ನವದೆಹಲಿ, ಮೇ.17 www.bengaluruwire.com : ಆಗಾಗ ಅಲ್ಲಲ್ಲಿ ಕೊಂಚದಾಗಿ ಮಳೆ ಸುರಿಯುತ್ತಿದ್ದರೂ ಸುಡು ಬಿಸಿಲಿನಿಂದ ಕಾದು ಕೆಂಡದಂತಾಗಿರುವ ಕರ್ನಾಟಕಕ್ಕೆ ಸಂತಸದ ಸುದ್ದಿ. ಈ ಬಾರಿ ನೈರುತ್ಯ ಮುಂಗಾರು ಮಾರುತ ಮೂರು ದಿನ ತಡವಾಗಿ ಜೂನ್ 4ರಂದು ಕೇರಳ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.
ಸಾಮಾನ್ಯವಾಗಿ ವಾಡಿಕೆಯಂತೆ ಮುಂಗಾರು ಮಾರುತವು ಜೂನ್ 1ರಂದು ಕೇರಳ ಕರಾವಳಿಯನ್ನು ಪ್ರವೇಶಿಸುತ್ತದೆ. ಈ ವರ್ಷ ಜೂನ್ 4ರಂದು ಕೇರಳ ಪ್ರವೇಶಿಸುವ ಸಾಧ್ಯತೆಯಿದೆ. ಮುಂಗಾರು ಪ್ರವೇಶವು ನಾಲ್ಕು ದಿನಗಳಷ್ಟು ಮುಂಚಿತವಾಗಿ ಅಥವಾ ವಿಳಂಬವಾಗಿ ಆಗುವ ಸಾಧ್ಯತೆಯೂ ಇದೆ. ಮುಂಗಾರು ಮಾರುತವು ಕೇರಳ ಪ್ರವೇಶಿಸಿ, ನಂತರ ದೇಶದ ಇತರ ಭಾಗಗಳನ್ನು ಆವರಿಸಿಕೊಳ್ಳುತ್ತದೆ.
‘ಎಲ್ ನಿನೊ’ ಪರಿಸ್ಥಿತಿಯ ಹೊರತಾಗಿಯೂ ಈ ಬಾರಿ ಮುಂಗಾರು ಅವಧಿಯಲ್ಲಿ ವಾಡಿಕೆಯಂತೆ ಮಳೆ ಬೀಳುವ ನಿರೀಕ್ಷೆಯಿದೆ ಎಂದು ಇಲಾಖೆಯು ಕಳೆದ ತಿಂಗಳು ಹೇಳಿತ್ತು. ಕೃಷಿ ವಲಯದಲ್ಲಿ ಶೇ 52ರಷ್ಟು ಪ್ರದೇಶ ಹಾಗೂ ದೇಶದ ಒಟ್ಟು ಆಹಾರ ಧಾನ್ಯ ಉತ್ಪಾದನೆಯಲ್ಲಿ ಮಳೆ ಆಶ್ರಿತ ಪ್ರದೇಶದ ಪಾಲು ಶೇ 40ರಷ್ಟು ಎಂಬುದು ಗಮನಾರ್ಹ.
‘ ಮುಂಗಾರು ಮಳೆಯ ದೀರ್ಘಾವಧಿ ಸರಾಸರಿ (Long Period Average – LPA) ಲೆಕ್ಕಾಚಾರದ ಪ್ರಕಾರ, ಈ ಬಾರಿಯ ಮಳೆ ಸಾಧ್ಯತೆ 87 ಸೆಂಮೀ ಇದೆ. ಮುಂಗಾರು ಹಂಗಾಮಿನಲ್ಲಿ ವಾಡಿಕೆಯ ಶೇ 96ರಷ್ಟು ಮಳೆ ಸುರಿಯುವ ನಿರೀಕ್ಷೆಯಿದೆ’ ಎಂದು ಈ ಹಿಂದೆ ಕೇಂದ್ರೀಯ ಭೂವಿಜ್ಞಾನ ಇಲಾಖೆ ತಿಳಿಸಿತ್ತು.
‘ಕಳೆದ ನಾಲ್ಕು ವರ್ಷಗಳಿಂದ ದೇಶದಲ್ಲಿ ಮಳೆ ಪ್ರಮಾಣ ಉತ್ತಮವಾಗಿದೆ. 2019ರಲ್ಲಿ 87.19 ಸೆಂಮೀ, 2020ರಲ್ಲಿ 96.14 ಸೆಂಮೀ, 2021ರಲ್ಲಿ 87.45 ಸೆಂಮೀ, 2022ರಲ್ಲಿ 92.48 ಸೆಂಮೀ ಮಳೆಯಾಗಿದೆ. ಕೊವಿಡ್ ನಂತರ ಕಾಣಿಸಿಕೊಂಡಿದ್ದ ಆರ್ಥಿಕ ಹಿಂಜರಿತದ ಪರಿಸ್ಥಿತಿಯಿಂದ ಭಾರತದ ಶೀಘ್ರಗತಿಯಲ್ಲಿ ಚೇತರಿಸಿಕೊಳ್ಳಲು ಉತ್ತಮ ಹವಾಮಾನ ಮತ್ತು ಮಳೆಯೂ ಮುಖ್ಯಕಾರಣವಾಗಿದೆ.
ಐಎಂಡಿ ನೀಡಿದ ಮುನ್ಸೂಚನೆ ; ವಾಸ್ತವ ಮುಂಗಾರು ಆಗಮನ :
2017 ರಲ್ಲಿ ಐಎಂಡಿ ಇಲಾಖೆಯು ಮೇ.30ಕ್ಕೆ ಮುಂಗಾರು ಮಾರುತ ಕೇರಳ ಪ್ರವೇಶಿಸಲಿದೆ ಎಂದು ಮುನ್ಸೂಚನೆ ನೀಡಿತ್ತು. ಆದರೆ ವಾಸ್ತವದಲ್ಲಿ ಅದೇ ದಿನ ಮುಂಗಾರು ಮಾರುತ ಕೇರಳ ಕರಾವಳಿಗೆ ಅಪ್ಪಳಿಸಿತ್ತು. 2018ರಲ್ಲಿ ತಿಳಿಸಿದ ದಿನದಂದೇ ಅಂದರೆ ಮೇ.29 ರಂದು ಮುಂಗಾರು ಆಗಮಿಸಿತ್ತು. 2019ರಲ್ಲಿ ಜೂ.8 ತಿಳಿಸಿದ್ದರೆ, ಜೂ.8ಕ್ಕೆ ಮಾನ್ ಸೂನ್ ಪ್ರವೇಶಿಸಿತ್ತು. 2020ರಲ್ಲಿ ಜೂ.1 ಹೇಳಿದ್ದರೆ ಜೂ.5ಕ್ಕೆ, 2021ರಲ್ಲಿ ಜೂ.3ರಂದು ಮುನ್ಸೂಚನೆ ಕೊಟ್ಟಿದ್ದರೆ ಅದಕ್ಕು ಮೂರು ದಿನ ಮುಂಚೆ ಅಂದರೆ ಮೇ.31ಕ್ಕೆ ನೈರುತ್ಯ ಮಾನ್ಸೂನ್ ದೇಶದ ಕೇರಳ ಕರಾವಳಿ ಪ್ರವೇಶಿಸಿತ್ತು. 2022ರಲ್ಲಿ ಮೇ.29 ಎನ್ನಲಾಗಿತ್ತಾದರೂ ಮೇ.27ರಂದೇ ಮುಂಗಾರು ಕೇರಳಕ್ಕೆ ಪ್ರವೇಶಿಸಿತ್ತು.
ಒಟ್ಟಿನಲ್ಲಿ ಭಾರತೀಯ ಹವಾಮಾನ ಇಲಾಖೆ ನೀಡಿದ ಮುನ್ಸೂಚನೆಯಂತೆ ವಾಡಿಕೆಯಂತೆ ಮಳೆಯಾದರೆ ದೇಶದ ರೈತರ ಪರಿಸ್ಥಿತಿ ಹಾಗೂ ಆಹಾರಧಾನ್ಯ ಉತ್ಪಾದನೆಗೆ ಮತ್ತಷ್ಟು ಬಲ ತುಂಬಲಿದೆ.