ಬೆಂಗಳೂರು, ಮೇ.18 www.bengaluruwire.com : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಯಶವಂತಪುರ ತಾಲೂಕು ದಾಸನಪುರ ಹೋಬಳಿ ಹುಣ್ಣಿಗೆರೆ ಗ್ರಾಮದಲ್ಲಿ ಒಂದು ಕೊಠಡಿ ಮನೆ (One BHK) ಹಾಗೂ ವಿಲ್ಲಾ (Villa) ಮಾದರಿಯ ಮನೆಗಳನ್ನು ಕೈಗೆತ್ತಿಕೊಂಡಿದ್ದು ಕೆಲ ದಿನಗಳಲ್ಲಿ ಪೂರ್ಣಗೊಳ್ಳುವ ಹಂತದಲ್ಲಿದೆ. ಈ ಹಿನ್ನಲೆಯಲ್ಲಿ ಬಿಡಿಎ ಆಯುಕ್ತ ಕುಮಾರ್ ನಾಯಕ್, ಇಂದು ಈ ವಸತಿ ಯೋಜನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವಸತಿ ಯೋಜನೆಯಡಿ 1BHK ಯ 320 ಮನೆಗಳು, ವಿಲ್ಲಾ ಮಾದರಿಯಲ್ಲಿ 3 ಬಿಎಚ್ ಕೆ ಯ 152 ಮನೆಗಳು ಹಾಗೂ 4 ಬಿಎಚ್ ಕೆಯ 170 ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಈ ವಸತಿ ಯೋಜನೆಯಲ್ಲಿ 27 ಉದ್ಯಾನವನಗಳಿದ್ದು, ಹಸಿರಿನ ಗಿಡಮರಗಳಿಗೆ ಪ್ರಾಮುಖ್ಯತೆ ಕೊಡಲಾಗಿದೆ. 26 ಎಕರೆ ವಿಸ್ತೀರ್ಣದಲ್ಲಿ ಈ ವಸತಿ ಯೋಜನೆಯನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೆ ಯೋಜನಾ ಪ್ರದೇಶದ ಸುತ್ತ 2.1 ಮೀ ಎತ್ತರದ ರಕ್ಷಣಾ ಗೋಡೆಯನ್ನು (Compound wall) ನಿರ್ಮಿಸಲಾಗಿರುತ್ತದೆ.
‘ಸಂಪೂರ್ಣವಾಗಿ ಸರ್ಕಾರಿ ಜಾಗದಲ್ಲಿ ಈ ವಸತಿಯೋಜನೆಯನ್ನು ಕೈಗೊಳ್ಳಲಾಗಿದ್ದು, ಜನರಿಗೆ ಕೈಗೆಟಕುವ ದರದಲ್ಲಿ ಅತ್ಯಾಧುನಿಕ ಸೌಲಭ್ಯವಿರುವ ವಿಲ್ಲಾಗಳನ್ನು ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. ಸದ್ಯಕ್ಕೆ ಕಟ್ಟಡ ನಿರ್ಮಾಣ ಕೆಲಸಗಳು ಅಂತಿಮ ಹಂತದಲ್ಲಿದೆ, ವಸತಿ ಕಟ್ಟಡಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ನಿರ್ಮಿಸುವ ಕಾಮಗಾರಿ ನಡೆಯುತ್ತಿದೆ. ಇನ್ನು ಮೂರು ತಿಂಗಳಲ್ಲಿ ಈ ವಸತಿ ಯೋಜನೆಯನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಲಿದ್ದೇವೆ. ಅತ್ಯಾಧುನಿಕ ಸೌಲಭ್ಯಗಳನ್ನು ಈ ವಿಲ್ಲಾಗಳು ಹೊಂದಿವೆ’ ಎಂದು ಬಿಡಿಎ ಆಯುಕ್ತ ಕುಮಾರ್ ನಾಯಕ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಒಂದು ಬಿಎಚ್ ಕೆ ಮತ್ತು ಮೂರು ಹಾಗೂ ನಾಲ್ಕು ಕೊಠಡಿಗಳಿರುವ ವಿಲ್ಲಾಗಳ ಬೆಲೆಯನ್ನು ಇನ್ನೂ ಕೂಡ ನಿರ್ಧರಿಸಲಾಗಿಲ್ಲ. ಆದರೆ ಒಂದು ಬಿಎಚ್ ಕೆ ಫ್ಲಾಟ್ ಬೆಲೆ 12-13 ಲಕ್ಷ ರೂ. ಆಸುಪಾಸಿನಲ್ಲಿ ಹಾಗೂ 3 ಬಿಎಚ್ ಕೆ ಹಾಗೂ 4 ಬಿಎಚ್ ಕೆ ವಿಲ್ಲಾಗಳ ಬೆಲೆ 65 ಲಕ್ಷ ರೂ. ನಿಂದ ಒಂದು ಕೋಟಿ ರೂ. ವರೆಗೆ ಇರಲಿದೆ. ವಿಲ್ಲಾದ ಸಂಪೂರ್ಣ ಜಾಗದ ಒಡೆತನ ಅದನ್ನು ಖರೀದಿಸಿದ ಮಾಲೀಕನ ಬಳಿಯಿರಲಿದೆ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಡಿಎ ವಿಲ್ಲಾಗಳ ವಿಶೇಷತೆಗಳೇನು? :
ಈ ವಸತಿ ಯೋಜನೆಯಲ್ಲಿನ 3 ಮತ್ತು 4 ಬಿಎಚ್ ಕೆ ಮನೆಗಳನ್ನು ಆರ್ ಸಿಸಿ ಫ್ರೇಮ್ ವಿನ್ಯಾಸ (RCC Frame Structure) ನಲ್ಲಿ ನಿರ್ಮಿಸಿದ್ದು, ಈ ಮನೆಗಳು ಡೂಪ್ಲೆಕ್ಸ್ (Duplex) ಮನೆಗಳಾಗಿರುತ್ತವೆ. ಇವುಗಳಿಗೆ ಪೂರ್ತಿ ಇಟ್ಟಿಗೆಯನ್ನು ಉಪಯೋಗಿಸಲಾಗಿರುತ್ತದೆ. ವಾಸ್ತುವಿಗೆ ಅನುಗುಣವಾಗಿ ನಿರ್ಮಿಸಲಾಗಿರುತ್ತದೆ. ಅದರಂತೆ, ಒಳಾಂಗಣವನ್ನು ಕಲ್ಪಿಸಲಾಗಿದೆ. ಪ್ರತಿ ಮನೆಗೆ ಎರಡು ರೀತಿಯ ನೀರು ಪೂರೈಕೆ ವ್ಯವಸ್ಥೆ (Dual piping syste) ಯನ್ನು ಅಳವಡಿಸಿದ್ದು, ಸಂಪು ಮತ್ತು ಓವರ್ ಹೆಡ್ ಟ್ಯಾಂಕಿರುತ್ತದೆ. ಅಲ್ಲದೆ ಸೋಲಾರ್ ವಾಟರ್ ಹಿಟರ್ ಅನ್ನು ಅಳವಡಿಸಲಾಗಿರುತ್ತದೆ.
ಪ್ರತಿ ವಿಲ್ಲಾಗಳಿಗೆ ಇವಿ ಚಾರ್ಜಿಂಗ್ ವ್ಯವಸ್ಥೆ :
3 ಮತ್ತು 4 ಬಿಎಚ್ ಕೆ ವಿಲ್ಲಾಗಳಿಗೆ ಪ್ರತ್ಯೇಕವಾದ ಗೇಟ್, ಮುಖ್ಯರಸ್ತೆಯಿಂದ ಪ್ರತ್ಯೇಕವಾಗಿ ಸಂಪರ್ಕ ಕಲ್ಪಿಸಲಾಗಿರುತ್ತದೆ. ಮನೆಗಳಿಗೆ ಇ.ವಿ (ಕಾರ್ ಚಾರ್ಜಿಂಗ್) ಚಾರ್ಜಿಂಗ್ ವ್ಯವಸ್ಥೆ, ಎಲ್ಲಾ ಮನೆಗಳಿಗೂ ಮನೆಯಲ್ಲಿಯೇ ಕಾರ್ ಪಾರ್ಕಿಂಗ್ ಮತ್ತು ಈ ವಸತಿ ಯೋಜನೆಯಲ್ಲಿ 100 ಕಿ.ವ್ಯಾ ಸಾಮರ್ಥ್ಯದ ಸೋಲಾರ್ ಪ್ಯಾನಲ್ ಗಳನ್ನು ಅಳವಡಿಸಲಾಗಿರುತ್ತದೆ. ಮಳೆ ನೀರು ಕುಯ್ಲಿಗೆ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಆಗಾಗ ರಸ್ತೆ ಅಗೆಯುವುದನ್ನು ತಪ್ಪಿಸಲು ಡಕ್ಟ್ ಗಳನ್ನು ನಿರ್ಮಿಸಿ, ಅದರಲ್ಲಿ ನೀರು ಹಾಗೂ ವಿದ್ಯುತ್ ಕೇಬಲ್ ಗಳನ್ನು ಅಳವಡಿಸಲಾಗಿರುತ್ತದೆ.
ಒಳಾಂಗಣ ಮನೋರಂಜನಾ ಕೇಂದ್ರದಲ್ಲಿರಲಿವೆ ಹಲವು ಸೌಲಭ್ಯ :
ಮನೋರಂಜನಾ ಕೇಂದ್ರವನ್ನು ನಿರ್ಮಿಸಿದ್ದು, ಅದರಲ್ಲಿ ಒಳಾಂಗಣ ಆಟಗಳಿಗೆ ಪ್ರಾಮುಖ್ಯತೆ ಕೊಡಲಾಗಿದೆ. ಶೆಟಲ್ ಕೋರ್ಟ್, ರೆಸ್ಟೋರೆಂಟ್, ಜಿಮ್, ಏರೊಬಿಕ್ಸ್ ಕೊಠಡಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಕಮ್ಯೂನಿಟಿ ಹಾಲ್, ಗ್ರಂಥಾಲಯ, ಈಜುಕೊಳ ನಿರ್ಮಾಣ ಮಾಡಲಾಗಿದೆ. ಸೂಪರ್ ಮಾರ್ಕೆಟ್ ಗೆ ಸ್ಥಳಾವಕಾಶ ಕಲ್ಪಿಸಲಾಗಿದೆ ಮತ್ತು ಅತಿಥಿಗಳಿಗಾಗಿ 4 ಕೊಠಡಿಗಳನ್ನು ಕಲ್ಪಿಸಲಾಗಿದೆ. 1 ಕೊಠಡಿಯ ಮನೆಗಳನ್ನು ಆರ್ ಸಿಸಿ ಗೋಡೆಗಳನ್ನು ಅಳವಡಿಸಿ G+3 ಮಹಡಿಯ ಮಾದರಿಯಲ್ಲಿ ನಿರ್ಮಿಸಲಾಗಿರುತ್ತದೆ ಎಂದು ಬಿಡಿಎ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.