- ಲೇಖನ ಬರಹ : – ರಾಜಮನ್ನಾರ್, ಹಿರಿಯ ಪತ್ರಕರ್ತ
ರಾಜ್ಯದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೋಡಿ ರಾಜ್ಯದ ಉದ್ದಲಕ್ಕೂ ಬೆವರು ಹರಿಸಿ ವಾರಗಟ್ಟಲೆ ಪ್ರಚಾರ, ತಂತ್ರಗಾರಿಕೆ ಮಾಡಿದರೂ ಉಪಯೋಗವಾಗಲಿಲ್ಲ. ಲಾಭದ ಮಾತಿರಲಿ ನಷ್ಟವೇ ಹೇಳ ತೀರದಷ್ಟು ಹೆಚ್ಚಾಯಿತು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ 104 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ 66ಕ್ಕೆ ಇಳಿದು, ಬರೋಬ್ಬರಿ 38 ಸ್ಥಾನಗಳನ್ನು ಕಳೆದುಕೊಂಡಿದೆ. ಚುನಾವಣಾ ತಂತ್ರಗಾರಿಕೆ ರೂಪಿಸುವಲ್ಲಿ ಚಾಣಾಕ್ಯ ಜೋಡಿ ಎಂದೇ ಬಿಂಬಿಸಿಕೊಂಡಿದ್ದ ಮೋದಿ ಮತ್ತು ಅಮಿತ್ ಶಾ ಜೋಡಿ ನಡೆಸಿದ ಕಮಾಲ್, ಯಾವುದೇ ಜಾದು ಮಾಡಲಿಲ್ಲ.!!
ಬಿಜೆಪಿಯ ಹೀನಾಯ ಸೋಲಿಗೆ ಕಾರಣಗಳೇನು? :
ಮಾರ್ಚ್ 29ರಂದು ಚುನಾವಣಾ ಆಯೋಗ ಕರ್ನಾಟಕದ ವೇಳಾಪಟ್ಟಿಯನ್ನು ಪ್ರಕಟ ಮಾಡಿದ ನಂತರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರುಗಳ ಜೊತೆ ಮಿಂಚಿದ್ದೇ ಮಿಂಚಿದ್ದು. ಟಿವಿ ವಾಹಿನಿಗಳಲ್ಲೂ ಹೆಚ್ಚು ಪ್ರವರ್ಧಮಾನಕ್ಕೆ ಬಂದರು. ಇದು ಯಾವ ರೀತಿಯ ಸಂದೇಶ ರವಾನೆ ಮಾಡಿತ್ತು ಎಂದರೆ ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರಹ್ಲಾದ್ ಜೋಶಿ ಅವರೆ ಮುಂದಿನ ಮುಖ್ಯಮಂತ್ರಿ ಎಂಬ ಸಂದೇಶವನ್ನು ದಿನ ದಿನವೂ ರವಾನೆ ಮಾಡಿಬಿಟ್ಟಿತ್ತು.
ಇದು ಉತ್ತರ ಕರ್ನಾಟಕ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಕೇಂದ್ರ ಕರ್ನಾಟಕ ಭಾಗದ ಲಿಂಗಾಯಿತ ಸಮುದಾಯವನ್ನು ರೊಚ್ಚಿಗೆಬ್ಬಿಸಿತು. ಎಚ್ಚೆತ್ತು ಕೊಳ್ಳದೇ ಹೋದರೆ ನಾಳೆ ಬಿಜೆಪಿ ಬ್ರಾಹ್ಮಣ ಸಮುದಾಯಕ್ಕೆ ಮುಂದಿನ ಮುಖ್ಯಮಂತ್ರಿ ಪಟ್ಟ ಖಚಿತ ಎಂಬ ತೀರ್ಮಾನಕ್ಕೆ ಬಂದೇಬಿಟ್ಟಿತು. ಇದೆ ಕಾಂಗ್ರೆಸ್ ಚೇತರಿಕೆ ದಾರಿಯಾಗಿ, 135 ಸ್ಥಾನಗಳಲ್ಲಿ ಪ್ರಚಂಡ ವಿಜಯ ಸಾಧಿಸಲು ಬಹು ಮುಖ್ಯ ಕಾರಣ. ಬಿಜೆಪಿಯ ಹೀನಾಯ ಸೋಲಿಗೆ ಜೋಶಿಯವರನ್ನು ಬಿಂಬಿಸುವ ನೇರ, ಇಲ್ಲವೇ ಪರೋಕ್ಷ ಪ್ರಯತ್ನ ಶೇಕಡ 90 ರಷ್ಟು ಕಾರಣ ಎಂಬುದು ರಾಜಕೀಯ ಪಂಡಿತರ ಸ್ಪಷ್ಟ ಅಭಿಪ್ರಾಯ. ನಿಲುವು.
ಹಾಗೆಂದ ಮಾತ್ರಕ್ಕೆ ಬಿಜೆಪಿಯ ಮುಖಭಂಗಕ್ಕೆ, ಹೀನಾಯ ಸೋಲಿಗೆ ಬೇರೆ ಕಾರಣಗಳು ಇಲ್ಲವೇ ಇಲ್ಲ ಎಂದು ಹೇಳಲಾಗದು. ಬಿ.ಎಸ್.ಯಡಿಯೂರಪ್ಪ ಅವರನ್ನು ಕಣ್ಣೀರು ಹಾಕಿಸಿ ಕೆಳಗೆ ಇಳಿಯುವಂತೆ ಮಾಡಿದ್ದು, ಲಿಂಗಾಯಿತ ಸಮುದಾಯದ ಮೇಲೆ ಪರಿಣಾಮ ಬೀರಿತ್ತು. ಬಿಜೆಪಿಯ ಅಧಪತನಕ್ಕೆ ಇದು ಒಂದು ಕಾರಣ. ಈ ಚುನಾವಣೆಯಲ್ಲಿ ಬಿಜೆಪಿಯ ಮೋದಿ ಮತ್ತು ಅಮಿತ್ ಶಾ ಜೋಡಿ ಸಮಸ್ತ ಪ್ರಚಾರದ ಹೊಣೆ ನಿರ್ವಹಿಸಿದ್ದರೆ ಹೊರತು, ಯಡಿಯೂರಪ್ಪ ಅವರು ಸರ್ವ ಸ್ವತಂತ್ರ ನಾಯಕರಾಗಿ ಪ್ರಚಾರ ಮಾಡಲು ಅವಕಾಶವೇ ಸಿಗಲಿಲ್ಲ.
ಹೋಗಲಿ ಅವರ ಪುತ್ರ ಬಿ.ವೈ.ವಿಜಯೇಂದ್ರ ಸಹ ನಿರೀಕ್ಷಿತ ಮಟ್ಟದಲ್ಲಿ ರಾಜ್ಯದ ಉದ್ದಗಲಕ್ಕೂ ಪ್ರವಾಸ, ಪ್ರಚಾರ ಮಾಡದೇ ಕೇವಲ ಶಿಕಾರಿಪುರಕ್ಕೆ ಅಷ್ಟೇ ಸೀಮಿತವಾದದ್ದು , ಲಿಂಗಾಯಿತ ಸಮುದಾಯಕ್ಕೆ ಬೇರೆ ರೀತಿಯ ಸಂದೇಶ ರವಾನೆ ಮಾಡಿತ್ತು . ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿಗೆ ಟಿಕೆಟ್ ನಿರಾಕರಣೆ ಮಾಡಿದ್ದು ಪಕ್ಷದ ಹಿನ್ನಡೆಗೆ ಸ್ವಲ್ಪಮಟ್ಟಿನ ಕಾರಣವಾಗಿದೆ.
ಎಷ್ಟೇ ಕಷ್ಟವಾದರೂ ಲಿಂಗಾಯಿತರಿಗೆ ಬಿಜೆಪಿಯೇ ಬಹಳ ಆಪ್ಯಾಯಮಾನವಾಗಿತ್ತು. ಬಹಳ ಅವಮಾನ – ಅಪಮಾನ ಸಹಿಸಿಕೊಂಡು ಸಮುದಾಯದ ನಾಯಕರು ಬೇರೆ ಮಾತಿಲ್ಲದೇ ಬಿಜೆಪಿಯಲ್ಲೇ ಮುಂದುವರೆದಿದ್ದರು. ಇದನ್ನೇ ಪ್ರಮುಖವಾಗಿ ಪರಿಗಣಿಸಿದ ಬಿಜೆಪಿಯ ಕೇಂದ್ರ ನಾಯಕರು ಹೇಗಿದ್ದರೂ ಲಿಂಗಾಯಿತ ಸಮುದಾಯ ಕಾಂಗ್ರೆಸ್ಗೆ ಅಥವಾ ಜೆಡಿಎಸ್ ಕಡೆ್ಗೆ ಹೋಗುವುದಿಲ್ಲ ಹೀಗಾಗಿ ನಾವು ಏನು ಮಾಡಿದರೂ ನಡೆಯುತ್ತದೆ ಎಂಬ ಲೆಕ್ಕಚಾರಕ್ಕೆ ಬಂದಿತ್ತು.
ಟಿಕೆಟ್ ಹಂಚಿಕೆ ಅಭ್ಯರ್ಥಿಗಳ ಆಯ್ಕೆಯಲ್ಲೂ ಮೋದಿ ಅಮಿತ್ ಶಾ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರುಗಳ ಪಾತ್ರವೇ ಹೆಚ್ಚಾಗಿತ್ತು. ರಾಜ್ಯದ ಜನರನ್ನು, ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಬದಲಿಗೆ ನಾವೇ ಎಲ್ಲವನ್ನೂ ಮಾಡಿ ತೋರಿಸುತ್ತೇವೆ ಎಂಬ ಹುಚ್ಚುತನಕ್ಕೆ, ಸಾಹಸಕ್ಕೆ ಮುಂದಾಗಿದ್ದು, ಮತ್ತೊಂದು ಕಾರಣ. ಹಿಂದುಳಿದ ವರ್ಗಗಳ ಸಮುದಾಯವನ್ನು ದೂರಮಾಡಿದ್ದು, ಅವರಿಗೆ ಪ್ರದಾನ್ಯತೆ ನೀಡದೇ ಹೋದದ್ದು ಸಹ ಮುಳುವಾಯಿತು.
ಮೂರನೆಯದಾಗಿ, ರಾಜ್ಯದಲ್ಲಿ ಬಿಜೆಪಿಯ ನಾಯಕತ್ವ ಶೂನ್ಯವಾಗಿತ್ತು. ಅದರಲ್ಲೂ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದ ನಂತರ ಪರಿಸ್ಥಿತಿ ಸೂತ್ರಕಿತ್ತ ಗಾಳಿಯಪಟದಂತಾಗಿತ್ತು. ಮೋದಿ ಮೇಲೆ ಪೂರ್ಣ ಅವಲಂಬನೆ ಹೆಚ್ಚಾಯಿತು. ಇದು ಎಲ್ಲಿಯವರೆಗೆ ಹೋಯಿತು ಎಂದರೆ ನಾವು ಯಾಕೆ ಕಷ್ಟಪಡಬೇಕು ಪ್ರಧಾನಿ ಮೋದಿ ರಾಜ್ಯಕ್ಕೆ ಬರುತ್ತಾರೆ, ಅಮಿತ್ ಶಾ ಬರುತ್ತಾರೆ ಅವರೇ ಎಲ್ಲಾ ತಂತ್ರಗಾರಿಕೆ ಮಾಡುತ್ತಾರೆ. ಪಕ್ಷವನ್ನು ವಿಜಯದ ಹಾದಿಗೆ ಕೊಂಡೊಯ್ಯುತ್ತಾರೆ ನಂತರ ನಾವು ಮಂತ್ರಿಗಳಾಗಿ ಗೂಟದ ಕಾರಿನಲ್ಲಿ ತಿರುಗಾಡಬಹುದು ಎನ್ನುವ ಮಟ್ಟಕ್ಕೆ ಸ್ಥಳೀಯ ನಾಯಕರು ಬಂದಿದ್ದು, ಮಗದೊಂದು ಕಾರಣ.
ಬಸವರಾಜ ಬೊಮ್ಮಾಯಿ ಅವರ ಹೊಣೆಗೇಡಿ- ಅಸಮರ್ಥ ಆಡಳಿತ ಬಿಜೆಪಿಯ ವಿರುದ್ಧ ಜನ ರೋಸಿ ಹೋಗುವಂತೆ ಮಾಡಿತು. ಚುನಾವಣೆ ಹತ್ತಿರವಾಗುತ್ತಿದ್ದ ಸಮಯದಲ್ಲಿ ಅವರು ತೆಗೆದುಕೊಂಡ ನಿರೀಕ್ಷಿತ ಲಾಭದ ಯೋಜನೆಗಳೆಲ್ಲಾ ನಯಾ ಪೈಸೆ ಕೆಲಸಕ್ಕೆ ಬರಲೇ ಇಲ್ಲ!! ಮುಸ್ಲಿಂಮರಿಗೆ ನೀಡಲಾಗಿದ್ದ ಶೇ.4ರಷ್ಟು ಮೀಸಲಾತಿಯನ್ನು ಸಂಪೂರ್ಣವಾಗಿ ಕಿತ್ತುಹಾಕಿ ಅವರನ್ನು ಆರ್ಥಿಕವಾಗಿ ಹಿಂದುಳಿದ ವರ್ಗದ ಶ್ರೇಣಿಗೆ ಸೇರಿಸುವ ಘೋಷಣೆ, ಲಿಂಗಾಯಿತ ಮತ್ತು ಒಕ್ಕಲಿಗ ಸಮುದಾಯಕ್ಕೆ ಅದನ್ನು ಹಂಚಿಕೆ ಮಾಡಿದ್ದು. ಹಾಗು ಪರಿಶಿಷ್ಟ ಜಾತಿ ಮತ್ತು ವರ್ಗದ ಒಳ ಮೀಸಲು ಪ್ರಮಾಣವನ್ನು ಹೆಚ್ಚಿಸಿದ್ದು ಲಾಭವಾಗಲಿಲ್ಲ .
ಇದು ಬಿಜೆಪಿ ನಾಯಕರ ನಿರೀಕ್ಷೆ ಕೆಲಸ ಮಾಡಿದ್ದರೆ, ನಡೆದಿದ್ದರೆ ಶ್ರೀರಾಮುಲು ಅಂತಹ ನಾಯಕ ಸೋಲುವ ಅಗತ್ಯ ಬರುತ್ತಿರಲೂ ಇಲ್ಲ. ಲಿಂಗಾಯಿತ ಸಮುದಾಯ ಯಾವ ರೀತಿ ಬಿಜೆಪಿ ವಿರುದ್ಧ ತಿರುಗಿ ಸೆಟೆದು ನಿಂತು ಕಾಂಗ್ರೆಸ್ನ್ನು ಅಪ್ಪಿಕೊಂಡಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬಿಗಿಯಾಗಿ ಅಪ್ಪಿಕೊಂಡಿತು.
ಇದರಿಂಗಾಗಿ ನಿರೀಕ್ಷೆಗೂ ಮೀರಿದ ಜಯ ಕಾಂಗ್ರೆಸ್ಸಿಗೆ ದೊರಕಿತು. ರಾಜ್ಯದ ಆಡಳಿತದ ಬಗ್ಗೆ ಜನತೆ ಎಷ್ಟು ರೋಸಿಹೋಗಿದ್ದರೂ ಎಂಬುದಕ್ಕೆ ಮತ್ತೊಂದು ಉದಾಹರಣೆ ಎಂದರೆ ಬೊಮ್ಮಾಯಿ ಸಂಪುಟದ 12 ಸಚಿವರು ಹಾಗೂ ಹಾಲಿ ಬಿಜೆಪಿ ಶಾಸಕರ ಪೈಕಿ 38 ಜನ ಶಾಸಕರು ಸೋತು ಸುಣ್ಣವಾಗಿ ರಾಜಕೀಯವಾಗಿ ನಿವೃತ್ತಿಯ ಆಲೋಚನೆ ಮಾಡುವ ಪರಿಸ್ಥಿತಿಗೆ ನೂಕಿತು.
ಅನ್ನಭಾಗ್ಯ ಯೋಜನೆಯಲ್ಲಿ ನೀಡುವ ಅಕ್ಕಿಯ ಪ್ರಮಾಣ ಕಡಿಮೆ ಮಾಡಿದ್ದು, ಮುಸ್ಲಿಂರ ಮೀಸಲಾತಿಯನ್ನು ತೆಗೆದಿದ್ದು, ಹಲಾಲ್ ಕಟ್, ಹಿಜಾಬ್, ಪಠ್ಯಪುಸ್ತಕ ಪರಿಷ್ಕರಣೆ, ಪಿಎಸ್ಐ ನೇಮಕಾತಿ ಹಗರಣ ಜನರ ಮನಸ್ಸನ್ನು ಘಾಸಿಗೊಳಿಸಿದ್ದವು. ಬಿಜೆಪಿ ಬೇಡವಾದ ಕೆಲಸಗಳನ್ನೇ ಮಾಡುತ್ತಿದೆ. ಭಾವನೆಗಳನ್ನು ಕೆರಳಿಸಿ ಆಟವಾಡುತ್ತಿದೆ. ಅದರ ಮುಖಾಂತರವೇ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿದೆ ಎಂಬ ಜಾಗೃತಿ ಸಂದೇಶ ರವಾನೆಯಾಗಿದ್ದು ಬಿಜೆಪಿ ಪಾಲಿಗೆ ಮುಳುವಾಯಿತು.
ಎಂಟು ಜಿಲ್ಲೆಗಳಲ್ಲಿ ಬಿಜೆಪಿ ಸಾಧನೆ ಶೂನ್ಯ. ಖಾತೆಯನ್ನೇ ತೆರೆಯಲಾಗಲಿಲ್ಲ. ಇನ್ನೆಂಟು ಜಿಲ್ಲೆಗಳಲ್ಲಿ ತಲಾ ಒಬ್ಬರು ಶಾಸಕರು ಹಾಗು ಏಳು ಜಿಲ್ಲೆಗಳಲ್ಲಿ ತಲಾ ಎರಡು ಶಾಸಕರು ಆಯ್ಕೆಯಾಗಿದ್ದಾರೆ. 23 ಜಿಲ್ಲೆಗಳಿಂದ 22 ಬಿಜೆಪಿ ಶಾಸಕರು ಆಯ್ಕೆಯಾಗಿದ್ದಾರೆ.
ಸತ್ಯವೋ ಸುಳ್ಳೋ ಬೇರೆ ಮಾತು :
ಚುನಾವಣೆಗೆ ಇನ್ನು 2-3 ದಿನ ಇದೇ ಎನ್ನುವಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಸುದ್ದಿ ಕೂಡ ಬಿಜೆಪಿಯನ್ನು ಹೀನಾಯ ಸ್ಥಿತಿಗೆ ಹೋಗುವಂತೆ ಮಾಡಿದ್ದು ಸತ್ಯವೇ! ಸುದ್ದಿ ಏನಪ್ಪ ಎಂದರೆ ರಾಜಕೀಯ ಸಭೆಯಲ್ಲಿ ಬಿ.ಎಲ್.ಸಂತೋಷ್ ಲಿಂಗಾಯಿತರ ಬೆಂಬಲ, ಬಿಜೆಪಿಗೆ ಅವಶ್ಯಕತೆ ಇಲ್ಲ. ಯಡಿಯೂರಪ್ಪ ಚಿರಂಜೀವಿ ಅಲ್ಲ.
ಅವರಿಲ್ಲದೆಯೂ ಪಕ್ಷವನ್ನು ಗೆಲುವಿನ ದಡಮುಟ್ಟಿಸಲು ಸಾಧ್ಯವಿದೆ. ಹೀಗಾಗಿ ಲಿಂಗಾಯಿತ ಬೆಂಬಲ ಬೇಕಿಲ್ಲ ಎಂದು ಹೇಳಿದ್ದಾರೆ, ಆಡಿದ್ದಾರೆ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದಿದ್ದು, ಸ್ವಲ್ಪಮಟ್ಟಿನ ಪರಿಣಾಮ ಬೀರಿದೆ. ಸಂತೋಷ್ ಹಾಗೆ ಹೇಳಿದ್ದರೋ ಇಲ್ಲವೋ ಗೊತ್ತಿಲ್ಲ. ಆದರೆ ಇದು ಮತದಾರರ ಮೇಲೆ ಪರಿಣಾಮ ಬೀರಿ ಬಿಜೆಪಿಯನ್ನು ದೂರತಳ್ಳಿ ಬೇರೆ ಪಕ್ಷದ ಕಡೆ ನೋಡುವಂತೆ ಮಾಡಿದ್ದು ಪೂರ್ಣ ಸುಳ್ಲಲ್ಲ.
ನೆರವಿಗೆ ಬಂದ ಕೈ ಗ್ಯಾರಂಟಿ ಕಾರ್ಡ್ :
ಹದಗೆಟ್ಟ ಆಡಳಿತದಿಂದ ಭ್ರಮನಿರಸನಗೊಂಡ ಜನತೆಗೆ ದಿನನಿತ್ಯದ ಅವಶ್ಯಕ ಪದಾರ್ಥಗಳ ಬೆಲೆ ಏರಿಕೆ ಅದರಲ್ಲೂ ವಿಶೇಷವಾಗಿ ಅಡುಗೆ ಅನಿಲದ ಸಿಲಿಂಡರ್ ಬೆಲೆ 1200ರ ಗಡಿ ದಾಡಿದ್ದು, 70ರೂ.ಗೆ ಸಿಗುತ್ತಿದ್ದ ಪೆಟ್ರೋಲ್ ಡಿಸೇಲ್ ಲೀ. 100 ರೂ. ಮತ್ತು 120 ರೂ. ಗಡಿದಾಟಿದ್ದು . ಹೀಗೆ ಜನಸಾಮಾನ್ಯರ ಬದುಕು ಮೂರಾಬಟ್ಟೆಯಾಗಿರುವ ಸನ್ನಿವೇಶದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ ಪ್ರಮುಖ ಗ್ಯಾರೆಂಟಿ ಬಿಜೆಪಿಯನ್ನು ಮಕಾಡೆ ಮಲಗಿಸುವಲ್ಲಿ ಕೊಂಚ ಮಟ್ಟಿಗೆ ಸಹಾಯ ಮಾಡಿತ್ತು ಎಂಬ ವಾದವನ್ನು ಒಪ್ಪ ಬಹುದು.
ಮನೆಯ ಒಡತಿಗೆ ತಿಂಗಳಿಗೆ 2000ರೂ. ನಿರುದ್ಯೋಗಿ ಪದವೀಧರರಿಗೆ 3000 ರೂ., ಡಿಪ್ಲೋಮಾ ಪದವಿದರರಿಗೆ 3೦೦೦ರೂ. ತಿಂಗಳಿಗೆ 200 ಯೂನಿಟ್ ಕರೆಂಟ್ ಉಚಿತ. ಮಹಿಳೆಯರಿಗೆ ಬಸ್ ಪಾಸ್ ಖಚಿತ, ತಿಂಗಳಿಗೆ 10 ಕೆಜಿ ಅಕ್ಕಿ ಉಚಿತ ಎಂಬ ನಿರ್ದಿಷ್ಟ ಗ್ಯಾರೆಂಟಿ ಕಾರ್ಯಕ್ರಮಗಳು ಮತದಾರರ ಮೇಲೆ ಸ್ಪಲ್ಪಮಟ್ಟಿನ ಪ್ರಭಾವ ಬೀರಿ ಬಡವರು ಮತ್ತು ಮಧ್ಯಮವರ್ಗ ಕಾಂಗ್ರೆಸ್ ಕಡೆ ಕಣ್ಣು ಮಿಟುಕಿಸಿ ನೋಡುವಂತೆ ಮಾಡಿದ್ದು ಕರೆ.
ನಂಬಲಿಲ್ಲ, ಕೆಲಸಕ್ಕೆ ಬರಲಿಲ್ಲ ಮಿಷನ್ 163 ಎಂಬ ಸಂಕಲ್ಪದೊಂದಿಗೆ ಜನತಾದಳದ ನಾಯಕ ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಉದ್ದಗಲಕ್ಕೂ ಪಂಚರತ್ನ ಯಾತ್ರೆ ಹಾಗು ಜಲಧಾರೆ ಎಂಬ ಕಾರ್ಯಕ್ರಮ ಮಾಡಿದರೂ ಅದು ಪ್ರಯೋಜನಕ್ಕೆ ಬರಲಿಲ್ಲ. ಜನತೆ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.ಹೋಗಲಿ ಎಂದರೆ ಒಕ್ಕಲಿಗ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಇದು ಕೆಲಸ ಮಾಡಲಿಲ್ಲ.
ಶೇಕಡವಾರು ಮತ ಪ್ರಮಾಣ:
ರಾಜ್ಯದಲ್ಲಿ ಬಿಜೆಪಿ ಹೀನಾಯವಾಗಿ ಸೋಲುಕಂಡಿದ್ದರೂ, ಶೇಕಡವಾರು ಮತಗಳಿಕೆಯಲ್ಲಿ ಅದಕ್ಕೆ ಸೋಲಾಗಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೇ.36ರಷ್ಟು ಮತ ಗಳಿಸಿಕೊಂಡಿತು. ಈ ಬಾರಿಯ ಚುನಾವಣೆಯಲ್ಲೂ ಶೇ.36ರಷ್ಟೇ ಮತಗಳಿಕೆ ಗಳಿಸಿದ್ದರೂ 38 ಕ್ಷೇತ್ರಗಳನ್ನು ಬಿಜೆಪಿ ಕಳೆದುಕೊಂಡಿದೆ. ಪರ್ಸೆಂಟೆಜ್ ಲೆಕ್ಕದಲ್ಲಿ ಹೇಳುವುದಾದರೆ ಶೇ.ಸುಮಾರು 58ರಷ್ಟು ನಷ್ಟವಾಗಿದೆ.
ಕಾಂಗೆಸ್ ಮತಗಳಿಕೆ ಕಳೆದ ಬಾರಿಗಿಂತ ಶೇ.5ರಷ್ಟು ಹೆಚ್ಚಾಗಿದ್ದರೂ, 55 ಸ್ಥಾನಗಳನ್ನು ಹೆಚ್ಚುವರಿಯಾಗಿ ಪಡೆದುಕೊಂಡು ಪ್ರಚಂಡ ಬಹುಮತದ ನಗೆಬೀರಿದೆ. ಈ ಬಾರಿಯ ಚುನಾವಣೆಯಲ್ಲಿ ಶೇ.73ರಷ್ಟು ದಾಖಲೆಯ ಮತದಾನವಾಗಿತ್ತು. ಕಳೆದ ಬಾರಿ ಜೆಡಿಎಸ್ ಶೇ.18ರಷ್ಟು ಮತಗಳಿಕೆಯೊಂದಿಗೆ 37ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ ಶೇ.13 ರಷ್ಟು ಮತಗಳಿಕೆಯೊಂದಿಗೆ ಕೇವಲ 19 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳುಬೇಕಾಯಿತು.
ಕಾಂಗ್ರೆಸ್ ಮತ್ತು ಬಿಜೆಪಿಯ ಮತ ಹಂಚಿಕೆ ನಡುವೆ ಶೇ.7ರಷ್ಟು ವ್ಯತ್ಯಾಸವಿದ್ದರೂ 69 ಸ್ಥಾನಗಳ ಏರಿಳಿತಕ್ಕೆ ಕಾರಣವಾಗಿದೆ. ಕಿತ್ತೂರು ಕರ್ನಾಟಕ, ಕೇಂದ್ರ ಕರ್ನಾಟಕ ಭಾಗದ ಬಹುತೇಕ ಲಿಗಾಯಿತ ಮತ್ತು ಪರಿಶಿಷ್ಟ ಸಮುದಾಯದ ಹಾಗೂ ಹಿಂದುಳಿದ ವರ್ಗದ ಮತದಾರರು ಕಾಂಗ್ರೆಸ್ ಅಪ್ಪಿಕೊಂಡಿದ್ದು ಬಿಜೆಪಿ ಪೆಚ್ಚು ಮೋರೆ ಹಾಕಿ ಮಲಗಲು ಮತ್ತು ಕಾಂಗ್ರೆಸ್ ಭೀಮ ಬಲ ಗಳಿಸಲು ಕಾರಣವಾಯಿತು. ಹೀಗಾಗಿ ಅತಿ ಬುದ್ದಿವಂತಿಕೆ ತೋರಿಸಲು ಹೋಗಿ ಬಿಜೆಪಿ ತನ್ನ ತಲೆಯ ಮೇಲೆ ತಾನೇ ಚಪ್ಪಡಿ ಎಳೆದುಕೊಂಡಿತು.!!