ನವದೆಹಲಿ, ಮೇ.19 www.bengaluruwire.com : ಬಹು ದಿನಗಳಿಂದ ಸಾಮಾನ್ಯ ಜನರ ದೈನಂದಿನ ವಹಿವಾಟಿನಲ್ಲಿ ಬಹುತೇಕ ಕಣ್ಮರೆಯಾಗಿದ್ದ 2,000 ರೂ. ಮುಖ ಬೆಲೆಯ ನೋಟುಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ತಿಳಿಸಿದೆ.
2016ರ ನವೆಂಬರ್ ನಲ್ಲಿ 2,000 ರೂ.ಗಳ ನೋಟುಗಳನ್ನು ಪರಿಚಯಿಸಲಾಗಿತ್ತು. ಅಲ್ಲದೆ ಈ ಮುಖಬೆಲೆಯ ನೋಟುಗಳನ್ನ ತಕ್ಷಣದಿಂದ ಜಾರಿಗೆ ಬರುವಂತೆ ಚಲಾವಣೆಗೆ ಬಿಡುಗಡೆ ಮಾಡುವುದನ್ನ ನಿಲ್ಲಿಸುವಂತೆ ಆರ್ ಬಿಐ ಎಲ್ಲಾ ಬ್ಯಾಂಕುಗಳಿಗೆ ಸಲಹೆ ನೀಡಿದೆ.
ಆದಾಗ್ಯೂ, 2,000 ರೂ.ಗಳ ಮುಖಬೆಲೆಯ ನೋಟುಗಳು ಕಾನೂನುಬದ್ಧವಾಗಿ ಮುಂದುವರಿಯುತ್ತವೆ ಎಂದು ಆರ್ ಬಿಐ ಟ್ವಿಟ್ಟರ್ ನಲ್ಲಿ ತಿಳಿಸಿದೆ.
ಕ್ಲೀನ್ ನೋಟ್ ಪಾಲಿಸಿ ಅಡಿಯಲ್ಲಿ ಆರ್ ಬಿಐ ಈ ನಿರ್ಧಾರವನ್ನ ತೆಗೆದುಕೊಂಡಿದ್ದು, ಈ ನೋಟುಗಳು ಸೆಪ್ಟೆಂಬರ್ 30 ರವರೆಗೆ ಕಾನೂನುಬದ್ಧವಾಗಿ ಈ ಸಮಯದ ಒಳಗಾಗಿ ಅಗತ್ಯವಿರುವವರು ಬ್ಯಾಂಕ್‌ನಲ್ಲಿ 2 ಸಾವಿರ ರೂ. ನೋಟುಗಳನ್ನು ಇತರ ಮುಖ ಬೆಲೆಯ ನೋಟುಗಳಿಗೆ ಬದಲಾಯಿಸಲು ಅವಕಾಶ ಕಲ್ಪಿಸಿರುವುದಾಗಿ ಆರ್ ಬಿಐ ಹೇಳಿದೆ.
ಮೇ.23 ರಿಂದ ಒಂದು ಬಾರಿಗೆ ಗರಿಷ್ಠ 20,000 ರೂ. ತನಕ ಗ್ರಾಹಕರು 2,000 ರೂ. ಮುಖ ಬೆಲೆಯ ನೋಟುಗಳನ್ನು ಬದಲಾಯಿಸಿಕೊಳ್ಳಲು ಅವಕಾಶವಿದೆ. 2018-19ನೇ ಸಾಲಿನಲ್ಲೇ ಆರ್ ಬಿಐ 2 ಸಾವಿರ ಮುಖಬೆಲೆಯ ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಿತ್ತು. ಶೇ.89ರಷ್ಟು ಈ ಮೌಲ್ಯದ ನೋಟುಗಳನ್ನು 2017 ಮಾರ್ಚ್ ಗೆ ಮುಂಚೆ ಹಂಚಿಕೆ ಮಾಡಲಾಗಿತ್ತು. ಆ ನೋಟುಗಳ ಬಳಕೆಯ ಅವಧಿ ಅಂದಾಜು 4-5 ವರ್ಷಗಳಾಗಿದ್ದು ಅವುಗಳು ಅಂತಿಮಗೊಳ್ಳುವ ಹಂತದಲ್ಲಿದೆ. 2018 ಮಾ.31ಕ್ಕೆ 6.73 ಲಕ್ಷ ಕೋಟಿ ರೂ. (ಶೇ.37.3%) ಹಣ ಚಲಾವಣೆಯಲ್ಲಿದ್ದಿದ್ದು, 2023ರ ಮಾ.31ರ ವೇಳೆಗೆ 3.62 ಲಕ್ಷ ಕೋಟಿ ರೂ.ಗೆ (ಶೇ.10.8%) ಇಳಿಕೆಯಾಗಿದೆ. ಸಾಮಾನ್ಯವಾಗಿ ಈ ಮುಖಬೆಲೆಯ ನೋಟುಗಳ ಬಳಕೆ ಹೆಚ್ಚಾಗಿ ಬಳಕೆಯಾಗದಿರುವುದನ್ನು ಗಮನಿಸಲಾಗಿದೆ ಎಂದು ಆರ್ ಬಿಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.