ಬೆಂಗಳೂರು, ಮೇ.13 www.bengaluruwire.com : ಕರ್ನಾಟಕದ ಮತದಾರರ ಬಹು ನಿರೀಕ್ಷತ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಬೆಳಗ್ಗೆ 8 ಗಂಟೆಯಿಂದಲೇ ರಾಜ್ಯಾದ್ಯಂತ ಭದ್ರತಾ ಕೊಠಡಿಯಲ್ಲಿದ್ದ ಮತಯಂತ್ರಗಳನ್ನು ಚುನವಣಾಧಿಕಾರಿಗಳ ಸಮ್ಮುಖದಲ್ಲಿ ಹಂತ ಹಂತವಾಗಿ ಹೊರ ತೆರೆಯಲಾಗುತ್ತಿದೆ.
ಅದಕ್ಕೂ ಮೊದಲು ಅಂಚೆ ಮತವನ್ನು ಎಣಿಕೆ ಆರಂಭವಾಗಿದ್ದು, ಅದರ ಬಳಿಕ ಇವಿಎಂ ಮತದಾನದ ಮತ ಎಣಿಕೆ ಕಾರ್ಯ ನಡೆಯಲಿದೆ. ಕಾಂಗ್ರೆಸ್ – ಬಿಜೆಪಿ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದ್ದು, ಚುನಾವಣೋತ್ತರ ವಿವಿಧ ಸಂಸ್ಥೆಗಳ ಸಮೀಕ್ಷೆಗಳು ಕಾಂಗ್ರೆಸ್ ನತ್ತ ಮತದಾರನ ಒಲವಿರುವುದನ್ನು ಎತ್ತಿ ತೋರಿಸಿತ್ತು. ಅಂತಿಮವಾಗಿ ಮಧ್ಯಾಹ್ನ 12 ಗಂಟೆಯ ವೇಳೆಗೆಲ್ಲ ರಾಜ್ಯದ ವಿಧಾನಸಭಾ ಚುನಾವಣೆಯ ಕುರಿತು ಒಂದು ಸ್ಪಷ್ಟ ಚಿತ್ರ ದೊರೆಯುವ ನಿರೀಕ್ಷೆಯಿದೆ.
ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ರಾಜ್ಯದಲ್ಲಿ ಈ ಬಾರಿ ದಾಖಲೆ ಪ್ರಮಾಣದಲ್ಲಿ ಶೇ. 73.19ರಷ್ಟು ಮತ ಚಲಾವಣೆಯಾಗಿದೆ. ಒಟ್ಟು 5,30,85,566 ಮತದಾರರ ಪೈಕಿ 3,88,51,807 ಜನರಿಂದ ಮತದಾನವಾಗಿತ್ತು. 2,66,82,156 ಪುರುಷರ ಪೈಕಿ 1,96,58,398 ಪುರುಷರು ತಮ್ಮ ಹಕ್ಕು ಚಲಾವಣೆ ಮಾಡಿದ್ದರು. 2,63,98,483 ಮಹಿಳಾ ಮತದಾರರ ಪೈಕಿ 1,91,92,372 ಮಹಿಳೆಯರಿಂದ ಮತದಾನವಾಗಿತ್ತು. 4,927 ಮಂಗಳಮುಖಿಯರ ಪೈಕಿ 1037 ಮಂಗಳಮುಖಿಯರು ತಮ್ಮ ಹಕ್ಕು ಚಲಾಯಿಸಿದ್ದರು.
ಚುನಾವಣಾ ಆಯೋಗದ ಈ ಮುಂದಿನ ಲಿಂಕ್ ಒತ್ತಿದಲ್ಲಿ ವಿವಿಧ ಪಕ್ಷಗಳ ಚುನಾವಣಾ ಫಲಿತಾಂಶದಲ್ಲಿ ಆಯಾ ಪ್ರಮುಖ ಪಕ್ಷಗಳ ಬಲಾಬಲ ಮಾಹಿತಿ ದೊರಕಲಿದೆ : https://results.eci.gov.in/ResultAcGenMay2023/partywiseresult-S10.htm