ಬೆಂಗಳೂರು, ಮೇ.15 www.bengaluruwire.com : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಮೇ.10 ರಂದು ನಡೆದು ಫಲಿತಾಂಶವೂ ಪ್ರಕಟವಾಗಿದ್ದು ಕೇಂದ್ರ ಚುನಾವಣಾ ಆಯೋಗ ತಕ್ಷಣದಿಂದಲೇ ಜಾರಿಗೆ ಬರುವಂತೆ ಇಂದಿನಿಂದಲೇ ಚುನಾವಣಾ ನೀತಿಸಂಹಿತೆಯನ್ನು ಹಿಂಪಡೆದಿದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಮಾರ್ಚ್ 29ರಂದು ದಿನಾಂಕ ಘೋಷಿಸಿದ್ದು, ಅಂದಿನಿಂದಲೇ ನೀತಿ ಸಂಹಿತೆ ಜಾರಿಗೆ ಬಂದಿತ್ತು. ನೀತಿ ಸಂಹಿತೆ ಜಾರಿಯಲ್ಲಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಹಲವು ನಿರ್ಬಂಧಗಳನ್ನು ವಿಧಿಸಲಾಗಿತ್ತು. ಹೀಗಾಗಿ ಹೊಸದಾಗಿ ಟೆಂಡರ್ ಕರೆಯುವುದಾಗಲೀ, ಟೆಂಡರ್ ಹಂಚಿಕೆ ಕಾರ್ಯವೂ ಸೇರಿದಂತೆ ಹಲವು ಸರ್ಕಾರಿ ಕೆಲಸಗಳು ಬಾಕಿ ಉಳಿದಿದ್ದವು. ಇದೀಗ ನೀತಿಸಂಹಿತೆ ಒಂದೆಡೆ ತೆರವು, ಮತ್ತೊಂದೆಡೆ ಕಾಂಗ್ರೆಸ್ ಬಹುಮತ ಪಡೆದು ಕೆಲವು ದಿನಗಳಲ್ಲಿ ಪೂರ್ಣ ರೀತಿಯಲ್ಲಿ ಸರ್ಕಾರದ ಆಡಳಿತ ನಡೆಸಲಿದೆ.
ಮೇ 13 ರಂದು ರಾಜ್ಯದಲ್ಲಿ ಮತ ಎಣಿಕೆ ನಡೆದಿದ್ದು, 224 ವಿಧಾನಸಭಾ ಕ್ಷೇತ್ರಗಳ ಸಂಪೂರ್ಣ ಫಲಿತಾಂಶ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಇದೀಗ ಕೇಂದ್ರ ಚುನಾವಣಾ ಆಯೋಗ ನೀತಿ ಸಂಹಿತೆಯನ್ನು ಹಿಂಪಡೆದುಕೊಂಡಿದೆ. ಇದೇ ರೀತಿ ಲೋಕಸಭೆ ಹಾಗೂ ವಿಧಾನಸಭಾ ಉಪ ಚುನಾವಣೆ ನಡೆದ ಮೇಘಾಲಯ, ಒಡಿಸ್ಸಾ, ಪಂಜಾಬ್ ಹಾಗೂ ಉತ್ತರ ಪ್ರದೇಶ ರಾಜ್ಯಗಳ ಸಂಬಂಧಿಸಿದ ಕ್ಷೇತ್ರಗಳಲ್ಲಿ ಹೇರಿದ್ದ ನೀತಿಸಂಹಿತೆಯನ್ನು ಕೇಂದ್ರ ಚುನಾವಣಾ ಆಯೋಗದ ಕಾರ್ಯದರ್ಶಿ ಅಶ್ವಾನಿ ಕುಮಾರ್ ಮಾಹಲ್ ಹಿಂಪಡೆಯಲು ಚುನಾವಣಾ ಅಧಿಕಾರಿಗಳಿಗೆ ಹಾಗೂ ಸಂಬಂಧಿಸಿದ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ.