ಬೆಂಗಳೂರು, ಮೇ.9 www.bengaluruwire.com : ರಾಜ್ಯದ ವಿಧಾನಸಭೆ ಚುನಾವಣೆ ಮೇ.10 ನಡೆಯಲಿದ್ದು, ಮೇ.8ರಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಲಿಖಿತ ದೂರು ನೀಡಲಾಗಿದೆ ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಾ ಸಾಕಷ್ಟು ವೈರಲ್ ಆಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಅವರು ಟ್ವಿಟ್ ಮಾಡಿ ಇದೊಂದು ನಕಲಿ ಪತ್ರ ಎಂದು ಸ್ಪಷ್ಟಪಡಿಸಿದ್ದಾರೆ.
‘ಸೋಲಿನ ಭೀತಿಯಿಂದ ಹತಾಶೆಗೀಡಾಗಿರುವ ಬಿಜೆಪಿ ನನ್ನ ಹೆಸರಿನ ಖೊಟ್ಟಿ ಪತ್ರವನ್ನು ರಚಿಸಿ ಅಪಪ್ರಚಾರ ಮಾಡುತ್ತಿದೆ. ಇಂತಹ ಯಾವ ಪತ್ರವನ್ನೂ ನಾನು ಬರೆದಿಲ್ಲ. ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಈ ಸುಳ್ಳು ಪ್ರಚಾರಕ್ಕೆ ಬಲಿಯಾಗಬಾರದು’ ಎಂದು ಮನವಿ ಮಾಡಿದ್ದಾರೆ.
‘ನನ್ನ ಮತ್ತು ಡಿ.ಕೆ ಶಿವಕುಮಾರ್ ಸಂಬಂಧ ಸೌಹಾರ್ದಯುತವಾಗಿದೆ, ಇದಕ್ಕೆ ಹುಳಿ ಹಿಂಡುವ ಪ್ರಯತ್ನ ಯಶಸ್ಸು ಕಾಣಲಾರದು. ಶೀಘ್ರದಲ್ಲಿಯೇ ಪೊಲೀಸರಿಗೆ ದೂರು ನೀಡಿ ಈ ಕಿಡಿಗೇಡಿತನದ ಪತ್ರ ಸೃಷ್ಟಿಸಿ ಹಂಚುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಲು ಒತ್ತಾಯಿಸಲಿದ್ದೇನೆ’ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆ ಪತ್ರದಲ್ಲೇನಿದೆ? :
‘ರಾಜ್ಯ ಕಾಂಗ್ರೆಸ್‌ನಲ್ಲಿ ಇತ್ತೀಚೆಗೆ ನಡೆಯುತ್ತಿರುವ ವಿದ್ಯಮಾನಗಳು ಬಹಳ ಬೇಸರವನ್ನುಂಟು ಮಾಡಿದೆ. ಇಡೀ ರಾಜ್ಯದ ತುಂಬಾ ಸುತ್ತಾಡಿ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರಬೇಕೆನ್ನುವುದು ನಮ್ಮ ಉದ್ದೇಶವಾಗಿತ್ತು. ತಮಗಿಂತ ವಯಸ್ಸಿನಲ್ಲಿ ಕಿರಿಯರು ಹಾಗೂ ಪಕ್ಷದ ಅಧ್ಯಕ್ಷರಾದ ಶ್ರೀ ಡಿಕೆ ಶಿವಕುಮಾರ್ ತೆಗೆದುಕೊಳ್ಳುತ್ತಿರುವ ನಿರ್ಧಾರ, ನಡೆದುಕೊಳ್ಳುತ್ತಿರುವ ವರ್ತನೆ ಬಗ್ಗೆ ಅಸಮಾಧಾನವಿದೆ.’ ಎಂದು ಸಿದ್ದರಾಮಯ್ಯ ಉಲ್ಲೇಖಿಸಿದ್ದರೆಂದು ಆ ನಕಲಿ ಎನ್ನಲಾದ ಪತ್ರದಲ್ಲಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಡಿಕೆ ಶಿವಕುಮಾರ್ ವಿರುದ್ಧ ಸಿದ್ದರಾಮಯ್ಯ ಬರೆದಿದ್ದಾರೆ ಎನ್ನಲಾದ ನಕಲಿ ಪತ್ರದ ದಾಖಲೆ
‘ಕಳೆದ ಒಂದು ವರ್ಷದಿಂದ ರಾಹುಲ್ ಗಾಂಧಿಯವರ ತಂಡ ಮಾರ್ಗದರ್ಶನದಂತೆ ಉತ್ತಮವಾಗಿ ಕ್ಯಾಂಪೇನ್ ಮಾಡಿಕೊಂಡು ಬಂದಿದ್ದೆವು. ಡಿಕೆ ಶಿವಕುಮಾರ್ ಅವರು ತಾವೇ ಮುಂದಿನ ಮುಖ್ಯಮಂತ್ರಿ ಎಂದು ಜನರ ಮುಂದೆ ಘೋಷಣೆ ಕೂಗಿಸಿಕೊಳ್ಳುತ್ತಾ ನನ್ನ ಅಪಾರ ಅಭಿಮಾನಿಗಳಲ್ಲಿ ಗೊಂದಲ ಉಂಟು ಮಾಡಿದ್ದಾರೆ. ಎಲ್ಲ ನಿರ್ಣಯವನ್ನು ಏಕಮುಖವಾಗಿ ತೆಗೆದುಕೊಳ್ಳುತ್ತಿದ್ದಾರೆ.’
‘ಕಾಂಗ್ರೆಸ್ ಪಕ್ಷದ ಹಿತದೃಷ್ಟಿಯಿಂದಾಗಿ ನಾನು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ತೀರ್ಮಾನ ಮಾಡಿದ್ದೆ. ಆದರೆ ಕೋಲಾರ ಟಿಕೆಟ್ ತಪ್ಪಿಸುವಲ್ಲಿ ಡಿಕೆ ಶಿವಕುಮಾರ್ ಅವರು ಯಶಸ್ವಿಯಾಗಿದ್ದಾರೆ. ಆದರೂ ರಾಜ್ಯ ಸುತ್ತಿ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದುಕೊಂಡಿದ್ದ ನನ್ನ ಆಸೆಗೆ ಎಳ್ಳುನೀರು ಬಿಟ್ಟಿರುತ್ತಾರೆ.’
‘ಟಿಕೆಟ್ ಹಂಚಿಕೆ ವಿಷಯದಲ್ಲಿ ಒಬಿಸಿ ವರ್ಗದ ಆಕಾಂಕ್ಷಿಗಳಿಗೆ ಡಿಕೆ ಶಿವಕುಮಾರ್ ಅನ್ಯಾಯ ಮಾಡಿದ್ದಾರೆ. ಚಿತ್ರದುರ್ಗದ ಪ್ರಬಲ ಆಕಾಂಕ್ಷಿಯಾಗಿದ್ದ ರಘು ಆಚಾರ್‌ಗೆ ನನ್ನ ಶಿಷ್ಯ ಎನ್ನುವ ಕಾರಣಕ್ಕೆ ಟಿಕೆಟ್ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೊಬ್ಬ ತರಿಕೇರಿಯ ಒಬಿಸಿ ಟಿಕೆಟ್ ಆಕಾಂಕ್ಷಿಯಾಗಿದ್ದ ಗೋಪಿಕೃಷ್ಣನಿಗೂ ಟಿಕೆಟ್ ಸಿಗದಂತೆ ಮಾಡಿದ್ದಾರೆ. ಚಾಮರಾಜನಗರ ಕ್ಷೇತ್ರದ ಅಭ್ಯರ್ಥಿಯಾಗಿರುವ ಪುಟ್ಟರಂಗ ಶೆಟ್ಟಿಗೂ ಟಿಕೆಟ್ ತಪ್ಪಿಸಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ನನ್ನ ಪ್ರಯತ್ನದ ಫಲವಾಗಿ ಅದು ಅವರ ಕೈಯಿಂದ ಸಾಧ್ಯವಾಗಲಿಲ್ಲ. ಡಿಕೆ ಶಿವಕುಮಾರ್ ಅವರ ಕುತಂತ್ರದಿಂದ ಒಬಿಸಿ ಸಮುದಾಯ ತನ್ನ ವಿರುದ್ಧ ತಿರುಗಿಬೀಳುವಂತೆ ಮಾಡಿದ್ದಾರೆ.’ ಎಂಬ ಹಲವು ವಿಚಾರಗಳು ಹಾಗೂ ಅಂಶಗಳು ಆ ನಕಲಿ ಎನ್ನಲಾದ ಪತ್ರದಲ್ಲಿದೆ.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.