ಗ್ರಾಮಾಂತರ ಕರ್ನಾಟಕದಲ್ಲಿ ಚುನಾವಣೆ ಸಂಭ್ರಮ- ಕೌತುಕ :
ಸುಮಾರು 40 ವರ್ಷಗಳ ಮಾಧ್ಯಮ ನನ್ನದು (ಈಶ್ವರ ದೈತೋಟ). ಗೆಳೆಯ ಶೇಷಣ್ಣನವರ ಅನುಭವ ಇನ್ನಷ್ಟು ಜಾಸ್ತಿ. ಕಂಡದ್ದನ್ನು ಕಂಡಂತೆ ಹೇಳುವ ಉತ್ಸುಕತೆ ನಮ್ಮಿಬ್ಬರ ಜೀವಾಳ. ನಮ್ಮ ನಾಡಿನ ಮಾಧ್ಯಮ ವರದಿಗಾರರೂ ನಮ್ಮಂತೆಯೇ ಚುನಾವಣೆಯ ಪ್ರತ್ಯಕ್ಷ ಸಮೀಕ್ಷೆ ನಡೆಸುತ್ತಿರುವುದನ್ನು ಕಂಡು, ಓದಿ ಸಂತಸಪಟ್ಟವರು ನಾವು. ಈ ಪೀಠಿಕೆಗೆ ಕಾರಣ ಮತ್ತು ಹಿನ್ನಲೆಯಿದೆ. ಇದೀಗ ನಡೆದಿರುವ ವಿಧಾನಸಭೆ ಚುನಾವಣೆಯ ಪ್ರಕ್ರಿಯೆಗಳು ನಾಡಿನ ನಗರ ಪ್ರದೇಶಗಳಿಗಿಂತ ಜಿಲ್ಲೆ ಮತ್ತು ಗ್ರಾಮೀಣ ಪ್ರದೇಶಗಳ ಜನರಲ್ಲಿ ಸಂಭ್ರಮ, ಕೌತುಕ, ಉತ್ಸಾಹ ಮತ್ತು ಲವಲವಿಕೆ ತಂದಿದೆ. ಈವರೆಗಿನ ಚುನಾವಣೆಗಳಲ್ಲೂ ಇದೇ ಗೌಜು, ಗದ್ದಲಗಳಿಂದ ತುಂಬಿದ್ದವು. ಆದರೆ ಈ ಬಾರಿ ಕರ್ನಾಟಕದ ಹಳ್ಳಿ- ಹಳ್ಳಿಗಳಲ್ಲಿ ಹೊಸ ಚೇತನ ಕಂಡಿದೆ.
ಮಹಿಳೆಯರ ಪಾಲ್ಗೊಳ್ಳುವಿಕೆ ಹೇಗಿದೆ?:
ನಮಗೆ ವಿಶೇಷವೆನಿಸಿದುದು ಈ ಬಾರಿಯ ಗ್ರಾಮೀಣ ಹೆಣ್ಣುಮಕ್ಕಳು ಗ್ರಾಮದ ಕೇರಿ – ಕೇರಿಗಳಲ್ಲಿ ಹೆಜ್ಜೆ ಹಾಕಿದ ದೃಶ್ಯಗಳು. ಇತ್ತೀಚಿನವರೆಗೂ ಪುರುಷರು ಮತ್ತು ಸ್ಥಳೀಯ ಪುರುಷರ ಸ್ವತ್ತಾಗಿತ್ತು ಮೆರವಣಿಗೆ ಮತ್ತು ರ್ಯಾಲಿಗಳು. ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಚಿತ್ರದುರ್ಗ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ದಾವಣಗೆರೆ ಹೀಗೆ ನಾವು ಸುತ್ತಾಡಿದ ಪ್ರದೇಶಗಳಲ್ಲಿ ಮಹಿಳೆಯರೇ ಮಂಚೂಣಿಯ ಚೇತನಗಳು. ಮಹಿಳೆಯರದ್ದೇ ಪಾರುಪತ್ಯ. ಹೀಗೆಂದ ಮಾತ್ರಕ್ಕೆ ಗಂಡಸಲು ಹಿಂದೆ ಸರಿದರು ಎಂದರ್ಥವಲ್ಲ. ನಮ್ಮ ಗ್ರಾಮೀಣ ಪರಿಸರದಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿದ್ದ ಪುರುಷರ ಸರಿಸಮಾನವಾಗಿ ಮಹಿಳೆಯರು, ಸಂಕೋಚ ಬಿಟ್ಟು, ಸ್ವಚ್ಛಂದವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮುಂದಾಗಿದ್ದಾರೆ. ಇದು ನಮ್ಮ ಸಮೀಕ್ಷೆಯ ಸಂದೇಶ.
ರಾಜ್ಯದ ಮೂಲೆ ಮೂಲೆಯ ಗ್ರಾಮದ ಯುವತಿಯರ ಸಂಭ್ರಮ :
ಸಮೀಕ್ಷೆಯ ಅವಧಿಯಲ್ಲಿ ಕೆಲವು ಮೂಲೆ ಮೂಲೆಯೆ ಗ್ರಾಮಗಳಲ್ಲಿನ ಯುವತಿಯರನ್ನು ಸಂದರ್ಶಿಸಲು ನಾವು ಮುಂದಾಗಿದ್ದೆವು. ಹಿಂದಿನ ಚುನಾವಣೆಗಳಲ್ಲಿ ಗ್ರಾಮೀಣ ಯುವತಿಯರನ್ನು ಮಾತನಾಡಿಸಲು ವರದಿಗಾರರಾದ ನಮ್ಮಲ್ಲಿ ಸಂಕೋಚ, ಅಳುಕು ಮತ್ತು ಹಿಂಜರಿಕೆ ಇರುತ್ತಿತ್ತು. ಈಗ ದೃಶ್ಯ ಪೂರ್ಣ ಬದಲಾಗಿದೆ. ಗ್ರಾಮೀಣ ಕರ್ನಾಟಕದಲ್ಲಿ ಇಂದು ಯುವಕ- ಯುವತಿಯರದ್ದೇ ಧ್ವನಿ, ಗದ್ದಲ, ಸಡಗರ- ಸಂಭ್ರಮ. ಪುಟ್ಟ ಬದಲಾವಣೆಯೊಂದನ್ನು ಹೇಳಿದರೆ ನಮಗೆ ಸಮಾಧಾನವೆನಿಸುತ್ತದೆ. ಬಾಗಲಕೋಟೆ ಜಿಲ್ಲೆ ಬಾದಾಮಿ ಕ್ಷೇತ್ರ ಕನ್ನಡಿಗರ ಆರಾಧ್ಯ ದೈವ ಬನಶಂಕರಿಯ ಗುಡಿಗೆ ಸಮೀಪದ ಹಳ್ಳಿ ಚೋಳದಗುಡ್ಡ. ಇದು ಗ್ರಾಮದ ಹೆಸರು ಎಂದು ಕೇಳಿಸಿಕೊಂಡಂತೆ ನೆನಪು. ಸಂದರ್ಶಿಸಲು ಹೋದ ನಮ್ಮನ್ನು ಮರುಪ್ರಶ್ನಿಸಿದವರೇ ಅಲ್ಲಿನ ಹೆಣ್ಣುಮಕ್ಕಳು. ಮೋದಿ, ರಾಹುಲ್, ಪ್ರಿಯಾಂಕಾ, ಕಿಚ್ಚ ಸುದೀಪ, ಬಸವರಾಜ ಬೊಮ್ಮಾಯಿ ಇತ್ಯಿ ನಾಯಕರ ಸಾಧನೆ ಮತ್ತು ಪ್ರಸ್ತುತತೆ ಕುರಿತಂತೆ ಗ್ರಾಮೀಣ ವಿದ್ಯಾರ್ಥಿನಿಯರು ಮತ್ತು ತಾಯಂದಿರು ಕೇಳಿದ ಪುಂಕಾನುಪುಂಕ ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ನಾವಿಬ್ಬರೂ ಸುಸ್ತಾದೆವು. ತಡಬಡಾಯಿಸಿದೆವು.
ಜನರ ಪಾಲ್ಗೊಳ್ಳುವಿಕೆ- ಆಸಕ್ತಿ :
ಕರ್ನಾಟಕ ವಿಧಾನಸಭೆಯ ಚುನಾವಣೆಯಲ್ಲಿ ಈ ಬಾರಿಯ ವೈಶಿಷ್ಟ್ಯತೆಯೆಂದರೆ ಜನರ ಪಾಲ್ಗೊಳ್ಳುವಿಕೆ. ಪಕ್ಷಗಳು ಮತದಾರರನ್ನು ಆಕರ್ಷಿಸಲು ಕೋಟ್ಯಾಂತರ ಹಣ ಸುರಿದು ನಡೆಸುವ ರ್ಯಾಲಿ, ರೋಡ್ ಶೋ, ಮೆರವಣಿಗೆಗಳಷ್ಟೇ ಚುನಾವಣೆಯ ಮುಖ್ಯ ಪ್ರಕ್ರಿಯೆಯಲ್ಲ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮತ್ತು ಬಹಿರಂಗ ಪ್ರಚಾರಕ್ಕೆ ಈ ಬಾರಿ ಹೆಚ್ಚು ಸಮಯ ಇರಲಿಲ್ಲ. ಈ ಕಾರಣದಿಂದಾಗಿ ಈ ಬಾರಿ ಅಭ್ಯರ್ಥಿಗಳು ಮತದಾರನ ಮನೆಬಾಗಿಲಿಗೆ ಎಡಬಿಡದೆ ಯಾತ್ರೆ ನಡೆಸುತ್ತಿರುವುದನ್ನು ಕಾಣಬಹುದಾಗಿತ್ತು. ಹಿಂಡುಹಿಂಡಾಗಿ ಪಾದಯಾತ್ರೆ ನಡೆಸುವುದು ಅನಿವಾರ್ಯವಾಯಿತು. ಜನರ ಪಾಲ್ಗೊಳ್ಳುವಿಕೆಗೆ ಈ ಬಗೆಯ ದಂಡಯಾತ್ರೆ ಅವಕಾಶ ಓದಗಿಸಿತು. ವಿಶೇಷವೆಂದರೆ ರಾಜ್ಯದ ನಾಲ್ಕು ಕಡೆಗಳ ಆಯ್ಕೆ ಮಾಡಿಕೊಂಡ ಕ್ಷೇತ್ರಗಳಲ್ಲಿ ಶಾಂತಿಯುತ ವಾತಾವರಣೆ ಕಂಡಿತು. ಸಣ್ಣ ಪುಟ್ಟ ಘರ್ಷಣೆಗಳ ನಡುವೆಯೂ ರಾಜ್ಯಾದ್ಯಂತ ಚುನಾವಣಾ ಪ್ರಚಾರ ಶಾಂತಿಯುತವಾಗಿ ನಡೆದಿದ್ದು, ಕರ್ನಾಟಕದ ಜನರ ಪ್ರಜಾತಂತ್ರ ಬದ್ಧತೆಗೆ ಪ್ರತ್ಯಕ್ಷ ನಿದರ್ಶನವಾಗಿತ್ತು.
ಇನ್ನು ಹಿರಿಯ ಪತ್ರಕರ್ತ ಶೇಷಣ್ಣನವರ ಮಾತುಗಳು.
ಅಭಿಪ್ರಾಯ ಧ್ರುವೀಕರಣ :
ಈಶ್ವರ ದೈತೋಟರ ಮಾತುಗಳಿಗೆ ದನಿಗೂಡಿಸಿ ಹೇಳಬಹುದಾದರೆ ಈ ಬಾರಿಯ ಕರ್ನಾಟಕದ ಚುನಾವಣೆಯಲ್ಲಿ ರಾಜಕೀಯ ನೀತಿ ನಿರೂಪಣೆ ಮತ್ತು ಸಿದ್ಧಾಂತಕ್ಕಿಂತ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ಬಗೆಗೆ ಜನಮನದ ಧೋರಣೆಯಲ್ಲಿ ಸ್ಪಷ್ಟವಾದ ಭಿನ್ನಾಭಿಪ್ರಾಯ ಮತ್ತು ಧ್ರುವೀಕರಣ ಎದ್ದು ಕಾಣುತ್ತಿತ್ತು. ಚುನಾವಣಾ ಕಣದಲ್ಲಿ ಆಡಳಿತರೂಢ ಭಾಜಪ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಮತ್ತು ಪ್ರಾದೇಶಿಕ ಜಾತ್ಯಾತೀತ ಜನತಾದಳ ಸ್ಪರ್ಧೆ ನಡೆಸಿದ್ದರೂ, ಬಿಜೆಪಿ, ಕಾಂಗ್ರೆಸ್ ಹೆಚ್ಚಿನ ಕ್ಷೇತ್ರಗಳಲ್ಲಿ ನೇರ ಹಣಾಹಣಿ ನಡೆಸಿವೆ. ಜೆಡಿಎಸ್ ಕರ್ನಾಟಕದ ಮೂರನೆಯ ಒಂದು ಭಾಗದಷ್ಟು ಕ್ಷೇತ್ರದಲ್ಲಿ ತನ್ನದೇ ಆದ ವರ್ಚಸ್ಸು ಹಾಗೂ ಜನಪ್ರಿಯತೆಯನ್ನು ಮುಂದಿಟ್ಟುಕೊಂಡು ನಡೆದಿದೆ. ಇದು ನಾವು ಭೇಟಿಯಾದ ಜನರ ಬಾಯಲ್ಲಿ ಬಂದ ಮಾತುಗಳು. ಮೂರು ಪಕ್ಷಗಳ ಜನಪ್ರಿಯತೆಗೆ ಬಗೆಗೆ ನಮಗೆ (ಬೆಂಗಳೂರು ವರದಿಗಾರರ ತಂಡಕ್ಕೆ) ಸಮಾನ ನಂಬಿಕೆ, ವಿಶ್ವಾಸ ಕಂಡಿದೆ.
ಮಾಧ್ಯಮಗಳಿಂದ ಕೆಲವು ಕ್ಷೇತ್ರಗಳಿಗೆ ಮಿತಿ ಮೀರಿದ ಗಮನ :
ನಾವೇ ಸ್ವತಃ ಮಾಧ್ಯಮ ಕಾರ್ಯಕರ್ತರಾದ ಕಾರಣ ಇತರೆ ಮಾಧ್ಯಮದ ಕಾರ್ಯವಿಧಾನದ ಕುರಿತು ಟೀಕಿಸುವುದು ಸರಿಯಲ್ಲ. ಆದರೂ ಟಿವಿ ಚಾನಲ್ ಗಳು ಈ ಬಾರಿ ಕೆಲವು ಕ್ಷೇತ್ರಗಳ ಬಗೆಗೆ ಮಿತಿಮೀರಿದ ಗಮನ ಕೇಂದ್ರೀಕರಿಸಿರುವ ಪರಿಣಾಮ ಇಂತಹ ಕ್ಷೇತ್ರಗಳಿಗೆ ಭೇಟಿ ನೀಡಲು ಭಯವೆನಿಸುತ್ತದೆ. ಭಯಕ್ಕಿಂತ ಮೇಲಿಂದ ಮೇಲೆ ಪ್ರಚಾರ ಅಥವಾ ಅಪಪ್ರಚಾರಕ್ಕೆ ಸಿಕ್ಕ ಇಂತಹ ವಿಧಾನಸಭಾ ಕ್ಷೇತ್ರಗಳಿಂದ ದೂರವಿರುವುದು, ಒಮ್ಮೊಮ್ಮೆ ಸೂಕ್ತವೆನಿಸುತ್ತದೆ.
ಇದಕ್ಕೆ ಒಂದೆರಡು ಉದಾಹರಣೆಯೆಂದರೆ ಸಿದ್ದರಾಮಯ್ಯನವರ ವರುಣ ಕ್ಷೇತ್ರ ; ಲಕ್ಷ್ಮಣ ಸವದಿಯವರ ಸ್ಪರ್ಧೆಯ ಅಥಣಿ; ಜಗದೀಶ್ ಶೆಟ್ಟರ್ ರವರ ಹುಬ್ಬಳ್ಳಿ; ರೆಡ್ಡಿ ಬಂಧುಗಳ ಬಳ್ಳಾರಿ ಜಿಲ್ಲೆಯ ಕೆಲವು ಕ್ಷೇತ್ರಗಳು ಸಹಜವಾಗಿ ಈ ಕ್ಷೇತ್ರಗಳ ಇಂಚಿಂಚೂ ಪ್ರದೇಶವನ್ನು ಕ್ಯಾಮರಾಗಳು ಬೆತ್ತಲೆ ಮಾಡಿದಂತೆ ಚಿತ್ರೀಕರಿಸಿದೆ. ಇಡೀ ರಾಜ್ಯದ ಜನರ ಕುತೂಹಲ ಈ ಕ್ಷೇತ್ರಗಳ ಹಣಾಹಣಿಯಿಂದ ತುಂಬಿ ತುಳುಕಿದಂತಿದೆ. (ಇಷ್ಟೆಲ್ಲಾ ಟೀಕಿಸಿದ ನಾವು ಸಹಿತ ಅಥಣಿ, ಹುಬ್ಬಳ್ಳಿ, ಬಳ್ಳಾರಿ ಮತ್ತಿತರ ಕ್ಷೇತ್ರಗಳನ್ನು ಅವಲೋಕಿಸಿ ಬಂದಿದ್ದೇವೆ. ಎಷ್ಟೇ ಆಗಲಿ ನಾವು ಸಹಿತ, ಇತರರಂತೆ ಮಸಾಲೆ ಸುದ್ದಿ ಪ್ರಿಯರಷ್ಟೆ!! ಇನ್ನೊಂದು ಮಾತು : ನಾಳೆ ಬಹಿರಂಗ ಪ್ರಚಾರದ ಕೊನೆಯದಿನ. ಸೋಮವಾರ ಮೇ.8ರಂದು ಎರಡನೆಯ ಮತ್ತು ಕೊನೆಯ ಬಾರಿಗೆ ಮೈಸೂರು ಜಿಲ್ಲೆಯ ವರುಣ ಕ್ಷೇತ್ರಕ್ಕೆ ಹೋಗಿಬರಲಿದ್ದೇವೆ.)
ಹಾಸನದಲ್ಲೊಂದು ಯುವಜನೋತ್ಸವ :
ವರುಣ, ಹುಬ್ಬಳ್ಳಿ ಮತ್ತು ಅಥಣಿಯಂತೆ ನಮಗೆ ಕುತೂಹಲ, ಅಭಿರುಚಿ ಹಾಗೂ ಕೊಂಚಮಟ್ಟಿಗೆ ಭಯ ಹುಟ್ಟಿಸಿದ ಕ್ಷೇತ್ರವೆಂದರೆ ಹಾಸನ ನಗರ ಮತ್ತು ಹಾಸನ ಜಿಲ್ಲೆಯ ಕೆಲವು ಕ್ಷೇತ್ರಗಳು (ನಮಗೆ ಈ ಜಿಲ್ಲೆಯ ಮಾಧ್ಯಮ ಮಿತ್ರರನ್ನು ಪರಿಚಯಿಸಿ, ಸಹಕಾರ, ಸಹಾಯ ದೊರಕಿಸಿಕೊಟ್ಟವರು ಬೆಂಗಳೂರಿನ ಹಿರಿಯ ಪತ್ರಕರ್ತರಾದ ಶಿವಾನಂದ ತಗಡೂರು, ಸಂಯುಕ್ತ ಕರ್ನಾಟಕದ ಪ್ರಧಾನ ಸಂಪಾದಕರಾದ ಹುಣಸವಾಡಿ ರಾಜನ್. ಅಂತೆಯೇ ಹಾಸನದ ಪತ್ರಕರ್ತ ಬಂಧುಗಳ ಸಹಿತ ನಮಗೆ ಅಪಾರವಾಗಿ ನೆರವಾದರು. ಇವೆರೆಲ್ಲರಿಗೂ ನಾವು ಧನ್ಯರು).
ಹಾಸನದಲ್ಲಿ ಏನಾಯಿತು? ಇದೇ ಇಂದಿನ ನಮ್ಮ ಸಮೀಕ್ಷೆಯ ಸ್ವಾರಸ್ಯ!! ಅಂದು ಏಪ್ರಿಲ್ 25. ಮಂಗಳವಾರ ಬೆಳಗ್ಗೆ 9 ಗಂಟೆ. ಹಾಸನ ನಗರದ ತೇಜೂರು ಬಂಡೆ ಬಳಿ ನಾವು ಹಾಜರು. ಅಲ್ಲಿ ನಡೆದಿತ್ತು ಹಾಸನದಇಂದಿನ ಶಾಸಕ ಪ್ರೀತಮ್ ಗೌಡರ ರೋಡ್ ಶೋ, ಮೆರವಣಿಗೆ, ಆರತಿ, ಯುವಕ- ಯುವತಿಯರ ಕುಣಿತ. ಬೆರಳೆಣಿಕೆಯಷ್ಟು ಪೊಲೀಸರು. ಅವರು ಸಹಿತ ಆರಾಮು. ರಸ್ತೆಯ ಇಕ್ಕೆಲಗಳಲ್ಲಿ ಮನೆ ಮುಂದೆ ರಂಗೋಲಿ; ಆರತಿ ಬೆಲ್ಲದ ಚೂರು ಹಂಚಿಕೆ. ಇದರಲ್ಲೇನು ವಿಶೇಷ ಅಂತ ನಿಮಗೆ ಅನಿಸಲೂಬಹುದು. ಹಾಸನ ನಾಡಿನ ಹಿರಿಯ ರಾಜಕಾರಣಿ, ವಯೋವೃದ್ಧ ಎಚ್.ಡಿ.ದೇವೇಗೌಡರ ತವರು ಜಿಲ್ಲೆ. ಅವರ ರಾಜಕಾರಣದ ಅಖಾಡ. ದೊಡ್ಡಗೌಡರು ಮತ್ತು ಕುಟುಂಬ ಎಂದರೆ ಹಾಸನ ನಗರಕ್ಕಷ್ಟೇ ಏಕೆ ಇಡೀ ಜಿಲ್ಲೆಯ ಜನಕ್ಕೆ ಭಯ- ಭಕ್ತಿ. ಗೌಡರ ಗಮನಕ್ಕೆ ಬಾರದೆ ಹುಲ್ಲುಕಡ್ಡಿ ಅಲ್ಲಾಡದಿದ್ದ ದಿನಗಳು ಒಂದು ಕಾಲದಲ್ಲಿತ್ತು.
ಈಗಲೂ ದೊಡ್ಡಗೌಡರಿಗೆ ತಲೆಬಾಗುವ ಜನ ಹಾಸನದಲ್ಲಿದ್ದಾರೆ. ಆದರೆ ಹಿಂದಿನ ಭಯವಿಲ್ಲ ; ಗೌಡರಿಗೆ ಗತ್ತು ಇಲ್ಲ. ಹಾಸನದ ಶಾಸಕ ಯುವ ಸಾಹಸಿ ಪ್ರೀತಮ್ ಗೌಡ ಭಾಜಪ ಅಭ್ಯರ್ಥಿ. ನಿಸ್ವಾರ್ಥ ಸೇವೆ ಮತ್ತು ಶ್ರಮ ಸಾಹಸದಿಂದ ಹಾಸನದ ಜನಮನ ಗೆದ್ದವರು. ವರದಿ ಮಾಡಲು ನಿಂತಿದ್ದ ಪತ್ರಕರ್ತರ ಪೈಕಿ ನನ್ನನ್ನು ಮಾತನಾಡಿಸಲು ಪ್ರೀತಮ್ ಗೌಡ ತೆರೆದ ವಾಹನದಿಂದ ಬಂದಿದ್ದರು. ಜೊತೆಗಿದ್ದ ಹಿಂಬಾಲಕರು ನನ್ನನ್ನು ಅನಾಮತ್ತಾಗಿ ಎತ್ತಿ ಅಭ್ಯರ್ಥಿ ಸಂಗಡ ನಿಲ್ಲಿಸಿದ್ದರು. ಸಂಭ್ರಮದಲ್ಲಿ ಇವೆಲ್ಲ ಸಹಜವೆನಿಸಿ ನಾನೂ ಕೈಜೋಡಿಸಿ ವಾಹನದ ಮೆರವಣಿಗೆಯಲ್ಲಿ ಮೆರೆದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಮತದಾರರ ಅಂತಃಕರಣ, ಪ್ರೀತಿ ಮತ್ತು ನಂಬಿಕೆ. ಎಲ್ಲಕ್ಕಿಂತ ಮುಖ್ಯ ಜನರ ಪಾಲ್ಗೊಳ್ಳುವಿಕೆ. ಪಕ್ಷ ಯಾವುದಿರಲಿ ಮತದಾರ ನಂಬುವುದು ಅಭ್ಯರ್ಥಿಯ ಸೇವೆ.
ಸಮಾನಾಂತರದಲ್ಲಿ ಮತ್ತೊಂದು ಮೇಳ :
ಪ್ರೀತಮ್ ಗೌಡರು ಭಾಜಪ ಮೇಳ. ಸ್ವಾಭಾವಿಕವಾಗಿ ಬೆಂಗಳೂರಿನಿಂದ ಬಂದ ಈಶ್ವರ ದೈತೋಟ ಮತ್ತು ನನಗೆ ಹಾಸನದ ಪ್ರತಿಪಕ್ಷ ಜಾತ್ಯಾತೀತ ಜನತಾದಳದ ಪ್ರಚಾರ ವೈಭವವನ್ನು ಕಾಣುವ ಅಭಿಲಾಷೆಯಾಯಿತು. ಪತ್ರಕರ್ತ ಉದಯಕುಮಾರರು, ಬಹುಷಃ ನಮ್ಮ ನಿಷ್ಪಕ್ಷಪಾತ ನಿಲುವನ್ನು ನಿರೀಕ್ಷಿಸಿದ್ದರು ಎಂದು ಕಂಡಿತು. ತೇಜೂರಿಗೆ ಅನತಿ ದೂರದಲ್ಲಿ, ದೇವಮ್ಮ ಬಡಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸ್ವರೂಪ ಪ್ರಕಾಶರ ಪಾದಯಾತ್ರೆ ನಡೆದಿತ್ತು. ಹಾಸನ ಜನರ ಉತ್ಸಾಹ, ಆಸಕ್ತಿ ಮತ್ತು ಸಮನ್ವಯ ಮನೋಭಾವವನ್ನು ಅಭಿನಂದಿಸಲೇಬೇಕು. ಜನತಾದಳ ಕಾರ್ಯಕರ್ತರ ಉತ್ಸಾಹವೂ, ಭಾಜಪ ಕಾರ್ಯಕರ್ತಂತೆಯೇ ಎದ್ದುಕಂಡಿತು. ಅಭ್ಯರ್ಥಿಯ ಪಾದಯಾತ್ರೆಯೊಂದಿಗೆ ಇಡೀ ಹಾಸನದ ಜನ ಹೆಜ್ಜೆ ಹಾಕಿದ್ದರು. ಎಲ್ಲೆಲ್ಲೂ ಭವ್ಯ ಸ್ವಾಗತ. ಸಂಭ್ರಮ. ರಂಗೋಲಿ, ತೋರಣ, ಸಾಮಾನ್ಯರಲ್ಲಿ ಸಾಮಾನ್ಯರಂತೆ ಜನರಿಗೆ ವಂದಿಸುತ್ತಿದ್ದ ಸ್ವರೂಪ ಗೌಡ ನಮಗೆ ನವಯುಗದ ನಾಯಕನಾಗಿ ಕಂಡ. ಒಟ್ಟಿನಲ್ಲಿ ಹಾಸನದ ಬಗ್ಗೆ ಇಲ್ಲ ಸಲ್ಲದ ಲೋಪದೋಷಗಳಿಂದ ಭಾರವಾಗಿದ್ದ ಮನಸ್ಸು ನನಗೆ ಹಗುರವೆನಿಸಿತು.
“ಬೆಂಗಳೂರು ವೈರ್” ಡಿಜಿಟಲ್ ವೆಬ್ ನ್ಯೂಸ್ ಪೋರ್ಟೆಲ್ಲಿನ ಸೋಶಿಯಲ್ ಮೀಡಿಯಾ ಪೇಜ್ ಹಾಗೂ Google News ಗಳಿಗೆ ಉಚಿತವಾಗಿ Subscribe ಆಗಲು Facebook, Telegram, Twitter, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.