ಬೆಂಗಳೂರು, ಮೇ.17 www.bengaluruwire.com : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿನ ಸ್ವತ್ತುಗಳಿಗೆ ಆಸ್ತಿ ತೆರಿಗೆ ಪಾವತಿಸುತ್ತಿರುವ ತೆರಿಗೆದಾರರಿಗೆ ಶೇ.5ರಷ್ಟು ರಿಯಾಯಿತಿಯನ್ನು ಒಂದು ತಿಂಗಳು ವಿಸ್ತಿರಿಸುವಂತೆ ಪಾಲಿಕೆ ಆಡಳಿತ ಪಕ್ಷದ ಮಾಜಿ ನಾಯಕ ಎಮ್.ಶಿವರಾಜ್ ಮತ್ತು ವಿರೋಧ ಪಕ್ಷದ ಮಾಜಿ ನಾಯಕ ಅಬ್ದುಲ್ ವಾಜೀದ್ ಮುಖ್ಯ ಆಯುಕ್ತರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಏಪ್ರಿಲ್ ತಿಂಗಳಿನಲ್ಲಿ ಸಾಮಾನ್ಯವಾಗಿ ಪಾಲಿಕೆಯು 2023-24ನೇ ಸಾಲಿನ ಆಸ್ತಿ ತೆರಿಗೆ ಪಾವತಿಸುವ ತೆರಿಗೆದಾರರಿಗೆ ಶೇ.5ರಷ್ಟು ರಿಯಾಯಿತಿಯನ್ನು ನೀಡಲಾಗಿರುತ್ತದೆ. ಆದರೆ ಕಂದಾಯ ವಿಭಾಗದ ಎಲ್ಲಾ ಸಿಬ್ಬಂದಿ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಭಾಗಿಯಾಗಿದ್ದರಿಂದ ನಗರದಲ್ಲಿನ ಸ್ವತ್ತಿನ ಹಲವು ಮಾಲೀಕರಿಗೆ ನಿಗಧಿತ ಸಮಯದಲ್ಲಿ ಆಸ್ತಿ ತೆರಿಗೆ ಕಟ್ಟಲು ಸಾಧ್ಯವಾಗಿರಲಿಲ್ಲ.
ಪ್ರಸ್ತುತ ಚುನಾವಣಾ ಕೆಲಸ ಕಾರ್ಯಗಳು ಮುಕ್ತಾಯವಾಗಿರುವುದರಿಂದ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರತಿವರ್ಷ ನಿಗದಿತ ಅವಧಿಯಲ್ಲಿ ಆಸ್ತಿ ತೆರಿಗೆ ಕಟ್ಟುವ ತೆರಿಗೆದಾರರಿಗೆ ಅನುಕೂಲವಾಗುವಂತೆ ತೆರಿಗೆ ರಿಯಾಯಿತಿಯನ್ನು ಒಂದು ತಿಂಗಳು ವಿಸ್ತಿರಿಸುವಂತೆ ಮಾಜಿ ಕಾಂಗ್ರೆಸ್ ಕಾರ್ಪೊರೇಟರ್ ಗಳಾದ ಎಮ್.ಶಿವರಾಜ್ ಮತ್ತು ಅಬ್ದುಲ್ ವಾಜೀದ್ ತಮ್ಮ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.