಯಕ್ಕೆ ಅನ್ಯಾಯವಾಯಿತು. ನಮ್ಮ ರಾಜ್ಯದಿಂದ ಸಂಗ್ರಹವಾಗುವ ಹಣವನ್ನೇ ಕೇಂದ್ರ ಕೊಡೋದು. ಕಾಂಗ್ರೆಸ್ ಗ್ಯಾರಂಟಿಯಿಂದ ರಾಜ್ಯ ಆರ್ಥಿಕ ದಿವಾಳಿಯಾಗಲ್ಲ.
ರಾಷ್ಟ್ರದಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ 53.11 ಲಕ್ಷ ಕೋಟಿ ರೂ. ಸಾಲವಾಗಿದ್ದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ 102 ಲಕ್ಷ ಕೋಟಿ ರೂ. ರಾಷ್ಟ್ರದ ಸಾಲ ಏರಿಕೆಯಾಗಿದೆ.
ರಾಜ್ಯದಲ್ಲಿ 1947 ರಿಂದ ಮಾರ್ಚ್ 2018 ರ ವರೆಗೆ ರಾಜ್ಯದ ಸಾಲದ ಮೊತ್ತ 2.42 ಲಕ್ಷ ಕೋಟಿ ರೂ. ಇತ್ತು.ಆದರೆ ಬಿಜೆಪಿ ರಾಜ್ಯ ಸರ್ಕಾರದ ಅವಧಿಯಲ್ಲಿ 2022-23ರಲ್ಲಿ 5.64 ಲಕ್ಷ ಕೋಟಿರೂ. ತನಕ ಸಾಲದ ಮೊತ್ತ ಏರಿದೆ. ನನ್ನ ಅವಧಿಯಲ್ಲಿ 1.16 ಲಕ್ಷ ಕೋಟಿ ರೂ.ನನ್ನ ಅವಧಿಯಲ್ಲಿ ಸಾಲ ಮಾಡಿದ್ದೆ. 2023-24 ಸಾಲದ ಮೇಲಿನ ಅಸಲು ಬಡ್ಡಿ ಮೊತ್ತ 56,000 ಕೋಟಿ ರೂ. ರಾಜ್ಯ ಸರ್ಕಾರ ಕಟ್ಟಬೇಕು.
3.25 ಲಕ್ಷ ಕೋಟಿ ರೂ. ಜುಲೈನಲ್ಲಿ ಮತ್ತೆ ಬಜೆಟ್ ಅನಯಷ್ಟಾನ ಮಾಡುತ್ತೇವೆ. ಸಾಲ ತೆಗೆದುಕೊಳ್ಳೋದು ಕಡಿಮೆ ಮಾಡಿ, ತೆರಿಗೆ ಸಂಗ್ರಹ ಹೆಚ್ಚಳ, ಅನಗತ್ಯ ವೆಚ್ಚ ಕಡಿಮೆ ಮಾಡಿದರೆ ವರ್ಷಕ್ಕೆ ಈ ಐದು ಗ್ಯಾರಂಟಿಗಳಾದ
200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್, ಬಿಪಿಎಲ್ ಕುಟುಂಬಗಳ ಸದಸ್ಯರಿಗೆ ಉಚಿತವಾಗಿ ತಿಂಗಳಿಗೆ ತಲಾ ಹತ್ತು ಕೆ.ಜಿ. ಅಕ್ಕಿ, ಮನೆಯ ಯಜಮಾನಿಗೆ ತಿಂಗಳಿಗೆ 2,000 ನೆರವು, ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ 3,000 ಹಾಗೂ ಡಿಪ್ಲೊಮಾ ಪದವೀಧರರಿಗೆ ತಿಂಗಳಿಗೆ 1,500 ನಿರುದ್ಯೋಗ ಭತ್ಯೆ ಮತ್ತು ಮಹಿಳೆಯರಿಗೆ ರಾಜ್ಯದಾದ್ಯಂತ ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ಒದಗಿಸುವುದಾಗಿ ಕಾಂಗ್ರೆಸ್ ಗ್ಯಾರಂಟಿ ನೀಡಿದೆ. ಇದಕ್ಕೆ ವಾರ್ಷಿಕ 50,000 ಕೋಟಿ ರೂ. ಹಣ ಖರ್ಚಾಗಲಿದೆ.
ಗೃಹಜ್ಯೋತಿ ಯೋಜನೆ ಜಾರಿಗೆ ಮಾಸಿಕ 1,200 ಕೋಟಿ ರೂ., ಗೃಹಲಕ್ಷ್ಮಿ ಯೋಜನೆಗೆ ತಿಂಗಳಿಗೆ ಮನೆಯೊಡತಿಗೆ 2 ಸಾವಿರ, ಅನ್ನಭಾಗ್ಯ 7ರಿಂದ 10 ಕೆಜಿಗೆ ಏರಿಸುತ್ತೇವೆ. ಈ ವರ್ಷದಿಂದ ನಿರುದ್ಯೋಗಿಗಳಿಗೆ ಎರಡು ವರ್ಷದ ತನಕ ತಿಂಗಳಿಗೆ 3 ಸಾವಿರ ನೀಡುತ್ತೇವೆ. ಮಧ್ಯದಲ್ಲಿ ಕೆಲಸ ಸಿಕ್ಕಿದರೆ ಹಣ ಕೊಡಲ್ಲ. ಡಿಪ್ಲೊಮಾ ಪದವೀಧರರಿಗೆ ತಿಂಗಳಿಗೆ 1,500 ನಿರುದ್ಯೋಗ ಭತ್ಯೆ. ರಾಜ್ಯದ ಮಹಿಳೆಯರಿಗೆ ಮಾತ್ರ, ರಾಜ್ಯದಾದ್ಯಂತ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯದ ಬಗ್ಗೆ ಸೂಕ್ತ ಆದೇಶ ಹೊಡಿಸುತ್ತೇವೆ. ಎಷ್ಟೇ ಹೊರೆಯಾದರೂ ಅನುಷ್ಟಾನ ಮಾಡುತ್ತೇವೆ. ಮುಂದಿನ ಸಚಿವ ಸಂಪುಟದ ಒಳಗಾಗಿ ಐದು ಗ್ಯಾರಂಟಿ ಅನುಷ್ಟಾನ
ಮೇ.24 ಒಳಗೆ ಎಲ್ಲ ನೂತನ ಶಾಸಕರು ಪ್ರಮಾಣ ವಚನ ಸ್ವೀಕಾರ ಹಾಗೂ ನೂತನ ಸ್ಪೀಕರ್ ಆಯ್ಕೆ ಮಾಡುತ್ತೇವೆ. ಹಂಗಾಮಿ ಸ್ಪೀಕರ್ ಆಗಿ ಆರ್.ವಿ.ದೇಶಪಾಂಡೆ ಆಯ್ಕೆ ಮಾಡಿದ್ದೇವೆ. ಇಂದಿರಾ ಕ್ಯಾಂಟೀನ್ ಯೋಜನೆ ಪುನಃ ಅನುಷ್ಟಾನ ಮಾಡುತ್ತೇವೆ. ಮುಂಬರುವ ಸೋಮವಾರ, ಮಂಗಳವಾರ ಹಾಗೂ ಬುಧವಾರ ಅಧಿವೇಶನ ಕರೆಯುತ್ತೇವೆ.
ಎಂ. ಬಿ. ಪಾಟೀಲ್, ಡಾ. ಜಿ. ಪರಮೇಶ್ವರ್, ರಾಮಲಿಂಗಾ ರೆಡ್ಡಿ, ಪ್ರಿಯಾಂಕ ಖರ್ಗೆ, ಕೆ.ಎಚ್. ಮುನಿಯಪ್ಪ, ಕೆ. ಜೆ. ಜಾರ್ಜ್, ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್ ಖಾನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ವಿಧಾನಸೌಧ ಮೆಟ್ಟಿಲುಗಳಿಗೆ ನಮಸ್ಕರಿಸಿ ಪ್ರವೇಶಿಸಿದ ಡಿಕೆಶಿ :
ಡಿಸಿಎಂ ಆದ ಬಳಿಕ ಮೊತ್ತ ಮೊದಲ ಬಾರಿಗೆ ವಿಧಾನಸೌಧದ ಮೆಟ್ಟಿಲು ಹತ್ತುವಾಗ ಡಿ.ಕೆ.ಶಿವಕುಮಾರ್, ಸತ್ ಸಂಪ್ರದಾಯದಂತೆ ಮಂಡಿಯೂರಿ, ವಿಧಾನಸೌಧದ ಮೆಟ್ಟಿಲುಗಳಿಗೆ ತಲೆಬಾಗಿ ನಮಸ್ಕರಿಸಿ ಶಕ್ತಿಕೇಂದ್ರದ ಒಳಗೆ ಪ್ರವೇಶಿಸಿದರು.