ಬೆಂಗಳೂರು/ನವದೆಹಲಿ, ಮೇ.20 www.bengaluruwire.com : ಬಹುಮತ ಬಂದರೂ ಮುಖ್ಯಮಂತ್ರಿ ಖುರ್ಚಿಗಾಗಿ ನಡೆದ ಪ್ರಹಸನದ ಬಳಿಕ ಇಂದು ಸಿದ್ದರಾಮಯ್ಯ ರಾಜ್ಯದ 24ನೇ ಸಿಎಂ ಆಗಿ ಮತ್ತು ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಕಂಠೀರವ ಸ್ಟೇಡಿಯಮ್ ನಲ್ಲಿ ಮಧ್ಯಾಹ್ನ 12.30ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇವರ ಜೊತೆಗೆ ಮೊದಲ ಹಂತದಲ್ಲಿ 25 ಶಾಸಕರು ಸಚಿವರಾಗಿ ಸಂಪುಟಕ್ಕೆ ಸೇರುತ್ತಾರೆಂದು ಹೇಳಲಾಗಿತ್ತಾದರೂ 8 ಮಂದಿ ಮಾತ್ರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕೇವಲ ಇಬ್ಬರ ಪದಗ್ರಹಣ ಬೇಡ ಅಂತ ಹೈಕಮಾಂಡ್ ಹೇಳಿದ್ದು, ಸಿಎಂ ಮತ್ತು ಡಿಸಿಎಂ ಜೊತೆಗೆ ಇನ್ನು 8 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.
ಆ 8 ಮಂದಿ ಸಚಿವರಾಗಿ ಇಂದು ಪ್ರಮಾಣವಚನ ಸ್ವೀಕರಿಸುವವರು ಯಾರು?
*ಎಂ. ಬಿ. ಪಾಟೀಲ್ (ಲಿಂಗಾಯತ)
- ಡಾ. ಜಿ. ಪರಮೇಶ್ವರ್ (ದಲಿತ ಬಲ)
- ರಾಮಲಿಂಗಾ ರೆಡ್ಡಿ (ರೆಡ್ಡಿ ಸಮುದಾಯ)
- ಪ್ರಿಯಾಂಕ ಖರ್ಗೆ (ದಲಿತ ಬಲ)
- ಕೆ.ಎಚ್. ಮುನಿಯಪ್ಪ (ದಲಿತ ಎಡ)
- ಕೆ. ಜೆ. ಜಾರ್ಜ್ (ಕ್ರಿಶ್ಚಿಯನ್)
- ಸತೀಶ್ ಜಾರಕಿಹೊಳಿ (ಪರಿಶಿಷ್ಟ ಪಂಗಡ) (ವಾಲ್ಮೀಕಿ)
- ಜಮೀರ್ ಅಹ್ಮದ್ ಖಾನ್ (ಮುಸ್ಲಿಂ)
ಶುಕ್ರವಾರ ಮಧ್ಯಾಹ್ನದಿಂದ ಸಚಿವರ ಆಯ್ಕೆಗೆ ಭಾರೀ ಕಸರತ್ತು ನಡೆಯಿತು. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ನಿವಾಸದಲ್ಲಿ ತಡರಾತ್ರಿ ಎರಡು ಗಂಟೆಯವರೆಗೆ ಹೈ ವೋಲ್ಟೇಜ್ ಸಭೆ ನಡೆಯಿತು. ಜಾತಿವಾರು, ಹಿರಿತನದ ಆಧಾರ ಮೇಲೆ ಸಚಿವರನ್ನು ಆಯ್ಕೆ ಮಾಡಲಾಗಿದೆ. ಒಂದೇ ಬಾರಿಗೆ 28 ಸಚಿವರ ಆಯ್ಕೆಗೆ ಪ್ರಯತ್ನ ನಡೆಯಿತಾದರೂ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಒಮ್ಮತ ಮೂಡಲಿಲ್ಲ. ಇದರಿಂದ ಕೈ ಪಕ್ಷದ ಹೈಕಮಾಂಡ್ 8 ಮಂದಿಯನ್ನು ಅಳೆದು ತೂಗಿ ಇಬ್ಬರು ನಾಯಕರಿಗೂ ಒಪ್ಪುವಂತರನ್ನು ಆಯ್ಕೆ ಮಾಡಲಾಯಿತು.
ಅಂತಿಮವಾಗಿ ಎಂಟು ಸಚಿವರಿಗೆ ಮಾತ್ರ ಉಭಯ ನಾಯಕರು ಒಪ್ಪಿಗೆ ನೀಡಿದರು. ಇಂದು ಕೇವಲ ಎಂಟು ಸಚಿವರು ಮಾತ್ರ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.